ಮಂಗಳವಾರ, ಸೆಪ್ಟೆಂಬರ್ 21, 2021
21 °C
ಬ್ಯಾಂಕಿಂಗ್‌ ನೇಮಕಾತಿಯಲ್ಲಿ ರಾಜ್ಯವಾರು ಆಯ್ಕೆಯೇ ಪರಿಹಾರ

ಸಂಗತ| ಕನ್ನಡ ಭಾಷೆಯ ಹಕ್ಕಿಗಿರಲಿ ಮನ್ನಣೆ

ಡಾ. ಎಚ್.ಟಿ.ಕೃಷ್ಣಮೂರ್ತಿ, ಟಿ.ವಿ.ಬಿ.ರಾಜನ್, ಪ್ರಕಾಶ ವಿ. ಹೆಬ್ಬಳ್ಳಿ Updated:

ಅಕ್ಷರ ಗಾತ್ರ : | |

Prajavani

ರಾಷ್ಟ್ರೀಕೃತ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಪ್ರಶ್ನೋತ್ತರ ಇರಬೇಕೆಂಬ ಬೇಡಿಕೆಗೆ, ಇಂತಹ ಕ್ರಮದಿಂದ ಹೆಚ್ಚು ಗೊಂದಲ ಆಗುತ್ತದೆ ಎಂಬ ಅಭಿಪ್ರಾಯವನ್ನು ಡಿ.ಎಸ್‌.ರಾಮಸ್ವಾಮಿ (ಸಂಗತ, ಜುಲೈ 16) ಮತ್ತು ಡಾ. ಈಶ್ವರ ಶಾಸ್ತ್ರಿ ಮೋಟಿನಸರ (ವಾ.ವಾ., ಜುಲೈ 17) ವ್ಯಕ್ತಪಡಿಸಿ ದ್ದಾರೆ. ಇದು ನೆಗಡಿ ಆಗುತ್ತದೆ ಎಂದು ಮೂಗು ಕತ್ತರಿಸಿಕೊಂಡಂತೆ. ಕನ್ನಡದಲ್ಲಿ ಪ್ರಶ್ನೆಪತ್ರಿಕೆ ನೀಡಿದಾಕ್ಷಣ ಎಲ್ಲ ಪರಿಹಾರ ಆದಂತೆ ಅಲ್ಲ. ಕನ್ನಡ ಮಾಧ್ಯಮದ ಅಭ್ಯರ್ಥಿ ಗಳಿಗೆ ಸ್ವಲ್ಪ ಸುಲಭ ಆಗಬಲ್ಲದು. ಅದಕ್ಕೆ ಪ್ರತ್ಯೇಕವಾದ ತರಬೇತಿ ಇತ್ಯಾದಿ ಖಂಡಿತ ಬೇಕು. ಒಮ್ಮೆ ನಾವು ನಮ್ಮ ಭಾಷೆ ಕುರಿತ ಹಕ್ಕನ್ನು ಕಳೆದುಕೊಂಡರೆ ಮತ್ತೆ ಲಭಿಸದು.

ಎರಡನೆಯದಾಗಿ, ಇದು ಕನ್ನಡ ಭಾಷೆಯ ಬಳಕೆ ಯಲ್ಲಿನ ಗೊಂದಲ ಅಲ್ಲ. ಅದು, ಕನ್ನಡದಲ್ಲಿ ಬಳಕೆ ಇಲ್ಲದ, ಸಹಜವಲ್ಲದ ಕನ್ನಡ ಪದಗಳನ್ನು ಬಳಸಿದ್ದರ ಪರಿಣಾಮವಾಗಿ ಆಗುವ ಗೊಂದಲ. ಶಾಸ್ತ್ರಿ ಅವರು ಹೇಳಿರುವ ‘ಅಸ್ತಾಪಿಸು’ ಪದ ಬಳಕೆಯೇ ತಪ್ಪು. ‘ಸ್ತಾಪಿಸು’ ಪದಕ್ಕೆ ಎದುರು ಪದವಾಗಿ ಇದನ್ನು ಬಳಸ ಲಾಗಿದೆ. ಇದು ಗೂಗಲ್ ಅನುವಾದ, ಅದನ್ನು ಹಾಗೆಯೇ ಬಳಕೆ ಮಾಡಲಾಗಿದೆ. ಇವೆಲ್ಲ ಆರಂಭದ ಗೊಂದಲ. ಕನ್ನಡವನ್ನು ನಾವು ಎಲ್ಲ ಕಡೆ ಬಳಸುತ್ತ ಸಜ್ಜುಗೊಳಿಸಬೇಕು. ಬಳಸುತ್ತ ಹೋದಂತೆ ಇವೆಲ್ಲ ಸರಿಯಾಗುತ್ತವೆ.

ಡಾ. ಎಚ್.ಟಿ.ಕೃಷ್ಣಮೂರ್ತಿ, ಶಿವಮೊಗ್ಗ

ಪ್ರವೃತ್ತಿ ಬದಲಾಗಲಿ

ಬಿಎಸ್ಆರ್‌ಬಿ (ಬ್ಯಾಂಕಿಂಗ್‌ ಸರ್ವಿಸ್‌ ರೆಕ್ರೂಟ್‌ ಮೆಂಟ್‌ ಬೋರ್ಡ್‌) ಮೂಲಕ 1980ರಲ್ಲಿ ಸುಮಾರು 250 ಮಂದಿ ಕೃಷಿ ಅಧಿಕಾರಿಗಳಾಗಿ ಆಗಿನ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್‌ಗೆ ನೇಮಕ ಗೊಂಡಿದ್ದೆವು. ಎಲ್ಲರೂ ಕರ್ನಾಟಕದಿಂದ ಮತ್ತು ಕರ್ನಾಟಕದಲ್ಲೇ ಉದ್ಯೋಗಕ್ಕೆ ಸೇರಿದ್ದೆವು. ನಂತರ 1982ರಲ್ಲಿ, 84ರಲ್ಲಿ ಮತ್ತು 86ರಲ್ಲೂ ಇದೇ ರೀತಿಯ ನೇಮಕಾತಿಗಳು ಆಗಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ನೇಮಕಾತಿಗಳು ಆಗದೆ ಉತ್ತರಪ್ರದೇಶ, ಬಿಹಾರ, ಆಂಧ್ರಪ್ರದೇಶ, ಕೇರಳ ರಾಜ್ಯಗಳಿಂದ ಅಧಿಕಾರಿ ವರ್ಗಕ್ಕೆ ನೇಮಕಗೊಂಡು ನಮ್ಮ ರಾಜ್ಯಕ್ಕೆ, ಅದರಲ್ಲೂ ಗ್ರಾಮೀಣ ಶಾಖೆಗಳಿಗೆ ನಿಯುಕ್ತರಾಗು ತ್ತಿದ್ದಾರೆ. ಆದ್ದರಿಂದ ಗ್ರಾಹಕರ ಜೊತೆ ವ್ಯವಹರಿಸುವಾಗ ಭಾಷೆಯ ಸಮಸ್ಯೆ ಬರುತ್ತದೆ.

ಅವರು ಕಷ್ಟಪಟ್ಟೋ ಅಥವಾ ಇಷ್ಟಪಟ್ಟೋ ಕನ್ನಡ ಕಲಿಯುವಷ್ಟರಲ್ಲಿ 2-3 ವರ್ಷ ಆಗಿ ಅವರು ಸ್ವರಾಜ್ಯ ಗಳಿಗೆ ಹೋಗುತ್ತಾರೆ. ಮತ್ತೆ ಹೊಸಬರು ಬಂದರೆ ಇದೇ ಪುನರಾವರ್ತನೆಯಾಗುತ್ತದೆ. ಆದ್ದರಿಂದ ಸಾರ್ವಜನಿಕ ಸೇವಾ ವಲಯಗಳಲ್ಲಿ ನೇಮಕಾತಿ ಮಾಡುವಾಗ ಆಯಾ ರಾಜ್ಯವಾರು ಪರೀಕ್ಷೆಗಳನ್ನು ಮಾಡಿ ಆಯ್ಕೆ ಮಾಡುವುದು ಒಂದು ಪರಿಹಾರ.

ಎರಡನೆಯದಾಗಿ, ನಮ್ಮ ರಾಜ್ಯದ ಯುವಕರು ಐ.ಟಿ., ಬಿ.ಟಿ. ಕಡೆಗೇ ಒಲವನ್ನು ತೋರಿಸುವುದು ಇನ್ನೊಂದು ಕಾರಣ. ಬಿ.ಎ, ಬಿ.ಎಸ್ಸಿ, ಬಿ.ಕಾಂ ಪದವೀಧರರೂ ಕಡಿಮೆ ವೇತನವಾದರೂ ಸರಿ ಐ.ಟಿ., ಬಿ.ಟಿ ಕಂಪ‍ನಿಗಳನ್ನೇ ಸೇರಲು ಬಯಸುತ್ತಾರೆ ಮತ್ತು ಬೆಂಗಳೂರು, ಮೈಸೂರಿನಲ್ಲೇ ಇರಬಯಸುತ್ತಾರೆ. ಈ ಪ್ರವೃತ್ತಿ ಬದಲಾಗಬೇಕು. ಒಳ್ಳೆಯ ತರಬೇತಿ ಮತ್ತು ತಯಾರಿ ನಡೆಸಿ ಪರೀಕ್ಷೆ ಎದುರಿಸಿದರೆ ನಮ್ಮ ಹುಡುಗರೂ ಈ ಕ್ಷೇತ್ರಗಳಲ್ಲಿ ನೌಕರಿಗೆ ಸೇರಬಹುದು.

ಟಿ.ವಿ.ಬಿ.ರಾಜನ್, ಬೆಂಗಳೂರು

ತರ್ಜುಮೆಯ ನೆಪ ಬೇಡ

‘ಕನ್ನಡಕ್ಕೆ ತರ್ಜುಮೆಯಾದ ಮೂಲ ಇಂಗ್ಲಿಷ್ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಅಪಾಯವೇ ಹೆಚ್ಚು’ ಎಂಬುದು ತಪ್ಪು ಗ್ರಹಿಕೆಯಾಗಿದೆ. ನನ್ನದೇ ಆದ ಎರಡು ಉದಾಹರಣೆಗಳನ್ನು ಕೊಡುವೆ. ಕೆಲವು ವರ್ಷಗಳ ಹಿಂದೆ ವಿಮೆ ಕಂಪನಿಗಳಿಗೆ ಏಜೆಂಟ್ ಅಥವಾ ಸಲಹೆಗಾರ ರಾಗುವುದಕ್ಕೆ ಪರೀಕ್ಷೆಗಳು ಇಂಗ್ಲಿಷ್, ಹಿಂದಿ, ತಮಿಳು, ಗುಜರಾತಿ ಮುಂತಾದ ಭಾಷೆಗಳಲ್ಲಿ ಮಾತ್ರ ನಡೆ ಯುತ್ತಿದ್ದವು. ಕನ್ನಡದಲ್ಲಿ ಇರಲಿಲ್ಲ. ಕನ್ನಡದಲ್ಲಿ ಪರೀಕ್ಷೆಗೆ ಅನುವು ಮಾಡಿಕೊಟ್ಟಾಗ ‘ಸಾಮಾನ್ಯ ವಿಮೆ’ ಮತ್ತು ‘ಜೀವವಿಮೆ’- ಈ ಎರಡೂ ಪರೀಕ್ಷೆಗಳನ್ನು ನಾನು ಕನ್ನಡದಲ್ಲಿ ಬರೆದು ಪಾಸಾಗಿದ್ದೇನೆ. ಕನ್ನಡದಲ್ಲಿ ಈ ಪರೀಕ್ಷೆ ಬರೆದ ಮೊದಲ ತಂಡದ ಅಭ್ಯರ್ಥಿ ಆಗಿದ್ದಕ್ಕೆ ನನಗೆ ಹೆಮ್ಮೆಯೂ ಇದೆ. ಇಂದು ರಾಜ್ಯದಾದ್ಯಂತ ಪ್ರತಿವರ್ಷ ನೂರಾರು ಅಭ್ಯರ್ಥಿಗಳು ಕನ್ನಡದಲ್ಲಿ ಪರೀಕ್ಷೆಗಳನ್ನು ಬರೆದು ಯಶಸ್ವಿ ವಿಮೆ ಸಲಹೆಗಾರರಾಗಿ ನೇಮಕಗೊಳ್ಳುತ್ತಿದ್ದಾರೆ.

ಬ್ಯಾಂಕಿಂಗ್ ಪರೀಕ್ಷೆ ಕೂಡ ಇದಕ್ಕೆ ಹೊರತಾಗಿಲ್ಲ. ಪೂರ್ಣ ಇಂಗ್ಲಿಷ್ ಬಾರದ ಅಸಂಖ್ಯಾತ ಹಿಂದಿ, ಗುಜರಾತಿ ಹಾಗೂ ಇತರ ಭಾಷೆಗಳ ಅಭ್ಯರ್ಥಿಗಳು ಇಂದು ಅವರವರ ಭಾಷೆಯಲ್ಲಿ ಪರೀಕ್ಷೆ ಪಾಸಾಗಿ ಬ್ಯಾಂಕ್‌ ಹುದ್ದೆ ಪಡೆಯುತ್ತಿದ್ದಾರೆ.

ಈಗ ಕನ್ನಡಕ್ಕೆ ತರ್ಜುಮೆಯಾದರೆ ಅಪಾರ್ಥ ಆಗುತ್ತದೆಂದರೆ ಅದು ಸರಿಯಾದ ತರ್ಜುಮೆ ಅಲ್ಲ. ಅಪಾರ್ಥ ಆಗುತ್ತದೆ ಅಂತ ನೆಪ ಒಡ್ಡಿ ಭಾಷೆಯ ಬಳಕೆ ಮತ್ತು ಅಭಿವೃದ್ಧಿಯನ್ನು ಕೈಬಿಡುವುದು ಮೂರ್ಖತನ ವಾದೀತು. ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದಲೂ ಎಲ್ಲ ಕ್ಷೇತ್ರದ ಎಲ್ಲ ಮಟ್ಟದ ಪರೀಕ್ಷೆಗಳು ಕನ್ನಡದಲ್ಲಿ ಇರಲೇಬೇಕಾಗುತ್ತದೆ.

ಪ್ರಕಾಶ ವಿ. ಹೆಬ್ಬಳ್ಳಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು