ಬುಧವಾರ, ಆಗಸ್ಟ್ 10, 2022
21 °C
ಪದವಿ ತರಗತಿಗಳಲ್ಲಿ ಭಾಷಾ ವಿಷಯವನ್ನು ಕಡೆಗಣಿಸುವುದು ಅಸಮತೋಲನ ಮತ್ತು ಅಸೂಕ್ಷ್ಮವಾದ ನಿರ್ಧಾರ

ಸಂಗತ: ಪ್ರಜ್ಞೆ ಕಟ್ಟುವ ಭಾವಕೇಂದ್ರಿತ ಪಠ್ಯ

ರಹಮತ್ ತರೀಕೆರೆ Updated:

ಅಕ್ಷರ ಗಾತ್ರ : | |

Prajavani

ಆಚಾರ್ಯ ಬಿ.ಎಂ.ಶ್ರೀಯವರು, 20ನೇ ಶತಮಾನದ ಮೊದಲ ದಶಕಗಳಲ್ಲಿ ಎರಡು ಪರಿಕಲ್ಪನೆಗಳನ್ನು ಮುಂದಿಟ್ಟಿದ್ದರು. 1. ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ. 2. ಕನ್ನಡ ಮಾತು ತಲೆಯೆತ್ತುವ ಬಗೆ. ಈ ಪರಿಕಲ್ಪನೆ ಗಳನ್ನು ಈಗಿನ ಸನ್ನಿವೇಶಕ್ಕೆ ರೂಪಾಂತರಿಸಿ, ಹೊಸ ಆಯಾಮದಲ್ಲಿ ಮತ್ತೊಮ್ಮೆ ಮುಂದಿಡುವ ಅಗತ್ಯವಿದೆ. ಇದಕ್ಕೆ ಕಾರಣ, ಈಚೆಗೆ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಭಾಗವಾಗಿ, ತಜ್ಞರ ಸಮಿತಿಯು ಎಂಟು ಸೆಮಿಸ್ಟರುಗಳ ಪದವಿ ತರಗತಿ
ಗಳಲ್ಲಿ ಭಾಷಾ ವಿಷಯಗಳನ್ನು ಎರಡು ಸೆಮಿಸ್ಟರುಗಳಿಗೆ ಸೀಮಿತಗೊಳಿಸಲು ಮುಂದಿಟ್ಟಿರುವ ಪ್ರಸ್ತಾವ.

ಇದಕ್ಕೆ ಬರಗೂರು ರಾಮಚಂದ್ರಪ್ಪ ಮೊದಲಾದ ಲೇಖಕರಿಂದಲೂ ಅಧ್ಯಾಪಕ ಸಮುದಾಯದಿಂದಲೂ ಕನ್ನಡಪರ ಸಂಸ್ಥೆ- ಪ್ರಾಧಿಕಾರಗಳಿಂದಲೂ ಪ್ರತಿರೋಧ ವ್ಯಕ್ತವಾಗಿದೆ. ಇದಕ್ಕುತ್ತರವಾಗಿ ಉನ್ನತ ಶಿಕ್ಷಣ ಸಚಿವರು, ಭಾಷಾ ವಿಷಯಗಳನ್ನು ಹಿಂದಿನಂತೆ ನಾಲ್ಕು ಸೆಮಿಸ್ಟರುಗಳಿಗೆ ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ.

ಪ್ರಶ್ನೆಯೆಂದರೆ, ತಜ್ಞರ ಸಮಿತಿ ಈ ಬಗೆಯ
ಪ್ರಸ್ತಾವವನ್ನು ಯಾಕೆ ನೀಡಿತು ಎನ್ನುವುದು. ಇದಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ‘ಜ್ಞಾನಕೇಂದ್ರಿತ’ ವಾದ ವಿಜ್ಞಾನ, ವಾಣಿಜ್ಯ, ಸಮಾಜವಿಜ್ಞಾನದ ವಿಷಯಗಳ ಹಾಗೂ ‘ಭಾವಕೇಂದ್ರಿತ’ವಾದ ಭಾಷೆ, ಸಾಹಿತ್ಯದ ವಿಷಯಗಳ ನಡುವೆ ಶಿಕ್ಷಣ ವ್ಯವಸ್ಥೆಯಲ್ಲಿ ಮೊದಲಿಂದಲೂ ಇರುವ ಅಘೋಷಿತ ತರತಮವೂ ಒಂದು. ಮಾಹಿತಿಯನ್ನು ತಾರ್ಕಿಕವಾಗಿ ಮಥಿಸಿ ಹುಟ್ಟುವ ವಸ್ತುಜ್ಞಾನ ಮತ್ತು ಲೋಕಜ್ಞಾನಗಳು, ಅನುಭವ ಕಲ್ಪನೆ ಚಿಂತನೆ ಮತ್ತು ಭಾವನಾತ್ಮಕತೆ ಪ್ರಧಾನವಾಗಿರುವ ಕಲಾಭಿವ್ಯಕ್ತಿಗಳಿಗಿಂತ ಮುಖ್ಯ ವಾದವು ಮತ್ತು ಉಪಯುಕ್ತವಾದವು ಎಂಬ ಗ್ರಹಿಕೆಯ ಪರಿಣಾಮವಿದು. ಅದರಲ್ಲೂ ವಿಜ್ಞಾನ ಮತ್ತು ತಂತ್ರಜ್ಞಾನಗಳು, ಆಯಾ ಕಾಲದ ಉದ್ಯಮಪ್ರಧಾನ ಆರ್ಥಿಕತೆಯ ಜತೆ ನಂಟನ್ನು ಪಡೆದುಕೊಂಡ ಬಳಿಕ, ಈ ಗ್ರಹಿಕೆ ಮತ್ತಷ್ಟು ದೃಢಗೊಂಡಿತು. ಹೀಗಾಗಿಯೇ ಜ್ಞಾನಕೇಂದ್ರಿತ ವಿಷಯಗಳ ಪಾಠದಿಂದ ದಣಿದ ವಿದ್ಯಾರ್ಥಿಗಳಿಗೆ ಮನಸ್ಸನ್ನು ಹಗುರಗೊಳಿಸುವ ರಂಜನ ಸಾಮಗ್ರಿಯಾಗಿ ಭಾಷೆ, ಸಾಹಿತ್ಯವನ್ನು
ಪರಿಭಾವಿಸಿದವರು ಕಾಣಸಿಗುವರು.

ಹಲವು ಬಗೆಯ ಕಸುವುಳ್ಳ ತಿನಿಸಿನಿಂದ ದೇಹಾರೋಗ್ಯ ಬಲಗೊಳ್ಳುವಂತೆ, ಹಲವು ನೆಲೆಯ ಮಾಹಿತಿ, ಜ್ಞಾನ ಹಾಗೂ ಕಲಾಭಿವ್ಯಕ್ತಿಗಳ ಮೂಲಕ ವಿದ್ಯಾರ್ಥಿ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಈ ಪ್ರಕ್ರಿಯೆ
ಯಲ್ಲಿ ಭಾಷಾವಿಷಯ ಕಡೆಗಣಿಸುವುದು, ಅಸಮ ತೋಲನ ಮತ್ತು ಅಸೂಕ್ಷ್ಮ ನಿರ್ಧಾರ. ಶಿಕ್ಷಣನೀತಿ ರೂಪಿಸುವಲ್ಲಿ ಅದರ ಬಾಧ್ಯಸ್ಥರೆಲ್ಲರೂ ಭಾಗವಹಿಸದೆ ಹೋದಾಗ, ಅದರಲ್ಲೂ ಉದ್ಯಮಿಗಳು ಪ್ರಧಾನವಾಗಿರುವ ಕಡೆ, ಈ ಬಗೆಯ ಅಸಮತೋಲನ ಸಹಜ.

ಪ್ರಜೆಗಳು ಔಪಚಾರಿಕ ಶಿಕ್ಷಣ ವ್ಯವಸ್ಥೆಯ ಮೂಲಕ ಅತ್ಯುತ್ತಮ ನಾಗರಿಕರಾಗಲು ರೂಪುಗೊಳಿಸಲ್ಪಟ್ಟ ಹಾದಿಯಲ್ಲಿ, ಅವರಿಗೆ ಜ್ಞಾನಕೇಂದ್ರಿತ ವಿಷಯಗಳಷ್ಟೇ ಭಾವಕೇಂದ್ರಿತ ವಿಷಯಗಳೂ ಅಗತ್ಯ. ಭಾವಕೇಂದ್ರಿತ ವಿಷಯಗಳು ಮಾನವರು ಸಹಮಾನವರ ಹಾಗೂ ಇತರ ಜೀವಿಗಳ ಜತೆ ಒಟ್ಟಿಗೆ ಬದುಕುತ್ತಿರುವ ಪರಿಸರದ ಬಗ್ಗೆ ನಮ್ಮ ಪ್ರಜ್ಞೆಯನ್ನು ಕಟ್ಟುತ್ತವೆ. ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳು ರಾಜ್ಯಶಾಸ್ತ್ರದ ಚೌಕಟ್ಟಿನಲ್ಲಿ ಪಡೆವ ಅರಿವನ್ನು, ಟ್ಯಾಗೋರರ ‘ವೇರ್ ದಿ ಮೈಂಡ್ ಈಸ್’ ಕವನ ಅಥವಾ ಕುವೆಂಪು ಅವರ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಲೇಖನ ತನ್ನ ಭಾವ ಮತ್ತು ಚಿಂತನೆಯ ಮೂಲಕ ಅರ್ಥಪೂರ್ಣವಾಗಿ
ಉದ್ದೀಪಿಸಬಲ್ಲದು.

ಭಾವಕೇಂದ್ರಿತ ಪಠ್ಯಗಳು ನಮ್ಮ ನಾಡಿನ ಮತ್ತು ಜಗತ್ತಿನ ಬೇರೆಬೇರೆ ಸಂಸ್ಕೃತಿ, ಪರಂಪರೆಗಳ ಬಗ್ಗೆ ಸೂಕ್ಷ್ಮತೆಯನ್ನು ಬೆಳೆಸುತ್ತವೆ. ಈ ಸಂವೇದನೆ ರೂಪಿಸುವ ಮತ್ತು ಸೂಕ್ಷ್ಮತೆ ಬೆಳೆಸುವ ಕೆಲಸವನ್ನು, ಅತ್ಯುತ್ತಮ ಸಾಹಿತ್ಯವೂ ಒಳಗೊಂಡಂತೆ ಸಂಗೀತ, ರಂಗಭೂಮಿ, ಚಿತ್ರಕಲೆ, ಸಿನಿಮಾ ಮುಂತಾದ ಕಲೆಗಳು ಹಿಂದಿನಿಂದಲೂ ಮಾಡುತ್ತ ಬಂದಿವೆ. ಭಾವಕೇಂದ್ರಿತ ಪಠ್ಯ ಮತ್ತು ಕಲೆಗಳಿಗೆ ಮುಖಾಮುಖಿಯಾಗುವ ವಿದ್ಯಾರ್ಥಿಗಳು ಜ್ಞಾನಕ್ಕೆ ತೆರೆದುಕೊಳ್ಳುವುದಿಲ್ಲ. ಸಮಾಜ ಮತ್ತು ನಿಸರ್ಗ ಪರಿಸರಗಳ ಬಗ್ಗೆ ಸಂವೇದನೆ ಬೆಳೆಸಿಕೊಳ್ಳುತ್ತಾರೆ; ಬಾಳಿನಲ್ಲಿ ಮಾನವೀಯ ಸಂಬಂಧಗಳ ನಿರ್ವಹಣೆಗೆ ಬೇಕಾದ ಭಾಷಿಕ ಮತ್ತು ಸಾಂಸ್ಕೃತಿಕ ನುಡಿಗಟ್ಟು ಪಡೆದುಕೊಳ್ಳುತ್ತಾರೆ.

ಈಚೆಗೆ ಭಾಷಾಪಠ್ಯಗಳು ಕೇವಲ ಸಂಧಿ ಸಮಾಸಗಳಿಗೆ ಅಥವಾ ಕತೆ ಕವಿತೆ ನಾಟಕದಂತಹ ‘ಸೃಜನಶೀಲ’ ಪಠ್ಯಗಳಿಗೆ ಸೀಮಿತವಾಗಿಲ್ಲ. ಈಗ ಸಾಹಿತ್ಯದ ಪರಿಕಲ್ಪನೆಯೇ ವಿಸ್ತಾರಗೊಂಡಿದೆ. ಅದರಲ್ಲಿ ಜನಪ್ರಿಯ ವಿಜ್ಞಾನ, ಆತ್ಮಕತೆ, ಪತ್ರಿಕಾ ಲೇಖನ, ಅಂಕಣ ಬರಹ, ತತ್ವಪದ ಒಳಗೊಂಡಂತೆ, ಕನ್ನಡ ಭಾಷೆಯ ಮೂಲಕ ಸೃಷ್ಟಿಯಾಗಿರುವ ವಿಶಾಲ ವಾಙ್ಮಯವಿದೆ. ಅದರೊಳಗೆ ಜಗತ್ತಿನ ಅತ್ಯುತ್ತಮ ವಾಙ್ಮಯದ ಅನುವಾದವೂ ಸೇರಿಕೊಂಡಿದೆ. ಈ ಸಾಹಿತ್ಯಕ್ಕೆ ಸಿನಿಮಾ, ರಂಗಭೂಮಿ, ಸಂಗೀತಗಳಿಗೆ ಹೊರಚಾಚುಗಳು ಲಗತ್ತಾಗಿವೆ. ಆದ್ದರಿಂದ ಭಾಷಾ ವಿಷಯಗಳಿಗೆ ಅವಕಾಶ ಕಡಿತ ಮಾಡಿರುವುದು, ಕೇವಲ ಬೋಧನ ಸಮಯದ ಕಡಿತಕ್ಕೆ ಅಥವಾ ಅಧ್ಯಾಪಕರ ಉದ್ಯೋಗಕ್ಕೆ ಸೀಮಿತವಾದ ವಿಷಯವಲ್ಲ. ಬದಲಿಗೆ ಭಾಷೆ, ಸಾಹಿತ್ಯದ ವಿಷಯಗಳಲ್ಲಿ ಜನಪ್ರಿಯವಾಗಿರುವ ತಪ್ಪು ಕಲ್ಪನೆಗೆ ಸಂಬಂಧಿಸಿದ ಸಂಗತಿ.

ಮಾರುಕಟ್ಟೆ ಆರ್ಥಿಕತೆಯು ದೇಶೀ ಭಾಷೆಗಳ ವಿಷಯದಲ್ಲಿ ಮಾಡಬಹುದಾದ ಮಾರಣಾಂತಿಕ ಪರಿಣಾಮ ಮನಸ್ಸಿನಲ್ಲಿಟ್ಟುಕೊಂಡು, ನಾವೀಗ ಎಚ್ಚರ ದಿಂದ ತೀರ್ಮಾನ ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಕನ್ನಡ ನುಡಿಯು ಬರಹ ಮತ್ತು ಮೌಖಿಕ ರೂಪದಲ್ಲಿ ಶತಮಾನಗಳಿಂದ ಸೃಷ್ಟಿಸಿರುವ, ಈಗಲೂ ಬಹು
ಪ್ರಕಾರಗಳಲ್ಲಿ ಸೃಷ್ಟಿಸುತ್ತಿರುವ ವಿಶಾಲ ವಾಙ್ಮಯಕ್ಕೆ, ಮುಂಬರುವ ಪದವೀಧರರನ್ನು ಬೆನ್ನು ತಿರುಗಿಸುವಂತೆ ಮಾಡುವ ಘಾತಕ ಕೆಲಸವಾಗುವುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.