ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓ ಒಳಮನಸೆ... ಬಿಚ್ಚಿಡು ಆಂತರ್ಯ

ಮನೋರೋಗದ ಕುರಿತು ಸಮಾಜದಲ್ಲಿ ಇರುವ ಅಜ್ಞಾನ ಮತ್ತು ತಪ್ಪುಕಲ್ಪನೆಗಳಿಂದ ಮನೋರೋಗಿಗಳು ವೈಜ್ಞಾನಿಕ ಚಿಕಿತ್ಸೆಯಿ
Last Updated 9 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ ಎಂಬುದನ್ನು ಮನಗಂಡ ವಿಶ್ವ ಆರೋಗ್ಯ ಸಂಸ್ಥೆಯು 1992ರಲ್ಲಿ ‘ವಿಶ್ವ ಮಾನಸಿಕ ಆರೋಗ್ಯ ದಿನ’ವನ್ನು (ಅ. 10) ಮೊದಲ ಬಾರಿಗೆ ಆಚರಿಸಿತು. ಅಂದಿನಿಂದ ಪ್ರತಿವರ್ಷ ಈ ದಿನಾಚರಣೆ ನಡೆಯುತ್ತಿದೆ
ಯಾದರೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ನಮ್ಮ ಸರ್ಕಾರಗಳು ಹಾಗೂ ಸಮಾಜ ಹೆಚ್ಚಿನ ಒತ್ತು ಕೊಟ್ಟಿಲ್ಲ.

ಕೊರೊನಾ ತೀವ್ರವಾಗಿದ್ದಾಗ ಕೆಲವರು ಸೋಂಕಿನ ಭಯದಿಂದ ಅಸುನೀಗಿದ್ದರೇ ವಿನಾ ಸೋಂಕಿನಿಂದಲ್ಲ. ಕೊರೊನಾ ಹಣೆಪಟ್ಟಿ ಕಟ್ಟಿಕೊಂಡು ಸಮಾಜದ ಅವಹೇಳನಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಭಯಪಟ್ಟು ಆತ್ಮಹತ್ಯೆಗೆ ಶರಣಾದ ನಿದರ್ಶನಗಳಿವೆ.
ಮಾನಸಿಕ ಆರೋಗ್ಯಕ್ಕೆ ಸಿಗಬೇಕಾದಷ್ಟು ಮನ್ನಣೆ ಸಿಕ್ಕಿಲ್ಲ ಎಂಬುದಕ್ಕೆ ಇವೆಲ್ಲ ಉದಾಹರಣೆಗಳು. ಈ ದಿಸೆಯಲ್ಲಿ ಈಗ ಒಂದು ಹೆಜ್ಜೆ ಮುಂದೆ ಹೋದಂತೆ ಭಾಸವಾಗುತ್ತಿದೆ. ಮಾನಸಿಕ ಆರೋಗ್ಯ ಕಾಪಾಡಿ ಕೊಳ್ಳುವುದರ ಮಹತ್ವವು ವಿಶ್ವದಾದ್ಯಂತ ಅಧಿಕಾರ
ಸ್ಥರಿಗೆ ಮತ್ತು ನಾಗರಿಕರಿಗೆ ಮನವರಿಕೆ ಆದಂತಿದೆ. ಹೀಗಾಗಿ, ಈ ವರ್ಷದ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ‘ಜಗತ್ತಿನ ಸರ್ವರಿಗೂ ಮಾನಸಿಕ ಆರೋಗ್ಯ ಮತ್ತು ನೆಮ್ಮದಿಯನ್ನು ಖಾತರಿಪಡಿಸುವ’ ದಿನವನ್ನಾಗಿ ಘೋಷಿಸಲಾಗಿದೆ.

ಜಾಗತೀಕರಣ ಮತ್ತು ಆಧುನೀಕರಣದಿಂದ ಜನರಲ್ಲಿ ಭೋಗ ಮನೋಭಾವ ಹೆಚ್ಚಾಗುತ್ತಿದೆ. ಅತಿಯಾದ ನಿರೀಕ್ಷೆಯಿಂದ ಜನ ಹತಾಶೆಗೊಂಡು ಭಯ, ಆತಂಕ ಮತ್ತು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಕೆಲವು ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಪ್ರತೀ ಏಳು ಜನಕ್ಕೊಬ್ಬರು ಒಂದಲ್ಲ ಒಂದು ಬಗೆಯಲ್ಲಿ ಮಾನಸಿಕ ಕ್ಷೋಭೆಗೆ ಒಳಗಾಗುತ್ತಾರೆ. ದೈಹಿಕ ಕಾಯಿಲೆಗಳಿಂದ ಬಳಲುವವರೂ ಮಾನಸಿಕವಾಗಿ ಸಂಕಟ ಅನುಭವಿಸುತ್ತಾರೆ. ಹರೆಯದವರು ಈ ಸ್ಥಿತಿಯಿಂದ ಹೊರಬರಲಾಗದೇ ಮದ್ಯ, ಮಾದಕ ವಸ್ತುಗಳ ಮೊರೆ ಹೋಗುತ್ತಿದ್ದಾರೆ. ಹೀಗೆ ಆಬಾಲವೃದ್ಧರಾದಿಯಾಗಿ ಮಾನಸಿಕ ಅನಾರೋಗ್ಯದಿಂದ ಬಳಲುವವರು
ಹೆಚ್ಚಾಗುತ್ತಿದ್ದಾರೆ. ಸರಿಯಾಗಿ ಚಿಕಿತ್ಸೆ ದೊರೆತರೆ ಅವರ ಮಾನಸಿಕ ಆರೋಗ್ಯ ಸುಧಾರಿಸಲು ಸಾಧ್ಯ.

ಮನೋರೋಗದ ಕುರಿತು ಸಮಾಜದಲ್ಲಿ ಇರುವ ಅಜ್ಞಾನ ಮತ್ತು ತಪ್ಪುಕಲ್ಪನೆಗಳಿಂದ ಮನೋರೋಗಿಗಳು ವೈಜ್ಞಾನಿಕ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಮನೋರೋಗ ಎಂದರೆ ಬುದ್ಧಿಭ್ರಮಣೆ, ಈ ಕಾಯಿಲೆ ಎಂದಿಗೂ ವಾಸಿ ಯಾಗುವುದಿಲ್ಲ, ಮನೋರೋಗಿಯು ಮುಂದೆ ಜೀವನ ಮಾಡಲಾರ, ಅವನಿಗೆ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂಬುದು ಕೆಲವರ ನಂಬಿಕೆ. ಮನೋರೋಗಿಗಳಲ್ಲಿ ಪ್ರತಿಶತ ತೊಂಬತ್ತು ಮಂದಿ ದೆವ್ವ, ಮಾಟ, ಮಂತ್ರ, ಗ್ರಹಗಳ ಪೀಡೆ ಅಥವಾ ದೈವ ಶಾಪ ಎಂದು ನಂಬುತ್ತಾರೆ. ವರ್ಷಗಟ್ಟಲೆ ಹರಕೆ, ಪೂಜೆ, ಶಾಂತಿ ಎಂದು ಕಂಡ ಕಂಡ ದೇವರ ಮೊರೆ ಹೋಗುತ್ತಾರೆ. ಇವೆಲ್ಲಕ್ಕಿಂತ ಹೆಚ್ಚಾಗಿ, ವೈಜ್ಞಾನಿಕವಾಗಿ ದೊರಕುವ ಔಷಧಗಳನ್ನು ತೆಗೆದುಕೊಂಡಲ್ಲಿ ಮತ್ತು ಮನೋವೈದ್ಯರು ಹೇಳಿದ ಸಲಹೆಗಳನ್ನು ಪಾಲಿಸಿದಾಗ ಮಾನಸಿಕ ಆರೋಗ್ಯ ಸುಧಾರಿಸುತ್ತದೆ.

ಎದೆ ನೋವಾದರೆ ಕೂಡಲೇ ಮನೆಯವರಿಗೆ ತಿಳಿಸಿ, ವೈದ್ಯರ ಹತ್ತಿರ ಚಿಕಿತ್ಸೆಗಾಗಿ ಓಡುತ್ತಾರೆ. ಅದೇ ಗಾಬರಿ, ಭಯ, ಖಿನ್ನತೆ ಉಂಟಾದರೆ, ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಹಾಗೆ ಹೇಳಿಕೊಂಡರೆ ತನಗೆ ಮನೋರೋಗಿ ಎಂದು ಎಲ್ಲಿ ಹಣೆಪಟ್ಟಿ ಕಟ್ಟಿಬಿಡುವರೋ ಎಂಬ ಭಯ. ಮನೋವೈದ್ಯರಿಂದ ಚಿಕಿತ್ಸೆ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಖಿನ್ನತೆಯಿಂದ ಬಳಲುವ ಹರೆಯದವರು ಅದರಿಂದ ಹೊರಬರಲು ಸಹಜ ಮಾರ್ಗಗಳನ್ನು ಕಾಣದೆ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ನೊಂದಿಗೆ ಕಾಲ ಕಳೆಯುತ್ತಾರೆ, ಓದಿನಲ್ಲಿ ಏಕಾಗ್ರತೆಯ ಕೊರತೆ ಅನುಭವಿಸುತ್ತಾರೆ. ಯಾರೊಂದಿಗೂ ಬೆರೆಯುವುದೇ ಇಲ್ಲ. ಇದರಿಂದ ಒಂಟಿತನ ಪ್ರಾರಂಭವಾಗಿ ಖಿನ್ನತೆ ಹೆಚ್ಚಾಗುತ್ತದೆ. ಇದಕ್ಕೆಲ್ಲ ಪರಿಹಾರ ಇದೆಯೇ?

ಖಂಡಿತವಾಗಿಯೂ ಇದೆ. ಮನೋರೋಗ ಮತ್ತು ಮನೋವೈದ್ಯರ ಬಗ್ಗೆ ಇರುವ ತಪ್ಪುಕಲ್ಪನೆ
ಗಳಿಂದ ಹೊರಬಂದು, ಮೊದಲು ವೈಜ್ಞಾನಿಕ ಚಿಕಿತ್ಸೆ ತೆಗೆದುಕೊಳ್ಳಬೇಕು. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಮುಖ್ಯವಾದ ಅಂಶ ನಮ್ಮ ಜೀವನಶೈಲಿ. ಆರೋಗ್ಯಕರ ಜೀವನಶೈಲಿಯನ್ನು ಪೋಷಕರು ಮಕ್ಕಳಲ್ಲಿ ಬಾಲ್ಯದಿಂದಲೇ ರೂಢಿಸಬೇಕು. ಸಕಾರಾತ್ಮಕ ಚಿಂತನೆ, ಜೀವನಕೌಶಲ, ಪರಸ್ಪರ ಸಂಬಂಧಗಳನ್ನು ಕಾಪಾಡಿಕೊಳ್ಳುವತ್ತ ಮಾರ್ಗದರ್ಶನ ನೀಡಬೇಕು. ವಾಸ್ತವಿಕ ನಿರೀಕ್ಷೆ, ಪ್ರೀತಿಯ ಮತ್ತು ಸ್ನೇಹದ ಸಂಬಂಧಗಳನ್ನು ಹೊಂದುವುದು ಆರೋಗ್ಯಕರ ಜೀವನಶೈಲಿಯ ಕೆಲವು ಅಂಶಗಳು.

ಮಕ್ಕಳಲ್ಲಿ ಹೊಂದಿಕೊಂಡು ಹೋಗುವ ಗುಣವನ್ನು ರೂಢಿಸಬೇಕು. ತಮ್ಮ ಭಾವನೆಗಳನ್ನು ಹತ್ತಿರದವರೊಂದಿಗೆ ಹಂಚಿಕೊಳ್ಳುವುದನ್ನು, ಕೋಪ, ದ್ವೇಷ ಭಾವನೆ ನಿಯಂತ್ರಿಸುವುದನ್ನು ಕಲಿಸಬೇಕು. ದಂಪತಿಯಲ್ಲಿ ಪರಸ್ಪರ ಗೌರವ, ಪ್ರೀತಿ ಮತ್ತು ಹೊಂದಿಕೊಳ್ಳುವಿಕೆ ಸುಖೀ ದಾಂಪತ್ಯವನ್ನು ಅನುಭವಿಸುವಲ್ಲಿ ಪ್ರಮುಖ ಅಂಶಗಳು. ಮರೆತು ಕ್ಷಮಿಸುವ ಗುಣ, ಒತ್ತಡ ಹೆಚ್ಚಾದಾಗ ಅದನ್ನು ಆತ್ಮೀಯರೊಂದಿಗೆ ಹಂಚಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ನೆಮ್ಮದಿ ಕಾಪಾಡಿಕೊಳ್ಳುವಲ್ಲಿ ಪೂರಕ.

ಈ ದಿಸೆಯಲ್ಲಿ ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ಆದ್ಯತೆಯ ಮೇರೆಗೆ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಬೇಕು. ಈ ಅಂಶಗಳನ್ನು ಮನಗಂಡು ಕಿಂಚಿತ್ತಾದರೂ ಅನುಸರಿಸಿದಲ್ಲಿಮಾನಸಿಕ ಆರೋಗ್ಯ ದಿನಾಚರಣೆಯ ಈ ವರ್ಷದ ಘೋಷಣೆಯು ಅರ್ಥಪೂರ್ಣವಾಗುತ್ತದೆ.

⇒ಲೇಖಕ: ಮನೋವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT