ಕಲಿಕೆಗೆ ತುಡಿಯುವ ಮನೋಭಾವ...

7
ಮಾಹಿತಿಯು ಬೆರಳ ತುದಿಯಲ್ಲಿಯೇ ದೊರೆಯಬಹುದಾದ ಇಂದಿನ ದಿನಗಳಲ್ಲಿ ಮಾಹಿತಿ ಜೊತೆ ಅರಿವಿನ ಅಂತರಂಗವನ್ನು ತಿಳಿಯುವ ಬಗೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕಿದೆ

ಕಲಿಕೆಗೆ ತುಡಿಯುವ ಮನೋಭಾವ...

Published:
Updated:

ಕಚೇರಿ ಮುಗಿಸಿ, ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಾವೇರಿ ಭವನದ ಮುಂದೆ ಮೆಟ್ರೊ ಸ್ಟೇಷನ್ ಕಡೆ ಹೆಜ್ಜೆ ಹಾಕುತ್ತಿದ್ದೆ. ರಸ್ತೆಯ ಬದಿಯಲ್ಲಿ ಸೌತೆಕಾಯಿ ಮಾರಾಟ ಮಾಡುತ್ತಿದ್ದ ಹುಡುಗನನ್ನು ಕುತೂಹಲದಿಂದ ಅವನು ಓದುತ್ತಿರುವ ಶಾಲೆ, ತರಗತಿಯ ಕುರಿತು ವಿಚಾರಿಸಿದಾಗ ತಿಳಿದು ಬಂದದ್ದು ಅವನೊಂದು ಖಾಸಗಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾನೆ ಎಂದು. ಸರ್ಕಾರಿ ಶಾಲೆಗೆ ಏಕೆ ಸೇರಲಿಲ್ಲ ಎಂಬ ಕುರಿತು ವಿಚಾರಿಸಿದಾಗ ‘ಸರ್ಕಾರಿ ಶಾಲೆಗೆ ಸೇರುವಷ್ಟು ನಮ್ಮನ್ನು ಆ ದೇವರು ಕೆಳಮಟ್ಟದಲ್ಲಿಟ್ಟಿಲ್ಲ’ ಎಂಬ ಅವನ ಮಾತು ನನ್ನನ್ನು ದಂಗು ಬಡಿಯುವಂತೆ ಮಾಡಿತು.

ಕಳೆದ ವಾರ ಉತ್ತರಪ್ರದೇಶದ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಯೊಬ್ಬ ಅಶಿಸ್ತಿನ ಕಾರಣಕ್ಕೆ ತನ್ನನ್ನು ಶಾಲೆಯಿಂದ ಹೊರಹಾಕಿದ್ದರಿಂದ ಆಕ್ರೋಶಗೊಂಡು ಶಾಲೆಯ ಪ್ರಾಂಶುಪಾಲರ ಮೇಲೆ ಗುಂಡಿನ ದಾಳಿ ಮಾಡಿರುವುದು ವರದಿಯಾಗಿದೆ (ಪ್ರ.ವಾ., ಆ. 31). ಇದೇ ರೀತಿ ಆಗಸ್ಟ್ ಮೊದಲ ವಾರದಲ್ಲಿ ಉತ್ತರಪ್ರದೇಶದಲ್ಲಿ ಖಾಸಗಿ ಶಾಲೆಯೊಂದರ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಗುಂಡಿನ ದಾಳಿಯಿಂದ ಮೃತಪಟ್ಟದ್ದು ವರದಿಯಾಗಿತ್ತು.

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಮೇಲಿನ ಘಟನೆಗಳು ಮನದಾಳದಲ್ಲಿ ನಮ್ಮೆಲ್ಲರನ್ನೂ ಚಿಂತನೆಗೆ ಹಚ್ಚುತ್ತವೆ. ಸರ್ಕಾರಿ ಶಾಲೆಗಳ ಶಿಕ್ಷಕರ ಮನೋಸ್ಥೈರ್ಯವೇ ಕುಸಿಯುವಂತಹ ರೀತಿಯನ್ನು ಮೊದಲ ಘಟನೆಯು ಸಾಂಕೇತಿಕವಾಗಿ ಪ್ರತಿನಿಧಿಸುವಂತಿದೆ. ಅಮೆರಿಕದಲ್ಲಿ ವರದಿಯಾಗುತ್ತಿದ್ದ ಶಿಕ್ಷಕರ ಮೇಲಿನ ಗುಂಡು ದಾಳಿ ಪ್ರಕರಣಗಳು ನಮ್ಮ ದೇಶಕ್ಕೂ ಕಾಲಿಟ್ಟಿರುವ ಆತಂಕಕಾರಿ ಬೆಳವಣಿಗೆಯು ಇನ್ನೆರಡು ಘಟನೆಗಳಿಂದ ಗಮನಿಸಬಹುದು. ಅದರಲ್ಲೂ ಈ ಘಟನೆಗಳು ಖಾಸಗಿ ಶಾಲೆಗಳಲ್ಲಿ ಜರುಗಿರುವುದನ್ನು ಗಮನಿಸಿದರೆ ಪೋಷಕರ, ಆಡಳಿತ ಮಂಡಳಿಗಳ ನಿರೀಕ್ಷೆಗಳ ಜೊತೆ ವಿದ್ಯಾರ್ಥಿಗಳ ಆಕ್ರಮಣಗಳ ಭಯದ ನಡುವೆ ಖಾಸಗಿ ಶಾಲಾ ಶಿಕ್ಷಕರು ಕೆಲಸ ನಿರ್ವಹಿಸುವ ಸ್ಥಿತಿ ಬಂದಿದೆಯೇ ಎಂಬ ಅನುಮಾನ ಬರದೇ ಇರದು.

ನಮ್ಮ ದೇಶದಲ್ಲಿ ವಿವಿಧ ರೀತಿಯಲ್ಲಿ ವರ್ಗೀಕರಣಗೊಂಡ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು ವಿವಿಧ ರೀತಿಯ ಸವಾಲುಗಳ ನಡುವೆ ಕಾರ್ಯನಿರ್ವಹಿಸುತ್ತಿರುವುದನ್ನು ಗುರುತಿಸಬಹುದಾಗಿದೆ. ಬಹುತೇಕ ತಳಸಮುದಾಯಗಳ ಆಶೋತ್ತರಗಳ ಈಡೇರಿಕೆಯ ಪ್ರತೀಕದಂತಿರುವ ಸರ್ಕಾರಿ ಶಾಲೆಗಳ ಶಿಕ್ಷಕರು ಉತ್ತಮ ವೇತನ ಹಾಗೂ ಸೇವಾ ಭದ್ರತೆಯ ಸೌಲಭ್ಯಗಳನ್ನು ಹೊಂದಿರುವುದರ ಜೊತೆ ವಿವಿಧ ಸವಾಲುಗಳ ನಡುವೆ ಸಮತೋಲನ ಸಾಧಿಸುತ್ತಾ ಸಾಗುತ್ತಿದ್ದಾರೆ. ಹೆಚ್ಚಿನ ಖಾಸಗಿ ಶಾಲೆಗಳ ಶಿಕ್ಷಕರು ಆಡಳಿತ ಮಂಡಳಿ ಹಾಗೂ ಪೋಷಕ ಸಮುದಾಯದ ನಿರೀಕ್ಷೆಗಳ ಭಾರದ ಜೊತೆ ಸೀಮಿತ ವೇತನ ಹಾಗೂ ಸೇವಾ ಭದ್ರತೆಯ ಕೊರತೆಯ ನಡುವೆ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಬಹುದು. ಹೆಚ್ಚಿನ ಅನುದಾನಿತ ಶಾಲೆಗಳ ಶಿಕ್ಷಕರು ಅಧಿಕ ಮೊತ್ತವನ್ನು ವಂತಿಗೆಯಾಗಿ ನೀಡಿ, ಪ್ರಯಾಸದಿಂದ ವೇತನಾನುದಾನಕ್ಕೆ ಒಳಪಟ್ಟು, ಮಕ್ಕಳ ಸಂಖ್ಯೆಯಲ್ಲಿ ಕುಸಿತವಾಗದಂತೆ ಗಮನಿಸಿಕೊಂಡು ಕರ್ತವ್ಯನಿರ್ವಹಿಸುತ್ತಿದ್ದಾರೆ.

ಯಾವುದೇ ವರ್ಗದ ಶಿಕ್ಷಕರಾದಾಗ್ಯೂ ಅವರು ವಹಿಸಬೇಕಾದ ಪಾತ್ರದ ಕುರಿತು ಚಿಂತಿಸುವ ಅಗತ್ಯವಿದೆ. ಸಾಮಾನ್ಯವಾಗಿ ಶಿಕ್ಷಕರಲ್ಲಿರಬೇಕಾದ ಗುಣಗಳು ಹಾಗೂ ನಿರೀಕ್ಷೆಗಳ ಬಗ್ಗೆ ಒಂದು ಅತಿ ದೀರ್ಘ ಪಟ್ಟಿಯೇ ಇದೆ. ಈ ಕುರಿತು ಬಿ.ಇಡಿ, ಡಿ.ಇಡಿ ಮಾಡಿರುವ ಯಾವುದೇ ಶಿಕ್ಷಕರನ್ನು ಕೇಳಿದರೂ ಹತ್ತಿಪ್ಪತ್ತು ಪುಟಗಳಿಗಿಂತ ಹೆಚ್ಚೇ ಉತ್ತರ ಬರೆದಾರು. ಶಿಕ್ಷಕ ಎಂದರೆ ಶಿವ ಸ್ವರೂಪಿಯಾಗಿ ಕ್ಷ-ಕಿರಣದೋಪಾದಿಯಾಗಿ ಕರ್ತವ್ಯ ನಿರ್ವಹಿಸುವವನು ಎಂಬ ವ್ಯಾಖ್ಯೆ ಪ್ರಸಿದ್ಧಿ. ಇಂದಿನ ಸಂಕೀರ್ಣ ಸಮಾಜದಲ್ಲಿ ಅದರಲ್ಲಿಯೂ ಅತಿಯಾದ ದೃಶ್ಯ ಮಾಧ್ಯಮಕ್ಕೆ ತಮ್ಮನ್ನು ತಾವು ತೆರೆದುಕೊಂಡಿರುವ ವಿದ್ಯಾರ್ಥಿಗಳ ಗಮನವನ್ನು ಹಿಡಿದಿಟ್ಟು ಬೋಧನೆ ಕೈಗೊಳ್ಳಬೇಕಾದ ಗುರುತರ ಜವಾಬ್ದಾರಿ ಇಂದಿನ ಗುರುಗಳದ್ದಾಗಿದೆ. ಗುರುಗಳು ಸಹ ದೃಶ್ಯ ಮಾಧ್ಯಮಗಳ ಹಿಡಿತದಿಂದ ಹೊರಬಂದು ತಾವೂ ಕಲಿತು, ವಿದ್ಯಾರ್ಥಿಗಳನ್ನೂ ಕಲಿಕೆಗೆ ಹಚ್ಚುವಂತೆ ಕಾರ್ಯನಿರ್ವಹಿಸಬೇಕಿದೆ. ನೇರ ಬೋಧನೆಯ ಜೊತೆ ವಿದ್ಯಾರ್ಥಿ-ವಿದ್ಯಾರ್ಥಿಗಳ ನಡುವೆ ಸಾಹಚರ್ಯ, ಚರ್ಚೆ, ಚಿಂತನೆಗಳ ಮೂಲಕ ಕಲಿಕೆಯ ಕಡೆ ಸಾಗುವಂತಹ ಸುಗಮಕಾರಿಕೆಯನ್ನು ಕರಗತ ಮಾಡಿಕೊಂಡು ಮುನ್ನಡೆಯುವ ಅಗತ್ಯ ಶಿಕ್ಷಕರಿಗಿದೆ.

ವಿಷಯ, ಮಾಹಿತಿಯು ಬೆರಳ ತುದಿಯಲ್ಲಿಯೇ ದೊರೆಯಬಹುದಾದ ಇಂದಿನ ದಿನಗಳಲ್ಲಿ ಮಾಹಿತಿಯ ಜೊತೆ ಅರಿವಿನ ಅಂತರಂಗವನ್ನು ತಿಳಿಯುವ ಬಗೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕಿದೆ. ಇಂದಿನ ದೃಶ್ಯ ಶಬ್ದಗಳ ಅಬ್ಬರದ ನಡುವೆ ಕಳೆದುಹೋಗದೆ ತಮ್ಮ ಅಂತರಂಗದ ಧ್ವನಿಯನ್ನು ಮೌನವಾಗಿ ಆಲಿಸುವೆಡೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಅಗತ್ಯ ಇದೆ. ಅಂಕ ಗಳಿಕೆಯ ಹಪಹಪಿತನವನ್ನು ಕುಗ್ಗಿಸಿ ಮಕ್ಕಳಲ್ಲಿ ಆತ್ಮವಿಶ್ವಾಸ, ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕಲಿಕೆಯ ಪದ್ಧತಿಗಳನ್ನು ಪೋಷಕರು ಸ್ವಾಗತಿಸುವೆಡೆ ಶಿಕ್ಷಕರು ಅವರನ್ನು ಸಜ್ಜುಗೊಳಿಸಬೇಕಿದೆ.

ವಿದ್ಯಾರ್ಥಿಗಳೆಡೆಗೆ ತೋರಬೇಕಾದ ಅನುಭೂತಿಯೇ ಶಿಕ್ಷಕರಿಗಿರಬೇಕಾದ ಪ್ರಮುಖ ಅರ್ಹತೆ. ಶಿಕ್ಷಕರು ವಿದ್ಯಾರ್ಥಿಗಳ ಸ್ಥಾನದಲ್ಲಿ ನಿಂತು ಅವರ ಕಲಿಕೆಯ, ಶಿಸ್ತಿನ, ಹೊಂದಾಣಿಕೆಯ ಸಮಸ್ಯೆಗಳನ್ನು ಸಹಾನುಭೂತಿಯಿಂದ ಪರಿಗಣಿಸಿ, ತಾಳ್ಮೆಯಿಂದ ಪರಿಹರಿಸಬೇಕಿದೆ. ವಿದ್ಯಾರ್ಥಿಗಳು ತಪ್ಪೆಸಗಿದಾಗ ಅವರ ತಪ್ಪನ್ನು ಅನುಭೂತಿಯಿಂದ ಪರಿಗಣಿಸಿ, ಅವರ ತಪ್ಪಿನ ಅರಿವು ಅವರಿಗಾಗುವಂತೆ ಮಾಡುವ ಮೂಲಕ ಅವರನ್ನು ಸರಿ ದಾರಿಗೆ, ಉತ್ತಮ ಕಲಿಕೆಗೆ ಹಚ್ಚಬಹುದೆಂದು ಅಮೆರಿಕದ ಶಿಕ್ಷಣ ತಜ್ಞ ಜಿಮ್ ಫೇ ಅಭಿಪ್ರಾಯಪಡುತ್ತಾರೆ. ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ಪ್ರಭಾವಿಸುವ ಅಂಶಗಳಲ್ಲಿ ವಿದ್ಯಾರ್ಥಿಗಳೆಡೆಗೆ ಶಿಕ್ಷಕರು ಹೊಂದುವ ಮಾನವ ಸಂಪರ್ಕ, ಪ್ರೀತಿ, ಅನುಭೂತಿಗಳು ಶೇ 78ರಷ್ಟು ಪ್ರಭಾವ ಬೀರಿದರೆ, ಶೇ 6ರಷ್ಟು ಮಾತ್ರ ಬೋಧನೆಯ ಕಾರ್ಯತಂತ್ರಗಳ ಪಾಲಾಗಿದ್ದು, ಉಳಿದ ಶೇ 16ರಷ್ಟು ನಿಯಂತ್ರಣದಲ್ಲಿಲ್ಲದ ಅಂಶಗಳ ಪಾಲು ಎಂದು ಜಿಮ್ ಫೇ ಅಭಿಪ್ರಾಯಪಡುತ್ತಾರೆ. ಅಂದರೆ ಶಿಕ್ಷಕರ ಶ್ರಮ, ಬುದ್ಧಿಶಕ್ತಿ, ನಾವೀನ್ಯದ ಬೋಧನಾ ವಿಧಾನಗಳಿಗಿಂತಲೂ ವಿದ್ಯಾರ್ಥಿಗಳೆಡೆ ಶಿಕ್ಷಕರು ತೋರುವ ಪ್ರೀತಿ, ಅನುಭೂತಿ, ಸಹನೆ, ತಾಳ್ಮೆಗಳು... ಅವರನ್ನು ಕಲಿಕೆಗೆ ಹಚ್ಚುವ ಜೊತೆ ಸರಿ ದಾರಿಗೆ ತರುವಂತೆ ಮಾಡಬಲ್ಲವು ಎಂಬುದು ನಿರ್ವಿವಾದದ ಸಂಗತಿ.

ವಿದ್ಯಾರ್ಥಿಗಳಲ್ಲಿ ಬಣ್ಣ ಬಣ್ಣದ ಕನಸುಗಳನ್ನು ತುಂಬಿ ಸದಾ ಜೀವನೋತ್ಸಾಹದಿಂದ ಪುಟಿಯುವ ಚೈತನ್ಯದ ಬುಗ್ಗೆಗಳಾಗಿರುವಂತೆ ನೋಡಿಕೊಳ್ಳುವ ಹೊಣೆ ಶಿಕ್ಷಕರದ್ದಾಗಿದೆ. ಶಿಕ್ಷಕರು ಕನಸು, ಶಕ್ತಿ, ಚೈತನ್ಯ, ಉತ್ಸಾಹ, ಲವಲವಿಕೆಗಳಿಂದ ಸದಾ ಇದ್ದಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ. ಶೈಕ್ಷಣಿಕ ಆಡಳಿತ ವ್ಯವಸ್ಥೆಗಳು ಶಿಕ್ಷಕರಲ್ಲಿ ಪ್ರೇರಣೆ, ಉತ್ಸಾಹ, ಕಲಿಕೆಗೆ ತುಡಿಯುವ ಮನೋಭಾವಗಳನ್ನು ತುಂಬುವಂತಿದ್ದಲ್ಲಿ ಇದು ಅಸಾಧ್ಯವೇನಲ್ಲ. ಈ ನಿಟ್ಟಿನಲ್ಲಿ ಗಮನಹರಿಸೋಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !