ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಕೊಳ್ಳುಗರ ಬಲವರ್ಧನೆಯಾಗಲಿ

ಅಭಿವೃದ್ಧಿಯು ಸುಸ್ಥಿರವಾಗಬೇಕಾದರೆ ದುಡಿಯುವ ಕೈಗಳಿಗೆ ಕೆಲಸ ಸಿಗಬೇಕು
Last Updated 30 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಆದಾಯ ಹಂಚಿಕೆಯಲ್ಲಿನ ಅಸಮಾನತೆಯು ಈ ನಾಲ್ಕು ದಶಕಗಳಿಂದ ಹೆಚ್ಚಾಗುತ್ತಿದೆ. ಇತ್ತೀಚಿನ ವರದಿಯೊಂದರ ಪ್ರಕಾರ, ದೇಶದ ಅತ್ಯಂತ ಹೆಚ್ಚು ಶ್ರೀಮಂತರೆನಿಸಿಕೊಂಡ ಕೇವಲ ಶೇ 1ರಷ್ಟು ಜನ ಶೇ 73ರಷ್ಟು ಸಂಪತ್ತಿನ ಮಾಲೀಕರಾಗಿದ್ದಾರೆ. 2006ರಿಂದ 2015ರ ಕಾಲಾವಧಿಯಲ್ಲಿ ಸಾಮಾನ್ಯ ಕಾರ್ಮಿಕರ ಆದಾಯದ ಸರಾಸರಿ ವಾರ್ಷಿಕ ಬೆಳವಣಿಗೆಯ ದರ ಬರೀ ಶೇ 2ರಷ್ಟಿದ್ದರೆ, ಇದೇ ಕಾಲಾವಧಿಯಲ್ಲಿ ಶತಕೋಟ್ಯಧೀಶರ ಸಂಪತ್ತು ಆರು ಪಟ್ಟು ಹೆಚ್ಚಾಗಿದೆ. ಇದರಿಂದ, ಮಾರುಕಟ್ಟೆ ವ್ಯವಸ್ಥೆ
ಯಲ್ಲಿ ಬಲಿಷ್ಠರು ಮತ್ತಷ್ಟು ಬಲಿಷ್ಠರಾಗುತ್ತಾರೆ ಎಂಬುದು ಖಚಿತಗೊಂಡಿದೆ. ಇಂಥ ಬೆಳವಣಿಗೆಯಿಂದಾಗಿ, ಆದಾಯ ಹಂಚಿಕೆಯ ಅಸಮಾನತೆಯಲ್ಲಿ ಜಗತ್ತಿನಲ್ಲಿ ಭಾರತ ಎರಡನೇ ಸ್ಥಾನ ಪಡೆದಿರುವುದು ವಿಷಾದಕರ ಸಂಗತಿ.

ಇಂದು ಯಾವುದೇ ನಿರ್ದಿಷ್ಟ ವಲಯದಲ್ಲಿ ಕೆಲವೇ ಕಾರ್ಖಾನೆಗಳು ಪ್ರಾಬಲ್ಯ ಸಾಧಿಸಿರುವುದನ್ನು ಕಾಣುತ್ತೇವೆ. ತಾಂತ್ರಿಕ ವಿಧಾನಗಳ ಆವಿಷ್ಕಾರವು ಕಡಿಮೆ ಉದ್ಯೋಗಿಗಳಿಂದ ಹೆಚ್ಚು ಉತ್ಪಾದನೆ ಯನ್ನು ಪಡೆಯುವಲ್ಲಿ ಸಹಕಾರಿಯಾಗಿದೆ. ಇದು, ಆದಾಯ ಹಂಚಿಕೆಯಲ್ಲಿನ ಅಸಮಾನತೆಯನ್ನು ಹೆಚ್ಚಿಸುತ್ತದೆ.

1970 ಹಾಗೂ 80ರ ದಶಕಗಳಲ್ಲಿ ಜಿಡಿಪಿ ಬೆಳವಣಿಗೆಯು ಕೇವಲ ಶೇ 3ರಿಂದ ಶೇ 4ರಷ್ಟು ಇದ್ದಾಗ ಉದ್ಯೋಗದಲ್ಲಿನ ಬೆಳವಣಿಗೆಯ ದರವು ಸುಮಾರು ಶೇ 2ರಷ್ಟಿತ್ತು. ಆದರೆ, ಇತ್ತೀಚಿನ ಎರಡು ದಶಕಗಳಲ್ಲಿ ಜಿಡಿಪಿ ಬೆಳವಣಿಗೆಯ ದರವು ಶೇ 10ರ ಸಮೀಪದಲ್ಲಿ
ದ್ದಾಗ್ಯೂ ಉದ್ಯೋಗ ಬೆಳವಣಿಗೆಯ ದರ ಶೇ 1ಕ್ಕಿಂತ ಕಡಿಮೆ ಇರುವುದು ಅರ್ಥವ್ಯವಸ್ಥೆಯಲ್ಲಿ ಉದ್ಯೋಗ ಸೃಷ್ಟಿಯ ಸಾಮರ್ಥ್ಯ ಕಡಿಮೆಯಾಗಿರುವುದನ್ನು ತೋರಿಸುತ್ತದೆ. ಇಂತಹ ಬೆಳವಣಿಗೆಯಿಂದ ಇತ್ತೀಚಿನ ದಿನಗಳಲ್ಲಿ ನಿರುದ್ಯೋಗದ ಪ್ರಮಾಣವು ಶೇ 6.1 ಎಂದು ದಾಖಲಾಗಿದ್ದು, ಇದು ಕಳೆದ 45 ವರ್ಷಗಳಲ್ಲಿಯೇ ಅತ್ಯಂತ ಹೆಚ್ಚು. ನಿರುದ್ಯೋಗವು ಜನರ ಆದಾಯ ಕಡಿಮೆ ಮಾಡು
ವುದರ ಜೊತೆಗೆ ಬಡವರ ಸಂಖ್ಯೆಯನ್ನು ವೃದ್ಧಿಸಿ ಆರ್ಥಿಕ ಅಸಮಾನತೆಯನ್ನು ಹೆಚ್ಚಿಸುತ್ತದೆ.

ಈ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಬದಲಾವಣೆಯನ್ನು ಚಿಲ್ಲರೆ ಉದ್ಯಮದಲ್ಲಿ ಕಾಣಬಹುದಾಗಿದೆ. ಸಣ್ಣ ಸಣ್ಣ ಗಾತ್ರದ ಘಟಕಗಳು ಶ್ರಮಸಾಂದ್ರ ವ್ಯಾಪಾರ ಪದ್ಧತಿಯ ಕಾರಣದಿಂದಾಗಿ ಅನೇಕರಿಗೆ ಉದ್ಯೋಗದಾತವಾಗಿದ್ದವು. ಇತ್ತೀಚಿನ ವರ್ಷಗಳಲ್ಲಿ ನಗರ
ಪ್ರದೇಶಗಳಲ್ಲಿ ಸುಸಂಘಟಿತವಾದ ದೊಡ್ಡ ಗಾತ್ರದ ಕೆಲವೇ ಚಿಲ್ಲರೆ ವ್ಯಾಪಾರ ಘಟಕಗಳು ಪ್ರಾರಂಭವಾಗಿವೆ. ಇವು ಸಾವಿರಾರು ಸಣ್ಣ ಸಣ್ಣ ಘಟಕಗಳ ವ್ಯಾಪಾರ ವಹಿವಾಟನ್ನು ಕಬಳಿಸಿವೆ. ಇಂತಹ ಬೃಹತ್ ಘಟಕಗಳ ಸ್ಪರ್ಧೆಯನ್ನು ತಾಳಲಾರದೆ ಅನೇಕ ಸಣ್ಣ ಘಟಕಗಳು ಮುಚ್ಚಿವೆ.

ಚಿಲ್ಲರೆ ವ್ಯಾಪಾರದಲ್ಲಿ ಸಂಘಟಿತವಾದ ಬೃಹತ್ ಪ್ರಮಾಣದ ಕಂಪನಿಗಳ ಪ್ರವೇಶದಿಂದಾಗಿ ಹಾಗೂ ಆನ್‌ಲೈನ್‌ ಶಾಪಿಂಗ್‍ನಿಂದಾಗಿ ಸರಕು ಮತ್ತು ಸೇವೆಯು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಆಗಿರುವುದು ಅಪೇಕ್ಷಣೀಯ. ಆದರೆ, ದೊಡ್ಡ ಕಂಪನಿಗಳು ಬಂಡವಾಳಸಾಂದ್ರ ವ್ಯಾಪಾರ ವಿಧಾನವನ್ನು ಅಳವಡಿಸಿಕೊಂಡಿರುವುದರಿಂದ, ಇವು ಸೃಷ್ಟಿಸಬಹುದಾದ ಹೆಚ್ಚುವರಿ ಉದ್ಯೋಗಗಳು, ಮುಚ್ಚಿಹೋದ ಸಣ್ಣ ಘಟಕಗಳಲ್ಲಿ ನಷ್ಟವಾದ ಉದ್ಯೋಗಗಳ ಸಂಖ್ಯೆಗೆ ಸಮನಾಗಲಾರವು. ಸಾವಿರಾರು ಸಣ್ಣ ಘಟಕಗಳ ಮಾಲೀಕರು ಪಡೆಯುತ್ತಿದ್ದ ಲಾಭವು ಕೆಲವೇ ಬೃಹತ್ ಉದ್ಯಮಿಗಳ ಪಾಲಾಗುತ್ತಿದೆ.

ಆರ್ಥಿಕ ಅಸಮಾನ ಸಮಾಜದಲ್ಲಿ ಅತ್ಯಂತ ಕೆಳಸ್ತರದಲ್ಲಿರುವ ವರ್ಗವೆಂದರೆ ಕೃಷಿಕರು. ಒಟ್ಟು ಉದ್ಯೋಗಸ್ಥರಲ್ಲಿ ಸುಮಾರು ಶೇ 50ರಷ್ಟು ಜನ ಕೃಷಿಯಲ್ಲಿ ತೊಡಗಿದ್ದರೂ ಒಟ್ಟು ರಾಷ್ಟ್ರೀಯ ಆದಾಯದಲ್ಲಿ ಕೃಷಿಯ ಪಾಲು ಶೇ 15ರ ಆಸುಪಾಸಿನ
ಲ್ಲಿರುವುದು ಕೃಷಿಯ ದುಃಸ್ಥಿತಿಯನ್ನು ಸೂಚಿಸುತ್ತದೆ. ಕೆಲವೇ ದಶಕಗಳ ಹಿಂದೆ ಕೃಷಿ ಕುಟುಂಬದವರೆಲ್ಲ ಸೇರಿ ಕೊಟ್ಟಿಗೆ ಗೊಬ್ಬರ ಬಳಸಿ ಜಾನುವಾರುಗಳಿಂದ ಬೇಸಾಯ ಮಾಡುತ್ತಿದ್ದರು. ಕಡಿಮೆ ಉತ್ಪಾದಿಸಿದರೂ ಲಾಭವೆಲ್ಲ ರೈತರಿಗೆ ಸಿಗುತ್ತಿತ್ತು. ಇಂದಿನ ಆಧುನಿಕ ಬೇಸಾಯ ವಿಧಾನದಲ್ಲಿ ಬಳಸಲಾಗುತ್ತಿರುವ ಸಲಕರಣೆಗಳೆಲ್ಲವೂ ಖರೀದಿಸಿ ತಂದವುಗಳೇ ಆಗಿರುತ್ತವೆ. ಈ ರೀತಿ ಆಧುನೀಕರಣದ ಪ್ರಕ್ರಿಯೆಯಲ್ಲಿ ಸ್ವಾವಲಂಬಿ ಕೃಷಿಯನ್ನು ಪರಾವಲಂಬಿ ಕೃಷಿಯನ್ನಾಗಿ ಮಾರ್ಪಡಿಸಿರುವುದರ ಜೊತೆಗೆ ಕೃಷಿ ಉತ್ಪನ್ನದ ಬಹುಪಾಲು ಲಾಭವು ಬೇರೆ ಬೇರೆ ರೂಪದಲ್ಲಿ ಶ್ರೀಮಂತ ಉದ್ಯಮಿಗಳ ಕೈ ಸೇರುವಂತಾಗಿದೆ.

ಹಲವಾರು ಉದ್ಯಮಗಳಲ್ಲಿ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿ, ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸಿರುವುದು ಎಚ್ಚರಿಕೆಯ ಗಂಟೆಯಾಗಿದೆ. ದುರ್ಬಲಗೊಂಡ ಆರ್ಥಿಕ ವ್ಯವಸ್ಥೆಯಲ್ಲಿ ಇತ್ತೀಚಿನ ಕೆಲವು ಜಾಗತಿಕ ಹಾಗೂ ದೇಶಿ ವಿದ್ಯಮಾನಗಳು ಸಮಸ್ಯೆಯನ್ನು ಉಲ್ಬಣಗೊಳಿಸುತ್ತಿವೆ. ಎನ್‌ಪಿಎ ಸಮಸ್ಯೆಗಳು, ಜಿಎಸ್‌ಟಿ ಅನುಷ್ಠಾನದಲ್ಲಿನ ಗೊಂದಲ, ನೋಟು ರದ್ದತಿ ಸೃಷ್ಟಿಸಿರುವ ಆತಂಕ ಚರ್ಚೆಗೆ ಒಳಗಾಗಿವೆ.

ಅಭಿವೃದ್ಧಿಯು ಸುಸ್ಥಿರವಾಗಬೇಕಾದರೆ ದುಡಿಯುವ ಕೈಗಳಿಗೆ ಕೆಲಸ ಸಿಗಬೇಕು, ಗ್ರಾಮೀಣ ಜನರ ಕೊಳ್ಳುವ ಶಕ್ತಿ ಹೆಚ್ಚಾಗಬೇಕು. ಬಡತನ ನಿವಾರಣೆ ಹಾಗೂ ಉದ್ಯೋಗ ಕಾರ್ಯಕ್ರಮಗಳು, ವಿಶೇಷವಾಗಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವಾಸ್ತವ ಸ್ಥಿತಿಯನ್ನು ಅರಿತು, ಅವು ಪರಿಣಾಮಕಾರಿಯಾಗುವಂತೆ ಮಾಡಿದರೆ ದುಡಿಯುವ ಕೈಗಳಿಗೆ ಕೆಲಸ, ಆ ಮೂಲಕ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿ ಸುಸ್ಥಿರ ಅಭಿವೃದ್ಧಿಗೆ ಶ್ರಮಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT