ದಲಿತ ಯುವಕನನ್ನು ಮದುವೆಯಾಗಿ ಗರ್ಭಿಣಿಯಾಗಿದ್ದ ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದ ಯುವತಿ ಮಾನ್ಯಳನ್ನು ಸ್ವಂತ ತಂದೆಯೇ ಕೊಚ್ಚಿ ಕೊಲೆ ಮಾಡಿರುವ ಕ್ರೌರ್ಯ ಎದೆ ನಡುಗಿಸುವಂತಹದ್ದು. ಜಾತಿವೈಷಮ್ಯದ ಕರಾಳತೆ ಮಾತ್ರವಲ್ಲ, ಹೆಣ್ಣನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಬಯಸುವ ಪಿತೃಸಂಸ್ಕೃತಿಯ ಅಟ್ಟಹಾಸದ ನಡೆ ಇದು. ಪಿತೃಪ್ರಾಧಾನ್ಯದ ಮೌಲ್ಯಗಳನ್ನು ಧಿಕ್ಕರಿಸಿ ಸ್ವಂತ ಆಯ್ಕೆ ಪ್ರತಿಪಾದಿಸುವ ಹೆಣ್ಣನ್ನು ಘೋರವಾಗಿ ಶಿಕ್ಷಿಸುವ ಪೈಶಾಚಿಕ ಕೃತ್ಯ ಇದಾಗಿದೆ. ಕುಟುಂಬದ ‘ಮರ್ಯಾದೆ’ (?) ಕಾಪಾಡಿದಂತಹ ಶೌರ್ಯ ಪ್ರದರ್ಶನದಲ್ಲಿ ಪಶ್ಚಾತ್ತಾಪವನ್ನೂ ಈ ಹೀನ ಕೃತ್ಯ ಎಸಗಿದವರು ಪ್ರದರ್ಶಿಸಿಲ್ಲ ಎಂದು ಹೇಳಲಾದ ವರದಿಗಳು, ಗಂಡಾಳ್ವಿಕೆಯ ಶೌರ್ಯವೆಂಬ ಅಟ್ಟಹಾಸದ ದ್ಯೋತಕ.

ಆದರೆ ಕುಟುಂಬದ ಮಾನ, ಮರ್ಯಾದೆ ಉಳಿಸುವುದಕ್ಕಾಗಿ ನಡೆಸಿದ ಶೌರ್ಯದ ಕೃತ್ಯ ಎಂಬಂತೆ ಬಿಂಬಿಸುವ ಇಂತಹ ನಡೆಯಲ್ಲಿ ಲಿಂಗಾಧಾರಿತ ತಾರತಮ್ಯದ ಮನೋಭಾವಗಳು ಹಾಗೂ ಲಿಂಗಾಧಾರಿತ ಹಿಂಸಾಚಾರದ ಕೃತ್ಯಗಳು ಮಸುಕಾಗುತ್ತವೆ ಎಂಬುದನ್ನು ನೆನಪಿಡಬೇಕು. ಮಾನ್ಯಳ ಪಾಲಕರಿಗೆ ಪೊಲೀಸರು ಈ ಹಿಂದೆಯೇ ನೀಡಿದ್ದಂತಹ ಎಚ್ಚರಿಕೆಗಳ ಅವಗಣನೆ ಹಾಗೂ ಕೊಲೆಯಾದ ಗರ್ಭಿಣಿ ಹೆಣ್ಣುಮಗಳ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಊರವರ ತಟಸ್ಥ ಮನೋಭಾವಗಳನ್ನು ಈ ಚೌಕಟ್ಟಿನಲ್ಲಿ ನೋಡಬೇಕು.

ಮನುಷ್ಯ ಬದುಕಿನ ಅತ್ಯುನ್ನತ ಜೀವನಮೌಲ್ಯವಾದ ‘ಮರ್ಯಾದೆ’, ‘ಗೌರವ’ ಎಂಬಂಥ ದೊಡ್ಡ ಪದಪುಂಜಗಳ ಅಲಂಕಾರದಲ್ಲಿ, ಹೆಣ್ಣಿನ ಸ್ವತಂತ್ರ ನಿರ್ಧಾರಗಳ ವಿರುದ್ಧ ನಡೆಸುವಂತಹ ಅತ್ಯಂತ ಹೀನಾಯವಾದ ಹಿಂಸೆಯೂ ಇಲ್ಲಿ ತೀವ್ರತೆ ಕಳೆದುಕೊಂಡು ಮಂಕಾಗಿಬಿಡುತ್ತದೆ ಎಂಬುದು ಆತಂಕದ ಸಂಗತಿ. ಮನೆಯ ಮರ್ಯಾದೆ ಉಳಿಸಲು ನಡೆಸಿದ ಹತ್ಯೆ ಇದು ಎಂಬ ಭಾವನೆ ಜನಸಾಮಾನ್ಯರ ಮನಗಳಲ್ಲಿ ಎಂದೆಂದಿಗೂ ಬರಬಾರದು. ‘ಕುಟುಂಬ ಮರ್ಯಾದೆ’ ಎಂಬಂಥ ಭ್ರಮಾತ್ಮಕತೆಯಲ್ಲಿ ನಡೆಸಲಾದ ‘ನಾಚಿಕೆಗೇಡಿನ ಕೃತ್ಯ’ ಇದು. ಜೀವ ತೆಗೆಯುವ ಈ ದುಷ್ಕೃತ್ಯ ಮಾನವಧರ್ಮಕ್ಕೆ ಅಪಚಾರ. ಇಂತಹ ದುಷ್ಕೃತ್ಯ ಎಸಗುವ ಕೊಲೆಗಡುಕತನ ಸಮಾಜದ ಸ್ವಾಸ್ಥ್ಯ ಕದಡುವ ಹೀನ ಅಪರಾಧ ಎಂಬ ಭಾವನೆಯನ್ನು ಸಮಾಜದಲ್ಲಿ ಬಲಗೊಳಿಸುವುದು ಇಂದಿನ ತುರ್ತು. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಕಟ್ಟಿದ್ದ, ಕಟ್ಟಬಯಸಿದ್ದ ಸಮಾಜದ ಕುರಿತಾದ ಅರಿವು, ಇಂದಿನ ನಮ್ಮ ಆಧುನಿಕ, ಸಮಕಾಲೀನ ಸಮಾಜದಲ್ಲಿ ಸಂವೇದನೆಯಾಗಿ ಮೂಡಿಸುವುದು ಹೇಗೆ ಎಂಬ ಪ್ರಶ್ನೆಯನ್ನೂ ಸಮಾಜ ಕೇಳಿಕೊಳ್ಳುವಂತಹ ಸ್ಥಿತಿ ಇಂದಿನದಾಗಿದೆ ಎಂಬುದು ನಮ್ಮ ನೆನಪಿನಲ್ಲಿರಬೇಕು.

ಈ ‘ಮರ್ಯಾದೆಗೇಡು ಹತ್ಯೆ’ಯನ್ನು ಈಗಲೂ ಇಂಗ್ಲಿಷ್ನಲ್ಲಿ ‘ಆನರ್ ಕಿಲ್ಲಿಂಗ್’ ಹಾಗೂ ಕನ್ನಡದಲ್ಲಿ ‘ಮರ್ಯಾದೆ ಹತ್ಯೆ’ ಎಂದು ಹೇಳುವುದು ಮುಂದುವರಿದಿದೆ. ‘ಮರ್ಯಾದೆ ಹತ್ಯೆ’ ಎಂದು ಹೇಳಿದ ತಕ್ಷಣ ಅದನ್ನು ಕೊಲೆಗಾರರ ಕಣ್ಣುಗಳ ಮೂಲಕ ಹೆಣ್ಣಿನ ಹತ್ಯೆಯನ್ನು ಪರಿಭಾವಿಸಿದಂತಾಗುತ್ತದೆ. ಮರ್ಯಾದೆ ಎನ್ನುವ ಪದ ಸೇರಿಸುವ ಮೂಲಕ ವಂಶ ಅಥವಾ ಕುಲದ ಮರ್ಯಾದೆ ಅಥವಾ ಗೌರವಕ್ಕಾಗಿ ನಡೆಸಲಾದ ಹತ್ಯೆ ಎಂದೆಲ್ಲಾ ಸಮರ್ಥಿಸಿಕೊಳ್ಳುವವರ ಭಾಷೆಯನ್ನೇ ಬಳಸಿದಂತಾಗುತ್ತದೆ ಎಂಬುದನ್ನು ನಾವು ನೆನಪಿಡಬೇಕು. ಆದರೆ, ಇಂತಹ ಹತ್ಯೆಯಲ್ಲಿ ಯಾವ ಮರ್ಯಾದೆ ಅಥವಾ ಗೌರವ ಇಲ್ಲ. ಕಿಂಚಿತ್ತೂ ಕರುಣೆ ಇಲ್ಲದೆ ಕರುಳಕುಡಿಗಳನ್ನೇ ಕೊಂದಂತಹ, ಮರ್ಯಾದೆಗೇಡಿ ದುಷ್ಕೃತ್ಯ ಎಸಗಿದ ದುರುಳರ ನಡೆ ಇದು ಎಂಬಂತಹ ರೀತಿ ಇಂತಹ ಹತ್ಯೆಗಳು ಬಿಂಬಿತವಾಗುವ ರೀತಿಯಲ್ಲಿ ಸಮಾಜದ ಸಂವೇದನೆ ಹಾಗೂ ರೀತಿನೀತಿಗಳು ಬದಲಾಗಬೇಕಾದುದು ಇಲ್ಲಿ ಮುಖ್ಯ ಎನಿಸುತ್ತದೆ.

ಜಾತಿ ಹಮ್ಮುಗಳ ಜೊತೆಗೆ ಸಂತತಿಯ ಪಾವಿತ್ರ್ಯವನ್ನು ಹೆಣ್ಣಿನ ಮೂಲಕ ಕಾಪಾಡಲು ಹೆಣ್ಣಿನ ಸ್ವತಂತ್ರ ಆಯ್ಕೆಗಳನ್ನು ನಿಯಂತ್ರಿಸುವಂತಹ ಊಳಿಗಮಾನ್ಯ ಗಂಡಾಳ್ವಿಕೆಯ ಮನಃಸ್ಥಿತಿಯನ್ನು ಸಮಾಜದಲ್ಲಿ ಬೇರೂರಿಸಲಾಗಿದೆ ಎಂಬಂಥ ಸಮಾಜಶಾಸ್ತ್ರೀಯ ಪ್ರಜ್ಞೆ ನಮ್ಮ ಸಮಾಜದಲ್ಲಿ ಮೂಡುವವರೆಗೂ ಈ ತಂತ್ರಜ್ಞಾನಾಧಾರಿತ ಅತ್ಯಾಧುನಿಕ ಸಮಾಜದಲ್ಲೂ ಹೆಣ್ಣನ್ನು ‘ಆಳುವ’ ಹಾಗೂ ‘ನಿಯಂತ್ರಿಸುವ’ ಯಜಮಾನಿಕೆಯ ಸಂಸ್ಕೃತಿ ಮುಂದುವರಿಯುತ್ತಲೇ ಇರುತ್ತದೆ.

ಮರ್ಯಾದೆಗೇಡು ಹತ್ಯೆ ನಿಯಂತ್ರಿಸಲು ಪ್ರತ್ಯೇಕ ಕಾನೂನು ರಚನೆ ಅಗತ್ಯವಿದೆ ಎಂಬಂಥ ಪ್ರತಿಪಾದನೆ ಕಳೆದ ದಶಕದಿಂದಲೂ ಕೇಳಿಬರುತ್ತಲೇ ಇದೆ. ‘ಕೊಲೆ’ ಎಂದಷ್ಟೇ ಪರಿಗಣಿಸುವುದರಿಂದ ನಿರ್ದಿಷ್ಟ ನೆಲೆಗಳಲ್ಲಿ ಇಂತಹ ಹತ್ಯೆಗಳನ್ನು ನಿರ್ವಹಿಸುವುದು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಮರ್ಯಾದೆಗೇಡು ಹತ್ಯೆ ನಿರೋಧಕ ಕಾನೂನಿನ ಅಗತ್ಯವನ್ನು ಭಾರತದ ಕಾನೂನು ಆಯೋಗದ 242ನೇ ವರದಿಯು (2012) ಪ್ರತಿಪಾದಿಸಿತ್ತು ಎಂಬುದನ್ನು ನಾವಿಲ್ಲಿ ಸ್ಮರಿಸಬಹುದು. ಇಂತಹ ಹತ್ಯೆಗಳು ‘ಮೂಲಭೂತ ಹಕ್ಕುಗಳ ಉಲ್ಲಂಘನೆ’ ಎಂದು ಹೇಳುತ್ತಾ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಅನೇಕ ಪ್ರಕರಣಗಳಲ್ಲಿ ನಿರ್ದೇಶನ ನೀಡಿತ್ತು. ಆದರೂ, ಇಂತಹ ನಾಚಿಕೆಗೇಡಿನ ಮರ್ಯಾದೆಗೇಡು ಹತ್ಯೆಗಳಿಗೆ ಕೊನೆ ಹಾಡಲಾಗಿಲ್ಲ. ಒಂದು ಕಾಲದಲ್ಲಿ ಪ್ರಗತಿಪರ ರಾಜ್ಯವೆಂದು ಹೆಸರಾಗಿದ್ದ ಕರ್ನಾಟಕದಲ್ಲೂ, ಇತ್ತೀಚಿನ ವರ್ಷಗಳಲ್ಲಿ ಇಂತಹ ಕೃತ್ಯಗಳು ಹೆಚ್ಚುತ್ತಿರುವಂತಹ ಪ್ರಸಕ್ತ ಸಂದರ್ಭದಲ್ಲಿ ನಿರ್ದಿಷ್ಟವಾದ ಬಿಗಿ ಕಾನೂನಿನ ರಚನೆಯೂ ಸದ್ಯದ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.