ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ, ಮಳಿಗೆ, ನೈವೇದ್ಯ

ದೇವರ ಆಚರಣೆಗಳಿಗೆ ಇಲ್ಲದ ಮಡಿವಂತಿಕೆಯು ವ್ಯಾಪಾರ ಮಳಿಗೆಗೆ ಹೆಸರು ಇಡುವುದಕ್ಕೆ ಮಾತ್ರ ಏಕೆ?
Last Updated 28 ನವೆಂಬರ್ 2019, 19:41 IST
ಅಕ್ಷರ ಗಾತ್ರ

ರಾಜ್ಯದಲ್ಲಿನ ಮದ್ಯ ಮಾರಾಟ ಕೇಂದ್ರಗಳಿಂದ ದೇವರ ಹೆಸರನ್ನು ಮುಕ್ತಗೊಳಿಸಲು ಸುತ್ತೋಲೆ
ಹೊರಡಿಸಲಾಗುವುದು ಎಂದು ಮುಜರಾಯಿ ಸಚಿವರು ಈಚೆಗೆ ಹೇಳಿದ್ದಾರೆ. ಈ ಹೇಳಿಕೆ ನನ್ನ ಪ್ರಜ್ಞೆಯನ್ನು ಬಹುವಾಗಿ ಕಾಡಿತು. ಬಾರ್‌ ಮತ್ತು ರೆಸ್ಟೊರೆಂಟ್‌ಗಳಿಗೆ ಇರುವ ಇಂತಹ ಹೆಸರುಗಳನ್ನು ನೋಡಿ ನಾನು ಎಷ್ಟೋ ಬಾರಿ ನಕ್ಕಿರುವುದು ಉಂಟು. ಉದಾಹರಣೆಗೆ, ರೇಣುಕಾ ಬಾರ್, ತಿರುಮಲ ಬಾರ್‌ ಅಂಡ್‌ ರೆಸ್ಟೊರೆಂಟ್‌, ಮಾರುತಿ ವೈನ್ ಸ್ಟೋರ್... ಹೀಗೆ.

ತಪ್ಪೇನು? ದೇವರುಗಳೂ ಮದಿರೆಯನ್ನು ಸವಿಯುತ್ತಿದ್ದರು ಎಂದು ಜನ ಮಾತನಾಡುವುದನ್ನು ಎಷ್ಟೋ ಬಾರಿ ಕೇಳಿದ್ದೇವೆ. ಅಷ್ಟೇ ಯಾಕೆ, ಉಜ್ಜಯಿನಿಯ ಕಾಲಭೈರವೇಶ್ವರ ದೇವಾಲಯದಲ್ಲಿ ಮದ್ಯವನ್ನು ದೇವರಿಗೆ ಅರ್ಪಿಸಿ ಅದನ್ನೇ ತೀರ್ಥದ ರೂಪದಲ್ಲಿ ಭಕ್ತರಿಗೆ ನೀಡುವುದು ಈಗಲೂ ಚಾಲ್ತಿಯಲ್ಲಿರುವ ಪದ್ಧತಿ. ದೇಶದ ರಾಜಧಾನಿ ದೆಹಲಿಯ ಭೈರೋ ಮಾರ್ಗ್‌ನಲ್ಲಿರುವ ಭೈರವೇಶ್ವರ ದೇವಾಲಯದಲ್ಲೂ ಮದ್ಯವೇ ನೈವೇದ್ಯ ಮತ್ತು ಪ್ರಸಾದ. ರಾಜ್ಯದಲ್ಲಿ ಕಿತ್ತು ತಿನ್ನುತ್ತಿರುವ ಹಲವಾರು ಸಮಸ್ಯೆಗಳ ನಡುವೆ, ಹಿಂದುತ್ವವನ್ನೇ ಅಸ್ತ್ರವಾಗಿ ಬಳಸುವ ಪಕ್ಷವು ನೇತೃತ್ವ ವಹಿಸಿರುವ ಸರ್ಕಾರ ಇಂತಹ ನಿರ್ಧಾರಗಳನ್ನು
ತೆಗೆದುಕೊಳ್ಳುವುದು ಆಶ್ಚರ್ಯ ಎನಿಸುವುದಿಲ್ಲ. ಆದರೂ ಇಂತಹ ನಿಲುವು ಎಷ್ಟರ ಮಟ್ಟಿಗೆ ಸರಿ ಎನ್ನುವುದರ ಬಗ್ಗೆ ಚರ್ಚೆ ನಡೆಯಲೇಬೇಕು.

ಬಾರ್‌ ಮತ್ತು ರೆಸ್ಟೊರೆಂಟುಗಳು ದೇವರ ಹೆಸರನ್ನು ಬಳಸಬಾರದು ಎನ್ನುವ ಮಡಿವಂತಿಕೆ ಈ ನಿರ್ಧಾರಕ್ಕೆ ಕಾರಣವಾದರೆ, ಮಾಂಸ ಮತ್ತು ಮದ್ಯವನ್ನೇ ನೈವೇದ್ಯವಾಗಿ ಸ್ವೀಕರಿಸಿ, ಪ್ರಸಾದವಾಗಿ ಹಂಚಲಾಗುವ ದೇವ-ದೇವತೆಗಳ ಬಗ್ಗೆ ಸರ್ಕಾರದ ನಿಲುವೇನು? ಅವರೂ ದೇವರುಗಳೇ ತಾನೆ? ಹಾಗಾದರೆ, ಮದ್ಯ ಹಾಗೂ ಕುರಿ, ಕೋಳಿ, ಮೇಕೆ ಮುಂತಾದ ಪ್ರಾಣಿಗಳ ಮಾಂಸವನ್ನು ಸ್ವೀಕರಿಸುವ ದೇವರುಗಳ ಹೆಸರನ್ನು ಬಾರ್‌ ಮತ್ತು ರೆಸ್ಟೊರೆಂಟುಗಳಿಗೆ ನಾಮಕರಣ ಮಾಡುವುದಕ್ಕೆ ಸರ್ಕಾರದ ಆಕ್ಷೇಪವೇನೂ ಇಲ್ಲವೇ? ಕಾರವಾರದಲ್ಲಿರುವ ಮುನೇಶ್ವರ ದೇವಸ್ಥಾನ ಇಂತಹ ಆಚರಣೆಗೆ ನಿದರ್ಶನ. ನಮ್ಮ ರಾಜ್ಯದ ಜನರಷ್ಟೇ ಅಲ್ಲದೆ ನೆರೆಯ ಮಹಾರಾಷ್ಟ್ರ, ಗೋವಾದಲ್ಲೂ ಭಕ್ತಸಮೂಹವನ್ನು ಹೊಂದಿರುವ ಈ ದೈವ, ಪ್ರತಿವರ್ಷ ನಡೆಯುವ ಜಾತ್ರೆಯಲ್ಲಿ ಭಕ್ತರಿಂದ ಸಿಗರೇಟ್, ಮದ್ಯ, ಮಾಂಸದ ನೈವೇದ್ಯವನ್ನು ಸ್ವೀಕರಿಸುತ್ತದೆ.

ತಮಿಳುನಾಡಿನ ಮದುರೆ ಸಮೀಪವಿರುವ ಮುನಿಯಂಡಿ ದೇವರ ದೇವಾಲಯದಲ್ಲಿ ನೀಡುವ ನೈವೇದ್ಯವೆಂದರೆ ಮೀನು, ಮಾಂಸ ಮತ್ತು ಮಟನ್ ಬಿರಿಯಾನಿ. ದೇಶದ ಇತರ ಭಾಗಗಳಲ್ಲೂ ಇಂತಹ ಅಸಂಖ್ಯಾತ ದೇವಸ್ಥಾನಗಳು ನಮಗೆ ಕಾಣಸಿಗುತ್ತವೆ. ನಮ್ಮ ಗ್ರಾಮಗಳಲ್ಲಿ ಇರುವ ಹಲವು ಗ್ರಾಮದೇವತೆಗಳ ಪೂಜೆ ಇಂದಿಗೂ ನಡೆಯುವುದೇ ಕುರಿ, ಕೋಳಿ ಮತ್ತು ಮೇಕೆಗಳ ಬಲಿಯಿಂದ. ದೇವರಿಗಾಗಿಯೇ ಸಾಕುವ ಕುರಿ, ಮೇಕೆಗಳನ್ನು ಕುಯ್ದು, ಬೇಯಿಸಿ ದೇವರಿಗೆ ಇಟ್ಟು, ನಂತರ ಪ್ರಸಾದವೆಂದು ಅದನ್ನೇ ಎಲ್ಲರಿಗೂ ಉಣಬಡಿಸುವ ಹಲವಾರು ಉದಾಹರಣೆಗಳು ರಾಜ್ಯದ ಅಸಂಖ್ಯಾತ ಗ್ರಾಮಗಳಲ್ಲಿ ಇಂದಿಗೂ ಜೀವಂತವಾಗಿವೆ. ಮಾರಮ್ಮ, ಮುಳ್ಳುಕಟ್ಟಮ್ಮ, ಮೆಳೆಯಮ್ಮ... ಹೀಗೆ ಬಹಳಷ್ಟು ಗ್ರಾಮದೇವತೆಗಳಿಗೆ ಹರಕೆಯನ್ನು ತೀರಿಸುವ ನೆಪದಲ್ಲಿ ನಡೆಯುವ ಮದ್ಯಪಾನವನ್ನು
ಅಥವಾ ಕುರಿ, ಕೋಳಿ, ಮೇಕೆಗಳ ಬಲಿಯನ್ನು ತಡೆಯಬೇಕು ಎಂದು, ಮಡಿವಂತಿಕೆ ತೋರುವ ಸರ್ಕಾರಕ್ಕೆ ಅನಿಸುವುದಿಲ್ಲವೇ? ದೇವರ ಆಚರಣೆಗಳಿಗೆ ಇಲ್ಲದ ಮಡಿವಂತಿಕೆಯು ವ್ಯಾಪಾರ ಮಳಿಗೆಗೆ ಹೆಸರು ಇಡುವುದಕ್ಕೆ ಮಾತ್ರ ಏಕೆ?

ತಮಗೆ ಇಷ್ಟ ಬಂದದ್ದನ್ನು ದೇವರಿಗೆ ಅರ್ಪಿಸುವ ಹಕ್ಕು ಭಕ್ತರಿಗೆ ಇದೆ ಎಂದು ಪ್ರತಿಪಾದಿಸುವುದಾದರೆ, ತಮಗೆ ಇಷ್ಟ ಬಂದ ಅದೇ ದೇವರ ಹೆಸರನ್ನು ತಮ್ಮ ವ್ಯಾಪಾರಕ್ಕೆ, ಅಂದರೆ ಬಾರ್ ಮತ್ತು ರೆಸ್ಟೊರೆಂಟ್‌ಗೆ ಬಳಸಲು ಅಡ್ಡಿಯೇಕೆ? ಅದು ಕೂಡ ಅವರ ಭಕ್ತಿಯ ಒಂದು ಬಗೆ ಎಂದೇಕೆ ಭಾವಿಸಬಾರದು? ನೈವೇದ್ಯ ನೀಡುವುದು ಭಕ್ತಿಯಾದರೆ, ದೇವರ ಹೆಸರಿನಲ್ಲಿ ಅಂಗಡಿ ನಡೆಸುವುದೂ ಭಕ್ತಿಯ ಇನ್ನೊಂದು ರೂಪ ಯಾಕಲ್ಲ?

ಮದ್ಯ ಮಾರಾಟ ನಿಷೇಧಕ್ಕಾಗಿ ಒತ್ತಾಯಿಸಿ ರಾಜ್ಯದಲ್ಲಿ ಹೋರಾಟಗಳು ನಡೆಯುತ್ತಿರುವಾಗ, ಇಂತಹದ್ದೊಂದು ಕ್ಷುಲ್ಲಕ ತೀರ್ಮಾನದಿಂದ
ಸರ್ಕಾರಕ್ಕಾಗಲೀ ಜನರಿಗಾಗಲೀ ಆಗುವ ಲಾಭವೇನು ಎನ್ನುವುದು ಬಹುಮುಖ್ಯವಾದ ಪ್ರಶ್ನೆ. ಹೆಸರಿಗೆ ಸಂಬಂಧಿಸಿದಂತೆ ಇಂತಹ ನಿರ್ಧಾರವನ್ನು ನಾವು ತೆಗೆದುಕೊಂಡೇ ತೀರುತ್ತೇವೆ ಎನ್ನುವುದು ಸರ್ಕಾರದ ನಿಲುವಾದರೆ, ದೇವರ ಹೆಸರಿನಲ್ಲಿ ನಡೆಯುತ್ತಿರುವ ಮದ್ಯಪಾನ, ಪ್ರಾಣಿಬಲಿಯ ಸೇವೆಗಳನ್ನು ನಿಲ್ಲಿಸಲು ಕಾನೂನು ರಚಿಸುವ ಧೈರ್ಯವನ್ನೂ ಅದು ತೋರಬಲ್ಲದೇ?

ಇಲ್ಲವೆಂದಾದರೆ, ಮದ್ಯದ ನೈವೇದ್ಯ ಸ್ವೀಕರಿಸುವ ದೇವರುಗಳ ಹೆಸರುಗಳನ್ನು ನಾಮಕರಣ ಮಾಡಿಕೊಳ್ಳಲುಬಾರ್ ಮತ್ತು ರೆಸ್ಟೊರೆಂಟ್‌ಗಳಿಗೆ ಅವಕಾಶ ಮಾಡಿಕೊಡಬೇಕು. ಇಲ್ಲವೇ ದೇವರುಗಳಿಗೆ ಮದ್ಯ, ಮಾಂಸ ನೈವೇದ್ಯ ಮಾಡುವ ಆಚರಣೆಗಳನ್ನು ನಿಲ್ಲಿಸಬೇಕು. ಇಂತಹ ಸಾಮರ್ಥ್ಯ ನಮ್ಮ ಸರ್ಕಾರಕ್ಕೆ ಇರಬಹುದೆಂದು ನಂಬಲು ಕಷ್ಟ!

ಲೇಖಕ: ಹೈಕೋರ್ಟ್‌ನಲ್ಲಿ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT