ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳ್ಮೆ ತೋರಬೇಕು ಶಾಸಕಾಂಗ

Last Updated 19 ಜನವರಿ 2023, 4:18 IST
ಅಕ್ಷರ ಗಾತ್ರ

ನ್ಯಾಯಾಂಗವು ಈಚಿನ ದಿನಗಳಲ್ಲಿ ನಾನಾ ಕಾರಣ ಗಳಿಗಾಗಿ ಚರ್ಚೆಯ ಕೇಂದ್ರದಲ್ಲಿದೆ. ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ನಮ್ಮ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂರು ಮುಖ್ಯ ಸ್ತಂಭ ಗಳು. ಶಾಸಕಾಂಗ ಮತ್ತು ಕಾರ್ಯಾಂಗ ಹಳಿ ತಪ್ಪಿದಾಗ ಅವನ್ನು ಮತ್ತೆ ಹಳಿಯ ಮೇಲೆ ತರುವುದೇ ನ್ಯಾಯಾಂಗ. ಸರ್ಕಾರದ ವಿಷಯಕ್ಕೆ ಸಂಬಂಧಿಸಿದ ಈ ಮಾತು ನಾಗರಿಕರ ಹಕ್ಕುಗಳು, ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆಯೂ ನಿಜ.

ಶಾಸಕಾಂಗ, ಕಾರ್ಯಾಂಗದಿಂದ ತಮಗೆ ಅನ್ಯಾಯವಾಗುತ್ತಿದೆಯೆಂದು ಅನಿಸಿದ ಸಂದರ್ಭದಲ್ಲಿ ಜನ ಮತ್ತು ಸಂಸ್ಥೆಗಳ ಅಂತಿಮ ಆಸರೆ ನ್ಯಾಯಾಂಗ ವೊಂದೇ. ನ್ಯಾಯಾಲಯಗಳು ತೀರ್ಪು ನೀಡಲು ಅತಿ ದೀರ್ಘ ಸಮಯ ತೆಗೆದುಕೊಳ್ಳುವುದರಿಂದ, ‘ತಡವಾಗಿ ನೀಡಿದ ನ್ಯಾಯವೆಂದರೆ ನ್ಯಾಯವನ್ನು ನಿರಾಕರಿಸಿದಂತೆಯೇ’ ಎಂಬ ಮಾತು ಹುಟ್ಟಿಕೊಂಡಿರುವುದು ನಿಜವಾದರೂ ಈಗಲೂ ಜನ ಅತಿ ಹೆಚ್ಚಿನ ಭರವಸೆ ಇಟ್ಟಿರುವುದು ನ್ಯಾಯಾಂಗದ ಮೇಲೆಯೇ. ಸರ್ಕಾರಗಳು ಕೂಡ ಬಹಳಷ್ಟು ಬಾರಿ ನ್ಯಾಯಾಂಗದ ತೀರ್ಪಿಗಾಗಿ ಚಾತಕ ಪಕ್ಷಿಗಳಂತೆ ಕಾಯುವ ಸಂದರ್ಭಗಳು ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ.

ರಾಜಕೀಯವಾಗಿಯೇ ಇತ್ಯರ್ಥವಾಗಬೇಕಾದ ಅನೇಕ ಸಮಸ್ಯೆಗಳು ಸರ್ಕಾರದ ಮುತ್ಸದ್ದಿತನದ ಕೊರತೆ ಇಲ್ಲವೆ ಅಸಾಮರ್ಥ್ಯದಿಂದ ಇತ್ಯರ್ಥ ಕಾಣದೆ ಹೋದಾಗ, ಅಂತಿಮ ಆಸರೆಯಾಗಿ ನ್ಯಾಯಾಂಗ ಒದಗಿಬಂದು ಜನರ ಪಾಲಿಗಷ್ಟೇ ಅಲ್ಲ, ಸರ್ಕಾರಗಳ ಪಾಲಿಗೂ ರಕ್ಷಕದೇವತೆಯಾಗಿ ಕಂಡುಬಂದಿರುವ ಸಂದರ್ಭಗಳಿಗೇನೂ ಕೊರತೆಯಿಲ್ಲ. ಎರಡು ಕೋಮುಗಳ ನಡುವೆ ಬಗೆಹರಿಯದ ಕಗ್ಗಂಟಾಗಿದ್ದ ಅಯೋಧ್ಯೆಯ ಸಮಸ್ಯೆ ನ್ಯಾಯಾಂಗದ ಮಧ್ಯಪ್ರವೇಶದಿಂದ ಬಗೆಹರಿದು ಸರ್ಕಾರ ನಿಟ್ಟುಸಿರುಬಿಡುವಂತಾದದ್ದು ಕಣ್ಣೆದುರೇ ಇದೆ. ನಮ್ಮ ಜನ ಅವರು ಯಾರೇ ಆಗಿರಲಿ, ಯಾವ ಕೋಮಿಗೆ ಸೇರಿರಲಿ, ಯಾವ ರಾಜಕೀಯ ಪಕ್ಷಕ್ಕೆ ಸೇರಿರಲಿ, ಯಾವ ರಾಜ್ಯದವರೇ ಆಗಿರಲಿ ಅಂತಿಮವಾಗಿ ನ್ಯಾಯಾಂಗಕ್ಕೆ, ಅದರ ತೀರ್ಪಿಗೆ ತಲೆಬಾಗುತ್ತಾರೆ. ಅದು ನಮ್ಮ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಸೌಂದರ್ಯದ ಅಂಶ.

ತಮಗೆ ಸಮಾಧಾನ ಕೊಡುವಂಥ ತೀರ್ಪು ಆಗಿಲ್ಲದಿದ್ದಾಗಲೂ ಒಳಗೊಳಗೇ ಬಯ್ದುಕೊಂಡರೂ ಬಹಿರಂಗವಾಗಿ ತುಟಿಬಿಚ್ಚದೆ ಸುಮ್ಮನಿರುತ್ತಾರೆ. ಅದು ಎರಡು ರಾಜ್ಯಗಳಿಗೆ ಸಂಬಂಧಿಸಿದ ನದಿ ನೀರಿನ ವಿವಾದವಾಗಿರಬಹುದು, ಗಡಿ ಸಮಸ್ಯೆಯಾಗಿರಬಹುದು, ಎರಡು ಕೋಮುಗಳ ನಡುವಿನ ಸಮಸ್ಯೆಯಾಗಿರಬಹುದು, ಶಿಕ್ಷಣ ಮಾಧ್ಯಮದ ಸಮಸ್ಯೆಯಾಗಿರಬಹುದು, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನವನ್ನು ರದ್ದುಪಡಿಸಿದಂಥ ಸರ್ಕಾರದ ಕ್ರಮ ವಾಗಿರಬಹುದು ಎಲ್ಲಕ್ಕೂ ಈಚೆಗೆ ನ್ಯಾಯಾಲಯ ನೀಡುವ ತೀರ್ಪೇ ಅಂತಿಮ ಎಂಬಂತಾಗಿ, ರಾಜಕೀಯ ಪರಿಹಾರ ಕಂಡುಕೊಳ್ಳುವ ಸರ್ಕಾರಗಳ ಸಾಮರ್ಥ್ಯವೇ ಪ್ರಶ್ನಿಸಲ್ಪಡುವಂತಾಗಿರುವುದು ಸರ್ಕಾರಗಳಿಗೆ ಕೀರ್ತಿ ತರುವಂಥದ್ದೇನಲ್ಲ. ಪಂಚಮಸಾಲಿ ಸಮುದಾಯದ ಮೀಸಲಾತಿಗೆ ಸಂಬಂಧಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಈಚೆಗೆ ನೀಡಿದ ತೀರ್ಪಿನಿಂದ ಸರ್ಕಾರ ತಾತ್ಕಾಲಿಕವಾಗಿಯಾದರೂ ನೆಮ್ಮದಿಯ ನಿಟ್ಟುಸಿರುಬಿಡುವಂತಾದದ್ದು ತಿಳಿದೇ ಇದೆ.

ನ್ಯಾಯಾಲಯದ ಮೇಲಿನ ಅವಲಂಬನೆ ಇಷ್ಟರ ಮಟ್ಟಿಗೆ ಇದ್ದರೂ ಸರ್ಕಾರಕ್ಕೂ ನ್ಯಾಯಾಂಗಕ್ಕೂ ಘರ್ಷಣೆ ಕೂಡ ಅಷ್ಟೇ ಜೋರಾಗಿದೆ. ನ್ಯಾಯಾಂಗ ಕೆಲವೊಮ್ಮೆ ಅತಿಯಾದ ಕ್ರಿಯಾಶೀಲತೆಯಿಂದ ಶಾಸಕಾಂಗದ ಅಧಿಕಾರ ವ್ಯಾಪ್ತಿಗೂ ಕೈಚಾಚುತ್ತಿದೆ ಎಂಬ ಟೀಕೆಗಳು ಆಗಿಂದಾಗ್ಗೆ ಕೇಳಿಬರುತ್ತಲೇ ಇವೆ. ನ್ಯಾಯಾಂಗ ನೇಮಕಾತಿ ಆಯೋಗ ರಚಿಸಲು ಸಂಸತ್ತು ರೂಪಿಸಿದ ಕಾಯ್ದೆಯನ್ನು ಸುಪ್ರೀಂ ಕೋರ್ಟು ಅಸಿಂಧು ಗೊಳಿಸಿದ್ದರ ಬಗ್ಗೆ ಉಪರಾಷ್ಟ್ರಪತಿ ಅಸಮಾಧಾನ ವ್ಯಕ್ತಪಡಿಸಿದ್ದರ ಬೆನ್ನಿಗೇ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲ ಸ್ವರೂಪಕ್ಕೆ ಸಂಬಂಧಿಸಿದ ತಾತ್ವಿಕತೆಯನ್ನು ಪ್ರಶ್ನಿಸಿದ್ದು ನಡೆದಿದೆ. ಜೊತೆಗೆ ಕೇಂದ್ರ ಕಾನೂನು ಸಚಿವರು ಮತ್ತು ನ್ಯಾಯಾಲಯದ ನಡುವಿನ ವಾಗ್ಯುದ್ಧಗಳು ದಿನಬೆಳಗಾದರೆ ಪತ್ರಿಕೆಗಳಲ್ಲಿ ಬರುತ್ತಲೇ ಇವೆ.

ಈಚೆಗೆ ಉಪರಾಷ್ಟ್ರಪತಿಯವರು ಸಭಾಪತಿಯಾಗಿ ಮಾಡಿದ ಮೊದಲ ಭಾಷಣದಲ್ಲಿ ನ್ಯಾಯಾಂಗದ ಕುರಿತು ಟೀಕಿಸಿದ್ದರು. ಶಾಸಕಾಂಗದ ಪಾವಿತ್ರ್ಯವನ್ನು ನ್ಯಾಯಾಂಗ ಗೌರವಿಸಬೇಕು ಎಂಬ ಮಾತೂ ಅವರಿಂದ ಕೇಳಿಬಂದಿದೆ. ಆದರೆ ಈಚಿನ ಹಲವು ವರ್ಷಗಳಲ್ಲಿ ಶಾಸಕಾಂಗದ ಅಧಿಕಾರ ವ್ಯಾಪ್ತಿಯೊಳಕ್ಕೆ ನ್ಯಾಯಾಂಗ ಅನಗತ್ಯವಾಗಿ ಪ್ರವೇಶಿಸಿ ಬಿಟ್ಟಿತೇನೋ ಎಂದು ಅನೇಕರಿಗೆ ಅನಿಸಿದ ಸಂದರ್ಭಗಳಲ್ಲೂ ಅದು ಸುಮ್ಮನೆ ಪ್ರವೇಶಿಸಿದ್ದಲ್ಲ, ಎಲ್ಲೋ ಒಂದು ಕಡೆ ಶಾಸಕಾಂಗ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಎಡವಿದಂತಾಗಿದ್ದೇ ಇದಕ್ಕೆ ಕಾರಣ ಎಂಬ ಸಮಾಧಾನವೂ ಸಮತೋಲನದಿಂದ ಚಿಂತಿಸುವವರಿಗೆ ಇದೆ.

ಸರ್ಕಾರ ತನಗೆ ಸಮಸ್ಯೆ ಉಂಟಾದಾಗ ನ್ಯಾಯಾಲಯದ ಕಡೆ ನೋಡುವುದು, ತಾನು ಮಾಡಿದ ಶಾಸನದ ಸಿಂಧುತ್ವವನ್ನು ನ್ಯಾಯಾಲಯ ಪ್ರಶ್ನಿಸಿದಾಗ ಕಣ್ಣು ಕೆಂಪು ಮಾಡಿಕೊಳ್ಳುವುದು, ನ್ಯಾಯಾಂಗದ ನಡೆಯನ್ನೇ ಸಂಶಯಿಸುವುದು ಯಾವ ನ್ಯಾಯ? ಒಂಟೆ ಬೇಕೆಂದಾದರೆ ಅದರ ಡುಬ್ಬವನ್ನು ಸಹಿಸಬೇಕಾಗುವಂತೆ, ನ್ಯಾಯಾಂಗವು ಸರ್ಕಾರಕ್ಕೆ, ದೇಶಕ್ಕೆ ಅಗತ್ಯವಾಗಿರುವಾಗ, ಶಾಸನಗಳ ಸಿಂಧುತ್ವವನ್ನು ನ್ಯಾಯಾಂಗ ಪ್ರಶ್ನಿಸಿದರೆ ಅದನ್ನು ತಾಳಿಕೊಳ್ಳುವಷ್ಟು ತಾಳ್ಮೆ, ವಿವೇಕವು ಸರ್ಕಾರವನ್ನು ನಡೆಸುವವರಲ್ಲಿ ಇರಬೇಕು. ಇಲ್ಲದಿದ್ದರೆ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡಲು, ಅದು ಜನಹಿತ ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಶಾಸಕಾಂಗ ಅರ್ಥಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT