ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಮನದೊಳಗಿನ ಇಲಿ ಸತ್ತರೆ...

ಅಕ್ಷರ ಗಾತ್ರ

ಕೊರೊನಾ ಎಂಬುದು ಜಾಗತಿಕ ಸಮಸ್ಯೆಯಾಗಿ ಉಲ್ಬಣವಾಗಿರುವ ಈ ಹೊತ್ತಿನಲ್ಲಿ, ಅದರ ಜೊತೆಜೊತೆಗೆ ಸೃಷ್ಟಿಯಾಗುತ್ತಿರುವ ಉಪಸಮಸ್ಯೆಗಳು ಲೆಕ್ಕವಿಲ್ಲದಷ್ಟು. ವಾಸ್ತವವೆಂದರೆ, ಕೊರೊನಾಕ್ಕಿಂತ ಕೊರೊನಾದ ಹೆಸರಿನಲ್ಲಿ ಸೃಷ್ಟಿಯಾಗಿರುವ ಸಂಕಷ್ಟಗಳೇ ಹೆಚ್ಚು. ತೊಂದರೆಯನ್ನು ನಿವಾರಿಸಬೇಕಾದ ಇಂತಹ ಸಂದರ್ಭದಲ್ಲಿ ನಡೆಯುವ ಅಸಮಂಜಸವೆನಿಸುವಚಟುವಟಿಕೆಗಳು ಮತ್ತು ಪಲಾಯನವಾದಕ್ಕೆನಾವು ಭಾರಿ ಬೆಲೆ ತರಬೇಕಾದೀತು. ಚಾಲ್ತಿಯಲ್ಲಿರುವ ಜನಪದೀಯ ಕತೆಯನ್ನು ಅದಕ್ಕೊಂದು ಉದಾಹರಣೆಯಾಗಿ ನೀಡಬಹುದು.

ಅದೊಂದು ದೊಡ್ಡ ಕುಟುಂಬ. ಮನೆಮಂದಿಯ ನಡುವೆ ಮಾತುಕತೆ ಅಪರೂಪವೆನ್ನಿ. ಇಡೀ ಮನೆಗೆ ಸೋಮಾರಿತನದ ಜಾಡ್ಯ ಚೆನ್ನಾಗಿಯೇ ಅಂಟಿತ್ತು. ಬಿದ್ದಿದ್ದು ಬಿದ್ದಲ್ಲೇ ಇರುತ್ತಿತ್ತು. ಉಂಡು ತಿಂದು ಮಲಗುವುದಷ್ಟೇ ಕಾಯಕವಾಗಿತ್ತು. ಮನೆ ಮತ್ತು ಜಮೀನಿನ ಕೆಲಸಗಳನ್ನು ತಳ್ಳುತ್ತಿದ್ದರೋ ನಿಭಾಯಿಸುತ್ತಿದ್ದರೋ ಅವರಿಗಷ್ಟೇ ಗೊತ್ತು. ಹೀಗಾಗಿ, ಅಪಾರ ಸಂಪತ್ತು ಕ್ರಮೇಣ ಕರಗುತ್ತಾ ಮನೆಮನಗಳೆಲ್ಲಾ ಪಾಳುಬೀಳಲಾರಂಭಿಸಿದ್ದವು.

ಹೀಗಿರುವಾಗ ಒಂದು ದಿನ ಬೆಳ್ಳಂಬೆಳಿಗ್ಗೆಯೇ ಮನೆಯ ಒಳಗೆ ದುರ್ವಾಸನೆ ಬರಲಾರಂಭಿಸಿತು. ಅರಿವಿಗೆ ಬಂದರೂ ಬಾರದಂತೆ ಎಲ್ಲರೂ ನಟಿಸಲಾರಂಭಿಸಿದರು. ದುರ್ವಾಸನೆಯ ಪ್ರಸ್ತಾಪ ಮಾಡಿದರೆ ಎಲ್ಲಿ ತಮ್ಮ ಕೊರಳಿಗೇ ಸುತ್ತಿಹಾಕಿಕೊಳ್ಳುತ್ತದೋ ಎಂಬ ದುರಾಲೋಚನೆ. ಹೇಗೋ ಮನಸ್ಸು ಮಾಡಿ ಮೊದಮೊದಲಿಗೆ ಮನೆಯ ಎಲ್ಲಾ ಕಿಟಕಿ ಬಾಗಿಲುಗಳನ್ನು ತೆರೆದರು. ವಾತಾವರಣ ಸ್ವಲ್ಪಮಟ್ಟಿಗೆ ತಿಳಿಯೆನಿಸಿತು. ಇನ್ನೂ ಸಮಯ ಮೀರಿದಾಗ ಮತ್ತದೇ ನಾತ ಮೂಗಿಗೆ ಬಡಿಯಲಾರಂಭಿಸಿತು. ಮನೆಮಂದಿ ವಾಸನೆಯ ಮೂಲದ ಗೋಜಿಗೆ ಹೋಗದೆ, ಬೇರೆ ಯಾರಾದರೂ ತಲೆ ಕೆಡಿಸಿಕೊಂಡಿಯಾರು ಬಿಡು ಎಂದು ಹಗುರಾಗಿಯೇ ತೆಗೆದುಕೊಂಡರು.

ದುರ್ವಾಸನೆಯ ಕಿರಿಕಿರಿ ಇನ್ನೂ ಹೆಚ್ಚಾದಾಗ, ಊದುಕಡ್ಡಿಗಳನ್ನು ಹಚ್ಚಿದರು. ಗಂಧದ ಪರಿಮಳ ಒಂದು ಹಂತದವರೆಗೆ ದುರ್ವಾಸನೆಯನ್ನು ನುಂಗಿ ಮನೆಯಲ್ಲೆಲ್ಲಾ ಪರಿಮಳವ ಪಸರಿಸಿತ್ತು. ಬರಬರುತ್ತಾ ನಾತವು ಗಂಧದ ಪರಿಮಳವನ್ನೂ ನುಂಗುತ್ತಾ ತನ್ನ ಕಬಂಧ ಬಾಹುಗಳನ್ನು ಮನೆಯೆಲ್ಲೆಡೆ ಚಾಚಲಾರಂಭಿಸಿತು. ವಾಸನೆಯ ಕಿರಿಕಿರಿ ಇನ್ನೂ ಹೆಚ್ಚಾದಾಗ, ಸುಗಂಧ ದ್ರವ್ಯವನ್ನು ಸಿಂಪಡಿಸಲಾಯಿತು. ಮನೆಯಲ್ಲಿರುವ ಗಂಧದ ಕಡ್ಡಿ, ಸುಗಂಧ ದ್ರವ್ಯಗಳು ಖಾಲಿಯಾದವೇ ಹೊರತು ದುರ್ವಾಸನೆಯು ಮನೆಯನ್ನು ಬಿಟ್ಟು ತೊಲಗಲಿಲ್ಲ.‌

ವಾಸನೆ ತೀರಾ ಮಿತಿ ಮೀರಿದಾಗ ಮನೆಮಂದಿ ಯೆಲ್ಲಾ ಪೇಚಾಡಲಾರಂಭಿಸಿದರು‌. ಕ್ರಿಯಾಶೀಲರಾಗಬೇಕಾದವರ ನಿಷ್ಕ್ರಿಯತೆಯನ್ನು ಕಂಡು, ಅದಾಗಲೇ ಹಾಸಿಗೆ ಹಿಡಿದಿದ್ದ ಹಿರಿಜೀವವೊಂದು ಮಗ್ಗುಲು ಬದಲಿಸಿ ದುರ್ವಾಸನೆಯ ಮೂಲವನ್ನು ಗ್ರಹಿಸಿತು. ಮನೆಯ ಅಟ್ಟದ ಮೇಲೆ ಕಣ್ಣುಹಾಯಿಸಿ, ಹೇಗೋ ಕಷ್ಟಪಟ್ಟು ಹತ್ತಲಾರಂಭಿಸಿತು. ಮನೆಮಂದಿಗೆಲ್ಲಾ ಮುಜುಗರವಾಗಿ, ಏನನ್ನಿಸಿತೋ ಏನೋ ಆ ಹಿರಿಜೀವವನ್ನು ಕೆಳಗಿಳಿಸಿದರು. ಅಟ್ಟದ ಮೇಗಡೆ ಕಣ್ಣು ಹಾಯಿಸಿದಾಗ ಅವರಿಗೆ ಕಂಡುಬಂದಿದ್ದು ಸತ್ತ ಇಲಿ. ಅವರಿಗೀಗ ಅರ್ಥವಾಗಿದ್ದು, ನಾವು ಹಚ್ಚಬೇಕಿದ್ದು ಗಂಧದ ಕಡ್ಡಿಗಳನ್ನಲ್ಲ, ಬಿಸಾಡಬೇಕಿದ್ದು ಸತ್ತ ಇಲಿಯನ್ನ ಹಾಗೂ ಮನದೊಳಗಿನ ವೈರಸ್ಸುಗಳನ್ನ ಎಂಬುದು. ತಮ್ಮ ಆಲಸ್ಯಕ್ಕೆ, ಅಸಡ್ಡೆಗೆ, ಅಜ್ಞಾನಕ್ಕೆ ಬೇಸರಿಸಿಕೊಳ್ಳುತ್ತಾ, ಸತ್ತ ಇಲಿಯ ಕಳೇಬರವನ್ನು ಮನೆಯಿಂದಾಚೆ ಬಿಸಾಡಿದರು. ಮನೆಯನ್ನು ಒಪ್ಪಓರಣಗೊಳಿಸಿದರು. ಯಾವಾಗ ಸಕ್ರಿಯರಾದರೋ ತಮ್ಮ ಪಾಲಿಗೆ ಬಂದ ಕೆಲಸಗಳಲ್ಲಿ ತೊಡಗಿಕೊಂಡರು. ಮತ್ತೆ ಮನೆಮನಗಳಲ್ಲಿ ಸಂತಸವೆಂಬುದು ಇಣುಕತೊಡಗಿತು. ಇದನ್ನೆಲ್ಲಾ ಗಮನಿಸುತ್ತಿದ್ದ ಅಜ್ಜನ ಗುಳಿಬಿದ್ದ ಕಣ್ಣುಗಳಲ್ಲಿ ಮಿಂಚು, ಜೋಲುಬಿದ್ದ ಕೆನ್ನೆಗಳಲ್ಲಿ ಮುಗುಳ್ನಗೆ ಲಾಸ್ಯವಾಡಲಾರಂಭಿಸಿತು.

ಬದುಕಿನಲ್ಲಿ, ಸಮಾಜದಲ್ಲಿ ಅಚಾನಕ್ಕಾಗಿ ಸೃಷ್ಟಿಯಾಗುವ ಸಮಸ್ಯೆಗಳಿಗೆ ನಮ್ಮ ಒಳನೋಟ ಹೇಗಿದೆಯೆಂದರೆ, ಬೇರೆ ಯಾರಾದರೂ ಪರಿಹರಿಸಿಯಾರು ಅಥವಾ ಅದಾಗಿಯೇ ಪರಿಹಾರವಾದೀತು ಎನ್ನುವ ಉದಾಸೀನ, ಅದರಿಂದ ನನಗೇನಾದೀತು ಎನ್ನುವ ಹುಂಬತನ, ಸುಲಭದ ಪರಿಹಾರವಿದ್ದರೂ ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚದೆ ಮುಂದೂಡುವ ತಂತ್ರ, ಪರಸ್ಪರ ಒಂದುಗೂಡಿ ಸಮನ್ವಯ ಸಾಧಿಸುವಲ್ಲಿನ ತಾತ್ಸಾರ. ಇವೆಲ್ಲವೂ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುತ್ತವೆ ಹೊರತು ಹತೋಟಿಗೆ ತರುವುದಿಲ್ಲ.

ವ್ಯವಸ್ಥೆಯೆಂಬುದು ಹಲವಾರು ರೂಪಗಳಲ್ಲಿ ವ್ಯಕ್ತವಾಗಿದೆ. ಒಂದು ಕುಟುಂಬದ ಹಲವಾರು ಸದಸ್ಯರು, ಒಂದು ಸಂಸ್ಥೆಯ ಹಲವಾರು ಕೆಲಸಗಾರರು, ಒಂದು ಸಮಾಜದ ಹಲವಾರು ಮನಸ್ಸುಗಳು, ಒಂದು ಸರ್ಕಾರದ ಹಲವಾರು ಇಲಾಖೆಗಳು ಮತ್ತು ಒಂದು ಜಗತ್ತಿನ ಹಲವಾರು ದೇಶಗಳು, ಇನ್ನೂ ಅನೇಕ ವ್ಯವಸ್ಥೆಗಳು ಸಹ ಸತ್ತ ಇಲಿಯ ದುರ್ವಾಸನೆಯ ಪ್ರಸಂಗವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಇಡೀ ವ್ಯವಸ್ಥೆಯೊಳಗೆ ಅಥವಾ ನಮ್ಮ ಮನದೊಳಗೆ ದುರ್ನಾತ ಆವರಿಸಿಕೊಳ್ಳುವ ಮುಂಚೆ, ಕೊಳೆತು ನಾರುವ ಮುನ್ನ ಸತ್ತ ಇಲಿಯನ್ನು ಆಚೆಗೆ ಎಸೆಯಬೇಕಿದೆ. ಮನಸ್ಸಿನೊಳಗಿರುವ ವೈರಸ್‌ಗಳನ್ನು ನಿರ್ಮೂಲ ಮಾಡಬೇಕಿದೆ. ಒಂದು ಆಹ್ಲಾದಕರ, ಆರೋಗ್ಯಕರ ವಾತಾವರಣ ನಮ್ಮ ಸುತ್ತಲೂ ನಿರ್ಮಾಣವಾಗುವಲ್ಲಿ ವ್ಯಕ್ತಿಯಾಗಿ, ತಂಡವಾಗಿ, ವ್ಯವಸ್ಥೆಯ ಭಾಗವಾಗಿ ನಾವೆಲ್ಲಾ ತೊಡಗಿಕೊಳ್ಳಬೇಕಿದೆ. ನಮ್ಮ ನಮ್ಮ ಪಾತ್ರವನ್ನು ಅರಿತುಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT