ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಮ್ಮ ಅಭಿಮಾನಿಗಳು ಚಿತ್ರಮಂದಿರಗಳ ಬಾಲ್ಕನಿ ಪೂರ್ತಿ ತುಂಬುವಷ್ಟೂ ಇರಲಿಕ್ಕಿಲ್ಲ’

Last Updated 16 ಮೇ 2019, 4:04 IST
ಅಕ್ಷರ ಗಾತ್ರ

ಪ್ರಿಯ ಹರಿಪ್ರಿಯಾ,
'ಸೂಜಿದಾರ' ನಿಮ್ಮ ಅಭಿಮಾನಿ ದೇವರುಗಳನ್ನು ನಿರಾಶೆಗೊಳಿಸಿತು ಎಂದಿದ್ದೀರಿ. ನಿಮ್ಮ ಅಭಿಪ್ರಾಯ ಹೇಳುವ ಹಕ್ಕು ನಿಮಗಿದೆ. ಅದನ್ನು ಯಾರೂ ಕಸಿಯಲಾಗದು.

ಬೆಂಗಳೂರಿನ ಪ್ರಮುಖ ಚಿತ್ರಮಂದಿರವೊಂದರಲ್ಲಿ ನಾನು, ನನ್ನ ಹೆಂಡತಿ ಮತ್ತು ನಮಗೆ ಆತ್ಮೀಯವಾದ ಕುಟುಂಬವೊಂದು ಆ ಚಿತ್ರ ನೋಡಲು ಮೊದಲ ದಿನವೇ ಟಿಕೆಟ್ ಕೊಂಡು ಹೋಗಿದ್ದೆವು.

ಈ ಚಿತ್ರದ ಗುಣಾವಗುಣಗಳ ಚರ್ಚೆ ಬೇರೇನೇ. ಅದನ್ನು ಇನ್ನೊಮ್ಮೆ ಯಾವಾಗಲಾದರೂ ಮಾತಾಡಬಹುದು. ಆದರೆ, ವಿಭಿನ್ನ ಮಾದರಿಯ ಚಿಕ್ಕ ಬಜೆಟ್ಟಿನ ಚಿತ್ರಗಳಿಗೆ ನಮ್ಮಲ್ಲಿ ಚಿತ್ರರಂಗ ಮತ್ತು ಪ್ರೇಕ್ಷಕವರ್ಗದಿಂದ ಎಂಥಾ ಪ್ರೋತ್ಸಾಹ ಸಿಗುತ್ತದೆ ಎನ್ನುವುದು ಗೊತ್ತೇ ಇದೆ. ಚಿತ್ರತಂಡ ಮೊದಲ ದಿನ, ಮೊದಲ ಶೋಗೆ ಕಡೇಪಕ್ಷ ಬಾಲ್ಕನಿಯನ್ನಾದರೂ ತುಂಬಿಸಬೇಕೆಂದು ಎಷ್ಟು ಹರಸಾಹಸ ಪಡುತ್ತಿತ್ತು ಎನ್ನುವುದನ್ನು ಕಂಡು ನಮ್ಮ ಶೋಚನೀಯ ಪರಿಸ್ಥಿತಿಗೆ ನಾನೇ ಮರುಗಿದೆ.ಕೊನೆಗೂ ಡ್ರೆಸ್ ಸರ್ಕಲ್ ಖಾಲಿ, ಬಾಲ್ಕನಿ ಎಂಭತ್ತು ಭಾಗ ತುಂಬಿತು. ಬೆಂಗಳೂರಲ್ಲಿ ರಿಲೀಸ್ ಆದ ಎಲ್ಲ ಮಂದಿರಗಳಲ್ಲೂ ಬಹುತೇಕ ಇದೇ ಸ್ಥಿತಿ ಇತ್ತು ಎಂದು ಅನಂತರ ಗಾಂಧೀನಗರದಲ್ಲಿ ವಿಚಾರಿಸಿದಾಗ ತಿಳಿಯಿತು. ಅದರಲ್ಲಿ ನಿಮ್ಮ ಅಭಿಮಾನಿಗಳು ಎಷ್ಟು ಜನ ಬಂದಿದ್ದರೆಂದು ನನಗೆ ತಿಳಿಯಲಿಲ್ಲ.

ಹಾಗಾದರೆ, ನಿಮ್ಮ ಹೇಳಿಕೆಯನ್ನು ಗಮನಿಸಿದಾಗ ನನಗೆ ಅನಿಸಿದ್ದು ಎರಡು. ಬಹುಶಃ ನಿಮ್ಮ ಅಭಿಮಾನಿಗಳೆಲ್ಲ ಚಿತ್ರ ನೋಡುವ ಮೊದಲೇ ನಿರಾಶರಾಗಿ ಚಿತ್ರಮಂದಿರಗಳ ಕಡೆಗೆ ಬರಲಿಲ್ಲ ಅಥವಾ ಅವರು ಚಿತ್ರಮಂದಿರಗಳ ಬಾಲ್ಕನಿಗಳನ್ನೂ ಪೂರ್ತಿ ತುಂಬುವಷ್ಟು ಇರಲಿಕ್ಕಿಲ್ಲ. ಅಭಿಮಾನಿಗಳು ಮೊದಲ ದಿನವೇ ಚಿತ್ರಮಂದಿರಗಳಿಗೆ ನುಗ್ಗುವ ಪರಿಪಾಠ ಭಾರತದಲ್ಲಿದೆ ಎನ್ನುವ ಅಂಶ ನನ್ನನ್ನು ಈ ರೀತಿಯ ಸಾಧ್ಯತೆಗಳನ್ನು ಕಾಣುವಂತೆ ಮಾಡಿತು, ಅಷ್ಟೇ.

ಚಿತ್ರರಂಗದಲ್ಲಿ ನಿಮ್ಮ ಪ್ರಯಾಣ ಯಶಸ್ವಿಯಾಗಲಿ, ನಿಮಗೆ ಉತ್ತಮ ಅವಕಾಶಗಳು ದೊರೆತು ಆ ಚಿತ್ರಗಳು ಯಶಸ್ವಿಯಾಗಲಿ, ಆ ಮೂಲಕ ನಿಮ್ಮ ಅಭಿಮಾನೀ ವೃಂದವೂ ಬೆಳೆಯಲಿ ಎಂದು ಪ್ರಾಮಾಣಿಕವಾಗಿ ಹಾರೈಸುತ್ತೇನೆ.
ಶುಭಕಾಮನೆಗಳೊಂದಿಗೆ,
ಕೇಸರಿ ಹರವೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT