ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಇಂಧನ: ಪರಿಸರ ಸಂರಕ್ಷಣೆಯ ತುರ್ತು

ನಾವು ಬಳಸುವ ಬಲ್ಬ್, ಎಲೆಕ್ಟ್ರಾನಿಕ್ ಉತ್ಪನ್ನಗಳು ಇಂಧನ ಉಳಿತಾಯದ ಕ್ಷಮತೆ ಹೊಂದಿರುತ್ತವೆ. ಅಂಥವನ್ನೇ ಖರೀದಿಸಿ ಉಪಯೋಗಿಸಬೇಕು
Last Updated 13 ಡಿಸೆಂಬರ್ 2021, 19:06 IST
ಅಕ್ಷರ ಗಾತ್ರ

ಇಡೀ ಜಗತ್ತು ಇಂಧನ ಬಿಕ್ಕಟ್ಟಿಗೆ ಸಿಲುಕಿದೆ. ಉತ್ಪಾದನೆಯು ಬೇಡಿಕೆಯ ಅರ್ಧದಷ್ಟೂ ಇಲ್ಲ. ಹೆಚ್ಚಿನ ಇಂಧನ ಕೊಡುತ್ತಿರುವ ಕಲ್ಲಿದ್ದಲು, ಅಣುಸ್ಥಾವರ ಬಯೋಮಾಸ್ ಘಟಕಗಳು ಮಾಲಿನ್ಯ ಹೆಚ್ಚಿಸಿ ಜನರ ಆರೋಗ್ಯ ಕೆಡಿಸುತ್ತಿವೆ. ಜೀವವೈವಿಧ್ಯ ಹಿಂದೆಂದೂ ಅನುಭವಿಸದ ಒತ್ತಡಕ್ಕೆ ಸಿಲುಕಿದೆ. ವಾಯುಗುಣ ಬದಲಾವಣೆ ತಾರಕಕ್ಕೇರಿ ಅಕಾಲಿಕ ಮಳೆ, ಬಿಸಿಲು, ಭೂಕಂಪನ, ಪ್ರವಾಹಗಳಿಂದ ಜನಪಲ್ಲಟ ಗಾಬರಿ ಹುಟ್ಟಿಸುವಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ.

ಬೆಳೆದ ಬೆಳೆ ಕೈಗೆ ಸಿಗದೆ ರೈತರು ಕೃಷಿ ಎಂದರೆ ಬೆಚ್ಚಿ ಬೀಳುತ್ತಿದ್ದಾರೆ. ಭೂಮಿಯ ಬಿಸಿ ನಿಯಂತ್ರಣ ದಲ್ಲಿದ್ದರೆ ಮಾತ್ರ ದೇಶ–ರಾಜ್ಯಗಳ ಆರ್ಥಿಕತೆಯ ರೈಲು ಚೆನ್ನಾಗಿ ಓಡುತ್ತದೆ. ಆದರೆ, ವಾಸ್ತವ ಇದಕ್ಕೆ ವಿರುದ್ಧವಾಗಿದೆ. ವಾಯುಗುಣ ನಿಯಂತ್ರಣ ಉದ್ದೇಶದ ಗ್ಲಾಸ್ಗೊ ಶೃಂಗಸಭೆಯು ರಚನಾತ್ಮಕ ನಿರ್ಣಯಗಳಿಲ್ಲದೆ ಮಕಾಡೆ ಮಲಗಿದೆ. ಈ ನಡುವೆ ‘ರಾಷ್ಟ್ರೀಯ ಇಂಧನ ಸಂರಕ್ಷಣೆ’ ದಿನ (ಡಿ.14) ಬಂದಿದೆ.

ಸುಧಾರಿತ ದೇಶಗಳು ಭಾರಿ ಪ್ರಮಾಣದ ಇಂಧನ ಬಳಸಿ ಜೀವನಮಟ್ಟ ಸುಧಾರಿಸಿಕೊಂಡಿವೆ. ನಮ್ಮಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಇಂಧನ ಬೇಡಿಕೆಯು ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ದುಪ್ಪಟ್ಟಾಗಿದೆ. ವಿಶ್ವದ ಪ್ರಜೆಗಳ ಲೆಕ್ಕದಲ್ಲಿ ನಮ್ಮವರ ತಲಾ ಬಳಕೆ ಕೇವಲ ಅರ್ಧದಷ್ಟು. ಆದರೂ ನಮ್ಮಲ್ಲಿ ಮಾಲಿನ್ಯ ಜಾಸ್ತಿ. ಅದಕ್ಕೆ ಕಾರಣ ಕಳಪೆ ಕಲ್ಲಿದ್ದಲು. ಇಂಧನ ಕ್ಷೇತ್ರದಲ್ಲಿ ನಾವು ಬಳಸುತ್ತಿರುವ ಇಂಗಾಲದ ಪ್ರಮಾಣ ವಿಶ್ವದ ಸರಾಸರಿಗಿಂತ ಹೆಚ್ಚು. ಅತಿಹೆಚ್ಚು ಇಂಗಾಲದ ಡೈ ಆಕ್ಸೈಡ್ ಹೊಮ್ಮಿಸುವ ವಿಶ್ವದ ದೇಶಗಳ ಪೈಕಿ ನಾವು ಮೂರನೆಯ ಸ್ಥಾನದಲ್ಲಿದ್ದೇವೆ. ಗಾಳಿಯಲ್ಲಿನ ತೇಲುಕಣದ ಪ್ರಮಾಣವು ದೇಶದ ಅತ್ಯಂತ ಗಂಭೀರ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದು 2019ರಲ್ಲಿ ಹತ್ತು ಲಕ್ಷ ಶಿಶುಗಳ ಮರಣ ಮಾಲಿನ್ಯದಿಂದಾಗಿಯೇ ಸಂಭವಿಸಿದೆ. ಆದರೆ ತ್ವರಿತಗತಿಯ ಅಭಿವೃದ್ಧಿಗೆ ಕಲ್ಲಿದ್ದಲು ಸುಡದೇ ಬೇರೆ ದಾರಿ ಇಲ್ಲ.

ಲಾಕ್‍ಡೌನ್‍ನಿಂದ ಬೇಡಿಕೆಯ ಪ್ರಮಾಣ ಶೇ 5ರಷ್ಟು ಕುಸಿದಿದೆ. ಇಂಧನ ಕ್ಷೇತ್ರದಲ್ಲಿ ತೊಡಗಿಸುವ ಬಂಡವಾಳವೂ ಶೇ 15ರಷ್ಟು ಸೊರಗಿದೆ. ನಮ್ಮ ಇಂಧನ ಬೇಡಿಕೆಯ ಮುಕ್ಕಾಲು ಪಾಲು ಪೂರೈಕೆ ಕಲ್ಲಿದ್ದಲ್ಲು, ಪೆಟ್ರೋಲ್, ಡೀಸೆಲ್ ಮತ್ತು ಘನ ಬಯೋಮಾಸ್‌ನಿಂದ ಆಗುತ್ತಿದೆ. ಅದರಲ್ಲಿ ಕಲ್ಲಿದ್ದಲಿನ ಭಾಗ ಅರ್ಧಕ್ಕಿಂತ ಹೆಚ್ಚು.

ಕೋವಿಡ್‍ನಿಂದಾಗಿರುವ ಆರ್ಥಿಕ ಹಿಂಜರಿತವನ್ನು ತಡೆದು, ಮೊದಲಿನ ವೇಗಕ್ಕೆ ತರುವುದು ಮತ್ತು ದೀರ್ಘಕಾಲೀನ ಬೆಳವಣಿಗೆ ಕಡೆಗೆ ಒತ್ತು ನೀಡಿ ಅಭಿವೃದ್ಧಿ ಸಾಧಿಸುವುದು ಈಗ ನಮ್ಮ ಮುಂದಿರುವ ಸವಾಲು. ಆದರೆ, ಕೋವಿಡ್ ಮಾರಿ ಮುಗಿಯುತ್ತಿಲ್ಲ. ಈಗತಾನೆ ಚೇತರಿಕೆ ಕಾಣುತ್ತಿರುವ ಉದ್ಯಮಗಳು ಮತ್ತೆ ಬಾಗಿಲು ಹಾಕಿಕೊಂಡರೆ ಆರ್ಥಿಕತೆಯ ಗತಿ ಏನು?

ಹವಾಮಾನದ ವೈಪರೀತ್ಯವು ಭೂಸ್ವರೂಪ, ಸಂಸ್ಕೃತಿ, ವಾಣಿಜ್ಯಗಳನ್ನೆಲ್ಲಾ ಹದತಪ್ಪಿಸುತ್ತ ಆಹಾರ ಮತ್ತು ಸಹಜ ಬದುಕಿನ ಸ್ವಾತಂತ್ರ್ಯವನ್ನೇ ಮೊಟಕುಗೊಳಿಸುತ್ತಿವೆ. ನಾವೆಲ್ಲ ಚರ್ಚೆ ಮಾಡಿ, ಒಪ್ಪಂದಕ್ಕೆ ಸಹಿ ಮಾಡಿ ಇಂಗಾಲವನ್ನು ಮಟ್ಟ ಹಾಕ ಬೇಕೆನ್ನುತ್ತೇವೆ. ವಾಸ್ತವದಲ್ಲಿ ಹೆಚ್ಚಿನ ಕಾರ್ಬನ್ (ಕಲ್ಲಿದ್ದಲು ಮತ್ತು ಪೆಟ್ರೋಲ್) ಹೊಂದಿದ ಧನಿಕ ದೇಶಗಳು ಉಳಿದವರಿಗೆ ತನ್ನ ಸರಕು ಮಾರಿ ಇನ್ನಷ್ಟು ಶ್ರೀಮಂತವಾಗುತ್ತಿವೆ. ಅವರನ್ನೇ ಅನುಕರಿಸುವ ಅಭಿವೃದ್ಧಿ ಬಯಸುವ ದೇಶಗಳೂ ತನ್ನ ಸಂಪನ್ಮೂಲ ಗಳನ್ನು ಅಗೆದು ಸುಡುತ್ತ ಹೆಚ್ಚುಹೆಚ್ಚು ಇಂಧನ ಸಂಪಾದಿಸುತ್ತಿವೆ.

ವಿವಿಧ ಮೂಲಗಳಿಂದ ಸಿಗುವ ವಿದ್ಯುಚ್ಛಕ್ತಿ, ವಾಹನಗಳಿಗೆ ಶಕ್ತಿ ತುಂಬುವ ಫಾಸಿಲ್ ಇಂಧನ, ಅಡುಗೆ ಬೇಯಿಸುವ ಸೌದೆ, ಸೀಮೆಎಣ್ಣೆ, ಅನಿಲ, ಶುದ್ಧೀ ಕರಣ– ರೀಸೈಕಲ್- ಪುನರುತ್ಪಾದನೆ ಘಟಕಗಳಲ್ಲೆಲ್ಲಾ ಬಳಸಲಾಗುವ ಇಂಧನವನ್ನು ಉಳಿಸಲೇಬೇಕಾದ ಅನಿವಾರ್ಯ ಬಹಳ ಹಿಂದಿನಿಂದಲೂ ಇದೆ. ಜಾಹೀರಾತುಗಳು, ಸರ್ಕಾರದ ಯೋಜನೆಗಳು ಇಂಧನ ಉಳಿತಾಯಕ್ಕೆ ‘ಹೀಗೆ ಮಾಡಿ’ ಎಂದು ಸಲಹೆ ನೀಡುತ್ತಲೇ ಇರುತ್ತವೆ. ಪ್ರೋತ್ಸಾಹ ನೀಡಲು ಸಬ್ಸಿಡಿ, ರಿಯಾಯಿತಿ ನೀಡುವುದೂ ಇದೆ.

ಉಳಿತಾಯ ಮಾಡಿದರೆ ಸಂಪಾದಿಸಿದಂತೆ ಎಂಬ ಮಾತಿದೆ. ಇಂಧನ ಉಳಿತಾಯದ ಹೊಣೆ ನಮ್ಮ ಮೇಲೂ ಇದೆ. ನಾವು ಬಳಸುವ ಬಲ್ಬ್, ಎಲೆಕ್ಟ್ರಾನಿಕ್ ಉತ್ಪನ್ನಗಳು ಇಂಧನ ಉಳಿತಾಯದ ಕ್ಷಮತೆ ಹೊಂದಿರುತ್ತವೆ. ಅಂಥವನ್ನೇ ಖರೀದಿಸಿ ಉಪಯೋಗಿಸಬೇಕು. ಬಿಇಇ (ಬ್ಯೂರೊ ಆಫ್ ಎನರ್ಜಿ ಎಫಿಶಿಯನ್ಸಿ) ಪ್ರಮಾಣಪತ್ರವಿರುವ ಉಪಕರಣಗಳು ಹೆಚ್ಚಿನ ಇಂಧನ ಉಳಿಸುತ್ತವೆ. ವಾಶಿಂಗ್ ಮಶೀನ್, ಫ್ರಿಜ್‌, ಓವೆನ್, ಇಸ್ತ್ರಿಪೆಟ್ಟಿಗೆ ಖರೀದಿಸುವಾಗ ಬಿಇಇ ಸಿರ್ಟಿಫಿಕೇಟ್ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ. ಅನಗತ್ಯವಾಗಿ ಉರಿಯುವ ದೀಪ ಆರಿಸಿ, ಟ್ರಾಫಿಕ್ ಸಿಗ್ನಲ್‍ನಲ್ಲಿ ಎಂಜಿನ್ ಆಫ್ ಮಾಡಿ, ಹೆಚ್ಚು ಮೈಲೇಜ್ ಕೊಡುವ ವಾಹನ ಓಡಿಸಿ ಇಂಧನ ಉಳಿಸಬಹುದು. ವಿದ್ಯುತ್ ಉಳಿತಾಯ ಮಾಡಲು ಸೌದೆ ಸುಟ್ಟು ಅಡುಗೆ ಮಾಡುವುದು ಬೇಡ. ಬದಲಿಗೆ ಸೌರ ಒಲೆಗಳನ್ನು ಬಳಸಿ ವಿದ್ಯುತ್ ಉಳಿಸಿ. ಸೌರಶಕ್ತಿಯಿಂದ ಮನೆಗೆ ವಿದ್ಯುತ್ ಪಡೆಯಿರಿ. ಇಂಧನ ಉಳಿತಾಯದಿಂದ ಪರಿಸರ ಸಂರಕ್ಷಣೆಯ ಕೆಲಸವೂ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT