ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಕಿರುಕುಳವೆಂಬ ಪಿಡುಗು

ಈ ಸಾಮಾಜಿಕ ಕಾಯಿಲೆ, ರಾಜಕೀಯವನ್ನು ಮೀರಿ ಎಲ್ಲರ ಮೇಲೂ ಪರಿಣಾಮ ಬೀರಿದೆ
Last Updated 25 ಅಕ್ಟೋಬರ್ 2018, 5:59 IST
ಅಕ್ಷರ ಗಾತ್ರ

‘ಮೀ ಟೂ’ ಅಭಿಯಾನ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಲಾರಂಭಿಸಿದೆ. ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಶ್ರುತಿ ಹರಿಹರನ್ ವಿರುದ್ಧ ಸಾಮಾಜಿಕ ಮಿಂದಾಣಗಳು ಹಾಗೂ ಸುದ್ದಿವಾಹಿನಿಗಳು ತಿರುಗಿಬಿದ್ದಿವೆ. ಸಭ್ಯರೆಂದು ಗುರುತಿಸಿಕೊಂಡಿರುವವರ ಹೆಸರನ್ನು ಪ್ರಚಾರಕ್ಕಾಗಿ ಶ್ರುತಿ ಹಾಳು ಮಾಡುತ್ತಿದ್ದಾರೆಂದೂ, ‌ಇದು ಇತ್ತೀಚೆಗಷ್ಟೇ ಹಸುವನ್ನು ದತ್ತು ಪಡೆದ ಬಲಪಂಥೀಯ ನಟನ ಮೇಲೆ ಎಡಪಂಥೀಯರು ನಡೆಸುತ್ತಿರುವ ಷಡ್ಯಂತ್ರವೆಂದೂ ಹಾಗೂ ಇಲ್ಲಿ ಹೇಳಲಾಗದಷ್ಟು ಕೀಳುಮಟ್ಟದ ಕಾರಣಗಳನ್ನೊಡ್ಡಿ ನಟಿಯ ಮೇಲೆ ದಾಳಿ ನಡೆಯುತ್ತಿದೆ.

ಮಹಿಳೆಯರು ಸುರಕ್ಷಿತವಾಗಿ ಕೆಲಸ ಮಾಡಬೇಕಾದ ಸ್ಥಳಗಳಲ್ಲಿ ಅವರ ಮೇಲೆ‌ ನಡೆಯುವ ಲೈಂಗಿಕ ದೌರ್ಜನ್ಯ‌ ಎಷ್ಟು ಸಾಮಾನ್ಯವೆಂದು ಜಗತ್ತಿಗೆ ತಿಳಿಸಲು ‘ಮೀ ಟೂ’ ಅಭಿಯಾನ ಅಮೆರಿಕದಲ್ಲಿ‌ ಶುರುವಾಯಿತು. ಯಾರೂ ಏನೂ ಮಾಡಲಾಗುವುದಿಲ್ಲವೆಂಬ ಧೈರ್ಯದಿಂದ ತಮಗಿಂತ ಕೆಳ ಸ್ಥಾನಮಾನದಲ್ಲಿರುವ ಮಹಿಳೆಯರೊಡನೆ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದ ಪುರುಷರನ್ನು ಮಹಿಳೆಯರು ಬಯಲಿಗೆಳೆದರು. ಹಾಲಿವುಡ್‌ನಲ್ಲಿ ಹೆಸರುವಾಸಿಯಾಗಿದ್ದ ಹಲವರ ಮೇಲೆ ಕಿರುಕುಳದ ಆಪಾದನೆಗಳು ಬಂದವು. ಆದರೂ ಅಮೆರಿಕನ್ನರು ಆಪಾದಿತರನ್ನು ಪ್ರಶ್ನಿಸಿದರೇ ಹೊರತು ಆಪಾದಿಸಿದವರನ್ನಲ್ಲ.

ಈ ಅಭಿಯಾನ ಈಗ ಭಾರತಕ್ಕೂ ಪ್ರವೇಶಿಸಿದೆ. ಹಲವಾರು ನಟರು, ಪತ್ರಕರ್ತರು, ಸಂಗೀತಗಾರರು, ಹಾಸ್ಯಗಾರರು ನೀಡಿದ ಲೈಂಗಿಕ ಕಿರುಕುಳಗಳನ್ನು ಮಹಿಳೆಯರು ಹಂಚಿಕೊಳ್ಳುತ್ತಿದ್ದಾರೆ‌. ಇದಕ್ಕೆ‌ ಮುಖ್ಯ ಕಾರಣ ತಮ್ಮ ಬೆಂಬಲಕ್ಕೆ ನಿಂತಿರುವ ಸಕ್ರಿಯ ಮಹಿಳಾ ಸಹೋದ್ಯೋಗಿಗಳ ಗುಂಪು. ಇವರೆಲ್ಲರೂ ಜೊತೆಗೂಡಿ ನಿಂತು ತಮ್ಮಲ್ಲಿ ಯಾರ ವಿರುದ್ಧ ಜನ ತಿರುಗಿಬಿದ್ದರೂ ಅವರ ಪರವಾಗಿ ನಿಲ್ಲುವುದರ‌ ಮೂಲಕ ಇನ್ನಿತರರೂ‌ ಭಯ‌ ಹಾಗೂ ಹಿಂಜರಿಕೆಯನ್ನು ಬಿಟ್ಟು ತಮ್ಮ ಕತೆಗಳನ್ನು ಹಂಚಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ. ಆದರೆ ಕನ್ನಡದಲ್ಲಿ ಈ ತರಹದ ಒಂದು ಸದೃಢ ಗುಂಪಿಲ್ಲವಾದ್ದರಿಂದ ಈವರೆಗೂ ತಾವನುಭವಿಸಿದ ಕಿರುಕುಳದ ಕತೆಗಳನ್ನು ಹಂಚಿಕೊಂಡಿರುವ ನಟಿಯರ ಮೇಲೆ‌ ಎಲ್ಲರೂ ಬಾಯಿಗೆ ಬಂದಂತೆ‌ ದಾಳಿ ನಡೆಸುವಂತಾಗಿದೆ. ಇಲ್ಲೂ ಶೋಷಿತರ ಜೊತೆ ನಿಲ್ಲುವ ಸಕ್ರಿಯರ ಗುಂಪೊಂದು ರಚನೆಯಾಗಬೇಕಿದೆ. ಇಲ್ಲದಿದ್ದರೆ ಜನರು ತಮ್ಮ ಮೇಲೆಯೇ ತಿರುಗಿ ಬೀಳುತ್ತಾರೆಂಬ ಭಯದಿಂದ ಬೇರಾರೂ ತಮ್ಮ ಕತೆಗಳನ್ನು ಹಂಚಿಕೊಳ್ಳಲು ಮುಂದೆ ಬರುವುದಿಲ್ಲ.

ಕನ್ನಡ ಚಿತ್ರರಂಗವು ನಟರು ಹಾಗೂ ಅವರ ‘ಅಭಿಮಾನಿ ಸಂಘ’ಗಳ ಹಿಡಿತದಲ್ಲಿರುವುದರಿಂದ ನಟರ ವಿರುದ್ಧ ಮಾತನಾಡುವುದು ತಮ್ಮ‌ ವೃತ್ತಿಜೀವನಕ್ಕೆ‌ ತಾವೇ ಎಳ್ಳುನೀರು ಬಿಟ್ಟುಕೊಂಡಂತೆ ಎಂಬುದು ಎಲ್ಲ ನಟಿಯರಿಗೂ ತಿಳಿದಿದೆ. ವಿಶ್ವದೆಲ್ಲೆಡೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಕಿರುಕುಳದ ಕತೆಗಳನ್ನು ಹಂಚಿಕೊಂಡಿರುವ ಮಹಿಳೆಯರಿಗೆ ಕೆಲಸದ ಅವಕಾಶಗಳು ಕುಸಿದಿವೆಯೇ ವಿನಾ ಹೆಚ್ಚಾಗಿಲ್ಲ. ಹಾಗಾಗಿ ಪ್ರಚಾರಕ್ಕಾಗಿ ಅಥವಾ ಹೆಚ್ಚು ಪಾತ್ರಗಳು ಸಿಗಲೆಂದು ನಟಿಯರು ಸುಳ್ಳು ಆಪಾದನೆ ಮಾಡುತ್ತಾರೆಂಬ ಆರೋಪದಲ್ಲಿ ಹುರುಳಿಲ್ಲ. ನಟರನ್ನೇ ದೇವರೆಂದು ಆರಾಧಿಸುವ ಜನರಿಂದ ತಮಗೆ ಕಿರುಕುಳ ಹೆಚ್ಚಾಗಬಹುದೇ ವಿನಾ ‌ಬೆಂಬಲ ಸಿಗುವುದಿಲ್ಲವೆಂಬುದು ಅವರಿಗೆ ತಿಳಿದಿರುತ್ತದೆ‌. ಇದೆಲ್ಲದರ ಹೊರತಾಗಿಯೂ ತಮ್ಮ‌ ಕತೆಯನ್ನು ಹಂಚಿಕೊಂಡಿದ್ದಾರೆಂದರೆ ನಾವು ಮೊದಲು ಮುಕ್ತ ಮನಸ್ಸಿನಿಂದ ಅದನ್ನು ಕೇಳಿ ಅವರಿಗೆ ಬೆಂಬಲ ನೀಡಬೇಕು. ಹೀಗೆ‌ಂದ ಮಾತ್ರಕ್ಕೆ ಆಪಾದಿತರನ್ನು ತಕ್ಷಣವೇ ಅಪರಾಧಿಗಳೆಂದು ನಿರ್ಧರಿಸಬೇಕಂತಲ್ಲ. ಅವರಿಗೂ ತಮ್ಮನ್ನು ಸಮರ್ಥಿಸಿಕೊಳ್ಳುವ ಅಥವಾ ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸುವ ಅವಕಾಶ ನೀಡಬೇಕು.‌ ತಮ್ಮ ವಿರುದ್ಧದ ಆಪಾದನೆಗೆ ಪ್ರತಿಕ್ರಿಯಿಸುವುದನ್ನು ಆಪಾದಿತರಿಗೇ ಬಿಡಬೇಕು.

ಲೈಂಗಿಕ ಕಿರುಕುಳವನ್ನು ಕಳ್ಳತನ‌, ದರೋಡೆಯಂತಹ ಅಪರಾಧಗಳಂತೆ‌ ನೋಡುವುದನ್ನು ನಾವು ನಿಲ್ಲಿಸಬೇಕು. ಒಂದೊಂದು ಕಿರುಕುಳಕ್ಕೂ‌ ಅದರದ್ದೇ ಸಾಂದರ್ಭಿಕ ಸನ್ನಿವೇಶವಿರುತ್ತದೆ. ಕಿರುಕುಳಕ್ಕೊಳಗಾದ ವ್ಯಕ್ತಿಯ ಸ್ವಭಾವ, ಮನಸ್ಥಿತಿ, ಪರಿಸ್ಥಿತಿ,‌ ಸಮಾಜದಲ್ಲಿ‌ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಅವರ ಹಾಗೂ ಅವರನ್ನು ಕಿರುಕುಳಕ್ಕೊಳಪಡಿಸಿದವರ ಸ್ಥಾನಮಾನ ಮುಂತಾದ ವಿಷಯಗಳೆಲ್ಲವೂ ಸೇರಿ ಅವರ ಪ್ರತಿಕ್ರಿಯೆಯನ್ನು ನಿರ್ಧರಿಸುತ್ತದೆ. ಹೀಗಾಗಿ ಕಿರುಕುಳಕ್ಕೊಳಗಾದವರೆಲ್ಲರೂ ಒಂದೇ ರೀತಿ ಪ್ರತಿಕ್ರಿಯಿಸುವುದಿಲ್ಲ. ತಕ್ಷಣ ದಿಟ್ಟ ಉತ್ತರ ನೀಡಿದವರೇ ನಿಷ್ಠರೆಂದು, ಬೇರೆಲ್ಲರೂ ಸುಳ್ಳುಪುರಕರೆಂದು ಭಾವಿಸುವುದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಬಹುತೇಕ ಕಿರುಕುಳಗಳು ನಾಲ್ಕು ಗೋಡೆಗಳ ಮಧ್ಯೆ ಒಂದು‌ ಗಳಿಗೆಯಲ್ಲಿ‌ ನಡೆದುಬಿಡುವುದರಿಂದ ಬೇರೆ‌ ಅಪರಾಧಗಳಂತೆ ಹತ್ತಾರು ಸಾಕ್ಷ್ಯಗಳನ್ನೊಂದಿರುವುದಿಲ್ಲ. ಕಿರುಕುಳದ ತನಿಖೆಗಳು ಬೇರೆ ಅಪರಾಧಗಳ ತನಿಖೆಗಳಿಗಿಂತ ವಿಭಿನ್ನವಾಗಿರುತ್ತವೆ ಎಂಬುದನ್ನೂ ನಾವು ಅರಿಯಬೇಕಿದೆ.

ಕಿರುಕುಳದ ಕತೆಯೊಂದನ್ನು ಕೇಳುತ್ತಿದ್ದಂತೆ ಅದು ಸುಳ್ಳಿರಬಹುದೆಂಬ ದೃಷ್ಟಿಕೋನದಿಂದಲೇ‌ ನೋಡಿ ಪ್ರಶ್ನೆಗಳ ಮಳೆ ಸುರಿಸುವುದನ್ನು ನಿಲ್ಲಿಸಬೇಕು. ಆಪಾದನೆ ಮೊದಲ ಹೆಜ್ಜೆಯಷ್ಟೇ‌. ಅದೇ ಕೊನೆಯಲ್ಲ. ಇದರ ಮುಂದಿನ ಹೆಜ್ಜೆ ತನಿಖೆ. ಅಲ್ಲಿ ಆಪಾದನೆಯ ಸತ್ಯಾಸತ್ಯತೆಯ ತಪಾಸಣೆ ನಡೆಯುತ್ತದೆ. ಅಲ್ಲಿ‌ ಆಪಾದಿತರಿಗೂ ಸಮರ್ಥಿಸಿಕೊಳ್ಳುವ ಅವಕಾಶ‌ ಸಿಗುತ್ತದೆ. ಸುಳ್ಳು ಆಪಾದನೆಗಳ್ಯಾವುವೂ ತನಿಖೆಯಲ್ಲಿ‌ ನಿಲ್ಲುವುದಿಲ್ಲ. ಆಪಾದಿತರಿಗೆ ತಾವು‌ ಮುಗ್ಧರೆಂದು ಸಾರುವ ಅವಕಾಶವಿದ್ದೇ ಇರುತ್ತದೆ. ಹಾಗಾಗಿ‌ ಇಂತಹ ಪ್ರಕರಣಗಳನ್ನು ತಪಾಸಣೆಗೊಳಪಡಿಸುವ ಸಶಕ್ತವಾದ ಸಮಿತಿಯೊಂದಿದ್ದರೆ ಅದು ಎಲ್ಲರ ಹಿತಾಸಕ್ತಿಯನ್ನೂ ಕಾಪಾಡುತ್ತದೆ. ಈ‌ ಸಮಿತಿಯು ಮಹಿಳೆಯರು ಕೆಲಸ ಮಾಡುವ ಎಲ್ಲ ಕಚೇರಿಗಳಲ್ಲೂ ಕಡ್ಡಾಯವಾಗಿರಬೇಕು ಎಂದು ಸುಪ್ರೀಂಕೋರ್ಟ್‌ 20ವರ್ಷಗಳ ಹಿಂದೆಯೇ ಸೂಚಿಸಿದೆ.

ಈ‌ ಸಮಿತಿಯ ಕಾರ್ಯನಿರ್ವಹಣೆ‌ ಹಾಗೂ ರಚನೆ‌ ಹೇಗಿರಬೇಕೆಂದು ವಿಶಾಖಾ ನಿಯಮದಡಿ ನ್ಯಾಯಾಲಯ ವಿವರಿಸಿದೆ. ಈ‌ ಸಮಿತಿಯಲ್ಲಿ ನಿವೃತ್ತ ನ್ಯಾಯಾಧೀಶರು, ತಜ್ಞರು‌ ಹಾಗೂ ಬಹುಪಾಲು ಮಹಿಳೆಯರು ಇರುವುದರಿಂದ ಇಲ್ಲಿ‌ ಪಕ್ಷಪಾತವಿಲ್ಲದ ಪಾರದರ್ಶಕ ತಪಾಸಣೆ‌ ಸಾಧ್ಯವಾಗುತ್ತದೆ. ಸಿನಿಮಾದಂತಹ ಕಲಾತ್ಮಕ ಕ್ಷೇತ್ರಗಳು ಮಾತ್ರ ಇದರಿಂದ ಇನ್ನೂ ಹೊರಗುಳಿದಿದ್ದು ಈ ಕ್ಷೇತ್ರಗಳಲ್ಲೂ ಈ‌ ಸಮಿತಿಯನ್ನು ಕಡ್ಡಾಯಗೊಳಿಸಬೇಕಿದೆ‌.

ಈ ಅಭಿಯಾನದಿಂದ ಹೆದರಿರುವವರು ಇದಕ್ಕೆ ರಾಜಕೀಯ ಬಣ್ಣ ಹಚ್ಚಲು ತುದಿಗಾಲಲ್ಲಿ ನಿಂತಿರುತ್ತಾರೆ ಎಂಬುದನ್ನು ನೆನಪಿಡಬೇಕು. ಹಾಗೆಯೇ ಈ ಅಭಿಯಾನವನ್ನು ಯಾವುದೇ ರಾಜಕೀಯ ಪಂಥದವರು ಅಪಹರಣ ಮಾಡದಂತೆ ಎಚ್ಚರ ವಹಿಸಬೇಕು. ಲೈಂಗಿಕ ಕಿರುಕುಳ ದೊಡ್ಡ ಸಾಮಾಜಿಕ ಕಾಯಿಲೆಯಾಗಿ ಬೆಳೆದು ನಿಂತಿದ್ದು ಇದು ರಾಜಕೀಯವನ್ನು ಮೀರಿ ಎಲ್ಲರ ಮೇಲೂ ಪರಿಣಾಮ ಬೀರಿದೆ. ದೌರ್ಜನ್ಯ ಎಸಗಿದವರು, ಕಿರುಕುಳಕ್ಕೊಳಗಾದವರು ಎಲ್ಲ ರಾಜಕೀಯ ಪಂಥಗಳಲ್ಲೂ ಇರುತ್ತಾರಾದ್ದರಿಂದ ಸೈದ್ಧಾಂತಿಕ ವ್ಯತ್ಯಾಸಗಳನ್ನು ಪಕ್ಕಕ್ಕಿಟ್ಟು ಎಲ್ಲರೂ ಸೇರಿ ಈ‌ ಸಾಮಾಜಿಕ ಕಾಯಿಲೆಯನ್ನು ಗುಣಪಡಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT