ಮಂಗಳವಾರ, ನವೆಂಬರ್ 19, 2019
24 °C
ಆರೋಗ್ಯ ಸಚಿವರ ಹೇಳಿಕೆಯು ಆರೋಗ್ಯದ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವಂತಿದ್ದು, ಅನ್ಯ ಮಾರ್ಗಗಳಿಗೆ ದಾರಿ ಮಾಡಿಕೊಡುತ್ತದೆ

ದೇವಸ್ಥಾನ ಮತ್ತು ‘ಪಾಸಿಟಿವ್ ಎನರ್ಜಿ’

Published:
Updated:
Prajavani

‘ಎಲ್ಲ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ದೇವಸ್ಥಾನಗಳನ್ನು ನಿರ್ಮಿಸಿ, ಅದರಿಂದ ಪಾಸಿಟಿವ್ ಎನರ್ಜಿ ಸಿಗುತ್ತದೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಎನರ್ಜಿ ಬಗ್ಗೆ ಓದಿರುವವರಿಗೆ ಸಾಮಾನ್ಯವಾಗಿ ವಿದ್ಯುತ್ ಶಕ್ತಿ, ಅಯಸ್ಕಾಂತೀಯ ಶಕ್ತಿ, ಗುರುತ್ವಾಕರ್ಷಣೆ, ಸೌರಶಕ್ತಿ, ಅಣುಶಕ್ತಿಗಳ ಬಗ್ಗೆ ತಿಳಿದಿದೆಯೇ ಹೊರತು ದೇವಸ್ಥಾನಗಳಿಂದ ಹೊರಹೊಮ್ಮುವ ಪಾಸಿಟಿವ್ ಎನರ್ಜಿ ಬಗ್ಗೆ ಮಾಹಿತಿ ಇಲ್ಲ. ಅಂಥ ನಿಗೂಢವಾದ ಶಕ್ತಿಯ ಬಗ್ಗೆ ಸಚಿವರು ಪ್ರಸ್ತಾಪಿಸಿದ್ದಾರೆ.

ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಹುಪಾಲು ರೋಗಿಗಳು ರೋಗ ಉಲ್ಬಣಿಸಿದ ನಂತರ ಬರುವ ಬಡವರು. ಅವರನ್ನು ಪ್ರೀತಿಯಿಂದ, ತಾಳ್ಮೆಯಿಂದ, ಪ್ರಾಮಾಣಿಕತೆಯಿಂದ ಉಪಚರಿಸಿ ಸೂಕ್ತ ಚಿಕಿತ್ಸೆ ನೀಡಿದರೆ ಸಾಕು, ಆ ವೈದ್ಯರೇ ಅವರ ಪಾಲಿಗೆ ದೇವರಾಗುತ್ತಾರೆ ಮತ್ತು ಆ ಆಸ್ಪತ್ರೆಯೇ ಅವರ ಪಾಲಿಗೆ ದೇವಸ್ಥಾನವಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ನಮ್ಮ ಹಿಂದಿನವರು ‘ವೈದ್ಯೋ ನಾರಾಯಣೋ ಹರಿಃ’ ಎಂದಿದ್ದಾರೆ. ಬಹುಪಾಲು ಸರ್ಕಾರಿ ಆಸ್ಪತ್ರೆಗಳಲ್ಲಿ ಜನರ ನೂಕು ನುಗ್ಗಲಿರುತ್ತದೆ. ಒಂದು ಪರೀಕ್ಷೆಗೆ ಬರೆದುಕೊಟ್ಟರೆ ಬಹುತೇಕ ಸಂದರ್ಭಗಳಲ್ಲಿ ಆ ಯಂತ್ರ ಕೆಲಸ ಮಾಡುತ್ತಿರುವುದಿಲ್ಲ. ಕೆಲಸ ಮಾಡುತ್ತಿದ್ದರೂ ಒಮ್ಮೊಮ್ಮೆ ‘ಹದಿನೈದು ದಿನ ಬಿಟ್ಟು ಬನ್ನಿ’ ಎಂಬ ಸೂಚನೆ ನೀಡಲಾಗುತ್ತದೆ. ಆ ರೋಗಿಗೆ ಒಂದು ದಿನವೂ ತನ್ನ ಸಮಸ್ಯೆಯನ್ನು ತಾಳಿಕೊಳ್ಳುವ ಶಕ್ತಿ ಇರುವುದಿಲ್ಲ. ಆಗ ಅನಿವಾರ್ಯವಾಗಿ ಹೊರಗೆ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ. ಕೆಲವು ಆಸ್ಪತ್ರೆಗಳಿಗೆ ಹೋದರೆ ಅಲ್ಲಿನ ಪರಿಸ್ಥಿತಿಯಿಂದ ಕಾಯಿಲೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅಂತಹ ಕಡೆ ಸ್ವಚ್ಛತೆಗೆ ಆದ್ಯತೆ ನೀಡಬೇಕು.

ಕಾಯಿಲೆ ಬಂದಾಗ ಆಸ್ಪತ್ರೆ ಬದಲು ದೇವಸ್ಥಾನಗಳಿಗೆ ಹೋಗುವ ವಾಡಿಕೆ ಕೆಲವೆಡೆ ಇದೆ. ಚಿತ್ರದುರ್ಗ ತಾಲ್ಲೂಕು ತೊಡರ್ನಾಳು ಗ್ರಾಮದ ಯುವಕನೊಬ್ಬ ಇತ್ತೀಚೆಗೆ ಕ್ಯಾನ್ಸರ್‌ನಿಂದ ತೀರಿಕೊಂಡ. ಪೋಷಕರು ಈತನ ಕಾಯಿಲೆಗೆ ದೇವರ ಬಳಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ, ಕಡೇ ಗಳಿಗೆಯಲ್ಲಿ ಆಸ್ಪತ್ರೆಗೆ ಹೋಗಿದ್ದರಿಂದ ಏನೂ ಪ್ರಯೋಜನವಾಗಲಿಲ್ಲ. ಚಾಮರಾಜನಗರದ ಗುಂಬಳ್ಳಿಯಲ್ಲಿ ಅನಾರೋಗ್ಯಪೀಡಿತ ಬಾಲಕಿಯನ್ನು ಗುಡಿಯಲ್ಲಿರಿಸಿ, ಪೂಜಾರಿಯ ಮೇಲೆ ಬರುವ ‘ದೇವರ’ ಆಜ್ಞೆಯಂತೆ, ಆಸ್ಪತ್ರೆಗೆ ಸೇರಿಸದ ಕಾರಣ ಆಕೆ ಸಾವನ್ನಪ್ಪಿದಳು. ಮುಟ್ಟಾದಾಗ, ಹೆರಿಗೆಯಾದಾಗ ಕೆಲವು ಸಮುದಾಯಗಳು ಹೆಣ್ಣುಮಕ್ಕಳನ್ನು ಊರ ಹೊರಗೆ ಇರಿಸುತ್ತವೆ. ಇದರಿಂದ ಅವರ ಜೀವಕ್ಕೆ ಅಪಾಯ ಒದಗಿರುವ, ಅತ್ಯಾಚಾರ ನಡೆದಿರುವ ಉದಾಹರಣೆಗಳಿವೆ. ಇಂತಹವರಲ್ಲಿ ಜಾಗೃತಿ ಮೂಡಿಸಿ, ವೈಜ್ಞಾನಿಕ ಮಾಹಿತಿಯನ್ನು ನೀಡಿ ಅವರಿಗೆ ನೆರವಾಗುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಆದರೆ ಸ್ವತಃ ಆರೋಗ್ಯ ಸಚಿವರೇ ಈ ರೀತಿ ಹೇಳಿದಾಗ ಜನ ಗೊಂದಲಕ್ಕೀಡಾಗುವ ಸಾಧ್ಯತೆ ಇರುತ್ತದೆ. ಆಸ್ಪತ್ರೆಯಲ್ಲಿ ಶೋಷಣೆಗೆ ಒಳಗಾಗುವ ಜನರು ಮತ್ತೆ ಪೂಜಾರಿಯಿಂದಲೂ ಶೋಷಣೆಗೆ ಒಳಗಾಗುವ ಹಾಗೂ ಆಸ್ಪತ್ರೆಗಳಲ್ಲಾಗುವ ವೈಫಲ್ಯಗಳಿಗೆ ದೇವರಿಂದ ಪರಿಹಾರ ಪಡೆಯುವ ಮತ್ತೇನೇನೋ ಅನ್ಯ ಮಾರ್ಗಗಳಿಗೆ ಇದು ದಾರಿ ಮಾಡಿಕೊಡುತ್ತದೆ.

ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ ದೇವಸ್ಥಾನಗಳಿದ್ದು ಅಲ್ಲಿ ರಚನಾತ್ಮಕ ಶಕ್ತಿ, ಅಂದರೆ ಪಾಸಿಟಿವ್ ಎನರ್ಜಿ ಸಿಗುತ್ತಿದೆ ಎಂದೂ ಸಚಿವರು ಹೇಳಿದ್ದಾರೆ. ಇತ್ತೀಚೆಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಲೇಖಕರೊಬ್ಬರು ನಿಧನ
ರಾದಾಗ, ಅವರ ಪಾರ್ಥಿವ ಶರೀರವನ್ನು ಹೊರತರಲು ₹ 16 ಲಕ್ಷ ಪಾವತಿಸಬೇಕಾಯಿತು. ಜನರ ದುಡಿತದ ಬಹುಪಾಲು ಈಗ ಖಾಸಗಿ ಆಸ್ಪತ್ರೆಗಳ ಪಾಲಾಗುತ್ತಿದೆ. ಇಂತಹ ಸಂಕಷ್ಟಗಳಿಂದ ಜನಸಾಮಾನ್ಯರನ್ನು ಪಾರು ಮಾಡಿ, ಅವರು ನೆಮ್ಮದಿಯಿಂದ ಇರುವಂತೆ ಮಾಡಬೇಕಾಗಿದೆ.

ಕೆಲವು ಸರ್ಕಾರಿ ಕಚೇರಿಗಳಿಗೆ ಶುಕ್ರವಾರ ಮಧ್ಯಾಹ್ನ ಹೋದರೆ ಪೂಜೆ ನಡೆಯುತ್ತಿರುತ್ತದೆ. ನಿಮ್ಮ ಕೆಲಸ ಆಗುವ ಬದಲು, ನಿಮಗೆ ಕಡ್ಲೆಪುರಿ ಮತ್ತು ತೆಂಗಿನ ಕಾಯಿಯ ಚೂರು ಸಿಗಬಹುದು. ಈ ಎಲ್ಲ ಕೇಂದ್ರಗಳು ಸಮಾಜದ ಎಲ್ಲ ಜಾತಿ, ಜನಾಂಗ, ಧರ್ಮದ ಜನರಿಗೆ ಸೇರಿದ್ದು, ಅಲ್ಲಿ ಮಂದಿರ, ಮಸೀದಿಗಳಿಗೆ ಅವಕಾಶ ಇರಬಾರದು. ಅವು ಎಲ್ಲಿರಬೇಕೋ ಅಲ್ಲಿರಬೇಕು. ಮನಸ್ಸಿನ ನೆಮ್ಮದಿಗೆ ಹಾಗೂ ತಮ್ಮದೇ ಕಾರಣಕ್ಕೆ ದೇವರನ್ನು ಪೂಜಿಸುವುದು ಜನರ ಖಾಸಗಿ ವಿಚಾರ. ಆದರೆ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ಅದನ್ನೆಲ್ಲ ಬಿಟ್ಟು ತಮ್ಮ ಕೆಲಸಕ್ಕೆ ನ್ಯಾಯ ಒದಗಿಸಬೇಕು.

ವಿಧಾನಸೌಧವೂ ಸೇರಿದಂತೆ ಸರ್ಕಾರಿ ಕಚೇರಿಗಳ ಮುಂದೆ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ನಾಮಫಲಕ ಹಾಕಲಾಗಿದೆ. ಅಂದರೆ, ನೀನು ಜನರ ಕೆಲಸವನ್ನು ಸರಿಯಾಗಿ ಮಾಡಿದರೆ ಅದೇ ದೇವರ ಕೆಲಸ ಎಂಬ ಅರ್ಥ ಅದರ ಹಿಂದಿದೆ. ಹಾಗೆಯೇ ‘ಜನ ಸೇವೆಯೇ ಜನಾರ್ದನನ ಸೇವೆ’ ಎಂಬ ಮಾತೂ ಇದೆ. ಆದರೆ ಕೆಲವರು ಜನಾರ್ದನನ ಸೇವೆಯನ್ನು ಮಾಡುತ್ತ ಹಣ, ಅಧಿಕಾರ ಗಳಿಸಿಕೊಂಡು ಜನರ ಸಮಸ್ಯೆಗಳನ್ನು ಕಡೆಗಣಿಸಿರುವುದನ್ನು ಕಾಣುತ್ತೇವೆ. ಹಿಂದಿನ ಸಮ್ಮಿಶ್ರ ಸರ್ಕಾರವು ಮಳೆಗಾಗಿ ಪ್ರಾರ್ಥಿಸುವಂತೆ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಿಗೆ ಸುತ್ತೋಲೆಯನ್ನು ಹೊರಡಿಸಿ ಟೀಕೆಗೊಳಗಾಗಿತ್ತು. ಆರೋಗ್ಯ ಸಚಿವರು ಅವೈಜ್ಞಾನಿಕ ಹಾಗೂ ಜನರನ್ನು ದಿಕ್ಕು ತಪ್ಪಿಸುವ ತಮ್ಮ ಹೇಳಿಕೆಯನ್ನು ಹಿಂಪಡೆಯಲಿ.

ಪ್ರತಿಕ್ರಿಯಿಸಿ (+)