ಗುರುವಾರ , ಮಾರ್ಚ್ 30, 2023
21 °C
ಈ ಮರುಭೂಮಿಯಲ್ಲಿ ಗಿಡ ಬೆಳೆಸುವುದು ಅಲ್ಲಿನ ಜೀವವೈವಿಧ್ಯಕ್ಕೆ ಕಂಟಕ

ಥಾರ್‌ ಮರುಭೂಮಿಗೆ ಹಸಿರಿನ ‘ಉರುಳು’!

ಗುರುರಾಜ್ ಎಸ್. ದಾವಣಗೆರೆ Updated:

ಅಕ್ಷರ ಗಾತ್ರ : | |

ಭೂಪ್ರದೇಶದಲ್ಲೆಲ್ಲಾದರೂ ಹಸಿರೀಕರಣ ನಡೆಯುತ್ತಿದೆ ಎಂದರೆ ಎಲ್ಲರೂ ಖುಷಿಪಡುತ್ತಾರೆ. ಪ್ರಯತ್ನವನ್ನು ಶ್ಲಾಘಿಸುತ್ತಾರೆ. ಆದರೆ ರಾಜಸ್ಥಾನ ಮತ್ತು ಪಂಜಾಬ್ ರಾಜ್ಯದಲ್ಲಿ 1.70 ಲಕ್ಷ ಚದರ ಕಿ.ಮೀ.ನಷ್ಟು ಹಬ್ಬಿರುವ ಥಾರ್ ಮರುಭೂಮಿಯಲ್ಲಿ ನಡೆಯುತ್ತಿರುವ  ಹಸಿರೀಕರಣಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಮರ ಕಡಿಯುವುದೂ ಒಂದೇ, ಥಾರ್‌ನಲ್ಲಿ ಗಿಡ ಬೆಳೆಸು ವುದೂ ಒಂದೇ ಎಂಬ ತಕರಾರು ಸಂರಕ್ಷಣಾ ತಜ್ಞರಿಂದ ವ್ಯಕ್ತವಾಗಿದೆ. ಅದರಲ್ಲೂ ನಮ್ಮ ಭೂಪ್ರದೇಶ ಗಳಿಗೆ ಹೊಂದಿಕೊಳ್ಳದ, ವಿದೇಶಿ ಮೂಲದ ಗಿಡ ನೆಡುತ್ತಿರುವುದು ಮರುಭೂಮಿಯನ್ನು ಅವಲಂಬಿಸಿರುವ ವಿವಿಧ ವನ್ಯಜೀವಿಗಳ ಉಳಿವಿಗೇ ಕಂಟಕ ಎಂಬ ಅಭಿಪ್ರಾಯ ಅನೇಕರದ್ದು. ಮರ ನೆಡುತ್ತಿರುವುದರಿಂದ ಅಲ್ಲಿನ ಮೂಲ ಹುಲ್ಲುಗಳಾದ ಸೆವಾನ್, ದಮನ್, ಕಪ್ಪಾರಿಸ್ ಮತ್ತು ಫೋಗ್‍ಗಳು ಬೆಳೆಯುವುದು ಕಡಿಮೆಯಾಗಿ, ಜಾನುವಾರುಗಳಿಗೆ ಮೇವಿನ ತೀವ್ರ ಕೊರತೆ ಬಾಧಿಸುತ್ತದೆ ಎನ್ನಲಾಗಿದೆ. ವಿಶ್ವಸಂಸ್ಥೆ ಜತೆ ಕೈಜೋಡಿಸಿ ಕೆಲಸ ಮಾಡುತ್ತಿರುವ ಉರ್ಮುಲ್ ಟ್ರಸ್ಟ್ ಎಂಬ ಸ್ವಯಂ ಸೇವಾ ಸಂಸ್ಥೆಯು ‘ಇರುವ ಹುಲ್ಲುಗಾವಲಿಗೆ ಹಾನಿಯಾಗದಂತೆ ಗಿಡ ನೆಡಲಾಗುವುದು ಎಂದು ಹೇಳಿಕೆ ನೀಡಿ ಕೇಂದ್ರ ಸರ್ಕಾರವು ವಿರೋಧಿಗಳ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದೆ’ ಎಂದು ದೂರಿದೆ. ಆದರೆ ಥಾರ್ ಹಸಿರೀಕರಣ ಮಾತ್ರ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎನ್ನುತ್ತಿದೆ ಸರ್ಕಾರ.

ಮಾನ್ಸೂನ್‌ ಮಾರುತದ ದಿನಗಳಲ್ಲಿ ಕೇವಲ 15-20 ದಿನ ಮಳೆ ಬೀಳುವ ಮರುಭೂಮಿಯಲ್ಲಿ ದೇಸಿ ಮರಗಳೇ ಬದುಕುವುದಿಲ್ಲ, ಅಂತಹುದರಲ್ಲಿ ಅನ್ಯದೇಶಗಳ ತಳಿಗಳು ಇಲ್ಲಿ ಬದುಕುವುದು ದುಸ್ಸಾಧ್ಯ ಎನ್ನುತ್ತಾರೆ ಅಶೋಕ ಟ್ರಸ್ಟ್‌ನ ಚೇತನ್ ಮಿಶರ್. ಈಗೀಗ ಮಳೆ ಚಕ್ರ ಬದಲಾಗಿರುವುದರಿಂದ ರೈತ ಮತ್ತು ದನ– ಕುರಿಗಾಹಿಗಳು ನಂಬಿಕೊಂಡಿರುವ ಮೇವು ಸಹ ಸರಿಯಾಗಿ ದೊರೆಯುತ್ತಿಲ್ಲ. ದೇಸಿ ತಳಿಗಳನ್ನು ನೆಡುವುದಕ್ಕೂ ನಮ್ಮ ಅಭ್ಯಂತರವಿದೆ ಎಂದಿರುವ ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಅಧಿಕಾರಿಗಳು, ದೇಸಿ ಹುಲ್ಲು ಮರೆಯಾಗದಂತೆ ನೋಡಿಕೊಳ್ಳಲೇಬೇಕು ಎಂದಿದ್ದಾರೆ.

ಬೆರ್ ಮತ್ತು ಖೇಜ್ರಿ ಜಾತಿಯ ಮರಗಳು ಮರುಭೂಮಿಯ ಜೊತೆಗೇ ವಿಕಾಸಗೊಂಡಿವೆ. ಮಳೆ ಎಷ್ಟೇ ಕಡಿಮೆ ಬಂದರೂ ಇವು ಬದುಕುತ್ತವೆ. ಆದರೆ ಈಗ ನೆಡಲಾಗುತ್ತಿರುವ ಮಧ್ಯ ಅಮೆರಿಕದ ಪ್ರೊಸೊಪಿಸ್ ಜುಲಿಫ್ಲೋರ ಮತ್ತು ದಕ್ಷಿಣ ಆಫ್ರಿಕಾದ ಅಕೇಸಿಯ ಟಾರ್ಟಿಲಿಸ್‍ಗಳು ದೇಸಿ ಮರಗಳ ಸಂತತಿಗೆ ಕಂಟಕವಾಗುತ್ತವೆ ಎಂದಿರುವ ಟ್ರಸ್ಟ್‌ನ ಅಭಿವಾನಕ್, ಇವು ನೆಲದ ಸಾರಜನಕ ಹೆಚ್ಚು ಮಾಡುವುದರಿಂದ, ಕಡಿಮೆ ಸಾರಜನಕ ಬೇಡುವ ದೇಸಿ ಹುಲ್ಲಿನ ತಳಿಗಳು ನಾಶವಾಗುತ್ತವೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ನಮ್ಮ ನೆಲಕ್ಕೆ ಹೊರತಾದ ಮರಗಳು ಹೆಚ್ಚಾದಂತೆಲ್ಲ ಹಸಿರು ದಟ್ಟಗೊಂಡು ಬಯಲು ಕುರುಚಲು ಕಾಡು ಮತ್ತು ಹುಲ್ಲುಗಾವಲನ್ನೇ ಆಶ್ರಯಿಸಿ ಬದುಕುವ ಕೃಷ್ಣಮೃಗ, ಗ್ರೇಟ್ ಇಂಡಿಯನ್ ಬಸ್ಟರ್ಡ್, ಚಿಂಕಾರ, ನೀಲಗಾಯ್, ಮೂಳೆಬಾಲದ ಹಲ್ಲಿಗಳು ಕ್ರಮೇಣ ನಾಶವಾಗುತ್ತವೆ ಇಲ್ಲವೇ ಅಲ್ಲಿಂದ ವಲಸೆ ಹೋಗುತ್ತವೆ. ಇದು ಜೈವಿಕ ಸಂಕುಲದ ಅಸಮತೋಲನದ ಹೆಗ್ಗುರುತು ಎಂಬುದು ತಜ್ಞರ ವಾದ.

ಮರುಭೂಮಿಯ ಹಸಿರೀಕರಣ ಇದೇ ಮೊದಲೇನಲ್ಲ. ಬ್ರಿಟಿಷ್ ಆಡಳಿತದಲ್ಲಿ ಟಿಂಬರ್‌ಗೆ ಭಾರಿ ಬೇಡಿಕೆ ಇದ್ದುದರಿಂದ ಮರುಭೂಮಿ, ಮೈದಾನ, ಹುಲ್ಲುಗಾವಲೆನ್ನದೆ ಸಿಕ್ಕ ಜಾಗದಲ್ಲೆಲ್ಲ ಮರ ಬೆಳೆಸಲಾಗುತ್ತಿತ್ತು. ಮರುಭೂಮಿಗಳಲ್ಲಿ ಮರ ಬೆಳೆಸುವುದರಿಂದ ಮಣ್ಣಿನ ತೇವಾಂಶ ಶೇಖರಣೆಗೊಳ್ಳುತ್ತದೆ. ಇದು ಅನ್ಯದೇಸಿ ಗಿಡ-ಮರಗಳಿಗೆ ವರವಾಗಿ ಅವು ಬೃಹತ್ ಸಂಖ್ಯೆಯಲ್ಲಿ ಬೆಳೆದು ಇಲ್ಲಿನ ಮೂಲ ಸಸ್ಯಸಂಕುಲ ನಾಶವಾಗುತ್ತದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳೂ ನೀರಾವರಿ, ಬೇಸಾಯ ಮತ್ತು ನೆಡುತೋಪುಗಳಿಗೆ ಪ್ರೋತ್ಸಾಹ ನೀಡುತ್ತಲೇ ಬಂದಿವೆ. 1980ರಲ್ಲಿ ಇಂದಿರಾ ಗಾಂಧಿ ಕಾಲುವೆ ನಿರ್ಮಾಣಗೊಂಡ ನಂತರ ಥಾರ್ ಮರುಭೂಮಿಯಲ್ಲಿ ಬೃಹತ್ ಪ್ರಮಾಣದ ವ್ಯವಸಾಯ ಚಟುವಟಿಕೆ ಪ್ರಾರಂಭವಾಯಿತು. ಆಗ ನೀರು ಹರಿದ ಜಾಗದಲ್ಲೆಲ್ಲಾ ಈ ಹೊರ ಹರಿವು ಇಲ್ಲದ್ದರಿಂದ ಭೂಮಿಯ ಲವಣಾಂಶ ಹೆಚ್ಚಾಗಿ ಲಕ್ಷಾಂತರ ಹೆಕ್ಟೇರ್ ಜಮೀನು ಬೀಳು ಬಿದ್ದಿದೆ.

ಮರುಭೂಮಿ ಎಂದಾಕ್ಷಣ ಅದೊಂದು ಅನುಪಯುಕ್ತ ಪ್ರದೇಶ ಎಂಬ ಪುರಾತನ ನಂಬಿಕೆಯಿಂದ ಹೊರಬರಬೇಕು ಮತ್ತು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ರೀತಿಯ ಹಸಿರು ಹುಟ್ಟಿಸುವ ಮುನ್ನ ಸ್ಥಳೀಯ ಪರಿಸರ ವೈವಿಧ್ಯ ಮತ್ತು ಅದನ್ನು ಅವಲಂಬಿಸಿ ಬದುಕುವ ಜೀವಿಗಳು ಅಂಥದ್ದೊಂದು ಹೊಸ ವಾತಾವರಣಕ್ಕೆ ಹೊಂದಿ ಕೊಳ್ಳುತ್ತವೆಯೇ ಎಂದು ಪ್ರಾಯೋಗಿಕ ಪರಿಶೀಲನೆ ನಡೆಸಿ ನಂತರ ಯೋಜನೆಯನ್ನು ಅನುಷ್ಠಾನ ಗೊಳಿಸಬೇಕು ಎಂದಿರುವ ತಜ್ಞರು, ಹಸಿರು ಕಂಡಲ್ಲೆಲ್ಲ ನುಗ್ಗುವ ಮಿಡತೆಗಳು ಮರುಭೂಮಿಯ ಹಸಿರುರಾಶಿ ಯನ್ನು ತಂಗುದಾಣವನ್ನಾಗಿ ಮಾಡಿಕೊಳ್ಳುತ್ತವೆ, ಪ್ರತೀ ವರ್ಷದ ಮಿಡತೆ ದಾಳಿಗೂ ಇದು ಕಾರಣವಾಗುತ್ತಿದೆ ಎಂದಿದ್ದಾರೆ. ಮರುಭೂಮಿ ಇರುವುದೇ ಹಾಗೆ, ಅದನ್ನು ಅದರ ಪಾಡಿಗೆ ಬಿಟ್ಟಾಗ ಮಾತ್ರ ಅಲ್ಲಿನ ಜೀವವೈವಿಧ್ಯ ನಿರಾತಂಕವಾಗಿ ವೃದ್ಧಿಸುತ್ತದೆ ಎನ್ನುವ ತಜ್ಞರೂ ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು