ಶನಿವಾರ, ಜುಲೈ 31, 2021
28 °C
ಮಕ್ಕಳಿಗೆ ಯಾವ ವಿಷಯವನ್ನು, ಯಾವ ಮಾಧ್ಯಮದಲ್ಲಿ ಹೇಳಿಕೊಡಬೇಕು ಎಂಬುದರ ಬಗ್ಗೆ ನಮ್ಮ ಶಿಕ್ಷಣ ನೀತಿಗಳಲ್ಲಿ ಸ್ಥಿರತೆ ಇರಬೇಕು

ಸಬಲೀಕರಣ ಮತ್ತು ಶಿಕ್ಷಣದ ಗುಣಮಟ್ಟ

ಡಾ. ಶಿವಲಿಂಗಸ್ವಾಮಿ ಎಚ್.ಕೆ. Updated:

ಅಕ್ಷರ ಗಾತ್ರ : | |

Sangatha

‘ಇಸ್ರೊ’ ಮಾಜಿ ಅಧ್ಯಕ್ಷ ಡಾ. ಕೆ.ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ ಸಿದ್ಧವಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದಾದ್ಯಂತ ಚರ್ಚೆಗೆ ಒಳಪಟ್ಟಿದೆ. ಈ ನೀತಿಯು ಪರಿಗಣಿಸುತ್ತಿರುವ ಮೂಲ ಸವಾಲುಗಳಾದ ಲಭ್ಯತೆ, ಪಾಲುದಾರಿಕೆ, ಗುಣಮಟ್ಟ, ವಿಶ್ವಾಸಾರ್ಹತೆ ಮುಂತಾದ ಅಂಶಗಳು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರ ಗಮನ ಸೆಳೆಯುವಂತಿವೆ. ಇದೊಂದು ಪ್ರಶಂಸಾರ್ಹ ಬೆಳವಣಿಗೆ. ಜೊತೆಗೆ, ಈ ನೀತಿಯು ವಿಶೇಷವಾಗಿ ಕಾಳಜಿ ವಹಿಸುತ್ತಿರುವ ಭಾಷಾಸೂತ್ರ ಸಹ ನಿಷ್ಪಕ್ಷಪಾತವಾದ ಚರ್ಚೆಯ ಮೂಲಕ ಪರಿಗಣನೆಗೆ ಒಳಪಡಬೇಕು.

ದ್ವಿಭಾಷಾ ಸೂತ್ರವು ಹೊಸದೇನಲ್ಲ. ಮಕ್ಕಳು ಮೊದಲು ಮಾತೃಭಾಷೆಯನ್ನು ಕಲಿತು, ನಂತರ ಇಂಗ್ಲಿಷನ್ನು ಎರಡನೆಯ ಭಾಷೆಯಾಗಿ ಕಲಿಯುವುದು ಗ್ರಾಮೀಣ ಪ್ರದೇಶಗಳಲ್ಲಿ ರೂಢಿಯಲ್ಲಿದೆ. ಆದರೆ, ಇಂಗ್ಲಿಷನ್ನು ಎರಡನೆಯ ಭಾಷೆಯಾಗಿ ಕಲಿಯುವಾಗ ಬಹಳ ಮಕ್ಕಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆಯಾಗಿ, ಕೊನೆಗೆ ಭಾಷೆಯನ್ನು ಕಲಿಯುವ ಪ್ರಯತ್ನಕ್ಕೆ ಹೋಗದೆ, ತೇರ್ಗಡೆಯಾಗಲಿಕ್ಕೆ ಎಷ್ಟು ಬೇಕೋ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳುವುದು ವಾಡಿಕೆ. ಭಾಷಾತಜ್ಞ ನೋಮ್ ಚಾಮ್‍ಸ್ಕಿ ಪ್ರಕಾರ, ಮಕ್ಕಳ ಭಾಷಾ ಕಲಿಕೆಯು ಮಕ್ಕಳೊಂದಿಗೆ ಹಿರಿಯರು ಸಂವಾದ ನಡೆಸುವಾಗ ಪದಗಳು ಮತ್ತು ವಾಕ್ಯಗಳ ಪುನರಾವರ್ತನೆ ಪ್ರಕ್ರಿಯೆಯ ಮೂಲಕ ಆಗುತ್ತದೆ. ಈ ದೃಷ್ಟಿಯಲ್ಲಿ ನೋಡಿದರೆ, ಶಿಕ್ಷಣ ನೀತಿಯ ಭಾಷಾಸೂತ್ರವು ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ.

ಪ್ರಸ್ತಾಪಿತ ಭಾಷಾಸೂತ್ರವು ಮಕ್ಕಳು ಅಸ್ಮಿತೆಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ದ್ವಿಭಾಷಿಕರಾಗಿ ರೂಪುಗೊಳ್ಳಲಿ ಎಂಬ ಆಶಯವನ್ನು ಹೊಂದಿದೆ. ದ್ವಿಭಾಷಾ ಸೂತ್ರವನ್ನು ಕಡ್ಡಾಯ ಎಂದು ಶಿಫಾರಸು ಮಾಡಿದರೆ ‘ಶಿಕ್ಷಕರ ಕೊರತೆ’ ಅಥವಾ ‘ವಿದ್ಯಾರ್ಥಿಗಳ ನಿರಾಸಕ್ತಿ’ ಎಂಬ ಕುಂಟು ಕಾರಣಗಳನ್ನು ಒಡ್ಡಿ ವಿರೋಧ ವ್ಯಕ್ತಪಡಿಸುವುದು ರಾಜ್ಯಗಳ ಪರಿಪಾಟ ಆಗಬಾರದು. ವಿದ್ಯಾರ್ಥಿಗಳು ಅವರವರ ಪ್ರಾದೇಶಿಕ ಭಾಷೆಯಲ್ಲಿ ಪರಿಣತಿ ಹೊಂದುವಂತೆ ಮಾಡಿ, ಅದರ ಜೊತೆಯಲ್ಲಿ ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಇಂಗ್ಲಿಷ್‌ಗೂ ಸಮಾನ ಒತ್ತು ಕೊಡುವ ಆಶಯ ಈ ಸೂತ್ರದಲ್ಲಿ ಇರುವುದು ಒಳ್ಳೆಯ ಅಂಶ.

ಪ್ರಮುಖವಾಗಿ ನಮಗೆ ಬೇಕಿರುವುದು, ಸಮಾನ ಗುಣಮಟ್ಟದ ಶಿಕ್ಷಣದಿಂದ ವಂಚಿತರಾದವರ ಸಮಸ್ಯೆಗೆ ಪರಿಹಾರ ಒದಗಿಸುವ ಉದ್ದೇಶದ ಶಿಕ್ಷಣ ನೀತಿ. ಈ ಕಾರಣದಿಂದಲೇ ‘ಈಕ್ವಿಟಿ’ ಎಂಬುದು ಮೂಲ ತತ್ವವಾಗಿ ಈ ನೀತಿಯಲ್ಲಿ ಕಂಡುಬಂದಿದೆ.

ಭಾರತವು ವಿವಿಧ ಕ್ಷೇತ್ರಗಳಲ್ಲಿ ಎಷ್ಟೇ ಅಭಿವೃದ್ಧಿ ಸಾಧಿಸಿದ್ದರೂ ದೇಶದಾದ್ಯಂತ ಸಮಾನ ಗುಣಮಟ್ಟದ ಶಿಕ್ಷಣದಿಂದ ವಂಚಿತವಾದ ಸಮುದಾಯಗಳು ಇನ್ನೂ ಇವೆ ಮತ್ತು ಶಿಕ್ಷಣದಲ್ಲಿ ಸಮಾನ ಗುಣ ಮಟ್ಟ ಇದ್ದರೆ ಮಾತ್ರ ಅಂತಹವರ ಸಬಲೀಕರಣ ಸಾಧ್ಯ ಎಂಬುದರಲ್ಲಿ ಅನುಮಾನವಿಲ್ಲ. ಸೋಜಿಗವೆಂದರೆ, ಪ್ರತಿಯೊಬ್ಬರೂ ಗುಣಮಟ್ಟ ಎಂಬ ಪದವನ್ನು ಮಂತ್ರದಂತೆ ಜಪಿಸುತ್ತಾರೆ ಹೊರತು, ಅದನ್ನು ಸಮಗ್ರವಾಗಿ ಸಾಧಿಸಲು ಸಮಾನ ಗುಣಮಟ್ಟದ ಶಿಕ್ಷಣ ಎಲ್ಲಕ್ಕಿಂತ ಮುಖ್ಯ ಎಂದು ಪರಿಭಾವಿಸದೇ ಇರುವುದು.

ಶಿಕ್ಷಣ ಎಂದರೆ ಕೇವಲ ಡಿಗ್ರಿ ಸಂಪಾದನೆಯಷ್ಟೇ ಅಲ್ಲ. ಶಿಕ್ಷಣದಿಂದ ವಿದ್ಯಾರ್ಥಿಯು ಒಬ್ಬ ಅನನ್ಯತೆಯುಳ್ಳ ವ್ಯಕ್ತಿಯಾಗಬೇಕು ಮತ್ತು ಉದ್ಯೋಗ ಮಾರುಕಟ್ಟೆಯ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲು ಡಿಗ್ರಿ ಎಂಬ ಮೂಲ ಅರ್ಹತೆಯ ಜೊತೆಗೆ ಉದ್ಯೋಗತ್ವ ಎಂಬ ಯೋಗ್ಯತೆಯನ್ನು ಸಹ ಸಂಪಾದಿಸುವುದು ಶಿಕ್ಷಣದ ಆಶಯವಾಗಿರುತ್ತದೆ.

ಇಂದಿನ ವಿದ್ಯಾರ್ಥಿಗಳಿಗೆ ನಾವು ಒದಗಿಸುವ ಶಿಕ್ಷಣವು ಪ್ರಾಥಮಿಕ ಹಂತದಿಂದಲೇ ದ್ವಿಭಾಷಾ ಸೂತ್ರದಡಿಯಲ್ಲಿ ಇದ್ದರಷ್ಟೇ ಶಿಕ್ಷಣ ನೀತಿಯ ಪಾಲುದಾರಿಕೆ ಮತ್ತು ಗುಣಮಟ್ಟದ ಆಶಯಗಳು ಕಾರ್ಯರೂಪಕ್ಕೆ ಬರಬಲ್ಲವು. ಏಕೆಂದರೆ ಅತ್ಯಂತ ಕಠಿಣವಾದ ವಾಸ್ತವ ಜಗತ್ತಿನಲ್ಲಿ ಕೇವಲ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಯೊಬ್ಬ ತನ್ನ ಸಮಕಾಲೀನರೊಂದಿಗೆ ಪೈಪೋಟಿ ಒಡ್ಡಿ ಕೆಲಸ ಪಡೆಯಲು ಸಾಧ್ಯವಾಗದು.

ಪ್ರಾಥಮಿಕ ಹಂತದಿಂದಲೇ ಭಾಷಾ ಕಲಿಕೆಯನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ, ಕಲಿಕಾ ಮಾಧ್ಯಮ ಕೂಡ ದ್ವಿಭಾಷಿಕವಾಗಿದ್ದರೆ ಒಳಿತು. ಏಕೆಂದರೆ, ಗ್ರಾಮೀಣ ಮತ್ತು ಪಟ್ಟಣದ ಮಕ್ಕಳ ಕಲಿಕಾ ಮಾಧ್ಯಮಗಳು ಬೇರೆ ಬೇರೆಯಾದರೆ ಅವರ ಮುಂದಿನ ಹಂತದ ಶಿಕ್ಷಣಕ್ಕಾಗಿ ಬೇಕಿರುವ ಬೆಳವಣಿಗೆ ಹಾಗೂ ಉದ್ಯೋಗದ ಅರಸುವಿಕೆ ಕೂಡ ಅದೇ ಪ್ರಮಾಣದಲ್ಲಿ ಏರುಪೇರು ಆಗುತ್ತವೆ. ಆದ್ದರಿಂದ ನಮ್ಮ ಗುರಿಯು ಕಲಿಕಾಕ್ರಮ ಮತ್ತು ಪಠ್ಯಕ್ರಮ ಸಮಾನ ಗುಣಮಟ್ಟದಲ್ಲಿ ಇರುವುದಾಗಿರಬೇಕು.

ಪಠ್ಯಕ್ರಮವನ್ನು ಸಿದ್ಧಪಡಿಸುವಾಗ ಮಕ್ಕಳ ಭವಿಷ್ಯಕ್ಕೆ ಅನುವಾಗುವಂತೆ, ವಾಸ್ತವ ಜಗತ್ತಿನ ಬೇಡಿಕೆಗಳಿಗೆ ಅನುಗುಣವಾಗಿ ಇರುವಂತೆ ನೋಡಿಕೊಳ್ಳುವುದು ನೀತಿ ನಿರೂಪಕರ ಜವಾಬ್ದಾರಿ. ಯಾವ ವಿಷಯವನ್ನು ಯಾವ ಪ್ರಮಾಣದಲ್ಲಿ ಯಾವ ಮಾಧ್ಯಮದಲ್ಲಿ ಹೇಳಿಕೊಡಬೇಕು ಎಂಬ ಬಗ್ಗೆ ನಮ್ಮ ನೀತಿಗಳಲ್ಲಿ ಸ್ಥಿರತೆ ಇರಬೇಕು. ಗ್ರಾಮೀಣಮಕ್ಕಳಿಗೆ ಸಿಗಬೇಕಿರುವ ಗುಣಮಟ್ಟದ ಶಿಕ್ಷಣದಲ್ಲಿ ಯಾವ ಕೌಶಲಗಳಿಗೂ ಕೊರತೆಯಾಗದಂತೆ ನೋಡಿಕೊಂಡರಷ್ಟೇ ಶಿಕ್ಷಣ ನೀತಿಯು ಯಶಸ್ವಿಯಾಗುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು