ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೆಂಟಲ್‌...’ ಹೆಸರಲ್ಲೇ ಅನಾರೋಗ್ಯ!

ತಪ್ಪು್ದಾರಿಗೆಳೆಯುವ ಚಿತ್ರದ ಶೀರ್ಷಿಕೆ ಹಿಂಪಡೆಯಬೇಕೆಂಬ ಆಗ್ರಹ ಕೇಳಿಬಂದಿದೆ
Last Updated 22 ಏಪ್ರಿಲ್ 2019, 19:57 IST
ಅಕ್ಷರ ಗಾತ್ರ

‘ಮೆಂಟಲ್’ ಎಂಬ ಶಬ್ದವನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಇನ್ನೊಬ್ಬರನ್ನು ಹೀಯಾಳಿಸಲು, ಕುಚೋದ್ಯ ಮಾಡಲು ಲೆಕ್ಕವಿಲ್ಲದಷ್ಟು ಬಾರಿ ಬಳಸು ತ್ತೇವೆ. ಯಾರಾದರೂ ನಮಗಿಷ್ಟವಿಲ್ಲದ ಮಾತುಗಳನ್ನಾಡಿದರೆ ಅಥವಾ ನಮಗೆ ವಿರುದ್ಧವಾಗಿ ಮಾತನಾಡಿದರೆ ಅವರನ್ನು ‘ಮೆಂಟಲ್’ ಎಂದು ಸಂಬೋಧಿಸುವುದು ದುರದೃಷ್ಟವಶಾತ್ ಲೋಕದ ರೂಢಿ!

ಸದ್ಯದ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ, ನಮ್ಮ ಜನಪ್ರಿಯ ನಾಯಕರು ಪುಂಖಾನುಪುಂಖವಾಗಿ ಒಬ್ಬರನ್ನೊಬ್ಬರು ಎಷ್ಟೋ ಬಾರಿ ಹುಚ್ಚ, ಮೆಂಟ್ಲು, ಸ್ಕಿಝೋಫ್ರೇನಿಕ್, ಹುಚ್ಚಾಸ್ಪತ್ರೆ, ನಿಮ್ಹಾನ್ಸ್‌ಗೆ ಸಾಗಿಸಬೇಕು ಎಂದೆಲ್ಲ ಕರೆದುಕೊಂಡು ಪರಸ್ಪರ ತೇಜೋವಧೆ ಮಾಡಿಕೊಂಡರು. ಇಂತಹ ಮಾತುಗಳಿಗೆ ತಮ್ಮ ಬೆಂಬಲಿಗರಿಂದ ಚಪ್ಪಾಳೆ, ಶಿಳ್ಳೆ ಗಿಟ್ಟಿಸಿ ಎದೆಯುಬ್ಬಿಸಿಕೊಳ್ಳುತ್ತಾರೆ ನಮ್ಮ ನಾಯಕರು!

ಮಾನಸಿಕ ಅಸ್ವಸ್ಥತೆಗೆ ಎರಡು ಆಯಾಮಗಳಿವೆ. ಮೊದಲನೆಯದು, ಕಾಯಿಲೆಯ ಗುಣಲಕ್ಷಣಗಳು, ಔಷಧೋಪಚಾರ, ಕುಟುಂಬ ಹಾಗೂ ಉದ್ಯೋಗದ ಮೇಲೆ ಕಾಯಿಲೆಯ ಪ್ರಭಾವ ಮತ್ತು ಆರ್ಥಿಕ ಹೊರೆ. ಇನ್ನೊಂದು, ಸಮಾಜದಲ್ಲಿ ಮಾನಸಿಕ ಕಾಯಿಲೆಗಳಿಗೆ ಅಂಟಿರುವ ಕಳಂಕ. ಈ ರೋಗಿಗಳ ಕುಟುಂಬ ಸದಸ್ಯರ ಪ್ರಕಾರ, ಮೊದಲನೇ ಆಯಾಮವನ್ನು ಹೇಗೋ ನಿಭಾಯಿಸಬಹುದು. ಆದರೆ, ಮಾನಸಿಕ ಅಸ್ವಸ್ಥರನ್ನು ಸಮಾಜ ನಡೆಸಿಕೊಳ್ಳುವ ರೀತಿ, ಅದರಿಂದ ಅವರು ಹಾಗೂ ಕುಟುಂಬದವರು ಅನುಭವಿಸುವ ನೋವು, ಅವಮಾನವನ್ನು ತಾಳಿಕೊಳ್ಳುವುದು ತುಂಬಾ ಕಷ್ಟ. ಇದೊಂದು ರೀತಿಯ ಅಸ್ಪೃಶ್ಯತೆ ಆಚರಣೆ.

ಭಾರತೀಯ ಸಮಾಜದ ಮೇಲೆ ಮಾಧ್ಯಮ, ಅದರಲ್ಲೂ ದೃಶ್ಯ ಮಾಧ್ಯಮದ ಪ್ರಭಾವ ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಚಲನಚಿತ್ರಗಳು, ಚಿತ್ರನಟರು ‘ಲಾರ್ಜರ್ ದ್ಯಾನ್ ಲೈಫ್’ ಇಮೇಜ್ ಹೊಂದಿರುತ್ತಾರೆ. ಹೀಗಾಗಿ, ಚಿತ್ರಗಳು ಬಿತ್ತ ರಿಸುವ ಸಂಭಾಷಣೆ, ನಟನೆ, ನೃತ್ಯ, ಹೊಡೆದಾಟ ಮುಂತಾದವು ಪ್ರೇಕ್ಷಕನ ಮೇಲೆ ಗಾಢವಾದ ಪ್ರಭಾವ ಬೀರುತ್ತವೆ. ಈ ಪ್ರಭಾವ ಯಾವ ಮಟ್ಟಿಗೆ ಇರುತ್ತದೆಯೆಂದರೆ, ಅನೇಕ ನಟ–ನಟಿಯರು ಚುನಾವಣೆ ಗೆದ್ದು ಸರ್ಕಾರ ನಡೆಸಿದ್ದರು, ನಡೆಸುತ್ತಿದ್ದಾರೆ.

ಕೆಲವು ಚಿತ್ರಗಳು ಮಾನಸಿಕ ಆರೋಗ್ಯವನ್ನು ಸಮಾಜಕ್ಕೆ ಅತ್ಯಂತ ಮನೋಜ್ಞವಾಗಿ, ವೈಜ್ಞಾನಿಕವಾಗಿ ಹಾಗೂ ವಾಸ್ತವಕ್ಕೆ ಹತ್ತಿರವಾಗಿರುವಂತೆ ಕಟ್ಟಿಕೊಟ್ಟಿವೆ. ಇಂಗ್ಲಿಷ್‌ ಭಾಷೆಯ ‘ರೇನ್‍ ಮ್ಯಾನ್’ ಎಂಬ ಚಿತ್ರವು ಆಟಿಸಂ ಬಗ್ಗೆ, ಹಿಂದಿಯ ‘ತಾರೆ ಜಮೀನ್ ಪರ್’ ಡಿಸ್‌ಲೆಕ್ಸಿಯಾ ಬಗ್ಗೆ, ಕನ್ನಡದ ‘ಪ್ರಥಮ ಉಷಾ ಕಿರಣ’ವು ಮಕ್ಕಳು ಹಾಗೂ ಹದಿಹರೆಯದವರ ಸಮಸ್ಯೆ ಬಗ್ಗೆ ತಿಳಿಸಿವೆ. ಹಿಂದಿಯ ‘ಕ್ಯೋಂ ಕಿ’, ಕನ್ನಡದ ‘ಹುಚ್ಚ, ‘ಮನಸಾರೆ’, ‘ಮಾನಸ ಸರೋವರ’ದಂಥ ಚಿತ್ರಗಳು ಮನೋರೋಗಿಗಳು, ಮಾನಸಿಕ ಆಸ್ಪತ್ರೆ ಗಳು, ಮನೋವೈದ್ಯರು ಹಾಗೂ ಚಿಕಿತ್ಸಾ ಪದ್ಧತಿಗಳನ್ನು ಅತ್ಯಂತ ಕೀಳಾಗಿ, ಮನಸೋ ಇಚ್ಛೆ ತೋರಿಸಿವೆ. ಇಂತಹ ಚಿತ್ರಗಳು ಮನೋರೋಗಗಳ ಬಗೆಗಿನ ಜನರ ಕಲ್ಪನೆಯ ಮೇಲೆ ಪರಿಣಾಮ ಬೀರಿ, ಸಾಮಾಜಿಕ ಕಳಂಕವನ್ನು ಇನ್ನಷ್ಟು ಹೆಚ್ಚಿಸುತ್ತವೆ.

ಈಗ ತನ್ನ ಶೀರ್ಷಿಕೆಯಿಂದ ಕುಖ್ಯಾತವಾಗಿರುವ ಹಿಂದಿ ಚಿತ್ರ ‘ಮೆಂಟಲ್ ಹೈ ಕ್ಯಾ?’. ಇನ್ನೂ ಬಿಡುಗಡೆಯಾಗದಿರುವ ಈ ಚಿತ್ರದ ವಿಷಯವಸ್ತುವಿನ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಅದರ ಶೀರ್ಷಿಕೆಯೇ ಸಾಕು ಮಾನಸಿಕ ಆರೋಗ್ಯದ ಬಗೆಗಿನ ತಪ್ಪು ತಿಳಿವಳಿಕೆಗಳನ್ನು ಹೆಚ್ಚಿಸಲು! ವಿಡಂಬನೆಯೆಂದರೆ, ಈ ಚಿತ್ರದ ನಿರ್ಮಾಪಕರಾದ ಏಕ್ತಾ ಕಪೂರ್‌ ಈ ಮೊದಲು, ಸಾಮಾಜಿಕವಾಗಿ ಸೂಕ್ತವಾಗಿರುವ ವಿಷಯಗಳ ಮೇಲೆ ಸೂಕ್ಷ್ಮ ಸಂವೇದಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ನಿರ್ದೇಶಕ ಪ್ರಕಾಶ ಕೊವೆಲಮುಡಿ ರಾಷ್ಟ್ರಪ್ರಶಸ್ತಿ ವಿಜೇತರು. ಇಂತಹ ಜವಾಬ್ದಾರಿಯುತ ಕಲಾವಿದರು ಕುಚೋದ್ಯಭರಿತ ಶೀರ್ಷಿಕೆಯನ್ನು ತಮ್ಮ ಚಿತ್ರಕ್ಕೆ ಇರಿಸಿರುವುದು ಅವರ ಸಾಮಾಜಿಕ ಬೇಜವಾ
ಬ್ದಾರಿತನಕ್ಕೆ ನಿದರ್ಶನ.

ಈ ಶೀರ್ಷಿಕೆಯ ವಿರುದ್ಧ ಭಾರತೀಯ ಮನೋವೈದ್ಯರ ಸಂಘವು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ– ಸೆನ್ಸಾರ್ ಮಂಡಳಿ) ದೂರು ನೀಡಿದೆ. ಮಾನಸಿಕ ಆರೋಗ್ಯದ ಸಮಸ್ಯೆ ಎದುರಿಸುತ್ತಿರುವವರು ಇನ್ನಷ್ಟು ಅಪಹಾಸ್ಯಕ್ಕೆ ಒಳಗಾಗುವುದರಿಂದ, ತಕ್ಷಣವೇ ಈ ಶೀರ್ಷಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ.

ಭಾರತವು 2018ರಲ್ಲಿ ಮಾನಸಿಕ ಆರೋಗ್ಯ ಕಾಳಜಿ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದಿದೆ. ಇದರ ಪ್ರಕಾರ, ಮನೋರೋಗಿಗಳನ್ನು ಅವಹೇಳನ ಮಾಡುವುದು, ಅವರ ಘನತೆಗೆ ಕುಂದುಂಟು ಮಾಡುವುದು ಅಪರಾಧ.

ಮನೋರೋಗಗಳಿಗೆ ಅಂಟಿರುವ ಕಳಂಕ ದಿಂದಾಗಿ ಅನೇಕ ಕುಟುಂಬಗಳು ಅಸ್ವಸ್ಥ ಸದಸ್ಯರನ್ನು ಮನೆಯಿಂದ ಹೊರಹಾಕಿವೆ. ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಗೊತ್ತಿರದ ಜಾಗಗಳಲ್ಲಿ ಆಗಂತುಕರಂತೆ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಪ್ರಭಾವಶಾಲಿ ಮಾಧ್ಯಮವಾದ ಚಲನಚಿತ್ರವು ಮಾನಸಿಕ ಆರೋಗ್ಯದ ಬಗ್ಗೆ ಇನ್ನಷ್ಟು ಸಂವೇದನಾಶೀಲವಾಗಿ ವರ್ತಿಸಬೇಕಿದೆ. ತೊಂದರೆ ಅನುಭವಿಸುತ್ತಿರುವವರು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಹಾಗೂ ಸಾಮಾನ್ಯ ಜೀವನ ನಡೆಸಲು ಪ್ರೋತ್ಸಾಹಿಸುವಂಥ ಕಾರ್ಯವನ್ನು ಚುರು ಕಾಗಿ ಮಾಡಬೇಕಿದೆ. ಈ ನಿಟ್ಟಿನಲ್ಲಿ, ಮಾನಸಿಕ ಆರೋ ಗ್ಯದ ಬಗ್ಗೆ ದೀಪಿಕಾ ಪಡುಕೋಣೆ, ಅನುಪಮ್ ಖೇರ್‌ರಂಥ ಚಿತ್ರ ಕಲಾವಿದರು ಕೈಗೊಳ್ಳುತ್ತಿರುವ ಜಾಗೃತಿ ಕಾರ್ಯಕ್ರಮಗಳು ಪ್ರಶಂಸನೀಯ.

ಲೇಖಕ: ಮನೋವೈದ್ಯ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT