ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಗಮ ಹಾದಿ: ಸ್ವಚ್ಛತೆಯ ಜರೂರು

ಶ್ರಮದಾನದ ದೃಷ್ಟಿ ಮೊದಲು ಬೀಳಬೇಕಾದದ್ದು ಎಲ್ಲಿಗೆ ಎಂದು ಕೇಳಿಕೊಳ್ಳಬೇಕಾಗಿದೆ
Last Updated 4 ಫೆಬ್ರುವರಿ 2021, 20:24 IST
ಅಕ್ಷರ ಗಾತ್ರ

ಬೆಂಗಳೂರಿನ ‘ಕಲಾಗ್ರಾಮದಲ್ಲಿ ಶ್ರಮದಾನ ನಡೆಸಿದ ಸಾಹಿತಿಗಳು’ ವರದಿ (ಪ್ರ.ವಾ., ಜ. 20) ಗಮನಿಸಿ, ನಮ್ಮ ಆದ್ಯತೆಗಳು ಹೀಗೇಕೆ ಅನ್ನಿಸಿತು. ಕಲಾಗ್ರಾಮ ಸ್ಮಶಾನವಲ್ಲ, ಕಟ್ಟಿದ ಕಟ್ಟೆಗಳು ಸಮಾಧಿಗಳಲ್ಲ ಎಂಬ ಅಭಿಪ್ರಾಯ ಪಕ್ಕಕ್ಕಿರಲಿ. ಮೇರು ಸಾಹಿತಿಗಳಾದ
ಜಿ.ಎಸ್.ಶಿವರುದ್ರಪ್ಪ, ಯು.ಆರ್.ಅನಂತಮೂರ್ತಿ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆಗಳು ಪ್ರಖರ. ಅವರ ಚಿಂತನೆಗಳು ಸಾಹಿತ್ಯ ಕೃತಿಗಳಮೂಲಕ ನಮ್ಮೊಂದಿಗಿವೆ.

ಪ್ರಶ್ನೆಯೆಂದರೆ, ಮತ್ತೆ ಮತ್ತೆ ನಮ್ಮ ಎದೆಗೆ ಸ್ಥಾವರಗಳು ಎಡತಾಕುವುದು. ಗಣ್ಯಮಾನ್ಯರ ಅಂತ್ಯಕ್ರಿಯೆ ನೆರವೇರಿಸಿದ ಸ್ಥಳ ಭಾವನಾತ್ಮಕವಾಗಿ ಮುಖ್ಯವಾಗುವ ಕಾರಣ ಅದರ ಒಪ್ಪ ಓರಣದ ಆಶಯ ಸಹಜ. ಆದರೆ ಸಮಾಧಿ, ಸ್ಮಾರಕಗಳ ವೈಭವೀಕರಣದಲ್ಲಿ ಸಾಧಕರನಡೆ, ನುಡಿ, ದರ್ಶನಗಳು ನಮ್ಮ ಬದುಕಿಗೆ ದೂರವಾಗುವ ವಿಪರ್ಯಾಸವೊದಗದೇ? ಅಂತಿಮ ವಿಧಿಗಳು ನಡೆದ ಕಟ್ಟೆಯ ನಾಜೂಕಿನ ಕಾಳಜಿ, ಬದ್ಧತೆಯೇ ಎದ್ದು ಕಂಡು ಮೇರು ವ್ಯಕ್ತಿತ್ವ ಗೌಣವಾಗುವುದಿಲ್ಲವೇ?

‘ಕುರುಹುಗಳನ್ನು ಪೂಜಿಸುವವರ ಮೆಚ್ಚ ನಮ್ಮ ಕೂಡಲಸಂಗಮದೇವ’ ಎಂದರು ಬಸವಣ್ಣನವರು.ಸ್ಥಾವರ ಎಂದಾದರೊಂದು ದಿನ ಅಳಿದೀತು, ಆದರೆ ಜಂಗಮ ಅಮರವೆಂದು ಅವರು ಸಾರಿ ಒಂಬೈನೂರು ವರ್ಷಗಳೇ ಆಗಿವೆ. ಅಲ್ಲಮಪ್ರಭು ಸಹ ಇದೇ ನಿಲುವನ್ನು
ಎತ್ತಿಹಿಡಿದಿದ್ದಾರೆ. ಕುವೆಂಪು ‘ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು’ ಎನ್ನುತ್ತಾ ಯಾವುದೇ ವಿಚಾರಧಾರೆಗಳಿಗೆ- ಅವು ಬದಲಾಗಬಹುದಾದ ಕಾರಣ- ಲಗತ್ತಾಗುವುದು ತಕ್ಕುದಲ್ಲವೆನ್ನುತ್ತಾರೆ.

ಹಾಗೆ ನೋಡಿದರೆ, ಕರಾರುವಾಕ್ಕಾದ ಹಾಗೂ ಪ್ರಾಯೋಗಿಕವಾದ ಅರಿವೆಂದು ಜಗನ್ಮಾನ್ಯವಾಗಿರುವ ವಿಜ್ಞಾನದ ಸಿದ್ಧಾಂತಗಳೇ ಪರೀಕ್ಷೆ, ಪರಿಷ್ಕರಣೆ, ಮರುಪರೀಕ್ಷೆಗಳಿಗೆ ಒಳಪಟ್ಟಿದ್ದಿದೆ. ನ್ಯೂಟನ್‌ನ ಗುರುತ್ವಾಕರ್ಷಣ ಸಿದ್ಧಾಂತವನ್ನು ಐನ್‍ಸ್ಟೀನ್ ವಿಭಿನ್ನವಾಗಿ ಪರಿಶೀಲಿಸಿದರು, ಅಲ್ಪ ತಿದ್ದಿದರು ಕೂಡ. ಜ್ಞಾನ, ವಿಜ್ಞಾನ ಹರಿಯಬೇಕಾದದ್ದೇ ಹಾಗೆ. ನಿಂತ ನೀರಾಗದೆ ತಿಳಿವಿನ ತೀರ್ಥವಾಗಿ ಅದು ಪ್ರವಹಿಸಬೇಕು. ಮನುಷ್ಯನ ಇಡೀ ಇತಿಹಾಸ ಅವಲೋಕಿಸಿದರೆ, ಚಿಂತಕರು ಇನ್ನೊಬ್ಬರನ್ನು ಅನುಸರಿಸಿದಂತೆ ತೋರು
ವುದಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆಲೋಚನಾ ಕ್ರಮ ರೂಢಿಸಿಕೊಂಡು ಆನೆಯಂತೆ ಹೆಜ್ಜೆ ಹಾಕಿದವರೆ. ಆ ಕಾರಣದಿಂದಲೇ ಅವರು ವಿಶಿಷ್ಟ ಸಾಧನೆಯ ಛಾಪು ಮೂಡಿಸಲು ಸಾಧ್ಯವಾಗಿದ್ದು.

ಶ್ರಮದಾನದ ದೃಷ್ಟಿ ಮೊದಲು ಬೀಳಬೇಕಾದದ್ದು- ಸೂರು, ಕಿಟಕಿಗಳಿಲ್ಲದ ಶಾಲೆಗಳತ್ತ, ಆಸ್ಪತ್ರೆಯಲ್ಲಿ ಒಂದೇ ತಳ್ಳುಗಾಡಿಯನ್ನು ಹಂಚಿಕೊಂಡು ಹೆರಿಗೆ ವಾರ್ಡಿನತ್ತ ಸಾಗುವ ಮೂರ್ನಾಲ್ಕು ಗರ್ಭಿಣಿಯರತ್ತ ಅಥವಾ ನಿರ್ವಹಣೆ ಕೊರತೆಯಿಂದ ಅಜ್ಞಾತ ನಾಗರಿಕತೆಯ ಅವಶೇಷದಂತೆ ತೋರುವ ಸಾರ್ವಜನಿಕ ಶೌಚಾಲಯಗಳತ್ತ ಅಲ್ಲವೇ? ರಾಜಧಾನಿಯಲ್ಲೇ ಸಿಟಿ ಬಸ್ ನಿಲ್ಲುವ ಕೆಲವೆಡೆ ಬಹುತೇಕ ಗುರುತಿಸಲೂ ಆಸನ, ಮಾಳಿಗೆಯಿಲ್ಲ. ಅಂಗಡಿ ಮೆಟ್ಟಿಲುಗಳ ಮೇಲೆ ಕೂತು ಪ್ರಯಾಣಿಕರು ಬಸ್ ನಿರೀಕ್ಷಿಸುವ ಸ್ಥಿತಿ.

ನಮ್ಮ ಮನೆ ಬಳಿಯ ಸರ್ಕಾರಿ ಪೋಷಿತ ಗ್ರಂಥಾಲಯಕ್ಕೆ ಹೋದಾಗ ಕಂಡ ದೃಶ್ಯ ಯಾರಿಗಾದರೂ ಮನ ಕಲಕಿಸುವಂಥದ್ದು. ಅದು ಹೈಟೆಕ್ ದರ್ಜೆಯದು! ಇಬ್ಬರು ವೃದ್ಧರು ಗ್ರಂಥ ಪರಾಮರ್ಶನದಲ್ಲಿ ಮಗ್ನರಾಗಿದ್ದ ಯುವಕರನ್ನು ‘ಲಿಫ್ಟ್ ಕೆಟ್ಟು ಆರು ತಿಂಗಳಾಯ್ತಪ್ಪ, ಹತ್ತೋದು ತ್ರಾಸ. ನಿಮ್ಮಿಂದೇನಾದರೂ ಮೇಲಧಿಕಾರಿಗಳಿಗೆ ನಮಗಾಗಿ ಅರ್ಜಿ ಕೊಡಲು ಸಾಧ್ಯವೇ?’ ಅಂತ ಗೋಗರೆಯುತ್ತಿದ್ದರು. ಅವರಾದರೋ ಮತ್ತಷ್ಟು ತನ್ಮಯರಾದಂತೆ ಇಲ್ಲವೆ ಮೊಬೈಲ್‍ನ ಯಾವುದೋ ತುರ್ತು ಕರೆಗೆ ಪ್ರತಿಕ್ರಿಯಿಸುವಂತೆ ನಟಿಸುತ್ತಿದ್ದರು. ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡುವ ಟ್ರ್ಯಾಕ್ಟರ್‌ನಲ್ಲಿ ಮಹಿಳೆಯರು ತಮ್ಮ ಕೂಸಿನೊಂದಿಗೆ ಆಯಾ ದಿನದ ಉದರ ಪೋಷಣೆಗೆ ಜೋಲಾಡುತ್ತಾ ಪ್ರಯಾಣಿಸುವುದನ್ನು ಕಾಣುತ್ತೇವೆ. ಒಂದೆರಡಾದರೂ ಪ್ರತಿ ಕೊಳ್ಳುತ್ತಾರೆಂಬ ಭರವಸೆಯಿಂದ ಪುಟಾಣಿ ಕ್ಯಾಲೆಂಡರ್‌ಗಳನ್ನು ಹೊತ್ತು ಬಸ್ಸೇರುವವರು ನಮ್ಮ ಕಣ್ಣಿಗೆ ಬೀಳುತ್ತಾರೆ. ಬದುಕು ಕಟ್ಟಿಕೊಳ್ಳಲು ಹೆಣಗಾಡುವವರತ್ತ ನಮ್ಮ ಕಣ್ಣು
ತೆರೆಯಬೇಕಲ್ಲವೇ?

ಪ್ರಶಸ್ತಿಗಳೆಲ್ಲ ಒಂದೆಡೆ ಮಡುಗಟ್ಟಿ ಉತ್ತೇಜನ ವಂಚಿತ ಬರಹಗಾರರ ಹತಾಶೆ ಒಂದೆಡೆ, ಗ್ರಂಥಾಲಯದ ಖರೀದಿ ಯೋಜನೆಯಡಿ ತಮ್ಮ ಪುಸ್ತಕ ಆಯ್ಕೆಯಾದರೂ ಪ್ರತಿಗಳನ್ನು ಕಳಿಸಲು ಎಂದು ಆದೇಶ ಬಂದೀತೊ ಅಂತ ಕಾಯುವ ಉದಯೋನ್ಮುಖರು ಇನ್ನೊಂದೆಡೆ. ಸ್ಥಾವರ ಮತ್ತು ಜಂಗಮದ ಅಜಗಜಾಂತರವನ್ನು ಬೋಧಿಸುವವರೇ ಈ ಪರಿ ಕಟ್ಟೆ, ಚಾವಡಿಗಳನ್ನು ಘನಗೊಳಿಸುವಲ್ಲಿ ಮಾರ್ಗದರ್ಶಿ
ಗಳಾಗುವುದು ಅಚ್ಚರಿ ಹುಟ್ಟಿಸುತ್ತದೆ. ತತ್ವಜ್ಞಾನ ವನ್ನು ಎಳೆಯರಿಗೂ ಅರ್ಥವಾಗುವಂತೆ ಸರಳವಾಗಿ ಉಣಬಡಿಸಿದ ಬುದ್ಧದೇವ ಆದಿ ವಿಜ್ಞಾನಿ, ಅಪ್ರತಿಮ ವಿಚಾರವಾದಿ. ಸೋಜಿಗವೆಂದರೆ, ಕೊಲಂಬೊದಲ್ಲಿ ಅವನ ಹಲ್ಲಿದೆಯೆನ್ನಲಾಗಿರುವ ಮಂದಿರದ ಮುಂದೆ ದರ್ಶನಕ್ಕಾಗಿ ಜನಸಾಲುಗಟ್ಟುತ್ತಾರೆ!

ಸಮಾಧಿ, ಸ್ಮಾರಕಗಳನ್ನು ಥಳ ಥಳ ಬೆಳಗಿ ಆಗಬೇಕಾದ್ದೇನಿದೆ? ಎಷ್ಟೇ ಹಿರಿಯರಿರಲಿ, ಎಂತಹ ಪ್ರತಿಭಾನ್ವಿತರಿರಲಿ, ಧೀಮಂತರಿರಲಿ ಅಸುನೀಗಿದಾಗ ‘ಚಿರಸ್ಥಾಯಿಯಾದರು’, ‘ಕಾಲವಶರಾದರು’, ‘ಪಂಚಭೂತಗಳಲ್ಲಿ ಲೀನರಾದರು’ ಮುಂತಾದ ವಿಶೇಷಣಗಳಿಗೆ ಪಾತ್ರರಾಗುತ್ತಾರೆ. ‘ಮಣ್ಣಿನಿಂದ ಜೀವ, ಜೀವದಿಂದ ಮಣ್ಣು’ ಚಕ್ರಗತಿ ಇದ್ದಿದ್ದೆ. ಜನಪದರಿಗೆ ನಿಲುಕಿರುವ ಅನುಭಾವದ ಮೆಲುಕು ಕಾಡುತ್ತದೆ: ‘ಸತ್ಯವುಳ್ಳ ಧರ್ಮರು ಸತ್ತರು ಎನದಿರಿ/ ಸತ್ತರೆ ಲೋಕ ಉಳಿಯದು/ ಧರ್ಮರು ಬಿತ್ತಿ ಹೋಗ್ಯವರೆ ಅವರೇಯ/’. ಆಶಯವಿಷ್ಟೆ. ಆಖೈರಲ್ಲದ ಸ್ಥಾವರದ ಮೆರೆತಕ್ಕೆ ಬೇಲಿ ಬೀಳಲಿ, ಜಂಗಮದ ಹಾದಿ ಸ್ವಚ್ಛಗೊಳ್ಳುತ್ತಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT