ಶ್ರಾವಣದೊಂದಿಗೆ ಹಬ್ಬಗಳ ಸಡಗರ ಶುರುವಾಗಿದೆ. ಬೇಂದ್ರೆ ಅಜ್ಜ ‘ಶ್ರಾವಣ ಬಂತು ನಾಡಿಗೆ, ಬೀಡಿಗೆ, ಬೆಟ್ಟ ಬಯಲಿಗೆ’ ಅಂತ ಹಾಡಿದರೆ, ಹಬ್ಬದ ವ್ರತಗಳು ಹೆಣ್ಣುಗಳನ್ನು ಕೋಣೆಗೆ, ಮನೆಗಳಿಗೆ ಸೀಮಿತಗೊಳಿಸುತ್ತವೆ.

ಏನು ಈ ವ್ರತಗಳು? ಯಾಕಾಗಿ ಹುಟ್ಟಿದವು? ಇದಕ್ಕೆ ಮೊದಲು ಎಲ್ಲಿದ್ದವು? ಈಗ ಯಾವ ರೀತಿಯಲ್ಲಿ ಸಾರ್ವತ್ರಿಕವಾಗಿವೆ? ನಾವು ಸಣ್ಣವರಿದ್ದಾಗ ಕುಟುಂಬದ ಎಲ್ಲರನ್ನೂ ಹಬ್ಬಿಕೊಳ್ಳುತ್ತಿದ್ದ ಹಬ್ಬಗಳು ಇಂದು ಮನೆ ಮನೆಯಲ್ಲಿ ಪ್ರತಿಷ್ಠೆಯ ವ್ಯಸನಗಳಾಗಿ ಬದಲಾಗಿವೆಯೇ? ತೋರಿಕೆಯನ್ನು ಹೆಚ್ಚು ಒಳಗೊಳ್ಳುತ್ತಿವೆಯೇ?

ಗೌರಿಗೆ ತವರು ಮನೆಯಿಂದ ಕಾಯಿಕಣ ಅಥವಾ ಬಾಗಿನ ತರುವ ಅಣ್ಣ, ಅಪ್ಪ–ಅವ್ವ, ತಮ್ಮಂದಿರ ನಿರೀಕ್ಷೆಯಲ್ಲಿ ಕೋಳಿಯನ್ನು ಸಾಕಿ ಕಾಯ್ದಿಟ್ಟುಕೊಂಡು, ಕುಯ್ದು ತಿನ್ನಿಸಿ ಕಳುಹಿಸುವ ಅಕ್ಕರೆ ನೆನಪಿಗೆ ಬರುತ್ತದೆ. ಹೊಸ ಅಳಿಯನಿಗೆ ಮದುವೆಯ ಖರ್ಚಿನಲ್ಲಿ ಹೆಚ್ಚಿನ ಉಡುಗೊರೆಯನ್ನು ಕೊಡಲಾರದ ತವರಿನವರಿಗೆ, ಮೊದಲನೇ ಗೌರಿಗೆ ಕರೆದು ಮದುಮಕ್ಕಳಿಗೆ ಸಮ್ಮಾನ ಮಾಡಿ ತಿಳಿಯಾಗಿಸುವ ಕಲೆಗಾರಿಕೆಯೂ ಇತ್ತು. ಹಾಗೆಯೇ ಬಳೆಗಾರನ ಮುಂದೆ ಹೆಣ್ಣುಗಳು ಕುಳಿತು, ಇಷ್ಟವಾಗುವ ಆಭರಣ ಅಂದರೆ ಬಣ್ಣದ ಗಾಜಿನ ಬಳೆಯನ್ನು ತೊಡಿಸಿಕೊಳ್ಳುವ ಆತ್ಮೀಯತೆಯೊಂದು ಅವರೊಳಗೆ ಬೆಸೆಯುತ್ತಿತ್ತು.

ದೀವಳಿಗೆ ದನ–ಕರುಗಳ ರೈತಾಪಿ ಜನರ ಸಡಗರವಾದರೆ, ಯುಗಾದಿ ಬ್ಯಾಸಿಗೆ ದಿನವನ್ನು ಎಣ್ಣೆ ಮಜ್ಜನದಲ್ಲಿ ಹದ ಮಾಡಿಕೊಳ್ಳುವ, ತಂಗಾಳಿಗೆ ತೂಗಾಲೆ ಕಟ್ಟಿ ಊರಿಗೆ ಊರೇ ತೂಗಿಕೊಳ್ಳುವ ಹಬ್ಬ. ಒಂದು ಊರನ್ನು, ಒಂದು ಕುಲವನ್ನು, ಒಂದು ಬುಡಕಟ್ಟನ್ನು ಸಂಭ್ರಮಿಸುತ್ತಿದ್ದ, ಬೇಕಾದ ಅಡುಗೆ ಮಾಡಿಕೊಂಡು, ಕುಟುಂಬಗಳನ್ನು ಒಂದುಗೂಡಿಸುತ್ತಿದ್ದ ಹತ್ತಾರು ಹಬ್ಬಗಳು ಪ್ರಸ್ತುತ ಎಲ್ಲಿ ಹೋದವು?

ವರ ಮಹಾಲಕ್ಷ್ಮೀ ವ್ರತ ಈ ಕಾಲದ ವೈಭವದ ಹಬ್ಬ. ಇದು ನಮ್ಮ ಬಾಲ್ಯ ಕಾಲದಲ್ಲಿ ಎಲ್ಲರ ಹಬ್ಬ ಆಗಿರಲಿಲ್ಲ. ಬರೀ ಬ್ರಾಹ್ಮಣರ ಮನೆಗಳಲ್ಲಿ ಅಥವಾ ಸಾರ್ವಜನಿಕ ಸಂಪರ್ಕ ಹೆಚ್ಚಾಗಿಲ್ಲದ ಶ್ರೀಮಂತ ವೈಶ್ಯರ, ವ್ಯಾಪಾರಸ್ಥರ ಮನೆಗಳಲ್ಲಿ ರಾರಾಜಿಸುತ್ತಿದ್ದ ಲಕ್ಷ್ಮೀದೇವಿಯರು ಹಾಗೂ ಅವರ ವ್ರತಗಳು, ಇಂದು ಹಳ್ಳಿ ಹಳ್ಳಿಗಳಲ್ಲಿ, ಮನೆ ಮನೆಯ ಒಳಗೆ ಬಂದು ಆಸೀನರಾಗಿರುವುದು ಹೇಗೆ?

ಶ್ರಮಿಕ ಸಮುದಾಯ ತಮಗೆ ಸಿಕ್ಕ ಬಿಡುವಿನಲ್ಲಿ ಅಟ್ಟ–ಬೆಟ್ಟವನ್ನು ಶುದ್ಧಿಗೊಳಿಸಿ, ಮನೆ–ಮಠ ಅಚ್ಚುಕಟ್ಟು ಮಾಡಿ, ಅಂದು ನಿಟ್ಟುಪವಾಸ ಇದ್ದು, ಎಡೆ ಇಡುವವರೆಗೂ ನೇಮನಿಷ್ಠೆಯಿಂದ, ಹಿರಿಯರ ಹಬ್ಬ ಅಥವಾ ಊರ ಮಾರಿಹಬ್ಬವನ್ನು ಆಚರಿಸುತ್ತಿತ್ತು. ಊರೊಳಗೆ ಸೀಬಾಯಿಯೋ, ಕುರಿ, ಕೋಳಿಯೋ, ಯಾವುದು ನಡೆದಿದೆಯೋ ಅದರ ನಡೆಯಲ್ಲಿ ಒಂದಾಗುತ್ತಿದ್ದ ಜನ–ಮನ ಇಂದು ಕಾಣೆಯಾಗಿ, ಹಬ್ಬಗಳು ಬರೀ ಪ್ರದರ್ಶನದ ಭಾಗಗಳಾಗುತ್ತಿವೆ.

ಮೈಸೂರು ಸೀಮೆಗೆ ಮದುವೆ ಆಗಿ ಬಂದ ನಾನು ವರಮಹಾಲಕ್ಷ್ಮೀ ವ್ರತಕ್ಕಿಂತ ಹೆಚ್ಚಾಗಿ ನೇಮನಿಷ್ಠೆಯ ಊರ ಹಬ್ಬದ ಆಚರಣೆಯನ್ನು ಗಮನಿಸಿದ್ದೇನೆ. ಇತ್ತೀಚಿನ ಎಲ್ಲರ ಮನೆಯ ವರಮಹಾಲಕ್ಷ್ಮೀ ವ್ರತವನ್ನೂ ನೋಡಿದ್ದೇನೆ. ಈ ವ್ರತವನ್ನು ಎಲ್ಲರೂ ಯಾಕೆ ಆಚರಿಸುತ್ತಾರೆ ಎನ್ನುವುದು ನನ್ನ ಪ್ರಶ್ನೆ. ಹಿರಿಯರಿಂದ ಬಂದಿರುವ ಹಬ್ಬಗಳನ್ನು ಮಾಡಿ ದಣಿಯುವುದಲ್ಲದೆ, ಮತ್ತೊಂದನ್ನು ಮಗದೊಂದನ್ನು ಪೋಣಿಸಿಕೊಂಡು ಖರ್ಚಿನ ಬಾಬತ್ತನ್ನು ಹೆಚ್ಚಿಸಿಕೊಳ್ಳುವ ಅಗತ್ಯ ಇದೆಯೇ? ಅಥವಾ ಕುರುಡಾಗಿ ಬೇರೆಯವರ ಹಿಂದೆ ಹೋಗುವ ಅನಿವಾರ್ಯತೆ ಇದೆಯೇ?

ಹಬ್ಬಗಳ ಅನುಕರಣೆ ಕೂಡ ಒಂದು ರೀತಿಯಲ್ಲಿ ಸಮೂಹ ಸನ್ನಿಯೇ. ಈ ಬಗ್ಗೆ ನಮ್ಮ ಹೆಣ್ಣುಮಕ್ಕಳು ಯೋಚಿಸಬೇಕು. ಹಣ ಇರುವವರ ಅನುಕರಣೆಯಿಂದ ಇಲ್ಲದವರು ಒದ್ದಾಡುವಂತಾಗುತ್ತದೆ. ಯಾರದೋ ಕುರುಡು ನಂಬಿಕೆಗಳನ್ನು ನಂಬುತ್ತ ನಮ್ಮ ಬುದ್ಧಿಯನ್ನು ಅವರಿಗೆ ಅಡವಿಡುತ್ತೇವೆ. ಕುರುಡು ಅನುಕರಣೆಯಿಂದ, ‘ಮಾಡೋ ಕೆಲಸ ಬಿಟ್ಟು ಆಡೊ ದಾಸಯ್ಯನ ಜೊತೆ ಹೋದ ಹಾಗೆ’ ಎನ್ನುವ ಗಾದೆಯಂತೆ, ಯಾವುದು ತಪ್ಪು ಯಾವುದು ಸರಿ ಎನ್ನುವ ಹೆಣ್ಣಿನ ವಿವೇಚನೆ ಇಲ್ಲವಾಗುತ್ತದೆ.

ಲಕ್ಷ್ಮೀ ಹಬ್ಬದ ಸಡಗರದಲ್ಲಿ, ಬರೀ ಅಡುಗೆ ಮನೆಯ ಹಾಗೂ ಮನೆಯ ಒಳಗಿನ ಉಪಚಾರಗಳಲ್ಲಿ ಹೆಣ್ಣುಮಕ್ಕಳ ಸಮಯ ಹಾಗೂ ಸ್ವಂತಿಕೆ ಕಳೆದುಹೋಗುತ್ತದೆ.

ಊರ ಹಬ್ಬಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ, ಸಡಗರಗೊಳ್ಳುವ ಗಂಡು– ಹೆಣ್ಣುಗಳು ಇಬ್ಬರೂ ಇಲ್ಲಿ ಬೇರೆಯಾಗುತ್ತಾರೆ. ಇಬ್ಬರ ಪ್ರಪಂಚವೂ ಬೇರೆಯಾಗುತ್ತದೆ. ಮಾರಮ್ಮನ ಹಬ್ಬ ಇಡೀ ಊರ ಮಕ್ಕಳನ್ನೇ ಒಂದುಗೂಡಿಸುವ, ಎಲ್ಲೆಲ್ಲಿಯೋ ಚದುರಿಹೋದ ಕಳ್ಳುಬಳ್ಳಿಗಳನ್ನು ಕಲೆಹಾಕುವ ಹಾಗೂ ಕಷ್ಟ–ಸುಖವನ್ನು ಹಂಚಿಕೊಳ್ಳುವ ಆಚರಣೆಯಾಗಿದೆ. ಆದರೆ, ಮನೆಯಲ್ಲಿ
ಪ್ರತಿಷ್ಠಾಪಿಸುವ ಮಹಾಲಕ್ಷ್ಮೀ ಮಹಿಳೆಯರಿಗೆ ಮಾತ್ರ ಸೀಮಿತ.

ಗಂಡು ಮತ್ತು ಹೆಣ್ಣು ಇಬ್ಬರೂ ಪಾಲುಗೊಳ್ಳದ, ನಮ್ಮ ನಂಬಿಕೆಗಳನ್ನು ಒಡೆದು ಹಾಕಿ, ಕೇವಲ ಪ್ರತಿಷ್ಠೆಗಾಗಿಯೇ ಆಚರಿಸುವ ಆಚರಣೆಗಳು ನಮಗೆ ಬೇಕೆ ಎನ್ನುವುದರ ಬಗ್ಗೆ ಮಹಿಳೆಯರು ಯೋಚಿಸಬೇಕಿದೆ.

ಹಿಂದಿನಿಂದ ವ್ರತ ಇದ್ದು ನಡೆಸಿಕೊಂಡು ಬಂದವರು, ಮಹಾಲಕ್ಷ್ಮೀ ವ್ರತ ಮಾಡುವುದರಲ್ಲಿ ತಪ್ಪೇನೂ ಇಲ್ಲ. ಅದನ್ನು ಇತರರು ಅನುಸರಿಸುವುದು ಆರ್ಥಿಕವಾಗಿ ಹೊರೆ ಹಾಗೂ ಹೆಣ್ಣುಮಕ್ಕಳ ಸ್ವಂತಿಕೆಯನ್ನು ಇಲ್ಲವಾಗಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.