ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಗ್ರಾಮಸಭೆಗೆ ಏಕೆ ನಿರ್ಲಕ್ಷ್ಯ?

ಸ್ಥಳೀಯ ಆಡಳಿತಗಳಿಗೆ ಮಕ್ಕಳು ವಿಶೇಷವಾದ ಮತ್ತು ಪ್ರತ್ಯೇಕವಾದ ಆದ್ಯತೆಆದರೆ ಮಾತ್ರ ಅವರ ಸಮಸ್ಯೆಗಳ ಸಂಕೀರ್ಣತೆಯನ್ನು ಅರಿಯಲು ಸಾಧ್ಯ
Last Updated 15 ನವೆಂಬರ್ 2018, 19:46 IST
ಅಕ್ಷರ ಗಾತ್ರ

ಮಕ್ಕಳ ಗ್ರಾಮಸಭೆ. ಮಕ್ಕಳೇ ಪ್ರಧಾನವಾದ, ಮಕ್ಕಳ ಮೂಲಕವೇ ಹಳ್ಳಿ ಮತ್ತು ಶಾಲೆಯ ಸಮಸ್ಯೆಗಳನ್ನು ನೋಡುವ ಮತ್ತು ಪರಿಹರಿಸುವ ಸಲುವಾಗಿ ರೂಪಿಸಲಾಗಿರುವ ಒಂದು ನಿಯಮ. ನವೆಂಬರ್‌ ಎಂದರೆ ರಾಜ್ಯೋತ್ಸವ ಹೇಗೋ, ಹಾಗೆ ಮಕ್ಕಳ ಗ್ರಾಮಸಭೆಯೂ ನೆನಪಾಗಬೇಕು. ಆದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಇದು ನೆನಪಾಗುವುದೇ ತಡವಾಗಿ. ಅದೂ ಪ್ರತಿವರ್ಷ ನವೆಂಬರ್‌ ಮಧ್ಯಭಾಗದಲ್ಲಿ. ಹೀಗಾಗಿಯೇ ಮಕ್ಕಳ ಗ್ರಾಮಸಭೆಗಳನ್ನು ನಡೆಸಬೇಕು ಎಂಬ ಸುತ್ತೋಲೆಗಳೂ ಇದೇ ಆಸುಪಾಸಿನಲ್ಲೇ ಹೊರಗೆ ಬೀಳುತ್ತವೆ. ‘ಇನ್ನೊಂದು ಹೊರೆ ಬಿತ್ತು’ ಎಂಬ ಭಾವನೆಯಲ್ಲೇ ಬಹುತೇಕ ಅಧಿಕಾರಿಗಳು ಮಕ್ಕಳು ಮತ್ತು ಗ್ರಾಮಸಭೆಗಳತ್ತ ಗಮನ ಹರಿಸುತ್ತಾರೆ. ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಗ್ರಾಮಸಭೆಗಳು ಗ್ರಾಮ ಸರ್ಕಾರದ ನಡಾವಳಿಗಳಂತೆ. ಆದರೆ ಈ ಗ್ರಾಮಸಭೆಗಳು ಸರಿಯಾಗಿ ನಡೆಯುವುದಿಲ್ಲ ಎಂಬ ದೂರುಗಳು ಇದ್ದೇ ಇರುತ್ತವೆ. ಮಕ್ಕಳ ಗ್ರಾಮಸಭೆಯ ಸ್ಥಿತಿಯೂ ಇದೇ ಹಾದಿ ತುಳಿಯುತ್ತಿದೆ.

ಸಹಯೋಗ ಎಲ್ಲಿ?: ಮಕ್ಕಳ ಗ್ರಾಮಸಭೆ ಎಂದ ಕೂಡಲೇ ಗ್ರಾಮ ಪಂಚಾಯ್ತಿಗಳು ನೆನಪಾಗುವುದು ಸಹಜ. ಅದು ಸರಿಯೂ ಹೌದು. ಏಕೆಂದರೆ ಸಭೆಗಳು ನಡೆಯಬೇಕಾದ್ದು ಅಲ್ಲೇ. ಆದರೆ ಅದಕ್ಕೆ ಸಹಯೋಗ ನೀಡಬೇಕಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾತ್ರ ತುಟಿ ಪಿಟಕ್‌ ಎನ್ನುವುದಿಲ್ಲ.

ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಮಕ್ಕಳ ರಕ್ಷಣಾ ಘಟಕವು ಮಕ್ಕಳ ಗ್ರಾಮಸಭೆಯ ಕುರಿತು ಪಂಚಾಯ್ತಿಗಳೊಂದಿಗೆ ಸಮನ್ವಯ ಸಾಧಿಸಬೇಕು. ಅಕ್ಟೋಬರ್‌ನಲ್ಲೇ ಈ ಬಗ್ಗೆ ಪಂಚಾಯ್ತಿಗಳ ಗಮನ ಸೆಳೆಯಬೇಕು. ಆ ಅವಧಿಯಲ್ಲೇ ಸಭೆಗಳಲ್ಲಿ ಪಾಲ್ಗೊಳ್ಳಲು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಿಕ್ಷಕರು ಶಾಲೆಗಳಲ್ಲಿ ಅಗತ್ಯ ಪೂರ್ವತಯಾರಿ ಮಾಡಿಸಬೇಕು. ಗ್ರಾಮ ಮತ್ತು ಶಾಲೆಗಳ ಸಮಸ್ಯೆಗಳ ಕುರಿತು ಸಭೆಯಲ್ಲಿ ಹೇಗೆ ವಿಷಯ ಮಂಡಿಸಬೇಕು ಎಂಬ ಕುರಿತು ಮಾರ್ಗದರ್ಶನ ನೀಡಬೇಕು. ಮಕ್ಕಳ ಗ್ರಾಮಸಭೆ ನಡೆಸುವವರಿಗೆ ವ್ರತನಿಷ್ಠರಿಗೆ ಇರಬೇಕಾದ ಬದ್ಧತೆ ಇರಬೇಕು. ಆದರೆ ಇದೊಂದು ವಾರ್ಷಿಕ ಚಟುವಟಿಕೆಯಷ್ಟೇ ಎಂಬ ಭಾವನೆ ಸದ್ಯ ಎದ್ದು ಕಾಣುವ ಅಂಶ. ಈ ಬಗ್ಗೆ ಚಕಾರವೆತ್ತುವ ಸ್ವಯಂಸೇವಾ ಸಂಸ್ಥೆಗಳತ್ತಲೂ ಅಧಿಕಾರಿಗಳು ಕೆಂಗಣ್ಣು ಬೀರುವುದು ಇದ್ದೇ ಇದೆ.

ಹೇಗೋ ಮಾಡಿದರಾಯಿತು ಎಂದು ಯಾವುದಾದರೂ ಒಂದು ಶಾಲೆಯಲ್ಲೇ ಗ್ರಾಮಸಭೆ ನಡೆಸುವ ನಿದರ್ಶನಗಳಿಗೇನೂ ಬರವಿಲ್ಲ. ಆಯಾ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಶಾಲೆಗಳ ಮಕ್ಕಳೂ ಸಭೆಯಲ್ಲಿ ಒಳಗೊಳ್ಳುವಂತೆ ಮಾಡಬೇಕು. ಆದರೆ ಹಾಗೆ ಆಗುವುದಿಲ್ಲ. ಸಭೆ ಹೇಗೋ ನಡೆಯುತ್ತದೆ ಎಂದಿಟ್ಟುಕೊಳ್ಳೋಣ. ಮಕ್ಕಳು ಸಭೆಯಲ್ಲಿ ಮಂಡಿಸಿದ ಸಮಸ್ಯೆಗಳಿಗೆ ಪರಿಹಾರ ದೊರೆಯಿತೇ ಎಂಬ ವಿಷಯ ಬಹುಬೇಗನೆ ಎಲ್ಲರಿಗೂ ಮರೆತುಹೋಗುವುದು ಇನ್ನೊಂದು ವಿಪರ್ಯಾಸ.

ಸಭೆಯ ನಡಾವಳಿ ಪುಸ್ತಕದಲ್ಲಿ ದಾಖಲಾದ ಸಮಸ್ಯೆಗಳ ಕುರಿತು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚರ್ಚಿಸಿದರೇ? ಅವುಗಳಿಗೆ ಪರಿಹಾರ ದೊರಕಿಸಲಾಗಿದೆಯೇ? ಆ ಬಗ್ಗೆ ಯಾರು ಯಾರಿಗೆ ಉತ್ತರ ನೀಡಬೇಕು ಎಂಬುದೂ ನಿಯಮದಲ್ಲಿ ಸ್ಪಷ್ಟವಿಲ್ಲ. ಅದಷ್ಟೇ ಅಲ್ಲ, ಗ್ರಾಮಸಭೆಯಲ್ಲಿ ಎಷ್ಟು ವಯಸ್ಸಿನ ಮಕ್ಕಳು ಪಾಲ್ಗೊಳ್ಳಬೇಕು ಎಂಬುದೂ ಸ್ಪಷ್ಟವಿಲ್ಲ. ಇದು ಸಭೆಯನ್ನು ಹೇಗಾದರೂ ನಡೆಸಬಹುದು ಎಂಬ ಸಾಧ್ಯತೆಗೆ ನೀರೆರೆದಂತೆ.

ಒಂದೇ ದಿನ ಎಲ್ಲವೂ!: ಸಭೆಯ ನೆಪದಲ್ಲಿ ಇನ್ನಿತರ ಕೆಲಸಗಳನ್ನೂ ಅಂದೇ ಮಾಡಿಬಿಡುವ ಉಮೇದೂ ಕೆಲವೊಮ್ಮೆ ಇಣುಕು ಹಾಕುವುದುಂಟು. ಬಳ್ಳಾರಿ ತಾಲ್ಲೂಕಿನಲ್ಲಿ ಗುರುವಾರದಿಂದ (ನ. 15) ಆರಂಭವಾಗಿರುವ ಮಕ್ಕಳ ಗ್ರಾಮಸಭೆಗೂ ಮುನ್ನ, ಕಾನೂನು ಸೇವಾ ಪ್ರಾಧಿಕಾರದ ‘ಮನೆ ಬಾಗಿಲಿಗೆ ನ್ಯಾಯ’ ಕಾರ್ಯಕ್ರಮವೂ ಏರ್ಪಾಡಾಗಿದೆ. ಪ್ರಾಧಿಕಾರದ ಪ್ರತಿನಿಧಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ನೋಡಲ್‌ ಅಧಿಕಾರಿಗಳು ಬೆಳಿಗ್ಗೆಯಿಂದಲೇ ಮನೆ ಮನೆ ಭೇಟಿ ಮಾಡಬೇಕು. ಅದು ಮುಗಿಯುತ್ತದೆಯೇ? ಗೊತ್ತಿಲ್ಲ. ಆದರೆ ಅದರ ಬಳಿಕ ಮಕ್ಕಳ ಗ್ರಾಮಸಭೆಯನ್ನೂ ನಡೆಸಿಬಿಡಬೇಕು. ಅದು ಹೇಗೆ? ಎಷ್ಟು ಹೊತ್ತಿಗೆ? ಆ ಮಾಹಿತಿಯೂ ನಿಖರವಾಗಿ ಇಲ್ಲ. ಸರಿ. ಅದರೊಂದಿಗೆ, ಮಕ್ಕಳ ಗ್ರಾಮಸಭೆಯಲ್ಲೇ ಬಾಲಕಿಯರಿಗಾಗಿ ವಿಶೇಷ ಸಭೆಯನ್ನು ನಡೆಸುವ ನಿರ್ಧಾರವೂ ಆಗಿದೆ.

ಇವೆಲ್ಲವೂ ವ್ಯವಸ್ಥಿತವಾಗಿ ನಡೆದರೆ ಹೆಚ್ಚು ಅನುಕೂಲವಾಗುವುದು ಸ್ಥಳೀಯ ಜನರಿಗೆ ಮತ್ತು ಮಕ್ಕಳಿಗೆ. ಆದರೆ ಮಕ್ಕಳು ಮತ್ತು ದೊಡ್ಡವರನ್ನು ಒಟ್ಟಿಗೇ ಸೇರಿಸಿ ಒಂದೇ ದಿನ ಅವರೆಲ್ಲರ ಅಹವಾಲು ಕೇಳುವ ಆತುರವಾದರೂ ಏಕೆ ಎಂಬ ಪ್ರಶ್ನೆಯನ್ನು ಮಾತ್ರ ಯಾರೂ ಕೇಳಿಕೊಂಡಂತಿಲ್ಲ.

ಸ್ಥಳೀಯ ಆಡಳಿತಗಳಿಗೆ ಮಕ್ಕಳು ವಿಶೇಷವಾದ ಮತ್ತು ಪ್ರತ್ಯೇಕವಾದ ಆದ್ಯತೆಯಾದರೆ ಮಾತ್ರ ಅವರ ಸಮಸ್ಯೆಗಳ ಸಂಕೀರ್ಣತೆಯನ್ನು ಅರಿಯಲು ಸಾಧ್ಯ. ಮಕ್ಕಳ ಹೆಸರಿನಲ್ಲೇ, ಮಕ್ಕಳಿಗಾಗಿಯೇ ಹಳ್ಳಿಗಳಲ್ಲಿ ಏರ್ಪಾಡಾಗುವ ಸಭೆಗಳು ಅವಸರದಲ್ಲಿ ಶುರುವಾಗಿ ಅವಸರದಲ್ಲಿಯೇ ಮುಗಿಯಬಾರದು. ಅದೊಂದು ನಾಮ್‌ಕೇವಾಸ್ತೆ ಕಾರ್ಯಕ್ರಮವಾಗಬಾರದು. ಪಂಚಾಯತ್‌ ರಾಜ್‌ ಇಲಾಖೆ, ಮಕ್ಕಳ ಅಭಿವೃದ್ಧಿ ಇಲಾಖೆ ಈ ವಿಷಯದಲ್ಲಿ ಇನ್ನಷ್ಟು ಸೂಕ್ಷ್ಮತೆಯನ್ನು ರೂಢಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT