ಸೋಮವಾರ, ಅಕ್ಟೋಬರ್ 18, 2021
23 °C
ಆರೋಗ್ಯ ಸಂಸ್ಕೃತಿ ವಕ್ತಾರರ ಸೇವಾಬಾಹುಳ್ಯ ಹಿಮ್ಮೆಟ್ಟಿಸುವ ಕೆಲಸಕ್ಕೆ ಸರ್ಕಾರ ಕೈಹಾಕಿದೆ

ಗ್ರಾಮೀಣ ಜನಾರೋಗ್ಯಕ್ಕೆ ಬಾಧಕವಾಗದಿರಲಿ

ಮಲ್ಲಿಕಾರ್ಜುನ ಕಡಕೋಳ Updated:

ಅಕ್ಷರ ಗಾತ್ರ : | |

Prajavani

ಆರೋಗ್ಯ ಉಪಕೇಂದ್ರಗಳನ್ನು ಉನ್ನತೀಕರಿಸಲು ರಾಜ್ಯ ಸರ್ಕಾರ ಇತ್ತೀಚೆಗೆ ನಿರ್ಧರಿಸಿದೆ. ಅದಕ್ಕಾಗಿ
₹ 478.91 ಕೋಟಿ ಮೀಸಲಿಟ್ಟಿದೆ. ಉನ್ನತೀಕರಿಸುವ ಪ್ರಯತ್ನ ಒಳ್ಳೆಯದೆ. ಆದರೆ, ಆರೋಗ್ಯ ಉಪಕೇಂದ್ರ ಗಳಿಗೆ ಗುತ್ತಿಗೆ ಆಧಾರಿತ ಸೇವೆಯನ್ನು ಹೇರುವ ಒಳ ಹುನ್ನಾರ ಇದರ ಹಿಂದೆ ಇದೆ. ಕಡಿಮೆ ಪಗಾರಕ್ಕೆ
ಅನನುಭವಿ ನರ್ಸ್‌ಗಳನ್ನು ನೇಮಿಸುವ ಮೂಲಕ ಅವರ ಕೈಗೆ ಗ್ರಾಮೀಣ ಜನಾರೋಗ್ಯ ಒಪ್ಪಿಸುವ ಅನಾರೋಗ್ಯಕರ ಬೆಳವಣಿಗೆಯಿದು.

ಹಳ್ಳಿಗಳ ಸರ್ಕಾರಿ ಆರೋಗ್ಯ ಉಪಕೇಂದ್ರಗಳಿಗೆ ಗ್ರಾಮ್ಯಜನ್ಯ ಸ್ವಾಸ್ಥ್ಯ ಪರಂಪರೆ ಇದೆ. ಅದೊಂದು ಆರೋಗ್ಯ ಸಂಸ್ಕೃತಿಯಾಗಿ ತಾಯ್ತನದ ಪ್ರೀತಿಯಂತೆ ಬೆಳೆದುಬಂದಿದೆ. ಉಪಕೇಂದ್ರಗಳು ಸ್ಥಾಪನೆಗೊಂಡ ಕಾಲದಿಂದಲೂ ಅಲ್ಲಿನ ನಿವಾಸಿಗಳಾದ ಮಹಿಳಾ ಆರೋಗ್ಯ ಸಹಾಯಕಿಯರು (ಎಎನ್‌ಎಂ) ಸಮು ದಾಯ ಆರೋಗ್ಯದ ಅವಿಚ್ಛಿನ್ನ ಭಾಗವಾಗಿದ್ದಾರೆ.

ಸರ್ಕಾರಿ ನೌಕರರಾದ ಅವರು ಎಎನ್‌ಎಂ (ಆಕ್ಸಿಲ್ಯರಿ ನರ್ಸ್‌ ಮಿಡ್‌ವೈಫ್‌), ಎಲ್‌ಎಚ್‌ವಿ (ಲೇಡಿ ಹೆಲ್ತ್‌ ವಿಸಿಟರ್‌), ಸಿಪಿಎಚ್‌ಎನ್‌ (ಸರ್ಟಿಫಿಕೇಟ್‌ ಆಫ್‌ ಪಬ್ಲಿಕ್‌ ಹೆಲ್ತ್‌ ನರ್ಸಿಂಗ್‌) ಹೀಗೆ ಜನಾರೋಗ್ಯ ಸೇವೆಗೆ ಅಗತ್ಯವೆನಿಸಿದ ಮೂರು ಮಹತ್ವದ ನಾಲ್ಕು ವರ್ಷಗಳ ತರಬೇತಿ ಪಡೆದವರು. ಕೇಂದ್ರ ಸರ್ಕಾರ ಧೇನಿಸಿರುವ ನಾಲ್ಕು ಗೋಡೆಗಳ ನಡುವಿನ ಆಸ್ಪತ್ರೆಯ ನರ್ಸ್‌ಗಳ ಸೇವೆಯು ಗ್ರಾಮ ಸಮುದಾಯಕ್ಕೆ ಒಪ್ಪುವಂತಹುದಲ್ಲ.

ಭಾರತೀಯ ಸಾರ್ವಜನಿಕ ಆರೋಗ್ಯ ಗುಣಮಟ್ಟ (ಐಪಿಎಚ್‌ಎಸ್‌) ಗುಣಾತ್ಮಕ ನೀತಿಗನುಗುಣ
ವಾಗಿ ಆರೋಗ್ಯ ಕೇಂದ್ರ, ಉಪಕೇಂದ್ರಗಳು ಸಂರಚನೆ ಗೊಂಡಿವೆ. ಐದು ಸಾವಿರ ಜನಸಂಖ್ಯೆ ಹೊಂದಿರುವ ಪ್ರತಿಯೊಂದು ಉಪಕೇಂದ್ರದಲ್ಲಿ ಒಬ್ಬ ಮಹಿಳಾ, ಒಬ್ಬ ಪುರುಷ ಆರೋಗ್ಯ ಸಹಾಯಕ ಮಂಜೂರಾತಿ ಹುದ್ದೆಗಳಿರುತ್ತವೆ. ಮೂವತ್ತು ಸಾವಿರ ಜನಸಂಖ್ಯೆಗೊಂದು ಪ್ರಾಥಮಿಕ ಆರೋಗ್ಯ ಕೇಂದ್ರ. ರಾಜಕೀಯ ಪ್ರಭಾವದಿಂದ ಕೆಲವು ಕಡೆ ಏರುಪೇರು.

ಐಪಿಎಚ್‌ಎಸ್‌ ಪ್ರಕಾರ, ಕರ್ನಾಟಕದ ಜನಸಂಖ್ಯೆಗೆ ಅನುಗುಣವಾಗಿ ಇಪ್ಪತ್ತು ಸಾವಿರ ಉಪಕೇಂದ್ರಗಳು, ನಲವತ್ತು ಸಾವಿರ ಆರೋಗ್ಯ ಸಹಾಯಕರ ಹುದ್ದೆಗಳಿರಬೇಕು. ಪ್ರಸ್ತುತ ಹತ್ತು ಸಾವಿರ ಮಹಿಳೆಯರು, ನಾಲ್ಕು ಸಾವಿರ ಪುರುಷ ಆರೋಗ್ಯ ಸಹಾಯಕರು, ಅಂದರೆ ಕಾಲುಭಾಗದಷ್ಟು ಸಿಬ್ಬಂದಿ ಮೂಲಕ ಸರ್ಕಾರ ನಲವತ್ತಾರು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ನಿರುಕಿಸುತ್ತಿದೆ.

ಶತಮಾನಕ್ಕಿಂತಲೂ ಹಿರಿದಾದ ಗ್ರಾಮೀಣ ಆರೋಗ್ಯ ಸಹಾಯಕರ ಸೇವಾಬಾಹುಳ್ಯ ಹಿಮ್ಮೆಟ್ಟಿಸುವ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ. ಎಂಎಲ್‌ಎಚ್‌ಪಿ (ಮಿಡ್ಲ್‌ ಲೆವೆಲ್‌ ಹೆಲ್ತ್‌ ಪ್ರೊವೈಡರ್‌) ಹೆಸರಿನಡಿ ಗುತ್ತಿಗೆ ಆಧಾರದಡಿ ನೇಮಿಸಿಕೊಂಡ ನರ್ಸ್‌ಗಳನ್ನು ಹತ್ತು ಜಿಲ್ಲೆಗಳ ಆರೋಗ್ಯ ಉಪಕೇಂದ್ರಗಳಿಗೆ ನೇಮಿಸಲಾಗಿದೆ. ಕೇಂದ್ರ ಸರ್ಕಾರದ ಈ ಪ್ರಾಯೋಗಿಕ ಯೋಜನೆ ಫಲಕಾರಿಯಾಗಿಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಯೋಜನೆಯನ್ನು ‌ರಾಜ್ಯದಾದ್ಯಂತ ವಿಸ್ತರಿಸುವ ಉಮೇದು. ಅಷ್ಟಕ್ಕೂ ಆರೋಗ್ಯ ಸಹಾಯಕರು ಇದುವರೆಗೆ ಮಾಡದಿರುವ ಹೆಚ್ಚಿನ ಸೇವೆಗಳು ಪ್ರಸ್ತುತ ಯೋಜನೆಯಲ್ಲಿಲ್ಲ. ಅದಕ್ಕೆ ಬದಲು ಆರೋಗ್ಯ ಸಹಾಯಕರ ಹುದ್ದೆ ಸಮೇತ ಉಪಕೇಂದ್ರ
ಗಳನ್ನು ಅಭಿವೃದ್ಧಿಪಡಿಸಲಿ.

ಎಂಬಿಬಿಎಸ್‌ ಪದವೀಧರರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೊಸದಾಗಿ ನೇಮಕಗೊಂಡಾಗ ಅಲ್ಲಿನ ಅನುಭವಿ ಹಿರಿಯ ಆರೋಗ್ಯ ಸಹಾಯಕರ ಸಹಕಾರ, ಸಲಹೆ, ನೆರವು, ಮಾರ್ಗದರ್ಶನ ಪಡೆಯುತ್ತಾರೆ. ಆರೋಗ್ಯ ಸಹಾಯಕರೊಂದಿಗೆ ಉಪಕೇಂದ್ರಗಳಲ್ಲಿ ವಾರದ ಕ್ಲಿನಿಕ್ ನಡೆಸುವ ಮೂಲಕ ಜನಾರೋಗ್ಯ ಸೇವೆಗಳ ಸಂದಾಯ.

ಸಿಡುಬು, ಕುಷ್ಠರೋಗ, ನಾರುಹುಣ್ಣು, ಪೋಲಿಯೊದಂತಹ ಮಾರಕರೋಗಗಳ ನಿರ್ಮೂಲನೆ ಮಾಡಿದ ಶ್ರೇಯಸ್ಸು ಆರೋಗ್ಯ ಸಹಾಯಕರಿಗೆ ಸಲ್ಲು ತ್ತದೆ. ಮಲೇರಿಯಾ, ಫೈಲೇರಿಯಾ, ಕಾಲರಾ, ಏಡ್ಸ್, ಕ್ಯಾನ್ಸರ್ ಮುಂತಾದ ನಲವತ್ತಾರು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ನಿರ್ವಹಣೆ. ವರ್ತಮಾನದ ಕೋವಿಡ್ ಸೇನಾನಿಗಳಾಗಿ ಅಹರ್ನಿಶಿ ದುಡಿಯುತ್ತಿ ರುವ ಕೆಲವರು ಕೊರೊನಾಕ್ಕೆ ಬಲಿಯಾಗಿದ್ದಾರೆ, ಹಲ್ಲೆಗೀಡಾಗಿದ್ದಾರೆ. ದಿನವೊಂದಕ್ಕೆ ಆರೋಗ್ಯ ಸಹಾಯಕಿಯೊಬ್ಬಳು ಮುನ್ನೂರು, ನಾನೂರು ಜನರಿಗೆ ಕೋವಿಡ್ ಲಸಿಕೆ ನೀಡುವ ಮೂಲಕ ಮೂರನೇ ಅಲೆಯನ್ನು ಹತ್ತಿಕ್ಕಲು ನೆರವಾಗುತ್ತಿದ್ದಾಳೆ. ಅಚ್ಚರಿಯೆಂದರೆ ಮಾಧ್ಯಮಗಳು, ಮಂತ್ರಿ ಮಹೋದಯರ ಕಣ್ಣಿಗೆ ಡಾಕ್ಟರ್, ನರ್ಸ್‌ಗಳು ಮಾತ್ರ ಕಾಣಿಸುವುದು.

ಅಪ್ಪಟ ಸೇವಾ ವಲಯದ ಆರೋಗ್ಯ ಇಲಾಖೆಯ ಕಾರ್ಯನಿರ್ವಾಹಕ ನೌಕರರಿಗೆ ಸರ್ಕಾರವು ಅಧಿಕಾರಿ ಎಂಬ ಪದನಾಮ ಬದಲಾವಣೆಗಳ ಅಮಲೇರಿಸಿದೆ. ಇಲಾಖೆಯಲ್ಲಿ ‘ಡಿ’ ದರ್ಜೆಯ ನೌಕರರನ್ನು ಹೊರತು ಪಡಿಸಿ ಎಲ್ಲರಿಗೂ ಅಧಿಕಾರಿ ಎಂಬ, ನಯಾಪೈಸೆಯ ಅಧಿಕಾರವಿಲ್ಲದ ಪಟ್ಟಕಟ್ಟಿ ಕೂಡಿಸಿದೆ. ಉಪಕೇಂದ್ರ ಗಳೆಂಬ ಆರೋಗ್ಯ ರಥದ ಎರಡು ಚಕ್ರಗಳಂತಿದ್ದ ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರ ಪದನಾಮ ಬದಲಿಸಿ ಒಡಕು ಹುಟ್ಟಿಸಿದೆ.‌ ತನ್ಮೂಲಕ ಗ್ರಾಮ ಸಮುದಾಯದ ಜನಾರೋಗ್ಯದ ಮೇಲೆ ದುಷ್ಪರಿಣಾಮ.

ಹಳ್ಳಿಗಳಿಗೆ ವೈದ್ಯರನ್ನು ಕರೆತರಲು ಸರ್ಕಾರ ಕೋಟ್ಯಂತರ ರೂಪಾಯಿ ಸುರಿಯುವ ಹರಸಾಹಸ ಮಾಡಿ ವಿಫಲಗೊಂಡಿದೆ. ಆರೋಗ್ಯ ಕೇಂದ್ರಗಳ ಅಗತ್ಯಗಳಿಗೆ ಎಂಬಿಬಿಎಸ್‌ ವೈದ್ಯರ ಅಗತ್ಯವಿಲ್ಲ. ಸೇವಾ ನಿರತ ಆರೋಗ್ಯ ಸಹಾಯಕರ ವಿಜ್ಞಾನ ವಿಷಯ ಹಾಗೂ ಇತರ ಅರ್ಹತೆಗಳ ಆದ್ಯತೆ ಮೇರೆಗೆ ಮೂರು ವರ್ಷಗಳ ನಿಗದಿತ ಕಂಡೆನ್ಸ್ಡ್‌ ಕೋರ್ಸ್ ಎಂಬಿಬಿಎಸ್‌ ಪದವಿ ತರಬೇತಿ ಸಾಕು. ಅಂಥವರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರಾಗ ಸೇವೆ ದೊರಕಬಲ್ಲದು. ತನ್ಮೂಲಕ ಸುಸ್ಥಿರ ಗ್ರಾಮೀಣ ಆರೋಗ್ಯ ಸೇವೆಗಳ ಭಾಗ್ಯ. ತಾಲ್ಲೂಕು ಕೇಂದ್ರಗಳ ಆಸ್ಪತ್ರೆಗಳಿಗೆ ತಜ್ಞವೈದ್ಯರ ಸೇವೆ ಕರಾರು
ವಾಕ್ಕಾಗಿರಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು