ಕನ್ನಡಿಗರಿಗೆ ಕೆಲಸ ಸಿಗೋದು ಯಾವಾಗ? ಸಂಸದರೇಕೆ ಈ ವಿಷಯದ ಬಗ್ಗೆ ಬಾಯಿಬಿಡಲ್ಲ

7

ಕನ್ನಡಿಗರಿಗೆ ಕೆಲಸ ಸಿಗೋದು ಯಾವಾಗ? ಸಂಸದರೇಕೆ ಈ ವಿಷಯದ ಬಗ್ಗೆ ಬಾಯಿಬಿಡಲ್ಲ

Published:
Updated:

ಬ್ಯಾಂಕ್‌ಗಳಿಗೆ ಸಿಬ್ಬಂದಿಯನ್ನು ನೇಮಿಸುವ ಪ್ರಕ್ರಿಯೆಯಲ್ಲಿ ಐಬಿಪಿಎಸ್ (IBPS-Indian Banking Pesonnel Selection) ಮುಖ್ಯಪಾತ್ರ ನಿರ್ವಹಿಸುತ್ತದೆ. ಇದು ತಮ್ಮಲ್ಲಿ ಖಾಲಿಯಾದ ಸಿಬ್ಬಂದಿ, ವಿಶೇಷವಾಗಿ ಗುಮಾಸ್ತರು, ಕಚೇರಿ ಸಹಾಯಕರು ಮತ್ತು ಕೆಳಹಂತದ ಅಧಿಕಾರಿಗಳನ್ನು ಲಿಖಿತ ಮತ್ತು ಮೌಖಿಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲು ರಾಷ್ಟ್ರದ ಬ್ಯಾಂಕ್ ಸಮೂಹವು ರಚಿಸಿಕೊಂಡಿರುವ ನೇಮಕಾತಿ ಸಂಸ್ಥೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊರತುಪಡಿಸಿ ದೇಶದ ಎಲ್ಲ ರಾಷ್ಟ್ರೀಯ ಬ್ಯಾಂಕು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೆ ಸಿಬ್ಬಂದಿಯನ್ನು ನೇಮಕ ಮಾಡುವ ಸಂಸ್ಥೆಯಿದು. ಮೊದಲು ಆ ಕೆಲಸವನ್ನು ಆಯಾ ಪ್ರದೇಶದ ಪ್ರಾದೇಶಿಕ ಬ್ಯಾಂಕಿಂಗ್ ಸೇವಾ ನೇಮಕಾತಿ ಮಂಡಳಿಗಳು ಮಾಡುತ್ತಿದ್ದವು. ಈ ಮಂಡಳಿಗಳನ್ನು ರದ್ದುಪಡಿಸಲಾಗಿದೆ. ಈಈ ಕೆಲಸವನ್ನು ಈಗ ಐಬಿಪಿಎಸ್ ಎಂಬ ಕೇಂದ್ರೀಕೃತ ವ್ಯವಸ್ಥೆ ನಿರ್ವಹಿಸುತ್ತಿದೆ.

2014ರ ಹಿಂದೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೆ ಮತ್ತು ಒಂದು ಪ್ರದೇಶದ ಶಾಖೆಗಳಲ್ಲಿ ಖಾಲಿಯಾದ ಹುದ್ದೆಗಳಿಗೆ ಸಿಬ್ಬಂದಿಯನ್ನು ನೇಮಿಸುವಾಗ ಅಭ್ಯರ್ಥಿಗಳು ಆಯಾ ಪ್ರಾಂತ್ಯದ ಅಧಿಕೃತ ಭಾಷೆಯನ್ನು ಕನಿಷ್ಠ 10ನೇ ತರಗತಿವರೆಗೆ ಒಂದು ವಿಷಯವಾಗಿ ಓದಿರಬೇಕೆಂಬ ಷರತ್ತು ಇತ್ತು. ಹಾಗಾಗಿ ಲಿಖಿತ ಪರೀಕ್ಷೆಯಲ್ಲಿ ಸ್ವಲ್ಪ ಕಡಿಮೆ ಅಂಕ ತೆಗೆದುಕೊಂಡರೂ ಸ್ಥಳೀಯರಿಗೆ ಆಯ್ಕೆಯ ಅವಕಾಶಗಳು ಹೆಚ್ಚಿದ್ದವು. ಆದರೆ 2014ರ ನಂತರ ಈ ಷರತ್ತನ್ನು ಕೈಬಿಡಲಾಯಿತು. ಅದರ ಬದಲು ಲಖಿತ ಮತ್ತು ಮೌಖಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆಯ್ಕೆಯಾದ ಅಭ್ಯರ್ಥಿಯು ತಾನು ನೇಮಕಗೊಂಡ ಪ್ರಾಂತ್ಯದ ಭಾಷೆಯ ಪರಿಚಯವಿಲ್ಲದಿದ್ದರೆ ಕೆಲಸಕ್ಕೆ ಸೇರಿದ ಆರು ತಿಂಗಳೊಳಗಾಗಿ ಭಾಷೆಯನ್ನು ಕಲಿಯಬೇಕೆಂಬ ನಿಬಂಧನೆಯನ್ನು ವಿಧಿಸಿ ನೇಮಕ ಮಾಡುವ ಪದ್ಧತಿ ಅನುಷ್ಠಾನಕ್ಕೆ ಬಂತು. ನಂತರದ ದಿನಗಳಲ್ಲಿ ಮತ್ತೂ ಒಂದು ಹೆಜ್ಜೆ ಮುಂದೆಹೋಗಿ ಆರುತಿಂಗಳಲ್ಲಿ ಕಲಿಯಲು ಸಾಧ್ಯವಾಗದಿದ್ದರೆ ಉದ್ಯೋಗಿಯು ಮತ್ತೆ ಆರು ತಿಂಗಳ ಕಾಲಾವಕಾಶ ಕೋರಲು ಅವಕಾಶ ನೀಡಲಾಯಿತು.

ಇದು ಉದ್ಯೋಗಿಯ ಪ್ರೊಬೇಷನರಿ ಅವಧಿ ಮುಗಿಯುವ ತನಕ, ಅಂದರೆ ಎರಡು ವರ್ಷಕಾಲ ವಿಸ್ತರಿಸಬಹುದು. ಪ್ರಾದೇಶಿಕ ಭಾಷೆ ಬಾರದಿದ್ದರೆ ಅವರನ್ನು ಉದ್ಯೋಗದಿಂದ ತೆಗೆದು ಹಾಕುವ ನಿರ್ಬಂಧವಿದ್ದರೂ ಎರಡು ವರ್ಷಗಳ ನಂತರ ಯಾರನ್ನಾದರೂ ಕೆಲಸದಿಂದ ಕೇವಲ ಭಾಷೆ ಬರದ ಕಾರಣ ತೆಗೆದರೆ ಸಂತ್ರಸ್ತ ವ್ಯಕ್ತಿಯ ಹಕ್ಕನ್ನು ಯಾವ ನ್ಯಾಯಾಲಯವು ನಿರಾಕರಿಸುವುದಿಲ್ಲವೆಂಬ ಅರಿವು ಗೊತ್ತಿದ್ದೇ ಈ ರೀತಿ ನೇಮಕಾತಿ ನಿಯಮವನ್ನು ಬದಲಾಯಿಸಲಾಗಿದೆ.

ಈ ರೀತಿಯ ನಿಯಮ ಸಡಿಲಿಕೆಯಿಂದ ಬಹುಭಾಷಾಸಂಖ್ಯಾತರಾದ ಹಿಂದಿ ಮತ್ತು ತೆಲುಗು ಭಾಷಿಕ ಅಭ್ಯರ್ಥಿಗಳಿಗೆ ಹೆಚ್ಚಿನ ಸಹಾಯವಾಗಿದೆ. ಕನ್ನಡಿಗರು ತಮ್ಮ ನಾಡಿನಲ್ಲಿ ಸಿಗಬೇಕಾದ ನ್ಯಾಯವಾದ ಹಕ್ಕಿನಿಂದ ವಂಚಿತವಾಗಿದ್ದಾರೆ. ಅಲ್ಲದೆ ಒಮ್ಮೆ ಕೆಲಸಕ್ಕೆ ಸೇರಿದ ಅಭ್ಯರ್ಥಿಗೆ ಆಯಾ ಪ್ರಾದೇಶಿಕ ಭಾಷೆ ಕಲಿತಿರುವ ಬಗ್ಗೆ ಪರೀಕ್ಷೆ ಮಾಡಿ ಖಚಿತಪಡಿಸಿಕೊಳ್ಳುವ ವಿಧಾನಗಳು ಯಾವುವು ಎಂಬುದೇ ತಿಳಿದಿಲ್ಲ. ಹಾಗಾಗಿ ಆರು ತಿಂಗಳೊಳಗೆ ಭಾಷೆ ಕಲಿಯಬೇಕೆನ್ನುವ ಷರತ್ತು ಕಣ್ಣೊರೆಸುವ ತಂತ್ರ ಮಾತ್ರ.

ಒಂದು ಕಾಲದಲ್ಲಿ ರೈಲ್ವೆ ಇಲಾಖೆಯಲ್ಲಿ ಕನ್ನಡಿಗರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಜಾಫರ್ ಷರೀಫ್‍ ಅವರು ರೇಲ್ವೆ ಮಂತ್ರಿಯಾದ ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೂ ಮತ್ತೆ ಹಳೆಯ ಸ್ಥಿತಿ ಮರುಕಳಿಸಿದೆ. ಕೇಂದ್ರದ ಹುದ್ದೆಗಳಿಗೆ ಭಾಷೆಯ ಕಾರಣಕ್ಕಾಗಿಯೇ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಹಿಂದಿ ರಾಷ್ಟ್ರೀಯ ಭಾಷೆ ಎಂಬ ಮೀಥ್ಯೆಯನ್ನು ಬಿತ್ತಿ ಉತ್ತರಭಾರತದ ಸಾಮ್ರಾಟರು ಕೇಂದ್ರದ ಹುದ್ದೆಗಳ ಲಿಖಿತ ಪರೀಕ್ಷೆಗಳನ್ನು ಹಿಂದಿಯಲ್ಲಿ ಬರೆಯಲು ಅವಕಾಶ ಕಲ್ಪಿಸಿ ಪ್ರಾದೇಶಿಕ ಭಾಷೆಯ ಮಾಧ್ಯಮದಲ್ಲಿ ಓದಿದ ಪ್ರತಿಭಾವಂತರಿಗೆ ಕಳೆದ 70 ವರ್ಷದಿಂದ ಅವಕಾಶ ನಿರಾಕರಿಸಲಾಗಿದೆ.

ಕೇವಲ ಮೆಟ್ರೋದಲ್ಲಿ ಹಿಂದಿ ಬಳಕೆಯ ವಿರುದ್ಧ ದನಿಯೆತ್ತಿದ್ದಕ್ಕೆ ರಾಷ್ಟ್ರೀಯ ವಾಹಿನಿಗಳು ಅದನ್ನು ರಾಷ್ಟ್ರದ್ರೋಹವೆಂದು ಬಿತ್ತರಿಸಿದವು. ಮೆಟ್ರೋ ರೈಲು ಇಲಾಖೆಯಲ್ಲಿ ಎರವಲು ಸೇವೆಯ ತಂತ್ರಜ್ಞರ ಹುದ್ದೆಗಳಿಗೆ ಅನುಭವಿ ಕನ್ನಡಿಗರನ್ನು ನೇಮಿಸಿಕೊಳ್ಳಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಸಲಹೆಯನ್ನು ಪ್ರಾದೇಶಿಕ ಸಂಕುಚಿತ ಮನೋಭಾವವೆಂಬಂತೆ ಬಿಂಬಿಸಿದವು.

ಈಗ ಕರ್ನಾಟಕದಲ್ಲಿ ಕನ್ನಡಿಗರ ಪರಿಸ್ಥಿತಿ ಹೇಗಿದೆಯೆಂದರೆ ನಮ್ಮ ಬದುಕುವ ಹಕ್ಕನ್ನು ಕೇಳುವುದೂ ರಾಷ್ಟ್ರದ್ರೋಹವೆಂಬಂತಾಗಿದೆ. ಈ ಅನ್ಯಾಯಗಳನ್ನು ಪ್ರಶ್ನಿಸಬೇಕಾದ ನಮ್ಮ ಸಂಸತ್ ಸದಸ್ಯರು ಉತ್ತರಭಾರತ ಪ್ರಾಬಲ್ಯ ಮತ್ತು ಹಿಂದಿ ಮೋಹಿತ ರಾಷ್ಟ್ರೀಯ ಪಕ್ಷಗಳ ನಮ್ರ ಸೇವಕರಂತೆ ವರ್ತಿಸುತ್ತಿದ್ದಾರೆ. ಇದುವರೆಗೂ ಒಬ್ಬ ಸಂಸತ್ ಸದಸ್ಯ ರೇಲ್ವೆ ಇಲಾಖೆ, ಬ್ಯಾಂಕಿಂಗ್ ಕ್ಷೇತ್ರ, ಸ್ಟಾಫ್ ಸೆಲೆಕ್ಷನ್ ಕಮಿಷನ್, ಇತ್ಯಾದಿ ಕೇಂದ್ರ ಸರ್ಕಾರದ ನೇಮಕಾತಿ ಸಂಸ್ಥೆಗಳಿಂದ ಕನ್ನಡಿಗರು ಆಯ್ಕೆಯಾಗಿರುವ ವಿವರಗಳ ಬಗ್ಗೆ ಸಂಸತ್ತಿನಲ್ಲಿ ಒಂದು ಪ್ರಶ್ನೆಯನ್ನು ಕೇಳಿಲ್ಲ. ನಮ್ಮವರು ಈ ಕ್ಷೇತ್ರಗಳಲ್ಲಿ ಹಿಂದುಳಿಯಲು ಇರಬಹುದಾದ ಕಾರಣ ಹುಡುಕಿಲ್ಲ. ಈ ಕಾರಣಗಳಿಗೆ ಪರಿಹಾರ ಹುಡುಕುವ ಗೋಜಿಗೆ ಹೋಗಿಲ್ಲ. ಬರೀ ಎದುರಾಳಿ ಪಕ್ಷದವರ ಮೇಲೆ ಆಪಾದನೆ, ಸಮರ್ಥನೆ, ಪ್ರತ್ಯಾರೋಪಗಳಲ್ಲೇ ತಮ್ಮ ಬದುಕನ್ನು ದೂಡುವವರ ವಿರುದ್ಧವೂ ಕನ್ನಡಿಗರು ದನಿಯೆತ್ತಬೇಕಿದೆ. ಪಕ್ಷಗಳ ನಾಯಕರ ಪಾದಸೇವೆ ಬಿಟ್ಟು ಕನ್ನಡಿಗರ ಸೇವೆಯನ್ನು ಮಾಡಿ ಎಂದು ಗಟ್ಟಿಯಾಗಿ ಕೇಳಬೇಕಿದೆ.

ಬರಹ ಇಷ್ಟವಾಯಿತೆ?

 • 26

  Happy
 • 3

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !