ಪ್ರಾಣಿಗಳ ಆಹಾರ ಕೊಂಡಿ ಕಳಚಿದರೆ...

7

ಪ್ರಾಣಿಗಳ ಆಹಾರ ಕೊಂಡಿ ಕಳಚಿದರೆ...

Published:
Updated:
Prajavani

ನರರಿಗೆ ಮಂಗನ ಕಾಯಿಲೆ ಬರುತ್ತದೆ. ಸಂಸತ್‌ ಭವನದಲ್ಲಿನ ಕೋತಿಗಳ ಕಾಟಕ್ಕೆ ಒಂದು ಯೋಜನೆಯನ್ನೇ ರೂಪಿಸಬೇಕಾಗಿದೆಯಂತೆ. ಇದೇ ಸಂದರ್ಭದಲ್ಲಿ, ಕೋತಿಯೊಂದು ಮಗುವನ್ನು ಎತ್ತಿಕೊಂಡು ಹೋಗಿ ಹಿಸುಕಿ ಕೊಂದ ಸುದ್ದಿಯೂ ಪತ್ರಿಕೆಯಲ್ಲಿದೆ. ಕೋತಿ ಸಾಮ್ರಾಜ್ಯ ಶ್ರೀರಾಮನಿಗೆ ಸಖ್ಯ ನೀಡಿದ ಕಾರಣ, ಸೀತೆಯು ರಾವಣನ ಸೀಮೆಯಿಂದ ಶ್ರೀರಾಮನಿಗೆ ದಕ್ಕಿದಳು. ಶ್ರೀರಾಮನ ಬಂಟ ಆಂಜನೇಯನು ವಾಲ್ಮೀಕಿ ರಾಮಾಯಣದಿಂದ ಹಿಡಿದು ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ವರೆಗೆ ಭಾರತ ದೇಶದ ದೇವರಾಗಿ ಉಳಿದು ಬಿಟ್ಟಿದ್ದಾನೆ. ಈಗಂತೂ ರಾಮಮಂದಿರ ಉದ್ಘೋಷಣೆಯ ನಂತರ ಆಂಜನೇಯನ ಘೋಷಣೆ ಪ್ರಾರಂಭವಾಗಿದೆ. ಹಳ್ಳಿಯಿಂದ ದಿಲ್ಲಿವರೆಗೆ ಆಂಜನೇಯನ ಗುಡಿಗಳು ಸದ್ದು ಮಾಡುವ ಆರಾಧ್ಯ ಮಂದಿರಗಳಾಗಿವೆ.

ಕೋತಿಯೊಂದು ಹೀಗೆ ದೈವತ್ವ ಪಡೆಯುವುದು ಇಡೀ ಪ್ರಾಣಿ ಸಾಮ್ರಾಜ್ಯಕ್ಕೆ ಮಾನವರು ನೀಡುವ ಗೌರವ ಸರಿ. ಆದರೆ, ಆ ಪ್ರಾಣಿ ಸಾಮ್ರಾಜ್ಯಕ್ಕೆ ಮನುಷ್ಯ ಪ್ರಾಣಿ ಸಹಕಾರಿಯಾಗಿರುವನೇ ಎನ್ನುವುದು ಈಗಿನ ಪ್ರಶ್ನೆ. ನಾನು ಕಂಡಂತೆ ಆಗುಂಬೆ, ಹುಲಿಕಲ್ಲು ಅಡವಿಯು ವರಾಹಿ ಅಣೆ ಕಟ್ಟಿಸಿಕೊಳ್ಳುವ ಮುನ್ನ ಆ ಸುತ್ತಲಿನ ಅಡಿಕೆ ತೋಟಗಳಿಗೆ ಆಗಾಗ ಸರ್ಕೀಟು ಬಂದಂತೆ ಕೋತಿ ಹಿಂಡು ಬರುತ್ತಿದ್ದುದನ್ನು ಬಲ್ಲೆ. ಬಯಲು ನಾಡಿನಲ್ಲೂ ರಸ್ತೆಯ ಸಾಲು ಮರಗಳಲ್ಲಿ, ತೋಪು ವಗೈರೆಗಳಲ್ಲಿ ಅವು ಸಸ್ಯಾಹಾರ, ಫಲಾಹಾರ ತಿಂದುಕೊಂಡು ನೆಮ್ಮದಿಯಾಗಿದ್ದವು. ಆನಂತರ ಆಹಾರವಿಲ್ಲವಾಗಿ ಕೋತಿಗಳು ತೋಟಕ್ಕೆ ಹೆಚ್ಚಾಗಿ ಬರಲಾರಂಭಿಸಿದವು. ಚೀಪಿ ಎಸೆಯುವ ಅವುಗಳ ಚೇಷ್ಟೆಯಿಂದ ಅಡಿಕೆಕಾಯಿ ಉಳಿಸಿಕೊಳ್ಳಬೇಕಲ್ಲ!

ಹಿಂಡಿನಲ್ಲಿ ಒಂದು ಕೋತಿಯನ್ನು ಈಡುಮಾಡಿ ಹೊಡೆದಾಕ್ಷಣ, ಕೋವಿ ಹಿಂದೆ ಹೋದ ನಾಯಿಗಳು ಸತ್ತ ಕೋತಿಯನ್ನು ತಿನ್ನುವ ರಾಕ್ಷಸತನಕ್ಕೆ, ಪುನಃ ಈ ಮನುಷ್ಯನ ತೋಟ ಬೇಡವೆಂದು ಅವು ಕಾಡು ಸೇರುತ್ತಿದ್ದವು. ಇಷ್ಟಲ್ಲದೆ ಮಲೆನಾಡಿನ ಆದಿವಾಸಿಗಳು ಹಬ್ಬಹರಿದಿನಕ್ಕೆ, ತಿಥಿ ವಗೈರೆಗೆ ಕೋತಿ ಹೊಡೆದು
ತಿಂದುಬಿಡುತ್ತಿದ್ದರು. ಕೆಲವು ಕ್ರೂರ ಪ್ರಾಣಿಗಳಿಗೂ ಇವು ಆಹಾರದ ಕೊಂಡಿಗಳಾಗಿದ್ದವು.

ಮಂಗಗಳೀಗ ಜನರಂತೆಯೇ ಪೇಟೆವಾಸಿಗಳು, ನಗರವಾಸಿಗಳು, ರೈತರ ಹೊಲ ಗದ್ದೆ ವಾಸಿಗಳು. ರೈತರ ಬೆಳೆಗಳನ್ನು ನಿರ್ನಾಮ ಮಾಡುವ ಚೇಷ್ಟೆ ಪ್ರಾಣಿಗಳು. ಈಗ ಶ್ರೀರಾಮ, ರಾವಣರಿಗೆ ಯುದ್ಧವಲ್ಲ. ಮಂಗಗಳಿಗೂ ಭಾರತದ ಪ್ರಜೆಗಳಿಗೂ ಸಮರ. ಅಡವಿ ಇಲ್ಲವಾಗುತ್ತಾ ಬಂತು. ಅವು ತಿನ್ನುವ ಹಣ್ಣು ಹಂಪಲು, ಚಿಗುರು ಇಲ್ಲವಾಯಿತು. ಮನುಷ್ಯನ ಹೊಲಗದ್ದೆ, ತೋಟ ಪೈರುಗಳು ಅವಕ್ಕೆ ಬೇಕಾದವು. ಸಂತಾನ ವೃದ್ಧಿಯಂತೂ ಈ ದೇಶದ 130 ಕೋಟಿ ಜನಸಂಖ್ಯೆಗೆ ಸಡ್ಡು ಹೊಡೆಯುವಂತಾಗುತ್ತಿದೆ. ರೈತರೀಗ ಆಂಜನೇಯನ ಗುಡಿ ಕಡೆಗೆ ನೋಡುವುದೋ ತಮ್ಮ ಬದುಕನ್ನೇ ಹರಿದು ತಿನ್ನುವ ಕೋತಿ ಸಮೂಹದ ಕಡೆ ನೋಡುವುದೋ ಎಂಬ ಚಿಂತೆಯಲ್ಲಿದ್ದಾರೆ. ಗಟ್ಟಿ ಮನಸ್ಸು ಮಾಡಿದವರು ಕ್ರಿಮಿನಾಶಕಕ್ಕೆ ಮೊರೆಹೋಗಿ, ಬಾಳೆಹಣ್ಣು ಮುಂತಾದವುಗಳಲ್ಲಿ ‘ಆಂಜನೇಯ ಕಾಪಾಡಪ್ಪ’ ಎಂದು ವಿಷ ಇಕ್ಕಿ ಕೊಂದು ತಮ್ಮ ಬೆಳೆ ಕಾಪಾಡಿಕೊಳ್ಳಲಾರಂಭಿಸಿದ್ದಾರೆ. ಪ್ರಾಣಿ ಪ್ರಿಯರೇನೋ ತಗಾದೆ ತೆಗೆಯುತ್ತಾರೆ. ಅವರು ಮನುಷ್ಯರ ಬದುಕನ್ನೂ ನೋಡಬೇಕಲ್ಲ! ಅವಕ್ಕೆ ಕುಟುಂಬ ಯೋಜನೆ ಮಾಡುತ್ತಾರಂತೆ. ಹೀಗೆ ಏನೇನೋ ಯೋಜನೆಗಳು ಸರ್ಕಾರದಲ್ಲಿವೆ.

ಇಂತಹವೆಲ್ಲವೂ ರಾಮಬಾಣಗಳಲ್ಲ. ಅವಕ್ಕೆ ಅಡವಿ ಬೇಕು. ಮನುಷ್ಯನು ಅಡವಿ ಅಂಚಿನಲ್ಲಿ ಹೇಗೋ ಬೆದರಿಸುತ್ತ ತಾನೂ ಬದುಕಬೇಕು. ಈಗಂತೂ ಅಶೋಕನ ಕಾಲದ ರಸ್ತೆ ಬದಿಯ ಮರದ ಯೋಜನೆಗಳು ದಿಕ್ಕೆಟ್ಟು ಹೋಗಿವೆ. ರಾಷ್ಟ್ರೀಯ ಹೆದ್ದಾರಿ ನೆಪದಲ್ಲಿ ಪುನಃ ಸಾವಿರಾರು ಪುರಾತನ ಮರಗಳನ್ನು ತೀರ್ಥಹಳ್ಳಿ– ಆಗುಂಬೆ ನಡುವಣ ಅಡವಿ ಸೇರಿದಂತೆ ಬಯಲು ಮಾಡಲಾಗುತ್ತಿದೆ. ಪಶ್ಚಿಮ ಘಟ್ಟಕ್ಕೆ ಹಲವೊಂಬತ್ತು ತೂತ ಹಾಕಲಾಗುತ್ತಿದೆ. ಅರ್ಧ ಗಂಟೆ ತಡವಾಗಿ ಚಲಿಸಿದರೆ, ಪ್ರಕೃತಿಯೊಳಗೆ ಸಡಗರಪಡುತ್ತ ವಾಹನ ಸಾಗಿದರೆ ಪ್ರಪಂಚ ಮುಳುಗಿ ಹೋಗುವುದಿಲ್ಲ. ಇದೆಲ್ಲ ಬೇಕಾಗಿರುವುದು ಗುತ್ತಿಗೆದಾರರಿಗೆ, ರಾಜಕಾರಣಿಗಳಿಗೆ. ಹಾಗಾಗಿ ಕೋತಿಗಳು ಸಂಸತ್ ಭವನಕ್ಕೆ, ವಿಧಾನಸೌಧಕ್ಕೆ ನುಗ್ಗಿ ‘ನೋಡಿ, ನಾವು ನಿಮ್ಮನ್ನು ಹೇಗೆ ಎದುರಿಸಲಿದ್ದೇವೆ’ ಎನ್ನುತ್ತಿವೆ.

ಈ ನಡುವೆ ನಾಯಿಗಳದು ಒಂದು ಲೋಕ. ಮನುಷ್ಯನ ಎದೆ ಉದ್ದಕ್ಕೆ ನೆಗೆದು ಲಗ್ಗೆ ಹಾಕಲಾರಂಭಿಸಿವೆ. ಹಿಂದೊಮ್ಮೆ ನಾಯಿಗಳು ಒಂದು ಗುಕ್ಕು ಹಿಟ್ಟು ಹಾಕುವುದನ್ನೇ ನೋಡುತ್ತಾ ಕುಳಿತಿರುತ್ತಿದ್ದವು. ಆದರೀಗ ಅವನ್ನು ಮಾತನಾಡಿಸುವಂತಿಲ್ಲ. ಮಕ್ಕಳು ಮರಿಗಳನ್ನು ಕೋಳಿ ಮಾಂಸದಂತೆ ರುಚಿ ನೋಡುತ್ತಿವೆ. ಕೋತಿಯಾಗಲೀ ನಾಯಿಯಾಗಲೀ ಅವು ಸಹ ಆಹಾರದ ಕೊಂಡಿಯಲ್ಲಿ ಪ್ರಾಣಿಗಳಿಗೆ, ಮನುಷ್ಯರಿಗೆ ಆಡು–ಕುರಿಗಳಂತೆ ಸಹಕಾರಿಯಾಗಿದ್ದವು ಎಂಬುದು ಸಾಮಾಜಿಕ ಚರಿತ್ರೆ. ಆದಿವಾಸಿಗಳು ಮಂಗನ ತಿಂದರೆ, ನಾಗಾಲ್ಯಾಂಡ್, ಮಣಿಪುರದ ಕಡೆ ನಾಯಿಗಳನ್ನು ನಾಗರಿಕ ಮನುಷ್ಯರೇ ತಿನ್ನುತ್ತಾರೆ. 

ಮಂಗಗಳಿಗೆ ಅಡವಿ ಬೇಕು. ಮನುಷ್ಯನಿಗೆ ಕಾವಲಾಗಿ ನಾಯಿಗಳು ಬೇಕು ನಿಜ. ಈ ಕೊಂಡಿ ಕಳಚಿ ಈ ಪ್ರಾಣಿಗಳು ಉಬ್ಬಿ ಹೋಗಿರುವುದರಿಂದ ಮುಂದೇನೆಂದು ಆಲೋಚಿಸಬೇಕಿದೆ. ಇದೊಂದು ತುರ್ತಿನ ಸಮಸ್ಯೆ. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !