ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ‘ತೇಲುವ ಚೆರ್ನೊಬಿಲ್’: ಪರಿಸರ ವಿರೋಧಿ?

ರಷ್ಯಾದ ತೇಲುವ ಪರಮಾಣು ರಿಯಾಕ್ಟರ್ ಬಗ್ಗೆ ಅನುಮಾನಗಳು ಮೂಡಿವೆ
Last Updated 27 ಏಪ್ರಿಲ್ 2021, 21:41 IST
ಅಕ್ಷರ ಗಾತ್ರ

ಇಲ್ಲಿ ನಮ್ಮ ಕೈಗಾ ಅಣು ವಿದ್ಯುತ್ ಸ್ಥಾವರವು 941 ದಿನಗಳ ಕಾಲ ನಿರಂತರ ವಿದ್ಯುತ್ ಉತ್ಪಾದನೆ ಮಾಡಿ ವಿಶ್ವ ದಾಖಲೆ ಮಾಡಿದೆ. ಅತ್ತ ರಷ್ಯಾ ತಯಾರಿಸಿರುವ, ನೀರಿನ ಮೇಲೆ ತೇಲುವ ವಿಶ್ವದ ಮೊದಲ ಪರಮಾಣು ರಿಯಾಕ್ಟರ್ ‘ಅಕಡೆಮಿಕ್ ಲೊಮೊನೊಸೊವ್’ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿ ವಿವಾದಕ್ಕೀಡಾಗಿದೆ.

80 ಮೆಗಾವಾಟ್ ಶಕ್ತಿ ಉತ್ಪಾದನೆಯ ಸಾಮರ್ಥ್ಯದ ರಿಯಾಕ್ಟರ್, ನ್ಯೂಕ್ಲಿಯರ್ ಇಂಧನ ತುಂಬಿಕೊಂಡು ಈಗಾಗಲೇ ಆರ್ಕ್‌ಟಿಕ್‌ ಬಂದರು ಮುರಮಾನ್‍ಸ್ಕಿಯಿಂದ ಹೊರಟು ಐದು ಸಾವಿರ ಕಿ.ಮೀ ದೂರ ಕ್ರಮಿಸಿ ಈಶಾನ್ಯ ಸೈಬೀರಿಯ ತಲುಪಿದೆ. 472 ಅಡಿ ಉದ್ದ ಮತ್ತು 30 ಅಡಿ ಅಗಲದ ಹಡಗಿನ ರೂಪದ ರಿಯಾಕ್ಟರ್ (ಬಾರ್ಜ್) ತಾನು ಉತ್ಪಾದಿಸುವ ವಿದ್ಯುತ್ತಿನಿಂದ ಒಂದು ಲಕ್ಷ ಮನೆಗಳಿಗೆ ವರ್ಷಪೂರ್ತಿ ಬೆಳಕು ನೀಡುವ ಉದ್ದೇಶ ಹೊಂದಿದೆ. ಇದರ ಜೊತೆಗೆ ಚಿನ್ನದ ನಿಕ್ಷೇಪವಿರುವ ಚುಕ್ಕೋಟದಲ್ಲಿ ನಡೆಯುವ ಗಣಿಗಾರಿಕೆಗೆ ಶಕ್ತಿ ನೀಡುವ ಕೆಲಸಕ್ಕೆ ತಯಾರಿ ಮಾಡಿಕೊಂಡಿರುವ ತೇಲುವ ರಿಯಾಕ್ಟರ್, ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಘಟಕವನ್ನೂ ಹೊಂದಿದೆ.

ಗಂಟೆಗೆ 7ರಿಂದ 10 ಕಿ.ಮೀ ದೂರ ಚಲಿಸುವ ರಿಯಾಕ್ಟರ್‌ ಅನ್ನು ನಿರ್ಮಿಸಲು ಬರೋಬ್ಬರಿ ಹತ್ತು ವರ್ಷ ಕೆಲಸ ಮಾಡಿರುವ ರಷ್ಯಾದ ನ್ಯೂಕ್ಲಿಯರ್ ನಿಗಮ ರೊಸಟಮ್, ‘ನಮ್ಮ ಈ ರಿಯಾಕ್ಟರ್ ಈಗ ಅಸ್ತಿತ್ವದಲ್ಲಿರುವ ಕಲ್ಲಿದ್ದಲು ವಿದ್ಯುತ್ ಘಟಕ ಮತ್ತು ಮುದಿಯಾದ ಪರಮಾಣು ರಿಯಾಕ್ಟರ್‌ನ ಜಾಗ ತುಂಬಲಿದೆ’ ಎಂದಿದೆ. ತಂತ್ರಜ್ಞಾನದ ಹೆಮ್ಮೆ ಎಂದು ಬಿಂಬಿಸಿಕೊಂಡಿರುವ ಅಕಡೆಮಿಕ್ ರಿಯಾಕ್ಟರ್‌ ಅನ್ನು ‘ತೇಲುವ ಚೆರ್ನೊಬಿಲ್’ ಎಂದು ಕರೆದಿರುವ ಪರಿಸರ ಕಾರ್ಯಕರ್ತರು, ಈ ರಿಯಾಕ್ಟರ್‌ನಿಂದ ಆರ್ಕ್‌ಟಿಕ್‌ ಭಾಗದ ಜೀವಿ ವೈವಿಧ್ಯಕ್ಕೆ ಭಾರಿ ಅಪಾಯವಿದೆ ಮತ್ತು ಭೂಮಿಯ ಬಿಸಿ ಏರುತ್ತದೆ ಎಂದು ಹೇಳಿದ್ದಾರೆ.

ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾಲಯದ ಪ್ರೊಫೆಸರ್ ಮತ್ತು ಅಂತರರಾಷ್ಟ್ರೀಯ ನಿಶ್ಶಸ್ತ್ರೀಕರಣತಜ್ಞ ಎಂ.ವಿ.ರಮಣ, ಅಕಡೆಮಿಕ್ಲೊಮೊನೊಸೊವ್‍ನಲ್ಲಿ ಬಳಕೆಯಾಗಿರುವ KLT– 40S ರಿಯಾಕ್ಟರ್‌ಗಳು ಯಾವಾಗ ಬೇಕಾದರೂ ಅಪಘಾತಕ್ಕೊಳಗಾಗುವ ಸಾಧ್ಯತೆ ಜಾಸ್ತಿ ಇರುವುದರಿಂದ ತೇಲುವ ರಿಯಾಕ್ಟರ್‌ನಿಂದ ಅನುಕೂಲಕ್ಕಿಂತ ಅಪಾಯವೇ ಹೆಚ್ಚು ಎಂದಿದ್ದಾರೆ. ಅಲ್ಲದೆ ಈ ರಿಯಾಕ್ಟರ್‌ಗಳನ್ನು ಅತ್ಯಂತ ನಿರ್ಜನ ಮತ್ತು ಅತಿಯಾದ ಶೀತದ ಪ್ರದೇಶಗಳಲ್ಲಿ ಸ್ಥಾಪಿಸಿರುವುದರಿಂದ, ಅಪಘಾತವಾದಾಗ ಸ್ಥಳೀಯರನ್ನು ಸುರಕ್ಷಿತ ಜಾಗಗಳಿಗೆ ಕಳುಹಿಸುವ ಮತ್ತು ಸೋರುವ ಪರಮಾಣು ವಿಕಿರಣವನ್ನು ತಡೆಯುವಷ್ಟರಲ್ಲಿ ಭಾರಿ ಪ್ರಮಾಣದ ಅನಾಹುತ ಸಂಭವಿಸಿರುತ್ತದೆ ಎನ್ನುತ್ತಾರೆ.

‘ತನ್ನ ಚಿನ್ನದ ಗಣಿಗೆ ವಿದ್ಯುತ್ ನೀಡಲು ಇದನ್ನು ಸ್ಥಾಪಿಸುತ್ತೇವೆ ಎಂದು ಹೇಳಿದ್ದರೂ, ಆರ್ಕ್‌ಟಿಕ್‌ಭಾಗದ ತೈಲ ಮತ್ತು ನೈಸರ್ಗಿಕ ಅನಿಲದ ಮೇಲೆ ಕಣ್ಣಿಟ್ಟಿರುವ ರಷ್ಯಾ ಅದನ್ನು ತನ್ನದಾಗಿಸಿಕೊಳ್ಳುವ ಎಲ್ಲ ಕೆಲಸ ಮಾಡುತ್ತದೆ ಎಂಬ ಅನುಮಾನ ನಮ್ಮದು. ಆದ್ದರಿಂದ ಅದಕ್ಕೆ ಅವಕಾಶ ನೀಡಕೂಡದು’ ಎಂದು ವಿಶ್ವಸಂಸ್ಥೆಯನ್ನು ಒತ್ತಾಯಿಸಿದ್ದಾರೆ. ತೈಲ ಮತ್ತು ಅನಿಲ ಉತ್ಪಾದನೆಗೆ ಕೈ ಹಾಕಿದರೆ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೊಮ್ಮುತ್ತದೆ ಮತ್ತು ಆರ್ಕ್‌ಟಿಕ್‌ ಭಾಗ ಅನಿವಾರ್ಯ ಒತ್ತಡಕ್ಕೊಳಗಾಗುತ್ತದೆ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ. ‌

ಈಗಾಗಲೇ ಬಳಕೆಯಲ್ಲಿರುವ ನ್ಯೂಕ್ಲಿಯರ್ ಸಬ್‍ಮರೀನ್‍ಗಳು ಹಲವು ಬಗೆಯ ಅಪಘಾತಗಳಿಗೆ ಸಿಲುಕಿ 670 ಜನರನ್ನು ಬಲಿ ತೆಗೆದುಕೊಂಡಿವೆ. ಸಂಭವಿಸಿರುವ 45 ಅಪಘಾತಗಳ ಪೈಕಿ 26 ರಷ್ಯಾಕ್ಕೆ ಸಂಬಂಧಿಸಿದ್ದು, 429 ಜನರ ಪ್ರಾಣಹರಣವಾಗಿದೆ. ಅಮೆರಿಕದ 12 ಪರಮಾಣು ಸಬ್‍ಮರೀನ್ ಅಪಘಾತಗಳಲ್ಲಿ 238 ಜನ ಅಸುನೀಗಿದ್ದು, ಈಗ ತೇಲುವ ಬೃಹತ್ ರಿಯಾಕ್ಟರ್‌ನಿಂದ ಹೆಚ್ಚಿನ ಪ್ರಾಣಹಾನಿ ಆಗಬಹುದೆಂಬ ಆತಂಕ ತಜ್ಞರಲ್ಲಿ ಮನೆ ಮಾಡಿದೆ.

ಆರ್ಕ್‌ಟಿಕ್‌ನ ಹಿಮ ಹಾಸುಗಳು ತ್ವರಿತವಾಗಿ ಕರಗಿ ಉತ್ತರ ಧ್ರುವದ ಬಳಿ ಸಾಗರ ಮಾರ್ಗ ಸೃಷ್ಟಿಯಾಗಿರುವುದರಿಂದ ಅದನ್ನು ಬಳಸಿಕೊಂಡು ವ್ಯಾಪಾರ ವೃದ್ಧಿಸಿಕೊಂಡು ಚೀನಾ, ಯುರೋಪ್ ತಲುಪುವ ಉದ್ದೇಶ ಅದರಲ್ಲಿದೆ ಎಂದು ಗ್ರೀನ್ ಪೀನ್ ಸಂಸ್ಥೆ ಹೇಳಿದೆ.

ನೀರ್ಗಲ್ಲುಗಳು ಎದುರಾದಾಗ ಸಬ್‍ಮರೀನ್‍ಗಳು ಸಾಗರದ ತಳಕ್ಕಿಳಿದು ಡಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಳ್ಳುತ್ತವೆ ಮತ್ತು ತೇಲುವ ಹಿಮಗಡ್ಡೆಗಳಿಂದ ದೂರವಿರುತ್ತವೆ. ಆದರೆ ಇದು ತೇಲು ತೆಪ್ಪದಂತೆ ಇರುವುದರಿಂದ ಅದು ಸಾಧ್ಯವಾಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿರುವ ಗ್ರೀನ್ ಪೀಸ್‍ನ ಪರಮಾಣು ತಜ್ಞ ಜಾನ್ ಹಾವರ್‌ಕ್ಯಾಂಪ್‌, ರಷ್ಯಾ ಇಂಥ ರಿಯಾಕ್ಟರ್‌ಗಳನ್ನು ಬೇರೆ ದೇಶಗಳಿಗೆ ಮಾರುವ ಯೋಜನೆ ಹಾಕಿಕೊಂಡಿರುವುದು ದುರದೃಷ್ಟಕರ ಎಂದಿದ್ದಾರೆ.

ಇಂಡೊನೇಷ್ಯಾ ತನಗೂ ಒಂದು ರಿಯಾಕ್ಟರ್ ಬೇಕು ಎಂದು ರಷ್ಯಾದೊಂದಿಗೆ ಮೊದಲ ಹಂತದ ಮಾತುಕತೆ ಮುಗಿಸಿತ್ತು. ಆದರೆ ಕೊಳ್ಳುವ ಹಂತ ತಲುಪಿಲ್ಲ ಎನ್ನುವುದು ಸಮಾಧಾನದ ವಿಷಯ. ಈ ಮಧ್ಯೆ ಚೀನಾ ಕೂಡ ಇಂಥ ರಿಯಾಕ್ಟರ್‌ಗಳ ನಿರ್ಮಾಣಕ್ಕೆ ಮನಸ್ಸು ಮಾಡಿರುವುದು ಪರಿಸರ ತಜ್ಞರಲ್ಲಿ ಆತಂಕ ಹುಟ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT