ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡ ಹೆಚ್ಚಳ ಪರಿಹಾರವಾದೀತೇ?

ಸಂಭಾವಿತರೂ ಕೆಲವೊಮ್ಮೆ ಸಂಚಾರ ನಿಯಮ ಉಪೇಕ್ಷಿಸುತ್ತಾರೆ!
Last Updated 26 ಆಗಸ್ಟ್ 2019, 20:30 IST
ಅಕ್ಷರ ಗಾತ್ರ

ಕೇಂದ್ರ ಮೋಟಾರು ವಾಹನ ಕಾಯ್ದೆಗೆ ಇತ್ತೀಚೆಗೆ ತಿದ್ದುಪಡಿ ತರಲಾಗಿದೆ. ಅಸುರಕ್ಷಿತ ಮತ್ತು ಅಜಾಗರೂಕ ವಾಹನ ಚಾಲನೆಯಿಂದ ಆಗುವ ಸಾವು, ನೋವು, ನಷ್ಟವನ್ನು ಕಡಿಮೆ ಮಾಡುವುದೇ ಮುಖ್ಯ ಉದ್ದೇಶವೆಂದು ಹೇಳಲಾಗಿದೆ. ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡದ ಮೊತ್ತವನ್ನು ಎರಡು, ಐದು, ಕೆಲವೆಡೆ ಹತ್ತು ಪಟ್ಟು ಹೆಚ್ಚಿಸಲಾಗಿದೆ.

ದಂಡ ಹೆಚ್ಚಿಸಿದರೆ ನಿಯಮ ಉಲ್ಲಂಘನೆ ಕಡಿಮೆಯಾಗುತ್ತದೆ ಎಂಬುದೇ ಇಲ್ಲಿನ ಫಿಲಾಸಫಿ. ದೇಶದಲ್ಲಿ ಮರಣದಂಡನೆ ಜಾರಿಯಲ್ಲಿದ್ದರೂ ಕೊಲೆಗಳಾಗುವ ಸಂಖ್ಯೆ ಕಡಿಮೆಯಾಗುವ ಬದಲಿಗೆ ಹೆಚ್ಚೇ ಆಗುತ್ತಿರುವ ಸನ್ನಿವೇಶ ಇದಕ್ಕೆ ಸವಾಲನ್ನು ಒಡ್ಡುತ್ತದೆ. ಯಾವುದೇ ಸಮಸ್ಯೆಗೆ ಕಾರಣಗಳಿರುತ್ತವೆ. ಕಾರಣಗಳನ್ನು ಹುಡುಕಿ ನಿರ್ಮೂಲನ ಮಾಡಬೇಕು. ಆಗ ಸಮಸ್ಯೆ ಬಗೆ ಹರಿಯುವ ಸಾಧ್ಯತೆ ಹೆಚ್ಚಾಗುತ್ತದೆ. ರಸ್ತೆ ನಿಯಮ ಉಲ್ಲಂಘನೆಗೆ ಕಾರಣ ಏನು ಎಂದು ಆಲೋಚಿಸೋಣ.

ರಸ್ತೆ ಮೇಲೆ ವಾಹನದಲ್ಲಿ ಸಂಚರಿಸುವವರಲ್ಲಿ ಮೂರು ವರ್ಗ. ಮೊದಲನೆಯ ವರ್ಗದವರಿಗೆ ಸಂಚಾರ ನಿಯಮಗಳೇ ಗೊತ್ತಿರುವುದಿಲ್ಲ. ಹೆಚ್ಚಿನವರು ತಮ್ಮ ತಂದೆ ತಾಯಿಯಿಂದ ಚಾಲನೆ ಕಲಿತಿರುತ್ತಾರೆ. ತಮಗೇ ಗೊತ್ತಿಲ್ಲದ ನಿಯಮಗಳನ್ನು ಅವರು ಮಕ್ಕಳಿಗೇನು ಹೇಳಿಕೊಡುತ್ತಾರೆ?

ಎರಡನೆಯ ವರ್ಗದವರಿಗೆ ನಿಯಮ ಗೊತ್ತಿ ರುತ್ತದೆ, ಪಾಲಿಸುವ ಮನಸ್ಸೂ ಇರುತ್ತದೆ. ಆದರೆ, ಪಾಲಿಸದಿದ್ದರೂ ನಡೆಯುತ್ತದೆ ಎನ್ನುವ ಪ್ರವೃತ್ತಿ. ಪೊಲೀಸರಿದ್ದು ನಿಯಂತ್ರಿಸುತ್ತಿದ್ದರೆ, ಅನಿವಾರ್ಯವೆಂಬಂತೆ ಇವರು ಪಾಲಿಸುತ್ತಾರೆ. ಉಳಿದವರು ಉಲ್ಲಂಘಿಸುವುದನ್ನು ನೋಡಿ ತಾವೂ ಉಲ್ಲಂಘಿಸುತ್ತಾರೆ.

ಮೂರನೇ ವರ್ಗವಿದೆ. ಈಗಂತೂ ಇವರ ಸಂಖ್ಯಾಬಲ ಹೆಚ್ಚಾಗುತ್ತಲಿದೆ. ಇವರು ಗೊತ್ತಿದ್ದೂ ಗೊತ್ತಿದ್ದೂ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಉಲ್ಲಂಘನೆಯೇ ಇವರ ಪೌರುಷದ ಸಂಕೇತ. ಹಾಗೆ ನೋಡಿದರೆ, ಈ ವರ್ಗದವರಿಗೆ ಯಾವುದೇ ನಿಯ ಮಗಳನ್ನು ಪಾಲಿಸುವ ಮನೋವೃತ್ತಿ ಇರುವುದಿಲ್ಲ. ಸಂಚಾರ ನಿಯಮಗಳು ಇದಕ್ಕೆ ಹೊರತಲ್ಲ. ಇವರು ಬೆಳೆದಿರುವುದೇ ಹಾಗೆ. ಈ ಪ್ರವೃತ್ತಿ ಇರುವುದು ಬರೀ ಬಿಸಿರಕ್ತದ ಯುವಜನರಲ್ಲಿ ಎಂದು ತಿಳಿದರೆ ಅದು ತಪ್ಪು. ಇದಕ್ಕೆ ವಯಸ್ಸು, ಲಿಂಗ, ಅಂತಸ್ತು, ಶಿಕ್ಷಣ ಯಾವುದರ ಭೇದವಿಲ್ಲ.

ಈ ವರ್ಗದ ಜನರು ಸಮಾಜದ ಕಾನೂನುಗಳನ್ನು ಉಪೇಕ್ಷಿಸುತ್ತಲೇ, ಉಲ್ಲಂಘಿಸುತ್ತಲೇ ಬೆಳೆಯುತ್ತಾರೆ. ಮನೆ ಕಟ್ಟುವುದಾಗಿರಬಹುದು, ರಸ್ತೆಗೆ ಅಡ್ಡವಾಗಿ ಪೆಂಡಾಲನ್ನು ಹಾಕಿ ವೈಯಕ್ತಿಕ ಅಥವಾ ಸಾರ್ವಜನಿಕ ಸಮಾರಂಭಗಳನ್ನು ನಡೆಸುವುದು, ರಾತ್ರಿಯಿಡೀ ದೊಡ್ಡದಾಗಿ ಮೈಕು ಹಾಕುವುದು, ದೊಡ್ಡ ಸದ್ದು ಮಾಡುವ ಪಟಾಕಿ ಹಾರಿಸುವುದು, ಬೇರೆಯವರ ಮನೆಯೆದುರು ವಾಹನಗಳನ್ನು ನಿಲ್ಲಿಸುವುದು, ಮದ್ಯಪಾನ ಮಾಡಿ ಗಾಡಿ ಓಡಿಸುವುದು, ರಸ್ತೆಯಲ್ಲಿ ವ್ಹೀಲಿಂಗ್ ಮಾಡುವುದು... ಒಟ್ಟಾರೆ ಇವರಿಗೆ ನಾಗರಿಕ ನಿಯಮಗಳು ಹಿಡಿಸುವುದಿಲ್ಲ. ಅವರ ಪ್ರಪಂಚದಲ್ಲಿ ಕಾನೂನು, ಸಮಾಜ ವ್ಯವಸ್ಥೆಯೇ ಇರುವುದಿಲ್ಲ. ತಾವು ಆಡಿದ್ದೇ ಆಟ, ಅದೇ ನಿಯಮ. ಸಾಮಾನ್ಯ ಕಮರ್ಶಿಯಲ್ ಸಿನಿಮಾಗಳಲ್ಲಿ ನಮ್ಮ ಹೀರೊಗಳು ಇರುತ್ತಾರಲ್ಲ ಹಾಗೆ, ಬಿಂದಾಸ್! ಅವರೇ ಕಾನೂನು, ಅವರನ್ನು ‘ಏಕೆ’ ಎಂದು ಕೇಳುವುದೇ ಕಾನೂನು ಉಲ್ಲಂಘನೆ!

ಸಂಚಾರ ಪೊಲೀಸರ ಉಪೇಕ್ಷೆ ಇಂಥ ಕಾನೂನು ಉಲ್ಲಂಘನೆಯ ಸ್ವಭಾವವನ್ನು ಸಾರ್ವಜನಿಕರಲ್ಲಿ ಪ್ರೋತ್ಸಾಹಿಸುತ್ತದೆ. ಸಂಚಾರ ಹೆಚ್ಚಾಗಿರುವ ಸರ್ಕಲ್‍ಗ ಳಲ್ಲಿ ಕೋಟಿಗಟ್ಟಲೆ ವೆಚ್ಚದಲ್ಲಿ ನಿಯಂತ್ರಕ ದೀಪ ವ್ಯವಸ್ಥೆ ಅಳವಡಿಸಲಾಗಿರುತ್ತದೆ. ಸಾಲದು ಎಂದು ಹಲವಾರು ಕಡೆ ಸಿ.ಸಿ ಟಿ.ವಿ ಕ್ಯಾಮೆರಾಗಳು ಇರುತ್ತವೆ. ಇದೂ ಸಾಲದು ಎಂದು ಯಾವುದಾದರೂ ಕಂಪನಿ ದಾನ ಮಾಡಿರುವ ನೆರಳು ಗೂಡಿನಲ್ಲಿ ಒಬ್ಬಿಬ್ಬರು ಪೊಲೀಸರೂ ಕುಳಿತಿರುತ್ತಾರೆ, ಮೊಬೈಲ್‍ನಲ್ಲಿ ವಿಡಿಯೊ ನೋಡಿಕೊಂಡು. ಆದರೆ ಸಂಚಾರ ನಿಯ ಮಗಳು, ಅದರಿಂದ ಒದಗಬಹುದಾದ ಸುರಕ್ಷೆ ಮಾತ್ರ ವಾಹನ ಚಾಲಕರ ಕೃಪೆಯನ್ನು ಅವಲಂಬಿಸಿರುತ್ತದೆ. ಇಂಥ ಸನ್ನಿವೇಶದಲ್ಲಿ ಎಂಥ ಮಹಾ ಸಂಭಾವಿತರೂ ನಿಯಮವನ್ನು ಉಪೇಕ್ಷಿಸಲು ಪ್ರೇರಿತರಾಗಿಬಿಡುತ್ತಾರೆ!

ಹೆಚ್ಚಿನವರು ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಹಾಕಿಕೊಂಡಾಗ ಪೊಲೀಸರಿಗೆ ತೆರುವುದು ದಂಡವಲ್ಲ, ಲಂಚ. ದಂಡದ ಮೊತ್ತ ಹತ್ತು ಪಟ್ಟು ಹೆಚ್ಚಾದರೆ, ಲಂಚದ ಮೊತ್ತ ಹೆಚ್ಚೆಂದರೆ ಎರಡು ಪಟ್ಟು ಆಗಬಹುದು, ಅಷ್ಟೆ. ಅದೂ ಸಿಕ್ಕಿಹಾಕಿಕೊಂಡಾಗಲ್ಲವೇ? ಆಗ ನೋಡಿಕೊಂಡರಾಯಿತು. ಏಕೆಂದರೆ, ಸಂಚಾರ ಪೊಲೀಸರು ಹೇಗೂ ಯಾವಾಗಲೂ ಜಾಗೃತರಾಗಿರುವುದಿಲ್ಲ. ಪೀಕ್ ಅವರ್, ಮೆರವಣಿಗೆ, ಹರತಾಳ ಇತ್ಯಾದಿ ನೆಪದಲ್ಲಿ ಪೊಲೀಸರೇ ನಿಯಮಗಳನ್ನು ಗಾಳಿಗೆ ತೂರುತ್ತಾರೆ, ‘ರಿಯಾಯಿತಿ’ ನೀಡುತ್ತಾರೆ. ಹೀಗೆ ಮಾಡಿಯೇ ಬೇಕೆಂದೇ ಜನರಲ್ಲಿ ನಿಯಮ ಉಲ್ಲಂಘನೆಯ ದುರಭ್ಯಾಸವನ್ನು ಮಾಡಿಸಿ, ತಿಂಗಳಿಗೊಮ್ಮೆ ಇದ್ದಕ್ಕಿದ್ದಂತೆ ಅಲ್ಲಲ್ಲಿ ಅಡಗಿ ನಿಂತು ನಿಯಮೋಲ್ಲಂಘಿಗಳನ್ನು ಖೆಡ್ಡಾಕ್ಕೆ ಕೆಡವಿ ದಂಡ ವಸೂಲಿ ಮಾಡುತ್ತಾರೆ.

ಪೊಲೀಸ್ ಮತ್ತು ಇತರ ಎಲ್ಲಾ ಪ್ರಾಧಿಕಾರಗಳು ನಾಗರಿಕ ನಿಯಮಗಳನ್ನು ಜಾರಿಗೆ ತರುವ ತಮ್ಮ ಕರ್ತವ್ಯದಲ್ಲಿ ನಿರಂತರ ಜಾಗೃತರಾಗಿರಬೇಕು. ಪ್ರಾಮಾಣಿಕರಾಗಿದ್ದು, ಸಾರ್ವಜನಿಕರಲ್ಲಿ ತಮ್ಮ ಘನತೆ, ಗೌರವವನ್ನು ಕಾಪಾಡಿಕೊಳ್ಳಬೇಕು. ಸಂಚಾರವಷ್ಟೇ ಅಲ್ಲ, ಎಲ್ಲ ನಾಗರಿಕ ವಲಯಗಳಲ್ಲಿ ಸರ್ವೋಪಯೋಗಿ ನಿಯಮಗಳು ಪಾಲನೆಯಾಗುವಂತೆ ನಿರಂತರ ಶ್ರಮ ಪಡಬೇಕು. ಎಲ್ಲಾ ‘ನಿಯಮಗಳಿರುವುದು ನಮಗಾಗಿ, ಅವುಗಳ ಪಾಲನೆ ನಮ್ಮ ಹೊಣೆ’ ಎಂಬ ಭಾವನೆ ಸಾರ್ವತ್ರಿಕವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT