ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕಾಡಿನ ವೈವಿಧ್ಯವೇ ನಾಡಿನ ಜೀವಾಳ!

ಸಸ್ಯವೈವಿಧ್ಯದ ಸಮೃದ್ಧಿಯ ಅಡಿಪಾಯವಿರುವುದೇ ಪ್ರಾಣಿವೈವಿಧ್ಯದ ಸನ್ನಿಧಿಯಲ್ಲಿ
Last Updated 8 ಜನವರಿ 2023, 19:31 IST
ಅಕ್ಷರ ಗಾತ್ರ

ರಾಜಪ್ರಭುತ್ವದ ಆಳ್ವಿಕೆಯನ್ನು ಪ್ರತಿನಿಧಿಸುವ ಕೊಂಡಿ ಯಾದ ಮೈಸೂರು ಸಂಸ್ಥಾನದ ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೊನ್ನೆ ಶಿವಮೊಗ್ಗದ ಖಾಸಗಿ ಕಾರ್ಯಕ್ರಮ ವೊಂದರಲ್ಲಿ ಮಾತನಾಡುತ್ತಾ, ‘ಆಳುವ ಸರ್ಕಾರಗಳು ಮಾನವ- ವನ್ಯಜೀವಿ ಸಂಘರ್ಷವನ್ನು ತಪ್ಪಿಸಬೇಕು. ಸರ್ಕಾರದ ಅಭಿವೃದ್ಧಿ ಮಾದರಿಗಳು ಸುಸ್ಥಿರವಾಗಿರಬೇಕು, ಅವು ದೂರದರ್ಶಿತ್ವ ಹೊಂದಿರಬೇಕು. ಜನಪರ ನೀತಿ– ನಿಯಮ ಜಾರಿಗೊಳಿಸುವಾಗ ಮೈಸೂರು ಸಂಸ್ಥಾನದ ಆಡಳಿತ ಮಾದರಿಯನ್ನು ಗಮನಿಸಬೇಕು...’ ಎಂದರು. ಹೆಚ್ಚುಕಡಿಮೆ ಇದೇ ಹೊತ್ತಿನಲ್ಲಿ, ‘ಕಾಂತಾರ’ ಚಲನಚಿತ್ರದ ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಮತ್ತೊಂದು ಕಾರ್ಯಕ್ರಮವೊಂದರಲ್ಲಿ, ‘ಮಾನವ-ವನ್ಯಜೀವಿ ಸಂಘರ್ಷದಲ್ಲಿ ಮಾನವ ಸೋಲಬೇಕು, ಆಗ ಮಾತ್ರ ಮನುಕುಲ ಉಳಿಯಲು ಸಾಧ್ಯ’ ಎನ್ನುವ ಮಾತನ್ನು ಒತ್ತಿ ಹೇಳಿದರು.

ಇತ್ತೀಚೆಗೆ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಮಾನವ- ವನ್ಯಜೀವಿ ಸಂಘರ್ಷದ ಕುರಿತಾಗಿ ಚರ್ಚೆಯಾಗಿತ್ತು, ಅರಣ್ಯ ಭವನದಲ್ಲಿ ಬೀಡು ಬಿಟ್ಟಿರುವ ಉನ್ನತಾಧಿಕಾರಿಗಳು ಕಾಡಿನ ಕಡೆ ನಡೆಯಬೇಕು ಎಂದು ಮುಖ್ಯಮಂತ್ರಿ ಆಶಯ ವ್ಯಕ್ತಪಡಿಸಿದ್ದರು. ಇದರ ಫಲವಾಗಿ, ಅನೇಕ ಉನ್ನತ ಹುದ್ದೆಗಳನ್ನು ಅರಣ್ಯ ಭವನದಿಂದ ಬೇರ್ಪಡಿಸಿ, ವಿವಿಧ ಜಿಲ್ಲೆಗಳಿಗೆ ವರ್ಗಾಯಿಸುವ ಕೆಲಸವನ್ನು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಮಲೆನಾಡಿನ ಹೆಚ್ಚಿನ ರೈತರು ಸಣ್ಣ ಹಿಡುವಳಿ ದಾರರಾಗಿದ್ದಾರೆ. ಹೀಗಿದ್ದರೂ ಅವರು ತಮ್ಮ ಮನೆಗೆ ಬೇಕಾಗುವಷ್ಟು ಶುಂಠಿ, ಅರಿಸಿನದಂತಹ ಪದಾರ್ಥ ಗಳನ್ನು ಬೆಳೆದುಕೊಳ್ಳುವುದು ಸರ್ವೇಸಾಮಾನ್ಯವಾಗಿತ್ತು. ಶುಂಠಿ- ಅರಿಸಿನ ವಾಣಿಜ್ಯ ಬೆಳೆಯಾಗಿ ಪರಿವರ್ತನೆಯಾಗಿರಲಿಲ್ಲ. 1990ರ ದಶಕದಲ್ಲಿ ಕೇರಳದಿಂದ ಬಂದ ಅಲ್ಲಿನ ಕೃಷಿಕರು ಮಲೆನಾಡಿನ ರೈತರ ಜಮೀನುಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆದು ಶುಂಠಿ ಬೆಳೆಯಲು ಪ್ರಾರಂಭಿಸಿದರು. ಅತಿಹೆಚ್ಚು ಕೀಟನಾಶಕ, ರಾಸಾಯನಿಕ ಗೊಬ್ಬರ ಹಾಕಿ ಬೆಳೆಸಿದ ಶುಂಠಿಯನ್ನು ಉತ್ತರ ಭಾರತದ ಬೇಡಿಕೆ ಪೂರೈಸಲು ಬಳಸುತ್ತಿದ್ದರು.

ಅಲ್ಪಾವಧಿ ಬೆಳೆಯಾದ ಶುಂಠಿಯು ಲಾಭದಾಯಕ ಬೆಳೆ ಎಂದು ಮಲೆನಾಡಿನ ರೈತರಿಗೆ ಅನಿಸಿತು. ಕೇರಳದ ಮಾದರಿಯಲ್ಲೇ ಶುಂಠಿಯನ್ನು ಬೆಳೆಯಲು ಪ್ರಾರಂಭಿಸಿದರು. ಅದೆಷ್ಟೋ ಎಕರೆ ಸಮೃದ್ಧ ಕಾಡು ಬರೀ ಶುಂಠಿ ಬೆಳೆಯಲ್ಲೇ ನಾಶವಾಗಿದ್ದು ಕಣ್ಣೆದುರಿಗೇ ರಾಚುವಷ್ಟಿದೆ. ಅನಿಯಂತ್ರಿತ ಕೀಟನಾಶಕ ಬಳಸಿಯೂ ಮಲೆನಾಡಿನ ಮಣ್ಣಿನಲ್ಲಿ ಇನ್ನೂ ಬೆಳೆ ಬೆಳೆಯಲಾಗುತ್ತಿದೆಯೆಂದರೆ ಅದಕ್ಕೆ ಕಾರಣ ಅಲ್ಲಿರುವ ಕಾಡು ಹಾಗೂ ಕಾಡಿನ ಮಣ್ಣಿನಡಿಯಲ್ಲಿ ಅಗಣಿತ ಸಂಖ್ಯೆಯಲ್ಲಿ ಇರುವ ಸೂಕ್ಷ್ಮಜೀವಿಗಳು. ನೀರು, ಗಾಳಿ, ಮಣ್ಣು ಹೀಗೆ ಬೇರೆ ಬೇರೆ ಮಾಧ್ಯಮಗಳ ಮೂಲಕ ಮಲೆನಾಡಿನ ರೈತರ ಹೊಲಕ್ಕೆ ಬರುವ ಕಾಡಿನ ಸೂಕ್ಷ್ಮಜೀವಿಗಳು ಇಲ್ಲಿನ ರೈತರ ಮಣ್ಣನ್ನು ಜೀವಂತವಾಗಿಡಲು ಪ್ರಮುಖ ಕಾರಣವಾಗಿವೆ.

ಅನೇಕ ಅಭಿವೃದ್ಧಿ ಯೋಜನೆಗಳಿಗಾಗಿ ಮಲೆನಾಡಿನ ಕಾಡು ನಾಶವಾಗುತ್ತಿದೆ. ಅದರಲ್ಲೂ ಹೆದ್ದಾರಿಗಳು, ಜಲವಿದ್ಯುತ್‌ ಯೋಜನೆಗಳು, ಅಣುಸ್ಥಾವರ ವಿಸ್ತರಣೆ, ರೈಲುಮಾರ್ಗದಂತಹವುಗಳಿಗಾಗಿ ನೈಸರ್ಗಿಕ ಕಾಡು ನಾಶವಾಗುತ್ತಿದೆ. ಸುಪ್ರೀಂ ಕೋರ್ಟ್‌, ಹಸಿರು ಪೀಠದ ಅನೇಕ ನಿರ್ದೇಶನಗಳ ಕಾರಣಕ್ಕೆ, ಅಭಿವೃದ್ಧಿಗಾಗಿ ಬಳಸುವ ಕಾಡಿಗೆ ಪರ್ಯಾಯವಾಗಿ ಬೇರೆಡೆ ಕಾಡನ್ನು ಬೆಳೆಸುವುದು ಕಡ್ಡಾಯವಾಗಿರುತ್ತದೆ. ಆದರೆ, ಇದು ಆಯಾ ಪ್ರದೇಶದ ಅರಣ್ಯ ಅಥವಾ ಹಸಿರು ಕವಚಕ್ಕೆ ಮಾತ್ರ ಪರ್ಯಾಯವಾಗಬಲ್ಲದೇ ವಿನಾ ಮೂಲ ಪ್ರದೇಶದಲ್ಲಿನ ಪ್ರಾಣಿವೈವಿಧ್ಯದ ಪ್ರಾಮುಖ್ಯದ ದೃಷ್ಟಿಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ.

ಅಭಿವೃದ್ಧಿ ಪೀಡನೆಗೆ ಒಳಗಾಗುವ ಪ್ರದೇಶದಲ್ಲಿರುವ ಸಿಂಗಳೀಕಗಳನ್ನಾಗಲೀ ಕಾನುಕುರಿಯನ್ನಾಗಲೀ ಅಲ್ಲಿನ ಮಣ್ಣಿನಲ್ಲಿರುವ ವಿಶಿಷ್ಟ ಸೂಕ್ಷ್ಮ ಜೀವಿಗಳನ್ನಾಗಲೀ ಅದೇ ಪ್ರದೇಶದಲ್ಲಿ ಮಾತ್ರ ಬೆಳೆಯುವ ಅಪೂರ್ವ ಸಸ್ಯ ಪ್ರಭೇದವನ್ನಾಗಲೀ ಪರ್ಯಾಯ ಪ್ರದೇಶಕ್ಕೆ ಸ್ಥಳಾಂತರಿಸುವುದು ಸಾಧ್ಯವಿಲ್ಲ.

ಪಶ್ಚಿಮಘಟ್ಟಗಳು ಅನೇಕ ನದಿಗಳ ತವರು. ಇಡೀ ದಕ್ಷಿಣ ಭಾರತಕ್ಕೆ ನೀರುಣಿಸುವ ಬೃಹತ್‌ ನೀರಿನ ತೊಟ್ಟಿಯದು. ಗುಡ್ಡಗಾಡುಗಳಲ್ಲಿ ಬೆಳೆದ ಅಸಂಖ್ಯ ಮರಗಿಡಬಳ್ಳಿಗಳೇ ಗುಡ್ಡಕ್ಕೆ ನೀರಿಂಗಿಸುವ ನೈಸರ್ಗಿಕ ಸಾಧನಗಳು. ಉದಾಹರಣೆಗೆ, ಶರಾವತಿ ನದಿ ಉಗಮವಾಗುವ ಜಲಾನಯನ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು, ಆ ಪ್ರದೇಶದಲ್ಲಿ ನಾಶವಾಗುವ ಮರಗಳಿಗೆ ಬದಲಿಯಾಗಿ ದೂರದ ಬಳ್ಳಾರಿಯಲ್ಲಿ ಪರ್ಯಾಯ ಅರಣ್ಯ ಬೆಳೆಸಿದಿರಿ ಎಂದುಕೊಳ್ಳಿ. ಬಳ್ಳಾರಿಯಲ್ಲಿ ಬೆಳೆಸಿದ ಪರ್ಯಾಯ ಕಾಡಿನ ನಡುವೆ ಶರಾವತಿ ನದಿ ಹುಟ್ಟಲು ಸಾಧ್ಯವೇ? ಕಳೆದುಕೊಂಡ ನೈಸರ್ಗಿಕ ಕಾಡು ಅಥವಾ ಅರಣ್ಯಪ್ರದೇಶದ ಬದಲಿಗೆ ಪರ್ಯಾಯ ಅರಣ್ಯ ಬೆಳೆಸುವ ಕಾರ್ಯಯೋಜನೆಗೆ ಅದರದೇ ಆದ ಅನೇಕ ಮಿತಿಗಳಿವೆ. ಪರ್ಯಾಯ ಕಾಡು ಬೆಳೆಸುವ ಕೆಲಸ ಯಾವಾಗಲೂ ಅಥವಾ ಎಲ್ಲೂ ಪರಿಪೂರ್ಣವೆಂದು ಅನಿಸಿಕೊಳ್ಳಲು ಸಾಧ್ಯವಿಲ್ಲ.

ಮಾನವ– ವನ್ಯಜೀವಿ ಸಂಘರ್ಷ ಹಾಗೂ ಈ ಕುರಿತಾಗಿನ ಚರ್ಚೆ ಈ ಹೊತ್ತಿನಲ್ಲಿ ಉತ್ತುಂಗದಲ್ಲಿದೆ. ಆರ್ಥಿಕ ಕ್ಷೇತ್ರದ ಪ್ರಮುಖರೂ ವನ್ಯಜೀವಿ ಸಂರಕ್ಷಣೆಯ ಮಾತುಗಳನ್ನಾಡುತ್ತಿದ್ದಾರೆ. ಮನುಷ್ಯನ ಸುಸ್ಥಿರ ಬದುಕಿಗೆ ವನ್ಯಜೀವಿಗಳ ಉಳಿವು ಬಹಳ ಮಹತ್ವದ್ದು ಎಂದು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿ.ಇ.ಒ. ಎಂ.ಎಸ್‌. ಮಹಾಬಲೇಶ್ವರ ಅವರು ಹೇಳಿರುವುದು ಉಲ್ಲೇಖಾರ್ಹ. ಸಮಾಜದ ಹತ್ತು ಹಲವು ವಲಯಗಳಿಗೆ ಸೇರಿದವರು ಈ ಕುರಿತು ದನಿ ಎತ್ತುತ್ತಿರುವುದು ಆಶಾದಾಯಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT