ಸೋಮವಾರ, ಏಪ್ರಿಲ್ 12, 2021
22 °C

ಪ್ರಜಾಪ್ರಭುತ್ವ: ಆತ್ಮವೂ ಇಲ್ಲ, ದೇಹವೂ ಇಲ್ಲ

ಆರ್. ಲಕ್ಷ್ಮೀನಾರಾಯಣ Updated:

ಅಕ್ಷರ ಗಾತ್ರ : | |

Prajavani

‘ಮತದಾನ ಪವಿತ್ರವಾದುದು’ ಎಂದು, ಚುನಾವಣೆಗೆ ಸ್ಪರ್ಧಿಸಿದ ಹುದ್ದರಿಗಳಿಂದ ತೊಡಗಿ ಮತಗಟ್ಟೆಯ ಕಡೆಗೆ ಎಂದೂ ಇಣುಕಿ ಕೂಡ ನೋಡದಂಥವರ ಕಡೆಯಿಂದ ಮತದಾನದ ಸಂದರ್ಭದಲ್ಲಿ ಬಿಟ್ಟಿ ಉಪದೇಶ ಕೊಡಿಸಲಾಗುತ್ತದೆ. ರಾಜ್ಯದ ಕೆಲವು ಚುನಾಯಿತ ಪ್ರತಿನಿಧಿಗಳು ನಡೆಸುತ್ತಿರುವ ಈಗಿನ ಹೊಲಸು ನಾಟಕಕ್ಕೆ ಮೂಕಸಾಕ್ಷಿಗಳಾಗಬೇಕಾಗಿ ಬಂದಿರುವ ಯಾರಿಗಾದರೂ ಮತಗಟ್ಟೆಯ ಕಡೆ ಸುಳಿಯಲು ಮನಸ್ಸಾಗುತ್ತದೆಯೇ? ಒಮ್ಮೆ ಜನಪ್ರತಿನಿಧಿಗಳನ್ನು ಆರಿಸಿಬಿಟ್ಟ ಮೇಲೆ ಪ್ರಜೆ ಅತ್ಯಂತ ಅಸಹಾಯಕನಾಗಿ ಬಿಡುತ್ತಾನೆ. ಮುಂದೆ ಅವರು ನಡೆಸುವ ಬೆತ್ತಲೆ ಕುಣಿತಗಳಿಗೆಲ್ಲಾ ಮೂಕಪ್ರೇಕ್ಷಕನಾಗಿ ಇರಬೇಕಾದ ದುರ್ದೆಸೆಗೆ ಮತದಾರ ತಳ್ಳಲ್ಪಡುತ್ತಿರುವುದೇ ದೇಶದ ಪ್ರಜಾಪ್ರಭುತ್ವದ ಇತಿಹಾಸವೆಂದರೆ ಉತ್ಪ್ರೇಕ್ಷೆಯಾಗದು.

ರಾಜ್ಯದಲ್ಲಿ ಮತದಾರಪ್ರಭು ನೀಡಿದ ಅತಂತ್ರ ತೀರ್ಪಿನಿಂದಾಗಿ ಈ ಪರಿಸ್ಥಿತಿ ಬಂತೆಂದು ವಿವರಣೆ ನೀಡಿದರೂ ಖಂಡಿತ ಹಾಗೆ ಆಗಬೇಕಾಗಿರಲಿಲ್ಲ. ಬೆಕ್ಕು, ನಾಯಿಗಳಂತೆ ಕಚ್ಚಾಡುತ್ತಿದ್ದ ಪಕ್ಷಗಳೆರಡು ಎರಡಕ್ಕೂ ಸಮಾನ ವಿರೋಧಿಯಾದ ಪಕ್ಷವು ಅಧಿಕಾರಕ್ಕೆ ಬರದಂತೆ ತಡೆಯುವ ಏಕೈಕ ಉದ್ದೇಶದಿಂದ, ಅನಿವಾರ್ಯ ಪರಿಸ್ಥಿತಿಯಿಂದಾಗಿ ಅಧಿಕಾರಕ್ಕಾಗಿ ಒಂದುಗೂಡಿದವು ಎಂಬುದು ನಿಜ. ಆದರೂ ಆಡಳಿತ ವಹಿಸಿಕೊಂಡ ಮೇಲೆ ಎರಡಕ್ಕೂ ಒಪ್ಪಿಗೆಯಾಗುವ ಸಮಾನ ಕನಿಷ್ಠ ಕಾರ್ಯಕ್ರಮ ರೂಪಿಸಿಕೊಂಡು, ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಿ, ಜನ ಮೆಚ್ಚುವಂತೆ ಆಡಳಿತ ನೀಡುವ ಸದವಕಾಶವನ್ನು ಅವು ಅಧಿಕಾರದ ಹಪಹಪಿ, ಸ್ವಾರ್ಥ, ಸಂಕುಚಿತತೆ, ದೂರದರ್ಶಿತ್ವದ ಕೊರತೆಯಿಂದಾಗಿ ಕಳೆದುಕೊಂಡಿವೆ.

ಎರಡು ಪಕ್ಷಗಳು ಅಧಿಕಾರ ಹಂಚಿಕೆ ಮಾಡಿಕೊಂಡ ಪರಿಣಾಮವಾಗಿ, ಮಂತ್ರಿ ಪದವಿ ಬಯಸಿದ ಎಲ್ಲರನ್ನೂ ಮಂತ್ರಿ ಮಾಡಲು ಸಾಧ್ಯವಿಲ್ಲವೆಂಬ ಅಂಗೈ ಹುಣ್ಣಿನಷ್ಟು ಸ್ಪಷ್ಟವಾದ ಸಂಗತಿಯನ್ನು ಅರ್ಥಮಾಡಿಕೊಳ್ಳುವಷ್ಟು ವಿವೇಕವನ್ನು ಯಾವುದೇ ಶಾಸಕ ತೋರಲಿಲ್ಲ. ಅಷ್ಟೇ ಅಲ್ಲ, ಆಯಾ ಪಕ್ಷದ ಮುಖಂಡರು ಪರಿಸ್ಥಿತಿಯ ಅನಿವಾರ್ಯವನ್ನು ತಮ್ಮ ಕಡೆಯ ಶಾಸಕರಿಗೆ ಮನದಟ್ಟು ಮಾಡಿಕೊಡುವ ವಿವೇಕ ತೋರಲಿಲ್ಲ.

ಸರ್ಕಾರವನ್ನು ಮುನ್ನಡೆಸುವ ಸ್ಥಾನದಲ್ಲಿರುವ ವ್ಯಕ್ತಿಯು ತಮ್ಮ ಪಕ್ಷದ ಜೊತೆಗೆ ಕೈ ಸೇರಿಸಿದ ಸಹಭಾಗಿ ಪಕ್ಷದ ಶಾಸಕರನ್ನು ಇನ್ನಷ್ಟು ಉದಾರವಾಗಿ ನಡೆಸಿಕೊಳ್ಳುವ ಜಾಣ್ಮೆ, ಸಮತೋಲನ ಬುದ್ಧಿಯನ್ನು ತೋರಲೇ ಇಲ್ಲ. ಇನ್ನು ನಾಮಮಾತ್ರಕ್ಕೆ ಇರುವ ಸಮನ್ವಯ ಸಮಿತಿಯ ನೇತೃತ್ವ ವಹಿಸಿದವರಂತೂ ಎಂದೂ ಸಮನ್ವಯ ಉಂಟುಮಾಡುವ ಪ್ರಯತ್ನವನ್ನು ಪ್ರಾಮಾಣಿಕತೆಯಿಂದ ಮಾಡಲೇ ಇಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರೆಸಾರ್ಟುಗಳಲ್ಲಿ ಶಾಸಕರನ್ನು ಕೂಡಿಟ್ಟುಕೊಳ್ಳುವುದಕ್ಕೆ ಯಾರೊಬ್ಬರಿಗೂ ಹಿಂಜರಿಕೆಯೇ ಆಗದ ನಾಚಿಕೆಗೇಡಿನ ಹಂತಕ್ಕೆ ರಾಜಕಾರಣ ತಲುಪಿರುವುದು ಪ್ರಜಾಪ್ರಭುತ್ವ ಬದುಕಿರುವ ಲಕ್ಷಣವೇ? ಶಾಸಕರು, ಮಂತ್ರಿಗಳು ಭ್ರಷ್ಟತೆಯಲ್ಲಿ ಉತ್ತುಂಗ ಶಿಖರವನ್ನು ತಲುಪಿ ಬಹಳ ಕಾಲ ಸಂದಿದೆ. ಹೇಗಾದರೂ ಸರಿ ಅಧಿಕಾರ ಹಿಡಿಯುವುದೊಂದೇ ಗುರಿಯಾಗಿರುವ ಇದು, ಪ್ರಜಾಪ್ರಭುತ್ವದ ದೇಹ ಕೊಳೆತು ನಾರುತ್ತಿರುವ ಸ್ಥಿತಿಯಲ್ಲವೇ?

ಆಡಳಿತಕ್ಕೆ ಬಂದ ದಿನದಿಂದಲೂ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿ ರಾಜ್ಯದ, ಜನತೆಯ ಹಿತ ಕಡೆಗಣಿಸಿರುವ ಸರ್ಕಾರ ಯಾವ ಪುರುಷಾರ್ಥಕ್ಕಾಗಿ ಉಳಿಯಬೇಕು? ಇದನ್ನು ಕಂಡು, ಇವರನ್ನು ಉರುಳಿಸಿ ಅಧಿಕಾರಕ್ಕೆ ಬರಬೇಕೆಂದು ವಿರೋಧ ಪಕ್ಷವೊಂದು ಯೋಚಿಸುವುದನ್ನು, ಆ ದಿಸೆಯಲ್ಲಿ ಕಾರ್ಯಪ್ರವೃತ್ತವಾಗುವುದನ್ನು ಆಕ್ಷೇಪಿಸುವುದರಲ್ಲಿ ಅರ್ಥವೇ ಇಲ್ಲ. ಬದಲಿಗೆ, ಹಾಗೆ ಮಾಡುವುದು ಅದರ ಸಂವಿಧಾನಬದ್ಧ ಕರ್ತವ್ಯವಾಗುತ್ತದೆ. ಆದರೆ ಈಗಿನ ವಿರೋಧ ಪಕ್ಷ ಆಯ್ದುಕೊಂಡ ಹಾದಿ, ಹೇಗಾದರೂ ಸರಿ ‘ಆಪರೇಷನ್’ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು, ಮಂತ್ರಿಸ್ಥಾನಗಳ ಆಮಿಷವನ್ನು ಒಡ್ಡಿ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬರುವುದನ್ನು ಯಾವ ವಿವೇಕಿ ತಾನೇ ಮೆಚ್ಚಲು ಸಾಧ್ಯ? ಇದು ಬೇವು ಬಿತ್ತಿ ಮಾವಿನ ಫಲ ಬಯಸುವ ಎಗ್ಗತನವಲ್ಲದೆ ಬೇರೇನೂ ಅಲ್ಲ.

ಹೀಗೆ ಅಧಿಕಾರ, ಹಣದ ಹಪಹಪಿಯಿಂದ ಪಕ್ಷನಿಷ್ಠೆ ಬದಲಾಯಿಸುತ್ತಿರುವ ಪಕ್ಷಾಂತರ ಪ್ರಭುಗಳು ಮತ್ತೆ ಪಕ್ಷಾಂತರ ಮಾಡುವುದಿಲ್ಲ ಅನ್ನುವುದಕ್ಕೇನು ಖಾತರಿ? ಅಂಥವರಿಂದ ಭ್ರಷ್ಟಾಚಾರ ರಹಿತ, ಜನಹಿತಕಾರಿ ಆಡಳಿತ ನೀಡಲು ಸಾಧ್ಯವೇ? ಜನರಿಗೆ ಇತ್ತ ದರಿ ಅತ್ತ ಪುಲಿ ಎಂಬಂತೆ ಆಯ್ಕೆ ಯಾವುದು ಅಥವಾ ಅವರನ್ನು ಯಾರು ಕೇಳುತ್ತಾರೆ? ಇಬ್ಬರೂ ಜನಹಿತದ ದೃಷ್ಟಿಯಿಂದಲೇ ಹೀಗೆ ಮಾಡುತ್ತಿದ್ದೇವೆಂದು ಘೋಷಿಸುತ್ತಿರುವಾಗ, ಅದನ್ನು ಕೇಳಿ ನಗುವುದೋ ಅಳುವುದೋ ಮಾಡುವುದು ಬಿಟ್ಟು ಮತದಾರನಿಗೆ ಉಳಿದಿರುವ ಅನ್ಯ ಮಾರ್ಗವಾದರೂ ಯಾವುದು? ಜನತಂತ್ರದ ತಿರುಳು ಮರೆತು ಕೇವಲ ತಂತ್ರಗಾರಿಕೆಯಿಂದ ಸರ್ಕಾರವನ್ನು ಉರುಳಿಸುವ ಅಥವಾ ಉಳಿಸುವ ಈ ನಡೆ ಜನತಂತ್ರಕ್ಕೆ ಬಗೆದ ದ್ರೋಹವಲ್ಲದೆ ಮತ್ತೇನು?

ರಾಜ್ಯದ ಪ್ರಸಕ್ತ ಸಂದರ್ಭದಲ್ಲಿ ಆಡಳಿತ ನಡೆಸುತ್ತಿರುವ ಮಿತ್ರಪಕ್ಷಗಳು ಮತ್ತು ವಿರೋಧ ಪಕ್ಷದ ಯಾರೊಬ್ಬರಿಗೂ ರಾಜ್ಯದ ಹಿತ ಮುಖ್ಯವೆನಿಸುತ್ತಿಲ್ಲ. ಅಧಿಕಾರ ಮತ್ತು ಹಣವೇ ಅವರಿಗೆ ಮುಖ್ಯವಾಗಿ ಕಂಡದ್ದರಿಂದಲೇ ಈಗಿನ ದುರಂತ ಸ್ಥಿತಿಗೆ ಅಸಹಾಯಕ ಮತದಾರ ದೂಡಲ್ಪಟ್ಟಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಜಾಣ್ಮೆಯೇನೂ ಬೇಕಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು