ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಗ್ಯಾರಂಟಿ: ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡದ ಮೀಸಲು ನಿಧಿ ಮೇಲೇಕೆ ಕಣ್ಣು?

ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಹಾಗೂ ಸಮಾಜ ಕಲ್ಯಾಣ ಖಾತೆಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಲೇಖನ
Published 6 ಸೆಪ್ಟೆಂಬರ್ 2023, 23:30 IST
Last Updated 6 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಲೇಖಕ: ಕೋಟ ಶ್ರೀನಿವಾಸ ಪೂಜಾರಿ

ರಾಜ್ಯದ ಜನತೆಯ ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರ ದೃಷ್ಟಿಯಲ್ಲಿ ಸಿದ್ದರಾಮಯ್ಯನವರು ದುರ್ಬಲ ಮತ್ತು ಧ್ವನಿ ಇಲ್ಲದವರ ಪರವಾಗಿರುವವರು ಎಂಬ ಭಾವನೆ ಇತ್ತು. ಆದ್ದರಿಂದಲೇ, ಈ ವರ್ಗದ ಜನ ಸಿದ್ದರಾಮಯ್ಯನವರನ್ನು ನಂಬಿ ಮತ ಹಾಕಿ ಕಾಂಗ್ರೆಸ್ ಪಕ್ಷವನ್ನು ಬಹುಮತದಿಂದ ಗೆಲ್ಲಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್ ಭಾಷಣದ ತುಣುಕುಗಳನ್ನು ನಾನು ನೋಡಿದೆ. ‘ಅವನಾರವ ಅವನಾರವ ಎಂದೆಣಿಸದಿರಯ್ಯ... ಅವ ನಮ್ಮವ ಅವ ನಮ್ಮವ ಎಂದೆಣಿಸಯ್ಯಾ... ಎನ್ನುತ್ತಲೇ ‘ನಾನು ಮುಖ್ಯಮಂತ್ರಿಯಾಗಿ ಸಮಾಜದ ಕೊನೆಯ ವರ್ಗವಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಮೀಸಲು ಹಣ ನಿಗದಿಗೊಳಿಸಿ ಕಾಯ್ದೆ ತಂದೆ’ ಎಂದೆಲ್ಲಾ ಹೇಳಿದ್ದರು. ಅದನ್ನು ಯಾರೂ ಅಲ್ಲಗಳೆಯಲೂ ಇಲ್ಲ. ಆದರೀಗ, ಅವರ ಎಲ್ಲಾ ಬಣ್ಣವನ್ನು ಮಸಿ ನುಂಗಿದಂತಾಗಿದೆ ಎಂಬ ಅನುಭವ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಆಗುತ್ತಿದೆ.

ಯಾವ ಸಿದ್ದರಾಮಯ್ಯನವರು ದಲಿತ ಜನಾಂಗವನ್ನು ಮೇಲೆತ್ತಲು ಕ್ರಮ ಜರುಗಿಸುತ್ತೇನೆ ಎಂದಿದ್ದರೋ ತಮ್ಮ ಮಾತಿನ ಮೂಲಕ ಸರ್ವರನ್ನೂ ನಂಬಿಸಿದ್ದರೋ ಅದೇ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲು ನಿಧಿಯಲ್ಲಿ ₹ 11,150 ಕೋಟಿಯನ್ನು ಗ್ಯಾರಂಟಿ ಯೋಜನೆಗೆ ಉಪಯೋಗಿಸಿಕೊಳ್ಳಲು ಅರ್ಥಾತ್ ಕಸಿದುಕೊಳ್ಳಲು ಅನುಮತಿ ನೀಡಿದೆ.

ಈ ಹಿಂದೆ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರ್ಕಾರವಿದ್ದಾಗ 2022- 23ರಲ್ಲಿ ₹ 30,263 ಕೋಟಿಯಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲು ಅನುದಾನವಾಗಿ ಘೋಷಿಸಲಾಗಿತ್ತು. ಆ ಪೈಕಿ ಶೇ 98ರಷ್ಟು ಖರ್ಚಾಗಿ ಹೊಸ ದಾಖಲೆ ನಿರ್ಮಿಸಿತು. ಇದೀಗ ಸಿದ್ದರಾಮಯ್ಯನವರು ಮಂಡಿಸಿದ 2023-24ರ ಬಜೆಟ್‍ನಲ್ಲಿ ₹ 3.27 ಲಕ್ಷ ಕೋಟಿ ಪೈಕಿ ₹ 1.86 ಲಕ್ಷ ಕೋಟಿ ಆಡಳಿತ ವೆಚ್ಚ ಹೊರತುಪಡಿಸಿ, ಅಭಿವೃದ್ಧಿ ಕಾರ್ಯಕ್ರಮಕ್ಕೆ ವಿನಿಯೋಗಿಸಬಹುದಾದ ₹1.42 ಲಕ್ಷ ಕೋಟಿಗಳಲ್ಲಿ ಶೇ 24.1ರಷ್ಟು ಅಂದರೆ ₹ 34,263 ಕೋಟಿಯಷ್ಟು ಪರಿಶಿಷ್ಟ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿರಿಸಲಾಗಿದೆ. ಇದರಲ್ಲಿ ನೇರವಾಗಿ ಸಮಾಜ ಕಲ್ಯಾಣ ಎಂಬ ಮಾತೃ ಇಲಾಖೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿ ₹ 5 ಸಾವಿರ ಕೋಟಿಯಷ್ಟು ನಿಗದಿಪಡಿಸಲಾಗಿದ್ದು, ಉಳಿದ ಸುಮಾರು ₹ 29 ಸಾವಿರ ಕೋಟಿಯನ್ನು ವಿವಿಧ ಇಲಾಖೆಗಳಲ್ಲಿ ಮೀಸಲು ನಿಧಿಯಾಗಿ ಕ್ರೋಡೀಕರಿಸಿ, ತಳ ಸಮುದಾಯದ ಅಭಿವೃದ್ಧಿಗೆ ಮೀಸಲಿರಿಸಲು ನಿರ್ಧರಿಸಲಾಗಿದೆ. ಈ ಮೊತ್ತದ ಮೂಲಕ ಕರ್ನಾಟಕ ರಾಜ್ಯದ 30 ಲಕ್ಷ ಕುಟುಂಬಗಳು ಹಾಗೂ 2011ರ ಜನಗಣತಿಯಂತೆ 1 ಕೋಟಿ 50 ಲಕ್ಷ ಮೀರಿದ ಜನಸಂಖ್ಯೆಯ ಬಡವರಿಗೆ ಶಿಕ್ಷಣ, ಆರೋಗ್ಯ, ವಸತಿ, ಕುಡಿಯುವ ನೀರು, ಶೌಚಾಲಯ ಸಹಿತ ಮೂಲ ಸೌಕರ್ಯಗಳಿಗಾಗಿ ವಿನಿಯೋಗ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರದ ನವೋದಯ ಶಾಲೆಗೆ ಸಮನಾಗಿ ನಡೆಯಬೇಕೆಂಬ ಅಭಿಲಾಷೆಯೊಂದಿಗೆ ರಾಜ್ಯ ಸರ್ಕಾರ ಆರಂಭಿಸಿದ 832 ವಸತಿಸಹಿತ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಸಮಾಜ ಕಲ್ಯಾಣ ಇಲಾಖೆಯ ಮೂಲಕ ನಡೆಯುತ್ತಿವೆ. ಈ ಶಾಲೆಗಳಲ್ಲಿ ಅಲೆಮಾರಿ ಮಕ್ಕಳ ಸಹಿತ ಸೂರಿಲ್ಲದ ಕಡುಬಡವರ ಸಾವಿರಾರು ಮಕ್ಕಳು ಕಲಿಯುತ್ತಿದ್ದಾರೆ. ಆದಿವಾಸಿಗಳ ಶಾಲೆಗಳಲ್ಲಿರುವ ಕಲ್ಯಾಣ ಕರ್ನಾಟಕದ ತೀರಾ ಹಿಂದುಳಿದ ಜಿಲ್ಲೆಗಳಲ್ಲಿ, ಶಾಲೆಗೆ ಹೋಗುವ ವಯಸ್ಸಿನಲ್ಲಿ ಬಸ್‍ ನಿಲ್ದಾಣಗಳಲ್ಲಿ ಭಿಕ್ಷೆ ಬೇಡುತ್ತಿರುವ ಮಕ್ಕಳನ್ನು ನಾನೇ ಕಣ್ಣಾರೆ ಕಂಡಿದ್ದೆ. ಅಂತಹ ಮಕ್ಕಳ ಶಿಕ್ಷಣಕ್ಕೆ ಮೀಸಲಿರಿಸಿದ ಹಣವನ್ನು ಗ್ಯಾರಂಟಿ ಯೋಜನೆಗೆ ವರ್ಗಾವಣೆ ಮಾಡುತ್ತೀರೆಂದರೆ ಏನರ್ಥ? ಸಮಾಜ ಕಲ್ಯಾಣ ಇಲಾಖೆಯ ವಿದೇಶಿ ವ್ಯಾಸಂಗದ ‘ಪ್ರಬುದ್ಧ’ ಯೋಜನೆಯಡಿ ಜಗತ್ತಿನ 500 ಆಯ್ದ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವವರ ಶಿಕ್ಷಣಕ್ಕೆ ಈ ಮೀಸಲು ನಿಧಿಯೇ ವೆಚ್ಚವಾಗುತ್ತಿದೆ. ಆ ಹಣವನ್ನು ಇತರ ಯೋಜನೆಗೆ ಖರ್ಚು ಮಾಡಿದರೆ ಕಲಿಯುವ ಮಕ್ಕಳ ಭವಿಷ್ಯದ ಕತ್ತು ಹಿಸುಕಿದಂತೆ ಆಗುವುದಿಲ್ಲವೇ?

ಅರೆ ವೈದ್ಯಕೀಯ ಶಿಕ್ಷಣ, ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿವೇತನ ಎಸ್.ಎಸ್.ಎಲ್.ಸಿ. ತೇರ್ಗಡೆಯಾದ ಮಕ್ಕಳಿಗೆ ಪ್ರೋತ್ಸಾಹಧನ, ಅಂತರ್ಜಾತಿ ವಿವಾಹ, ಕಾನೂನು ಪದವೀಧರರಿಗೆ ನೆರವು, ದೇವದಾಸಿ ಕುಟುಂಬಗಳ ನಿರ್ವಹಣೆ, ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಪರಿಹಾರವೂ ಸೇರಿದಂತೆ, ಸಮಾಜ ಕಲ್ಯಾಣ ಇಲಾಖೆಯ ಹೊಣೆಗಾರಿಕೆ ಬಹುದೊಡ್ಡದು. ಮುಂದಿನ ದಿನಗಳಲ್ಲಿ ಅವುಗಳ ನಿರ್ವಹಣೆಗೆ ಹಣದ ಕೊರತೆ ಕಾಡಲಿದೆ.

ಅಂಬೇಡ್ಕರ್, ಭೋವಿ, ಆದಿಜಾಂಬವ, ತಾಂಡ, ಅಲೆಮಾರಿ, ಲಿಡ್ಕರ್‌ನಂತಹ  ನಿಗಮ, ಮಂಡಳಿಗಳಿಗೆ ಅನುದಾನವಿಲ್ಲದೆ ಬಡವರ ಕಲ್ಯಾಣ ಕಾರ್ಯಕ್ರಮಗಳು ಸೊರಗಲಿವೆ. ಮೂಲ ಇಲಾಖೆ ಹೊರತುಪಡಿಸಿ ಇತರ ಇಲಾಖೆಗಳಲ್ಲಿ ಮೀಸಲಿರಿಸಿದ ನಿಧಿಗಳನ್ನು ಗ್ಯಾರಂಟಿ ಯೋಜನೆಗೆ ಕಡಿತಗೊಳಿಸಿದರೆ ಮೂಲ ಉದ್ದೇಶಕ್ಕೆ ಧಕ್ಕೆಯಾಗಲಿದೆ. ಪರಿಶಿಷ್ಟ ಪಂಗಡದ ಶ್ರೇಯೋಭಿವೃದ್ಧಿಗಾಗಿ ರಚಿಸಿದ ವಾಲ್ಮೀಕಿ ನಿಗಮಕ್ಕೆ ತೊಂದರೆಯಾಗಲಿದೆ. ಬುಡಕಟ್ಟು ಜನಾಂಗದ ವನವಾಸಿ ಆದಿವಾಸಿಗಳು ಅವಕಾಶವಂಚಿತರಾಗಿ ಅವರ ಬದುಕು ದುಸ್ತರವಾಗುವುದು ಅನಿವಾರ್ಯ.

ಇದೀಗ ಪ್ರಶ್ನೆ ಎದ್ದಿರುವುದು, ಸಿದ್ದರಾಮಯ್ಯನವರು ತಮ್ಮ ಆಯವ್ಯಯ ಭಾಷಣದಲ್ಲಿ ಗಿರೀಶ ಕಾರ್ನಾಡರ ‘ಯಯಾತಿ’ ನಾಟಕದ ಸಾಲುಗಳನ್ನು ನೆನಪಿಸಿ, ‘ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು, ಆದರೆ ಕನಸುಗಳಿಲ್ಲದ ಹಾದಿಯಲ್ಲಿ ನಡೆಯುವುದೆಂತು’ ಎಂದು ಪ್ರಶ್ನಿಸಿದ್ದರು. ಅಲ್ಲದೆ, ಐದು ಗ್ಯಾರಂಟಿಗಳನ್ನು ಘೋಷಿಸಿದ್ದು, ಯಥಾವತ್ತಾಗಿ ಅನುಷ್ಠಾನ ಮಾಡುವುದಾಗಿ ಹೇಳಿದ್ದರು. ಹಣ ಎಲ್ಲಿಂದ ತರುತ್ತೀರಿ ಎಂದು ಕೇಳಿದಾಗ, ಭ್ರಷ್ಟಾಚಾರವಿಲ್ಲದ ಆರ್ಥಿಕ ಬಿಗಿ ನೀತಿಯ ಪರಿಹಾರ ನೀಡುತ್ತೇವೆ ಎಂದು ವಾಗ್ದಾನ ಮಾಡಿದ್ದರು. ಆದರೆ ಇದೀಗ ಶತಮಾನಗಳಿಂದ ಸಾಮಾಜಿಕ ತುಳಿತಕ್ಕೊಳಗಾದ ಜನರ ಕನಸಿನ ಅಭಿವೃದ್ಧಿಯ ಮೀಸಲು ನಿಧಿಯನ್ನು ಆ ಸಮುದಾಯದ ಸಹಮತವಿಲ್ಲದೆ ಬಳಸುತ್ತಿರುವುದು ಅಥವಾ ಕಬಳಿಸುತ್ತಿರುವುದು ಸಾಮಾಜಿಕ ನ್ಯಾಯಕ್ಕಾಗಿ ಪರಿತಪಿಸುತ್ತಿರುವ ಜನರಿಗೆ ಮಾಡುವ ಅನ್ಯಾಯವಲ್ಲದೇ ಮತ್ತೇನು?

ಸಹಜವಾಗಿಯೇ, ಇನ್ನು ಮುಂದೆ ನಿರ್ಲಕ್ಷ್ಯಕ್ಕೊಳಗಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೇರಿ ಅಭಿವೃದ್ಧಿಗಿರಲಿ, ಅವರ ಮೂಲ ಬೇಡಿಕೆಯಾದ ಕೃಷಿಗೆ ನೀರುಣಿಸುವ ಸಲುವಾಗಿಯಾಗಲಿ, ಕೊಳವೆ ಬಾವಿಗಾಗಲಿ, ಕೋಳಿ, ಕುರಿ, ದನಸಾಕಾಣಿಕೆಗಾಗಲಿ, ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕಾಗಲಿ, ಹೊಸ ನಿವೇಶನ ಖರೀದಿ ಮತ್ತು ಮನೆಗಳ ನಿರ್ಮಾಣಕ್ಕಾಗಲಿ ತೀವ್ರ ಹಣದ ಕೊರತೆ ಕಾಡಲಿದೆ. ಶಿಕ್ಷಣ, ಆರೋಗ್ಯ ಸಹಿತ ಕಿರುಸಾಲ ವ್ಯಾಪಾರಿಗಳಿಗೆ ಅನುದಾನ ಬಿಡುಗಡೆಯಾಗುವುದು ಕಷ್ಟ. ಸಹಜವಾಗಿಯೇ ಭೂ ಒಡೆತನಕ್ಕಾಗಿ ಹಂಬಲಿಸುವ ಕಾರಂತರ ಚೋಮನಂತಿರುವ ಕಡುಬಡವರ ಕನಸಿಗೆ ಕೊಡಲಿ ಪೆಟ್ಟು ಬೀಳಲಿದೆ.

₹ 11 ಸಾವಿರ ಕೋಟಿ ಎಂದು ಅಂದುಕೊಂಡರೂ, ಮೀಸಲು ನಿಧಿಯ ಕಬಳಿಕೆ ₹ 13 ಸಾವಿರ ಕೋಟಿ ಮೀರಬಹುದು ಎಂದು ಅದೇ ಸಮುದಾಯದ ಅಧಿಕಾರಿಗಳು ಗುನುಗುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪರಿಶಿಷ್ಟರ ಮೀಸಲು ನಿಧಿಯನ್ನು ಗ್ಯಾರಂಟಿ ಯೋಜನೆಗೆ ಬಳಸಿದರೆ, ಹಿಂದಿನ ವರ್ಷಗಳ ಅಭಿವೃದ್ಧಿಗೆ ಹೋಲಿಸಿದರೆ ಈ ವರ್ಷ ಕಡ್ಡಾಯವಾಗಿ ಮೂರನೇ ಒಂದರಷ್ಟು ಕಡಿತವಾಗಲಿದೆ. ದುರಂತವೆಂದರೆ, ಮೀಸಲು ನಿಧಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಅವರದೇ ಹಣದಿಂದ ಅವರಿಗೆ ಗ್ಯಾರಂಟಿ ಕೊಡುವುದಾದರೆ, ಜನಸಂಖ್ಯೆಯಲ್ಲಿ ಶೇ 24.01ರಷ್ಟಿರುವ ದಲಿತ ಜನಾಂಗಕ್ಕೆ ಗ್ಯಾರಂಟಿ ಯೋಜನೆಗಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಂದೇ ಒಂದು ರೂಪಾಯಿಯನ್ನೂ ಸರ್ಕಾರಿ ಖಜಾನೆಯಿಂದ ಬಿಡುಗಡೆ ಮಾಡಿದಂತೆ ಆಗುವುದಿಲ್ಲ. ಗ್ಯಾರಂಟಿ ಯೋಜನೆಗೆ ಎಲ್ಲಾ ಸಮುದಾಯಗಳು ಸಮ ಎನ್ನುವ ಸರ್ಕಾರಕ್ಕೆ ಪರಿಶಿಷ್ಟರು ಮಾತ್ರ ಕಡಿಮೆ ಸಮ ಎಂಬಂತಾಂಗಿದೆ ಎನ್ನದೇ ವಿಧಿಯಿಲ್ಲ.

ಅಷ್ಟಕ್ಕೂ ಗ್ಯಾರಂಟಿಗೋಸ್ಕರ ರಾಜ್ಯ ಸರ್ಕಾರವು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಇತರ ಯಾವ ಇಲಾಖೆಯಿಂದ ಎಷ್ಟು ಹಣ ಸರಿದೂಗಿಸಿದೆ ಎಂದು ಗಮನಹರಿಸಿದರೆ ಅಚ್ಚರಿಯಾಗುತ್ತದೆ.

ಕೃಷಿ ಇಲಾಖೆಯ ಮೂಲಕ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ.ಗೆ 2022-23ನೇ ಸಾಲಿಗೆ ಬೊಮ್ಮಾಯಿ ನೇತೃತ್ವದ ಸರ್ಕಾರ ₹ 1061 ಕೋಟಿ ತೆಗೆದಿರಿಸಿದರೆ, ಈ ಬಾರಿ 2023- 24ನೇ ಸಾಲಿಗೆ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕೇವಲ ₹ 521 ಕೋಟಿ ತೆಗೆದಿರಿಸಿದೆ. ಅಂದರೆ ಕೃಷಿ ಇಲಾಖೆಯೊಂದರಿಂದಲೇ ₹ 840 ಕೋಟಿಯನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಕಡಿತಗೊಳಿಸಿದೆ. ಸಾರಿಗೆ ಇಲಾಖೆಯಲ್ಲಿ 2022- 23ನೇ ಸಾಲಿಗೆ ₹ 395 ಕೋಟಿ ಮೀಸಲಿರಿಸಿದ್ದರೆ, ಈ ಬಾರಿ ಸಿದ್ದರಾಮಯ್ಯನವರು ₹ 1080 ಕೋಟಿ ಹಂಚಿದ್ದಾರೆ. ಅಂದರೆ, ಇತರ ಇಲಾಖೆಗಳಲ್ಲಿನ ಅನುದಾನವನ್ನು ಕಡಿತಗೊಳಿಸಿ, ಉಚಿತ ಬಸ್ ಪ್ರಯಾಣಕ್ಕೆ ಮರು ಹೊಂದಾಣಿಕೆ ಮಾಡಿ, ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣಕ್ಕೆ ಮೀಸಲು ನಿಧಿಯ ಮೂಲಕ ‘ಶಕ್ತಿ’ ಯೋಜನೆ ಜಾರಿಯಾಗುವಂತೆ ಮಾಡುತ್ತಿದ್ದಾರೆ.

ಆರ್.ಡಿ.ಪಿ.ಆರ್ ಅಂದರೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ ₹ 3108 ಕೋಟಿ ಕಾಯ್ದಿರಿಸಿದರೆ, ಇಂದಿನ ಕಾಂಗ್ರೆಸ್‌ ನೇತೃತ್ವದ ಸರ್ಕಾರ ₹ 2,349 ಕೋಟಿ ಮಾತ್ರ ಕಾದಿರಿಸಿದೆ. ಪಂಚಾಯತ್ ರಾಜ್ ಇಲಾಖೆಯೊಂದರಲ್ಲಿ ₹ 759 ಕೋಟಿಯನ್ನು ಗ್ಯಾರಂಟಿಗೋಸ್ಕರ ಸರ್ಕಾರ ವಾಪಸ್‌ ಪಡೆದಿದೆ. ಕುತೂಹಲದ ಸಂಗತಿಯೆಂದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪ್ರಸಕ್ತ ವರ್ಷ ₹ 5,790 ಕೋಟಿ ರೂಪಾಯಿ ತೆಗೆದಿರಿಸಿದ್ದು, ಕಳೆದ ವರ್ಷಕ್ಕಿಂತಲೂ ಬರೋಬ್ಬರಿ 5066 ಕೋಟಿ ರೂಪಾಯಿ ಹೆಚ್ಚಿಗೆ ಅನುದಾನ ನೀಡಲಾಗಿದೆ. ಅಂದರೆ ರಾಜ್ಯದ ಸರಿಸುಮಾರು 30 ಲಕ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ನೀಡುವ ಗೃಹಲಕ್ಷ್ಮಿ ಯೋಜನೆಯ ಒಂದೊಂದು ಪೈಸೆಯೂ ಮೀಸಲು ನಿಧಿಯಿಂದ ವಿನಿಯೋಗವಾಗುತ್ತದೆ. ಇದರ ಒಟ್ಟಾರೆ ಅರ್ಥ, ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನಕ್ಕೆ ಮೀಸಲು ನಿಧಿಯನ್ನು ಹೊರತುಪಡಿಸಿ ರಾಜ್ಯ ಸರ್ಕಾರ ಖಜಾನೆಯಿಂದ ನಯಾ ಪೈಸೆಯನ್ನೂ ಖರ್ಚು ಮಾಡುತ್ತಿಲ್ಲ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಹಿಂದಿನ ಸರ್ಕಾರ ಕಳೆದ ವರ್ಷ ₹ 827 ಕೋಟಿ ತೆಗೆದಿರಿಸಿದ್ದು, ಈ ಬಾರಿ ಮಾನ್ಯ ಮುಖ್ಯಮಂತ್ರಿಗಳು ₹ 2,779 ಕೋಟಿಯಷ್ಟು ಮೀಸಲಿಟ್ಟಿದ್ದು, ₹ 1,952 ಕೋಟಿ ಹೆಚ್ಚಿಗೆ ತೆಗೆದಿರಿಸಿದ್ದಾರೆ. ಅನ್ನಭಾಗ್ಯಕ್ಕೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೊಡುವ 5 ಕೆ.ಜಿ ಅಕ್ಕಿಗೆ, ರಾಜ್ಯ ಸರ್ಕಾರದಿಂದ 10 ಕೆ.ಜಿ ಉಚಿತ ಅಕ್ಕಿ ಕೊಡುವ ವಾಗ್ದಾನ ಈಡೇರಿಸಲು ಪರಿಶಿಷ್ಟರ ಹಣವನ್ನು ಪರಿಶಿಷ್ಟರಿಗೆ ಕೊಟ್ಟು ಜೈ ಎನಿಸಿಕೊಳ್ಳಲು ರಾಜ್ಯ ಸರ್ಕಾರ ಹೆಜ್ಜೆ ಇರಿಸುತ್ತಿದೆ. ಬಡವರ ಮಕ್ಕಳ ಉನ್ನತ ಶಿಕ್ಷಣಕ್ಕೆ ಹಿಂದಿನ ವರ್ಷಕ್ಕಿಂತ ಈ ವರ್ಷ ₹ 117 ಕೋಟಿ ಕಡಿಮೆ ಮಾಡಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಕಳೆದ ಸಾಲಿಗಿಂತ ಈ ಬಾರಿ ₹ 626 ಕೋಟಿ ಕಡಿಮೆಗೊಳಿಸಿದ್ದು, 2022-23ನೇ ಸಾಲಿಗೆ ₹ 1,145 ಕೋಟಿ ಮೀಸಲಿರಿಸಿದ್ದರೆ, ಈ ಬಾರಿ ಬರೇ ₹ 519 ಕೋಟಿ ಮಾತ್ರ ನೀಡಿದೆ.

ಲೋಕೋಪಯೋಗಿ ಇಲಾಖೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಹಿಂದಿನ ವರ್ಷ ₹ 832 ಕೋಟಿ ನಿಗದಿಪಡಿಸಿ ಖರ್ಚು ಮಾಡಿದ್ದರೆ, ಈ ಬಾರಿ ಕೇವಲ ₹ 78 ಕೋಟಿ ತೆಗೆದಿರಿಸಿದ್ದು, ಕುತೂಹಲವೆಂದರೆ ಲೋಕೋಪಯೋಗಿ ಇಲಾಖೆಯೊಂದರಲ್ಲೇ ₹ 754 ಕೋಟಿ ಕಡಿತಗೊಳಿಸಿ, ಸರಾಸರಿ ಶೇ 85ರಷ್ಟು ಕಡಿಮೆ ಕೊಟ್ಟಂತಾಗಿದೆ. ಭಾರಿ ನೀರಾವರಿ ಇಲಾಖೆಯಲ್ಲಿ ಈ ಹಿಂದೆ ₹ 2,559 ಕೋಟಿ ನಿಗದಿಪಡಿಸಿದ್ದರೆ, ಈ ಬಾರಿ ಕೇವಲ ₹ 99 ಕೋಟಿ ನೀಡಲಾಗಿದೆ. ಅಂದರೆ ಶೇ 95ರಷ್ಟು ಅನುದಾನವನ್ನು ನೀರಾವರಿ ಇಲಾಖೆಯಲ್ಲಿ ಈ ಹಿಂದಿನ ಸಾಲಿಗಿಂತ ಕಡಿತಗೊಳಿಸಲಾಗಿದೆ. ಪರಿಶಿಷ್ಟ ಜಾತಿಯವರ ಕೊಳವೆಬಾವಿಯೂ ಸೇರಿದಂತೆ ನೀರಾವರಿಯ ವ್ಯವಸ್ಥೆ ಇದರಿಂದ ಕುಂಠಿತವಾಗುತ್ತದೆ. ಸಣ್ಣ ನೀರಾವರಿ ಇಲಾಖೆಗೆ ನಿಗದಿಪಡಿಸುವ ಹಣವನ್ನು ಕಳೆದ ಸಾಲಿನ ₹ 361 ಕೋಟಿಯಿಂದ ಈ ಬಾರಿ ₹ 70 ಕೋಟಿಗೆ ಇಳಿಸಲಾಗಿದೆ ಮತ್ತು ಆರೋಗ್ಯ ಇಲಾಖೆಯಲ್ಲಿ ₹ 233 ಕೋಟಿ ಕಡಿತಗೊಳಿಸಲಾಗಿದೆ. ಇದರಿಂದ ಪರಿಶಿಷ್ಟರಿಗೆ ಆರೋಗ್ಯ ಭಾಗ್ಯಕ್ಕೂ ಧಕ್ಕೆಯಾಗುವ ಅಪಾಯವಿದೆ.

ಇಂಧನ ಇಲಾಖೆಯಲ್ಲಿ ಗೃಹಜ್ಯೋತಿ ಯೋಜನೆಯ ಪೂರೈಕೆಗಾಗಿ ಕಳೆದ ಬಾರಿಗಿಂತ ₹ 2,809 ಕೋಟಿ ಕ್ರೋಡೀಕರಿಸಿ ಪರಿಶಿಷ್ಟರಿಗೆ ಕೊಡುವ ಗೃಹಜ್ಯೋತಿಯ ಪೂರ್ಣ ವೆಚ್ಚವನ್ನು ಮೀಸಲು ನಿಧಿಯಿಂದ ಪೂರೈಸಲು ಸರ್ಕಾರ ಇಚ್ಛಿಸಿದೆ. ಉಚಿತ ಭಾಗ್ಯಕ್ಕೆ ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನೇ ಕೊಡುವ ಖಚಿತ ಭಾಗ್ಯವನ್ನು ಸರ್ಕಾರ ರೂಪಿಸುತ್ತಿದೆ. ಇದರಿಂದ ಪಂಚ ಗ್ಯಾರಂಟಿಗಳ ಅನುಷ್ಠಾನದ ಸರ್ಕಾರದ ಒಟ್ಟು ಯೋಜನೆ ಅರ್ಥವಾಗುತ್ತದೆ. ನಿಜಕ್ಕೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಡಿತಗೊಳಿಸಿದ ಇಲಾಖೆಯ ಮೊತ್ತವನ್ನು, ಈ ಬಾರಿ ಕಳೆದ ಸಾಲಿಗಿಂತ ₹ 4 ಸಾವಿರ ಕೋಟಿ ಹೆಚ್ಚಾದ ಹಿನ್ನೆಲೆಯಲ್ಲಿ ಹೆಚ್ಚು ಕೊಡುತ್ತದೆ ಎಂದು ನಂಬಲಾಗಿತ್ತು.

ದುರದೃಷ್ಟಕ್ಕೆ ಬಹುತೇಕ ಎಲ್ಲಾ ಇತರ ಇಲಾಖೆಗಳಲ್ಲಿ ಅನುದಾನವನ್ನು ಸರ್ಕಾರ ಕಡಿತಗೊಳಿಸಿದೆ. ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರವು ಮೀಸಲು ನಿಧಿಯಲ್ಲಿ ಹೊಸ ಸರ್ಕಸ್ ಪ್ರದರ್ಶಿಸುತ್ತಿದೆ. ಮಾನ್ಯ ಮುಖ್ಯಮಂತ್ರಿಗಳು ಕಾಯ್ದೆ ತರುವಾಗ ತಾವೇ ಅಳವಡಿಸಿದ 7-ಡಿ ತಿದ್ದುಪಡಿಯನ್ನು ರದ್ದುಪಡಿಸಿದ್ದೇನೆ ಎಂದು ಅವರೇ ಮಂಡಿಸಿದ ಬಜೆಟ್‍ನಲ್ಲಿ ಘೋಷಿಸಿದ ಮೇಲೂ ಪಂಚ ಗ್ಯಾರಂಟಿಗಳಿಗೆ ಹೀಗೆ ಹಣವನ್ನು ನಿಗದಿಪಡಿಸುತ್ತಾರೆ ಎಂಬುದು ಸದ್ಯಕ್ಕಂತೂ ಉತ್ತರವಿಲ್ಲದ ಪ್ರಶ್ನೆಯಾಗಿದೆ. ಏನೇ ಆದರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಬದುಕಿಗೆ ಬಲ ನೀಡಬೇಕಾದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕಾಗಿ ಸುತ್ತಿ ಬಳಸಿ ಬಡವರ ಅದರಲ್ಲೂ ಸಮಾಜದ ಕೊನೆಯ ಮನುಷ್ಯರ ಅನ್ನ, ವಿದ್ಯೆ, ಆರೋಗ್ಯದ ಬಟ್ಟಲಿಗೆ ಕೈಯಿಕ್ಕಿದೆ. ಇದರ ವಿರುದ್ಧ ಹೋರಾಟ ಮಾಡದಿದ್ದರೆ ನಮಗೆ ನಾವೇ ಆತ್ಮವಂಚನೆ ಮಾಡಿಕೊಂಡಂತೆ.

ದುರದೃಷ್ಟಕ್ಕೆ ಪರಿಶಿಷ್ಟರಿಗೆ ಅನ್ಯಾಯವಾದಾಗಲೆಲ್ಲಾ ಸಿಡಿದೆದ್ದು ನಿಲ್ಲುತ್ತಿದ್ದವರು ಯಾಕೋ ಮೌನವಾಗಿದ್ದಾರೆ. ಮಾತನಾಡಬೇಕಾದ ಸಂವಿಧಾನಬದ್ಧ ಹುದ್ದೆ ಮತ್ತು ಸಮಾಜ ಕಲ್ಯಾಣದ ಜವಾಬ್ದಾರಿ ಹೊಂದಿರುವ ಸಚಿವ ಮಹಾದೇವಪ್ಪನವರು ಮತ್ತು ನಾಗೇಂದ್ರರು ಮೌನ ಮುರಿಯುತ್ತಿಲ್ಲ. ಒಟ್ಟಾರೆ ಪರಿಶಿಷ್ಟ ಜನಾಂಗದ ಆರ್ಥಿಕ ಹಿತ ಕಾಯಬೇಕಾದ ಸರ್ಕಾರ ಗ್ಯಾರಂಟಿ ಯೋಜನೆಗೆ ಮೀಸಲು ನಿಧಿ ಬಳಸುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ. ಆದರೆ ಹಿತ ಕಾಯುವವರಾರು? ಸಂವಿಧಾನದ ಸೃಷ್ಟಿಕರ್ತ ಬಾಬಾ ಸಾಹೇಬ್ ಅಂಬೇಡ್ಕರ್ ಹೀಗೆ ನುಡಿದಿದ್ದಾರೆ. ‘ನಮ್ಮ ಹಕ್ಕುಗಳನ್ನು ನಮ್ಮ ಕಣ್ಣೆದುರೇ ಕಸಿಯುವಾಗ ಮೌನ ವಹಿಸುವುದು ಪರೋಕ್ಷವಾಗಿ ಅನ್ಯಾಯಕ್ಕೆ ಬೆಂಬಲ ಕೊಟ್ಟಂತೆ’. ಇದೀಗ ನ್ಯಾಯದ ಚೆಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಂಗಳದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT