ಶನಿವಾರ, ಏಪ್ರಿಲ್ 1, 2023
23 °C
ಪರಸ್ಪರ ವೈಷಮ್ಯ ಮರೆತು ಸಹಿಷ್ಣುತೆ ಸಾಧಿಸಲು ವಚನ ಸಂಸ್ಕೃತಿ ನೆರವಾಗಬಲ್ಲದು

ಸಂಗತ| ಭಾವೈಕ್ಯ ರಾಷ್ಟ್ರೀಯತೆಯ ಅಡಿಪಾಯ

ಪ್ರೊ. ಶಿವಲಿಂಗಸ್ವಾಮಿ ಎಚ್.ಕೆ. Updated:

ಅಕ್ಷರ ಗಾತ್ರ : | |

Prajavani

ಭಾರತದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆಯು ಇಂದು ಒಂದು ರಾಷ್ಟ್ರವ್ಯಾಪಿ ವ್ಯಾಮೋಹ. ಇದರ ಹಿಂದಿರುವ ಕಾರಣಗಳು, ಒಂದು ಹಂತದಲ್ಲಿ ಜನರ ಭಾವನೆಗೆ ಸಂಬಂಧಿಸಿರಬಹುದು. ಮತ್ತೊಂದೆಡೆ, ಬಹುಮಟ್ಟಿಗೆ ರಾಜಕೀಯ ಕಾರಣಗಳಾಗಿರಬಹುದು.

ಈ ಪರಿಕಲ್ಪನೆಯ ವಿಕಸನವನ್ನು ಭಾರತದ ಪ್ರಾರಂಭದ ಹಂತಗಳ ರಾಜಕೀಯ ವ್ಯಾಪ್ತಿಯಲ್ಲಿ ಅವಲೋಕಿಸಿದರೆ, ರಾಜಾರಾಮ ಮೋಹನ್‌ ರಾಯ್, ಬಾಲಗಂಗಾಧರ ತಿಲಕ್ ಮುಂತಾದವರಿಗೆ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಇದೊಂದು ಅನಿವಾರ್ಯ ಕ್ರಮವಾಗಿತ್ತು. ಪರಕೀಯರ ಆಳ್ವಿಕೆಯಲ್ಲಿ ನಲುಗಿದ್ದ ಜನರಲ್ಲಿ ರಾಷ್ಟ್ರದ ಪರಿಕಲ್ಪನೆಯೇ ಇರಲಿಲ್ಲ. ಅವರಲ್ಲಿ ಸ್ವಾತಂತ್ರ್ಯ ಎಂಬ ಪರಿಕಲ್ಪನೆಯನ್ನು ರಾಷ್ಟ್ರ ಎಂಬ ಪರಿಕಲ್ಪನೆಯ ಅಡಿಪಾಯದ ಮೇಲೆ ಹಾಕಿಕೊಟ್ಟು, ಕಡೆಯಲ್ಲಿ ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಕಟ್ಟಬೇಕಿತ್ತು. ಭಾರತವು ಪರಕೀಯರ ವಸಾಹತುವಾಗಲು ಮೂಲಕಾರಣ ನಮ್ಮ ನಮ್ಮಲ್ಲಿರುವ ಒಡಕು ಎಂಬುದು, ಒಂದೇ ಭೂ ವ್ಯಾಪ್ತಿಯಲ್ಲಿ ನೂರಾರು ಭಾಗಗಳಾಗಿದ್ದ ಭಾರತೀಯರಿಗೆ ಮನವರಿಕೆಯಾಗಬೇಕಿತ್ತು. ಈ ದಿಸೆಯಲ್ಲಿ ಜನರಲ್ಲಿ ಏಕತೆಯ ಭಾವವನ್ನು ಅಸ್ತ್ರವನ್ನಾಗಿ ಬೆಳೆಸುವುದು, ಯುರೋಪಿನಲ್ಲಿ ಶಿಕ್ಷಣ ಪಡೆದು ‘ರಾಷ್ಟ್ರ’ ಎಂಬ ಪರಿಕಲ್ಪನೆಯ ಬಗ್ಗೆ ಅರಿವಿದ್ದ ಪ್ರಜ್ಞಾವಂತ ಜನನಾಯಕರ ಪ್ರಮುಖ ಆದ್ಯತೆಯಾಗಿತ್ತು.

ಒಂದು ಜನ ಅಥವಾ ಜನಾಂಗವು ಒಂದು ರಾಷ್ಟ್ರವಾಗಿ ನಿರ್ಮಾಣವಾಗಲು ಪ್ರಜೆಗಳೆಲ್ಲರೂ ಸಮಾನ ಮನಃಸ್ಥಿತಿಯನ್ನು ಹೊಂದಿರಬೇಕಾಗುತ್ತದೆ. ತಾವೆಲ್ಲ ಒಂದು ಎಂಬ ಅತ್ಯಂತ ಜಟಿಲವಾದ ಭಾವನೆಯನ್ನು ತಂದುಕೊಂಡು ದೇಶಭಕ್ತಿಯನ್ನು ಮೆರೆಯಬೇಕಾಗುತ್ತದೆ. ಭಾರತೀಯರಲ್ಲಿ ರಾಜಕೀಯವಾಗಿ ಒಗ್ಗಟ್ಟನ್ನು ಸಾಧಿಸಿ ಅವರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸುವ ಮೂಲಕ ಈ ಕಾರ್ಯವನ್ನು ಸಾಧಿಸಬೇಕು ಎಂದು ಈ ಜನನಾಯಕರು ಅರಿತಿದ್ದರು.

ಯುರೋಪಿನ ಏಕತೆಯ ಪರಿಕಲ್ಪನೆಯನ್ನು ಭಾರತದ ಸಂದರ್ಭದಲ್ಲಿ ನೋಡುವುದಾದರೆ, ರಾಷ್ಟ್ರೀಯತೆಯ ಭಾವನೆಯು ಮೇಲ್ನೋಟಕ್ಕೆ ಜನರಲ್ಲಿ ಏಕತೆಯ ಭಾವನೆಯನ್ನು ಮೂಡಿಸುವ ಉತ್ಕೃಷ್ಟ ಪರಿಕಲ್ಪನೆ ಎಂದು ತೋರುತ್ತದೆ. ಆದರೆ ಈ ಪರಿಕಲ್ಪನೆ ಒಂದು ಸಿದ್ಧಾಂತವಾದರೆ ಜನರನ್ನು ಜನಾಂಗೀಯ, ಭಾಷೀಯ ಮತ್ತು ಭೌಗೋಳಿಕ ಕಾರಣಗಳಿಂದ ಪ್ರತ್ಯೇಕಿಸುವ ಪರಿಕರವಾಗಿಯೂ ರೂಪುಗೊಳ್ಳಬಹುದು ಎಂಬುದು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಿಂಸಾತ್ಮಕವಾಗಿ ಸಾಬೀತಾಗಿದೆ.

ಸಂಕೀರ್ಣವಾದ ಜಾತಿ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ಎಲ್ಲರೂ ಸಮಾನ ಮನಃಸ್ಥಿತಿಯನ್ನು ಹೊಂದಬೇಕು ಎಂಬ ರಾಷ್ಟ್ರೀಯತೆಯ ಕರೆಯು ಸ್ವಾತಂತ್ರ್ಯಪೂರ್ವದ ಸಂದರ್ಭದಲ್ಲಿ ಸೂಕ್ತವಾಗಿತ್ತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನನಾಯಕರಿಗೆ ಬಹುದೊಡ್ಡ ತಲೆನೋವಾಗಿದ್ದು ಭಾರತೀಯರ ಮಧ್ಯೆ ಭುಗಿಲೆದ್ದಿದ್ದ ಕೋಮು ವೈಷಮ್ಯ. ಪರಸ್ಪರ ಸಹಿಷ್ಣುತೆಯನ್ನು ಮೆರೆದು ಸ್ವಾತಂತ್ರ್ಯ ಗಳಿಸಿದ ಭಾರತೀಯರು ಕ್ರಮೇಣ ಅನ್ಯರ ಬಗ್ಗೆ ಅಸಹಿಷ್ಣುತೆಯನ್ನು ತೋರ್ಪಡಿಸತೊಡಗಿದರು.

ಇಂತಹ ಬಿಕ್ಕಟ್ಟಿನಲ್ಲಿ ಮತ್ತು ಪ್ರಜಾಸತ್ತಾತ್ಮಕ ಸಂದರ್ಭಗಳಲ್ಲಿ ಪರಸ್ಪರ ಸಹಿಷ್ಣುತೆಯನ್ನು ಬಲವಂತವಾಗಿ ತರುವ ಪ್ರಯತ್ನಗಳಾದರೆ ದುರಂತಗಳೇ ಸಂಭವಿಸಬಹುದು. ಹೀಗಿರುವಾಗ, ಜನರಿಗೆ ರಾಜಕೀಯ ಏಕತೆಗಿಂತ ಭಾವೈಕ್ಯ ಅವಶ್ಯಕ ಎಂಬುದನ್ನು ನಾವು ಮನಗಾಣಬೇಕಿದೆ.

ಭಾರತೀಯರಲ್ಲಿ ಸಾಮುದಾಯಿಕ ಪ್ರಜ್ಞೆಯನ್ನು ಕರ್ನಾಟಕದಲ್ಲಿ 12ನೇ ಶತಮಾನದಲ್ಲಿಯೇ ವಚನ ಸಂಸ್ಕೃತಿಯು ಹುಟ್ಟುಹಾಕಿತ್ತು. ಒಂದು ದೃಷ್ಟಿಯಲ್ಲಿ ಭಾರತದಲ್ಲಿ ರಾಷ್ಟ್ರೀಯ ಪ್ರಜ್ಞೆಗಿಂತ ಸಾಮುದಾಯಿಕ ಪ್ರಜ್ಞೆಯು ಬಹಳ ಪ್ರಮುಖವಾದ ಏಕೀಕರಣದ ಅಸ್ತ್ರ ಎಂದರೆ ತಪ್ಪಾಗಲಾರದು. ಸಮಾಜದಲ್ಲಿನ ಎಲ್ಲ ಭೇದಗಳನ್ನೂ ತೊಡೆದುಹಾಕಬೇಕೆಂಬ ಸದುದ್ದೇಶವನ್ನು ಈ ಚಳವಳಿಯು ಹೊಂದಿತ್ತು.

ಅಕ್ಷರ ಮತ್ತು ಅನ್ನ ದಾಸೋಹ ಎಂದರೆ ಭಿನ್ನ ಭಿನ್ನ ಸಾಮಾಜಿಕ ಅನುಭವಗಳನ್ನು ಒಂದು ಕಡೆ ನೇವರಿಸುವಂತಹ ಒಂದು ಪ್ರಕ್ರಿಯೆ. ಕಾಯಕದ ಪರಿಕಲ್ಪನೆಗೂ ಇಲ್ಲಿ ಹೆಚ್ಚಿನ ಮಹತ್ವ ಬಂತು. ವಚನಕಾರರ ಕಾಲದಲ್ಲಿ ಭಾವೈಕ್ಯತೆಗೆ ನಾಂದಿ ಹಾಡಲು ಇವೆಲ್ಲವೂ ಗಮನಾರ್ಹವಾದ ಕೊಡುಗೆ ಕೊಟ್ಟವು. ಆದರೆ ಸಮಕಾಲೀನ ಪರಿಸ್ಥಿತಿಯಲ್ಲಿ ಭಾರತದ ರಾಷ್ಟ್ರೀಯತೆಯಲ್ಲಿ ಉತ್ಕಟವಾದ ಧಾರ್ಮಿಕ ಭಾವನೆಗಳು ಬೆರೆತುಹೋಗಿವೆ. ರಾಷ್ಟ್ರ ಎಂಬ ಪರಿಕಲ್ಪನೆಯು ಭೂವ್ಯಾಪ್ತಿಯನ್ನು ಮೀರಿ, ಜನರ ಭಾವವನ್ನೂ ಮೀರಿ ಕೇವಲ ಧರ್ಮವನ್ನು ಆಲಿಂಗಿಸಿದೆ. ಈ ಹಿನ್ನೆಲೆಯಲ್ಲಿ ವಚನಕಾರರು ಸೃಜಿಸಿದ ದಾಸೋಹದ ಪರಿಕಲ್ಪನೆ ಯಲ್ಲಿ ಅಡಕವಾಗಿದ್ದ ಭಾವೈಕ್ಯವನ್ನು ಇಂದಿನ ಭಾರತದಲ್ಲಿ ರಾಷ್ಟ್ರೀಯತೆಯನ್ನು ಹುಟ್ಟುಹಾಕಲು ಅಡಿಪಾಯವಾಗಿ ಬಳಸಿಕೊಂಡರೆ, ಧರ್ಮ ಮತ್ತು ಜಾತಿಯ ಕಾರಣದಿಂದ ಉಲ್ಬಣಿಸಿರುವ ಪರಸ್ಪರ ವೈಷಮ್ಯ ಮರೆಯಾಗಿ ಸಹಿಷ್ಣುತೆ ಸಾಧ್ಯವಾಗುತ್ತದೆ.

ಧರ್ಮವನ್ನು ಆಲಿಂಗಿಸಿದ ರಾಷ್ಟ್ರೀಯತೆಯು ಬಲವಂತದ ಏಕತೆಯನ್ನು ಹುಟ್ಟುಹಾಕಲು ಯತ್ನಿಸುತ್ತದೆ. ಭಾವೈಕ್ಯತೆಗಿಂತ ಏಕರೂಪತೆ ಆದ್ಯತೆಯಾಗಿ, ಈ ಗೀಳು ಕಡೆಗೆ ಆಹಾರ, ಶಿಕ್ಷಣ, ಪಠ್ಯಕ್ರಮ ಮುಂತಾದವನ್ನೂ ಆಕ್ರಮಿಸುತ್ತದೆ.

ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎಂಬ ಪರಿವರ್ತನೆಯ ಪ್ರಯತ್ನದ ಬದಲು ಬಸವಣ್ಣನವರ ಆಶಯದಂತೆ ‘ನೀಡುವ’ ಗುಣ ಬೆಳೆಸಿಕೊಂಡರೆ ಅನ್ಯ ಧರ್ಮಗಳಿಗೆ, ಅನ್ಯ ಭಾಷೆಗಳಿಗೆ ಸ್ಥಾನ ನೀಡುವ ಭಾವ ಬೆಳೆಯಬಹುದು. ಹಾಗೆಯೇ ವೈವಿಧ್ಯತೆಯ ಮೂಲಕ ಭಾವೈಕ್ಯ ತಂದುಕೊಳ್ಳಬಹುದು ಮತ್ತು ಯುರೋಪಿನ ಮಾರ್ಗವನ್ನು ತೊಡೆದು ಹಾಕಬಹುದು.

ಲೇಖಕ: ಪ್ರಾಧ್ಯಾಪಕ, ತುಮಕೂರು ವಿಶ್ವವಿದ್ಯಾಲಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು