ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಪೊಲೀಸ್ ದೌರ್ಜನ್ಯಕ್ಕೆ ಉಗ್ರ ಪ್ರತಿಭಟನೆ

ಪೊಲೀಸರಿಗೆ ಪೊಲೀಸರ ವಿಧಾನದಿಂದಲೇ ಉತ್ತರಿಸಬೇಕೆಂದು ನಿರ್ಧರಿಸಿದಂತಿರುವ ಅಮೆರಿಕದ ಜನ, ಉಗ್ರ ಪ್ರತಿಭಟನೆಗೆ ಇಳಿದಿದ್ದಾರೆ
Last Updated 2 ಜೂನ್ 2020, 3:06 IST
ಅಕ್ಷರ ಗಾತ್ರ

ಅಮೆರಿಕದ ಹಲವಾರು ನಗರಗಳು ಹೊತ್ತಿ ಉರಿಯುತ್ತಿವೆ. ಅಲ್ಲಿ ಮನುಷ್ಯರು ಪೊಲೀಸರ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಸಾರ್ವಜನಿಕರ ಆಕ್ರೋಶದ ತೀವ್ರತೆ ಎಷ್ಟಿದೆ ಎಂದರೆ, ಸರ್ಕಾರಕ್ಕೆ ಕೂಡ ಏನೂ ಮಾಡಲಾಗುತ್ತಿಲ್ಲ.

ಸಾಮಾನ್ಯವಾಗಿ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದು, ಸಾರ್ವಜನಿಕ ಆಸ್ತಿ-ಪಾಸ್ತಿಗಳ ನಾಶಕ್ಕೆ ಕಾರಣವಾದಾಗ, ನೋಡುತ್ತಿರುವವರಿಗೆ ಪ್ರತಿಭಟನಕಾರರ ಮೇಲೆ ಸಿಟ್ಟು ಬರುತ್ತದೆ. ಆದರೆ ಅಮೆರಿಕದ ಜನ ನಡೆಸುತ್ತಿರುವ ಉಗ್ರ ಪ್ರತಿಭಟನೆಯನ್ನು ನೋಡಿದ ಯಾರಿಗೂ ಅವರ ಮೇಲೆ ಕೋಪ ಬರಲು ಸಾಧ್ಯವಿಲ್ಲ.

ಪೊಲೀಸರಿಗೆ ಪೊಲೀಸರ ಭಾಷೆಯಲ್ಲೇ ಉತ್ತರಿಸದೇ ಹೋದರೆ ಪೊಲೀಸರ ಕೈಯಿಂದ ಮನುಷ್ಯರನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯಕ್ಕೆ ಅಲ್ಲಿನ ಜನ ಬಂದಿದ್ದರೆ, ಅದನ್ನು ಯಾವ ಆಧಾರದಲ್ಲಿ ತಪ್ಪು ಅಂತ ಹೇಳುವುದು? ಪೊಲೀಸ್ ವ್ಯವಸ್ಥೆಯ ಕ್ರೌರ್ಯವನ್ನೆಲ್ಲಾ ಒಪ್ಪಿಕೊಂಡು ಸುಮ್ಮನೆ ಇರಲು ಅಮೆರಿಕವೇನು ಭಾರತದಂತಹ ತೃತೀಯ ಜಗತ್ತಿನ ರಾಷ್ಟ್ರ ಅಲ್ಲವಲ್ಲ.

ಇದು, ಅಮೆರಿಕನ್ ಸಮಾಜಕ್ಕೆ ಅಲ್ಲಿನ ಪೊಲೀಸ್ ವ್ಯವಸ್ಥೆಯ ಮೇಲೆ ಮಡುಗಟ್ಟಿದ್ದ ಕೋಪ ಪಡೆದ ಮೂರ್ತ ರೂಪ. ಒಳಗೊಳಗೇ ಹಬೆಯಾಡುತ್ತಿದ್ದ ಅಸಹಾಯಕ ರೋಷಕ್ಕೆ ಕಿಡಿ ಹಚ್ಚಿದ್ದು, ಹೋದ ವಾರ ಅಲ್ಲಿನ ಮಿನಿಯಪೊಲೀಸ್ ನಗರದಲ್ಲಿ ನಡೆದುಹೋದ ಒಂದು ಘಟನೆ. ನಡುಹಗಲಲ್ಲಿ, ಆ ನಗರದ ಬೀದಿಯಲ್ಲಿ, ಪೊಲೀಸ್ ಪಡೆಗೆ ಸೇರಿದವನೊಬ್ಬ ಜಾರ್ಜ್ ಫ್ಲಾಯ್ಡ್ ಎಂಬ ವ್ಯಕ್ತಿಯೊಬ್ಬರಿಗೆ ಕೈಕೋಳ ತೊಡಿಸಿ, ನೆಲಕ್ಕೆ ಉರುಳಿಸಿ, ಅವರ ಕುತ್ತಿಗೆಯನ್ನು ತನ್ನ ಮೊಣಕಾಲಲ್ಲಿ ಅದುಮಿ ಕೊಂದೇ ಬಿಟ್ಟಿದ್ದಾನೆ. ಕೊಂದ ಪೊಲೀಸನ ಚರ್ಮ ಬಿಳಿಯಾಗಿತ್ತು, ಸತ್ತ ಮನುಷ್ಯ ಕಪ್ಪು ಚರ್ಮದವರಾಗಿದ್ದರು.

ಸಾಯುವ ಮುನ್ನ ಆ ವ್ಯಕ್ತಿ ‘ಉಸಿರಾಡಲಾಗುತ್ತಿಲ್ಲ, ಬಿಟ್ಟುಬಿಡಿ’ (cannot breathe, please) ಅಂತ ಅಂಗಲಾಚುವ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತದೆ. ಪಕ್ಕದ ಸೂಪರ್ ಮಾರ್ಕೆಟ್‌ನಲ್ಲಿ ಆಗಷ್ಟೇ ಆ ವ್ಯಕ್ತಿ ನೀಡಿದ್ದ ನೋಟು ನಕಲಿಯಾಗಿತ್ತು ಎನ್ನುವ ಆಪಾದನೆ ಅವರ ಮೇಲಿದ್ದದ್ದು. ‘cannot breathe’ ಎನ್ನುವ ಮರಣ ಸಂಕಟದ ಅವರ ಕೊನೆಯ ವಾಕ್ಯ ಈಗ ಅಮೆರಿಕದಾದ್ಯಂತ ಪೊಲೀಸರ ವಿರುದ್ಧದ ಪ್ರತಿಭಟನೆಯ ಘೋಷವಾಕ್ಯ.

ಅಮೆರಿಕದ ಜನ ಈ ಪ್ರಕರಣವನ್ನು ಎರಡು ರೀತಿಯಲ್ಲಿ ನೋಡುತ್ತಿದ್ದಾರೆ. ಒಂದು, ಅಲ್ಲಿ ಇಂತಹ ಹಲವು ಪೊಲೀಸ್ ದೌರ್ಜನ್ಯಗಳಿಗೆ ಕಾರಣವಾಗಿರುವ, ಕರಿಯರ ಕುರಿತು ಬಿಳಿಯರಿಗಿರುವ ಜನಾಂಗ ದ್ವೇಷದ ಪರಿಣಾಮ ಎಂಬಂತೆ. ಇನ್ನೊಂದು, ಜನಾಂಗೀಯ ದ್ವೇಷದಾಚೆಗೆ ಪೊಲೀಸರು ಮತ್ತು ಮನುಷ್ಯರ ನಡುವಣ ಸಂಘರ್ಷದ ವ್ಯಕ್ತರೂಪದಂತೆ. ಪ್ರತಿಭಟನೆ ನಡೆಸುತ್ತಿರುವವರಲ್ಲಿ ಕರಿಯರಷ್ಟೇ ಬಿಳಿಯರೂ ಇದ್ದಾರೆ. ದೌರ್ಜನ್ಯವನ್ನು ಎಗ್ಗಿಲ್ಲದೆ ಪುನರಾವರ್ತಿಸಲು ಅನುವು ಮಾಡಿಕೊಟ್ಟರೆ ಏನೇನಾಗಬಹುದೋ ಅವೆಲ್ಲವೂ ಈಗ ಅಮೆರಿಕದಲ್ಲಿ ಆಗುತ್ತಿವೆ.

‘ಹೌದು, ಪ್ರತಿಭಟನಕಾರರು ಸಾಮಾಜಿಕ ಒಪ್ಪಂದ ಗಳನ್ನು ಮುರಿಯುತ್ತಿದ್ದಾರೆ, ಏನೀಗ? ಪೊಲೀಸರು ಪದೇ ಪದೇ ಈ ಒಪ್ಪಂದವನ್ನು ಮುರಿಯುತ್ತಿದ್ದಾಗ ಕಂಡೂ ಕಾಣದವರಂತೆ ಇದ್ದದ್ದು ಯಾಕೆ’ ಎನ್ನುವ ಪ್ರಶ್ನೆಯನ್ನು ಪ್ರಸಿದ್ಧ ಕಮಿಡಿಯನ್ ಟ್ರೆವೆರ್ ನೋವಾ ಈ ಘಟನೆಯನ್ನು ಪ್ರಬುದ್ಧವಾಗಿ ವಿಶ್ಲೇಷಿಸುತ್ತಾ ಎತ್ತಿದ್ದಾರೆ.

ಈ ಪ್ರಶ್ನೆ ಬರೀ ಅಮೆರಿಕಕ್ಕೆ ಸಂಬಂಧಿಸಿದ್ದಲ್ಲ. ಮುಖ್ಯವಾಗಿ ಈ ಘಟನಾವಳಿಗಳಿಂದ ಪಾಠ ಕಲಿಯ ಬೇಕಾಗಿರುವ ಇನ್ನೊಂದು ದೇಶ ಅಂತ ಇದ್ದರೆ ಅದು ಭಾರತ. ಪೊಲೀಸ್ ದೌರ್ಜನ್ಯಗಳು ಭಾರತೀಯ ಸಮಾಜಕ್ಕೆ ಅಪರಿಚಿತವೇನೂ ಅಲ್ಲ. ಅದರಲ್ಲೂ ಕೊರೊನಾ ಸಂಕಷ್ಟದ ಕಾಲದಲ್ಲಿ ದೇಶದ ಹಲವೆಡೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ನರಕದ ವಕ್ತಾರರು ಕೂಡ ಕ್ಷಮಿಸಲಾರರು. ಉದಾಹರಣೆಗೆ, ಉತ್ತರ ಪ್ರದೇಶದಲ್ಲಿ ಪೊಲೀಸರು ಒಬ್ಬ ವ್ಯಕ್ತಿಯನ್ನು ಹೊಡೆದು ಕೊಂದರು. ಮಧ್ಯಪ್ರದೇಶದಲ್ಲಿ ಔಷಧ ತರಲು ಹೊರಟಿದ್ದ ವಕೀಲರೊಬ್ಬರನ್ನು ಮೂಳೆ ಮುರಿಯುವಂತೆ ಥಳಿಸಿ ನಂತರ ‘ನೀವು ಮುಸ್ಲಿಂ ಅಂತ ಭಾವಿಸಿ ಹೊಡೆದೆವು, ಕ್ಷಮಿಸಿ’ ಎಂದರು. ಇಂತಹ ಲೆಕ್ಕವಿಲ್ಲದಷ್ಟು ದೌರ್ಜನ್ಯಗಳು ಕೊರೊನಾ ಕಾಲದಲ್ಲಿ ವರದಿಯಾಗಿವೆ. ಆದರೂ ಇಲ್ಲಿ ಯಾರಿಗೂ ಕೋಪ ಬರುವುದಿಲ್ಲ.ಇದನ್ನೆಲ್ಲಾ ಮರೆತು ಈಗ ಪೊಲೀಸರನ್ನು ಕೊರೊನಾ ಕಾಲದ ‘ಸೇವೆ’ಗಾಗಿ ವೈಭವೀಕರಿಸಲಾಗುತ್ತಿದೆ.

ಅಧಿಕಾರದ ಉನ್ನತ ಸ್ತರಗಳನ್ನು ಪ್ರಭಾವಿಸಬಲ್ಲವರ ಇಂತಹ ಸರಳೀಕೃತ ಅರ್ಥೈಸುವಿಕೆಯೇ ಅಮೆರಿಕದಲ್ಲಿ ಕಾಣುವಂತಹ ವಿದ್ಯಮಾನಗಳಿಗೆ ಕಾರಣವಾಗುವುದು.

‘ಪೊಲೀಸರು ತಮ್ಮನ್ನೇ ಸಂಕಷ್ಟಕ್ಕೆ ಒಡ್ಡಿ ಕೊಂಡು ‘ಸೇವೆ’ ಮಾಡಿದ್ದಾರೆ. ಅವರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಬೇಕು’ ಎಂಬ ವಾದ ಇದೆ. ಅದರಲ್ಲಿ ಹುರುಳಿರಬಹುದು. ಆದರೆ ಅದೆಲ್ಲಾ ಬೇರೆ. ಮನುಕುಲ ಎದುರಿಸುತ್ತಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಪೊಲೀಸರು ತೋರಿದ ಯಾವುದೇ ದುರ್ವರ್ತನೆಗೆ ಯಾವುದೂ ಸಮರ್ಥನೆಯಲ್ಲ. ದೌರ್ಜನ್ಯದ ಕುರಿತಾದ ಸಹನೆಗೆ ಭಾರತ ಇಂದಲ್ಲ ನಾಳೆ ಬೆಲೆ ತೆರಬೇಕಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT