ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ವಲಸೆ ಕಾರ್ಮಿಕರ ಮರುಪಯಣ ಸುರಮ್ಯ ಅಲ್ಲ!

ಈಗ ಹಳ್ಳಿಗಳಿಗೆ ಮರಳುತ್ತಿರುವವರು ‘ಕೆಟ್ಟು’ ಪಟ್ಟಣ ಸೇರಿದ್ದುದೇಕೆ?
Last Updated 13 ಮೇ 2020, 19:45 IST
ಅಕ್ಷರ ಗಾತ್ರ

ಕೆಲಸ ಅರಸಿಕೊಂಡು ನಗರ ಸೇರಿದ್ದ ಜನಸಾಮಾನ್ಯರು, ಲಾಕ್‌ಡೌನ್ ಆರಂಭವಾದಂದಿನಿಂದ, ಹೇಗಾದರೂ ಮಾಡಿ ತಮ್ಮ ‘ಮೂಲನಿವಾಸ’ ಸೇರಬೇಕೆಂದು ಹರಸಾಹಸ ಪಡುತ್ತಿರುವ ದೃಶ್ಯಗಳು, ಮಾಧ್ಯಮಗಳ ಮೂಲಕ ನಮ್ಮನ್ನು ಕಾಡುತ್ತಿವೆ. ಈ ಪ್ರಯತ್ನಗಳಲ್ಲಿ ಕೆಲವರು ಪ್ರಾಣ ತೆತ್ತಿದ್ದಾರೆ ಕೂಡ. ಆದರೆ, ಕೆಲವೊಮ್ಮೆ ವಸ್ತುಸ್ಥಿತಿಯ ಆಳ ತಿಳಿಯದೆ, ಹಳ್ಳಿಜೀವನದ ವೈಭವೀಕರಣ ಮಾಡುತ್ತೇವೆ.

ಮುಖ್ಯವಾಗಿ, ಇಲ್ಲಿ ಹಳ್ಳಿಯಿಂದ ನಗರಗಳಿಗೆ ಜನ ಯಾಕೆ ವಲಸೆ ಬರಲಾರಂಭಿಸಿದರು ಎನ್ನುವುದನ್ನು ನಾವು ಗಮನಿಸಬೇಕಾಗುತ್ತದೆ. ಹಳ್ಳಿಯಲ್ಲಿ ಇನ್ನೂ ಜಾತೀಯತೆ ಇದೆ, ಲಿಂಗ ತಾರತಮ್ಯವಿದೆ, ಸಂಪ್ರದಾಯಗಳ ಹೇರಿಕೆಯಿದೆ, ಬಹಿಷ್ಕಾರವಿದೆ, ಉದ್ಯೋಗಗಳು ಮತ್ತು ಮೂಲಭೂತ ವ್ಯವಸ್ಥೆಯ ತೀವ್ರ ಕೊರತೆಯಿದೆ. ಮುಖ್ಯವಾಗಿ, ಎಕರೆಗಟ್ಟಲೆ ಕೃಷಿಭೂಮಿ ಹೊಂದಿದ್ದಲ್ಲಿ ಮಾತ್ರ ನೀವು ಮೂರು ಹೊತ್ತಿನ ಊಟದ ಕನಸು ಕಾಣಬಹುದು. ಸ್ವಂತ ಭೂಮಿ ಇಲ್ಲದವರು ಭೂಮಾಲೀಕನ ಜೀತದಾಳಾಗಿ, ತನ್ನ ಮತ್ತು ಮಕ್ಕಳ ಜೀವನ ಪರಂಪರೆಯನ್ನು ಅಲ್ಲಿಯೇ ಮುಂದುವರಿಸುತ್ತಾರೆ. ಹೊಸ ಕನಸುಗಳ ಸಾಧ್ಯತೆಯನ್ನು ಅವರು ಕಾಣಲಾರರು.

ಹತ್ತೊಂಬತ್ತನೆಯ ಶತಮಾನದ ಬೃಹತ್ ಕೈಗಾರಿಕೀಕರಣದಿಂದಾಗಿ ಪ್ರಾರಂಭವಾದ ಈ ನಗರೀಕರಣ, ಈ ಭೂರಹಿತ ಜನರಿಗೆ ಮತ್ತು ಮಹಿಳೆಯರಿಗೆ ಹೊಸ ಭರವಸೆ, ಜೀವನೋಪಾಯ ಹಾಗೂ ಸ್ವಾತಂತ್ರ್ಯದ ಅನುಭವ ಕೊಟ್ಟಿತು. ಇದರಿಂದಾಗಿಯೇ, ನಾವು ಮಾನವ ಇತಿಹಾಸದಲ್ಲಿ ಹಿಂದೆಂದೂ ಕಾಣದ ಕಾರ್ಮಿಕರ ಸಂಘಟನೆಗಳು, ಹೋರಾಟಗಳು, ಕ್ರಾಂತಿಗಳು, ಮಹಿಳೆಯರ ಹೊಸ ಅರಿವು, ಜಾತಿವ್ಯವಸ್ಥೆಯ ವಿರುದ್ಧ ಹೋರಾಟಗಳನ್ನು ಕಾಣತೊಡಗಿದ್ದು. ವಿಶೇಷವಾಗಿ, ಜನ ತಮ್ಮ ಹಕ್ಕುಗಳ ಬಗ್ಗೆ ಚಿಂತಿಸತೊಡಗಿದ್ದು ಮತ್ತು ಸಾಮಾಜಿಕ ಬದಲಾವಣೆಗಳನ್ನು ತಂದಿದ್ದು.

ಈಗ ನಾವು ಕಾಣುತ್ತಿರುವ ಈ ಹಳ್ಳಿಗಳತ್ತ ‘ಮರಳಿ ಮಣ್ಣಿಗೆ’ ಹೆಜ್ಜೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮೂರು ಶ್ರೇಣಿಯ ಜನರನ್ನು ಕಾಣಬಹುದು. ಮೊದಲನೆಯವರು, ಸ್ವಂತ ಭೂಮಿಯಿದ್ದು, ಕೈಕೆಸರು ಮಾಡಿಕೊಳ್ಳಲು ಇಚ್ಛಿಸದೆ ನಗರಗಳಲ್ಲಿ ಸಣ್ಣ ಪುಟ್ಟ ಉದ್ಯೋಗ ಮಾಡಿಕೊಂಡಿದ್ದವರು. ಇವರಲ್ಲಿ ಕೆಲವರಿಗೆ ಜ್ಞಾನೋದಯವಾಗಿ, ಪುನಃ ಹಳ್ಳಿಯಲ್ಲಿ ಹೊಸ ಬದುಕು ಕಟ್ಟಿಕೊಳ್ಳುವ ಹುಮ್ಮಸ್ಸು ಮೂಡಿರಬಹುದು. ಇದು ಒಂದು ಒಳ್ಳೆಯ ಬೆಳವಣಿಗೆ. ಇನ್ನು ಕೆಲವರು ಪಟ್ಟಣಗಳಲ್ಲಿ ಚೆನ್ನಾಗಿ ಓದಿ, ಕೈತುಂಬಾ ಸಂಪಾದಿಸಿ, ಈಗ ಹಳ್ಳಿಗಳಲ್ಲಿ ತಮಗಿರುವ ಭೂಮಿಯಲ್ಲಿ ಸರಳ ಜೀವನ ಮಾಡುವ ಕನಸು ಕಾಣುತ್ತಿರಬಹುದು. ಆದರೆ, ನಗರ ವ್ಯವಸ್ಥೆಗಳಿಗೆ ಒಗ್ಗಿಹೋಗಿರುವ ಈ ಮಂದಿಯ ನಿರ್ಧಾರ ಎಷ್ಟು ದಿನ ಅಚಲವಾಗಿರುವುದೋ ಕಾಲವೇ ನಿರ್ಧರಿಸುತ್ತದೆ. ಆದರೆ, ನಾವಿಲ್ಲಿ ಗಮನಿಸಬೇಕಾದುದು, ಮೂರನೆಯ ವರ್ಗವನ್ನು. ಇವರು, ಹಳ್ಳಿಗಳಲ್ಲಿ ಸ್ವಂತ ಭೂಮಿ, ಉದ್ಯೋಗವಿಲ್ಲದೆ, ನಗರಗಳಿಗೆ ಉದ್ಯೋಗ ಅರಸಿಕೊಂಡು ಬಂದಿರುವ, ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಅನಕ್ಷರಸ್ಥ ಜನ. ಈಗ, ಇವರೂ ಹಳ್ಳಿಗಳತ್ತ ಮರುಹೆಜ್ಜೆ ಇಡುತ್ತಿದ್ದಾರೆ.

ಇವರೆಲ್ಲ, ಹಳ್ಳಿಯಲ್ಲಿ ಬದುಕು ನಡೆಸಲಾಗದೆ, ಜೋಪಡಿಗಳಲ್ಲಿ ಹಿರಿಯರನ್ನು ಬಿಟ್ಟು, ಪಟ್ಟಣದಲ್ಲಿ ದುಡಿದು ಅವರನ್ನು ಪೋಷಿಸಿ, ತಾವೂ ಬದುಕುತ್ತಿರುವವರು. ದುರಂತವೆಂದರೆ, ಇವರೆಲ್ಲರೂ ಭೂರಹಿತ, ಕೆಳವರ್ಗದ, ಕೆಳಜಾತಿಯ ಜನ. ಹಳ್ಳಿಗಳಲ್ಲಿ ಇವರಿಗೀಗ ಭೂಮಾಲೀಕರ ಜೀತ ಕಾದಿದೆ. ಅದರ ಅರಿವೂ ಅವರಿಗಿದೆ. ಆದರೆ, ಇದಕ್ಕೆ ಮೀರಿ ಕೊರೊನಾ ಇವರಿಗೆ ಸಾವಿನ ಭಯ ತಂದಿದೆ. ಹಾಗಾಗಿ ‘ನಾವು ಸಾಯುವುದಿದ್ದರೆ ನಮ್ಮ ಹಳ್ಳಿಯಲ್ಲಿಯೇ, ನಮ್ಮ ಜನರೊಂದಿಗೇ’ ಎನ್ನುತ್ತಿದ್ದಾರೆ. ಇದು, ಜೀವನದ ಹತಾಶೆಯ ಅಂತಿಮ ನಿರ್ಧಾರ. ಇದು, ನಮ್ಮ ವ್ಯವಸ್ಥೆಯ ವೈಫಲ್ಯದ ಪ್ರತೀಕವೇ ಹೊರತು, ‘ಫೀಲ್ ಅಟ್ ಹೋಮ್’ ಭಾವನೆಯಲ್ಲ. ಯಾಕೆಂದರೆ, ಅವರೀಗ ಜೀವಭಯದಿಂದ ಹಳ್ಳಿ ಸೇರಿದರೂ ಅಲ್ಲೂ ಜೀವನ ನಿರ್ವಹಿಸಲಾಗದೆ, ಹೊಟ್ಟೆಪಾಡಿಗೆ ಪುನಃ ನಗರ ಸೇರಲೇಬೇಕು.

ಇಷ್ಟು ದಿನ ನಗರದ ಜೀವನವನ್ನು ಮನಃಪೂರ್ವಕ ವಾಗಿ ಅನುಭವಿಸಿ, ಈಗ ಮರಳಿ ಮಣ್ಣಿಗೆ ಸೇರಲಿಚ್ಛಿಸುವ ಸುಶಿಕ್ಷಿತ, ಭೂಮಾಲೀಕ ವರ್ಗಕ್ಕೆ, ಸದ್ಯಕ್ಕೆ ಹಳ್ಳಿಜೀವನ ಸ್ವರ್ಗದಂತೆ ಕಾಣಬಹುದು. ಆದರೆ ಈ ಮಾತನ್ನು ಅನಕ್ಷರಸ್ಥ ಕೂಲಿ ಕಾರ್ಮಿಕರು, ಭೂರಹಿತರು, ಮಹಿಳೆಯರು, ಕೆಳಜಾತಿಯವರು ಖಂಡಿತ ಪುಷ್ಟೀಕರಿಸಲಾರರು. ಸದ್ಯಕ್ಕೆ ಅವರೆಲ್ಲ ಹಳ್ಳಿಗಳಿಗೆ ಗುಳೆ ಹೋಗುತ್ತಿರುವುದು ನಗರಗಳನ್ನು ಆಕ್ರಮಿಸಿರುವ ಕೊರೊನಾದಿಂದ ತಮ್ಮನ್ನು ರಕ್ಷಿಸಿ ಕೊಳ್ಳಲು ಹೊರತು, ಅಲ್ಲೇ ತಳವೂರಲು ಅಲ್ಲ. ಯಾಕೆಂದರೆ, ಹಳ್ಳಿಗಳಲ್ಲಿ ಅವರ ಜೀವನ ಇನ್ನೂ ಶೋಷಣೀಯ. ಈ ದಿಸೆಯಲ್ಲಿ, ನಮ್ಮ ಸರ್ಕಾರಗಳು, ಈ ವಲಸಿಗರಲ್ಲಿ ಭರವಸೆ ತುಂಬಿ ಅವರಿರುವಲ್ಲಿಯೇ
ಉಳಿಸಿಕೊಳ್ಳುವ, ಸದ್ಯಕ್ಕೆ ಪೋಷಿಸುವ ವ್ಯವಸ್ಥೆ ಮಾಡಬೇಕಿತ್ತು. ಯಾಕೆಂದರೆ, ಇವರು ನಗರಗಳ ಜೀವನಾಡಿ ಮತ್ತು ನಗರಗಳು ಇವರಿಗೆ ಅನ್ನದಾತ.

ನಗರಗಳಲ್ಲಿ ವಾಸವಾಗಿರುವ, ಆದರೆ ಹಳ್ಳಿಗಳಲ್ಲಿ ಭೂಮಿ ಹೊಂದಿದವರಿಗೆ ಈ ವಲಸಿಗರ ಮರುಪ್ರಯಾಣ ರೊಮ್ಯಾಂಟಿಕ್ ಆಗಿ ಕಾಣಿಸಬಹುದು. ಆದರೆ, ಇಷ್ಟೊಂದು ಸಂಖ್ಯೆಯ ಜನರಿಗೆ ಉದ್ಯೋಗ ಕೊಟ್ಟು ಸಾಕುವ ಶಕ್ತಿ ನಮ್ಮ ಹಳ್ಳಿಗಳಿಗೆ ಇದೆಯೇ ಎನ್ನುವುದನ್ನು ಯೋಚಿಸಬೇಕಿದೆ. ‘ಕೆಟ್ಟು ಪಟ್ಟಣ ಸೇರು’ ಎನ್ನುವುದು ಸವಕಲು ಮಾತು. ಎಲ್ಲ ಸಂಪ್ರದಾಯಗಳನ್ನು ಮೀರಿ ಮುನ್ನುಗ್ಗುವ ಇಚ್ಛಾಶಕ್ತಿ ಪ್ರಕಟಿಸಿದವರು, ವಲಸಿಗರಾಗಿ ಹೊಸ ಅರಿವನ್ನು ಸೃಷ್ಟಿಸಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT