ಚಲನಚಿತ್ರಗಳಿಗೆ ನೀಡುವ ರಾಷ್ಟ್ರಪ್ರಶಸ್ತಿಯ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಶಾರುಕ್ ಖಾನ್ ಅವರಿಗೆ ‘ಜವಾನ್’ ಹಿಂದಿ ಸಿನಿಮಾ ಅಭಿನಯಕ್ಕೆ ಶ್ರೇಷ್ಠ ನಟ ಪ್ರಶಸ್ತಿ ನೀಡಲಾಗಿದೆ. ಅದೀಗ ಸಹಜವಾಗಿ ಪ್ರಶ್ನೆಗೆ ಒಳಪಟ್ಟಿದೆ.

ಶಾರುಕ್ ಖಾನ್ ಮೂರು ದಶಕಗಳಿಗೂ ಹೆಚ್ಚು ಕಾಲ ಸೂಪರ್ ಸ್ಟಾರ್ ಆಗಿ ಮೆರೆದವರು. ಅತಿ ನಟನೆಯಿಂದ ಮೊದಲು ಛಾಪು ಮೂಡಿಸಿದ ಅವರು, ಆಮೇಲೆ ಪ್ರಯೋಗಮುಖಿಯೂ ಆದರು. ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಸಿನಿಮಾದಲ್ಲಿ ನಿರ್ದೇಶಕ ಯಶ್ ಚೋಪ್ರಾ, ಅವರಲ್ಲಿನ ಲವರ್ ಬಾಯ್ ಅನ್ನು ಹೊರಗೆ ತೆಗೆದಿದ್ದರು. ಕನ್ನಡದ ‘ಚಿಗುರಿದ ಕನಸು’ ಚಿತ್ರದ ಆತ್ಮವನ್ನೇ ಹೊಂದಿದ್ದ ‘ಸ್ವದೇಸ್’ (ಅಂದಹಾಗೆ, ಈ ಸಿನಿಮಾ ನಿರ್ದೇಶಿಸಿದ್ದು ಆಶುತೋಷ್ ಗೋವಾರಿಕರ್) ಸಿನಿಮಾದಲ್ಲಿ ಅವರ ನಿಯಂತ್ರಿತ ಅಭಿನಯ, ‘ಚಕ್ ದೇ’ ಇಂಡಿಯಾ ಚಿತ್ರದ ಹಾಕಿ ಕೋಚ್ ಪಾತ್ರದಲ್ಲಿನ ಖದರು, ‘ಮೈ ನೇಮ್ ಈಸ್ ಖಾನ್’ನಲ್ಲಿನ ಮಾನಸಿಕ ಹೊಯ್ದಾಟದ ಭಾವುಕತೆಯ ಬಿಂಬ... ಇವೆಲ್ಲವೂ ಶಾರುಕ್ ಅಭಿನಯದ ಹಲವು ಮಜಲುಗಳಿಗೆ ಉದಾಹರಣೆ. ಆದರೆ, ‘ಜವಾನ್’ ಸಿನಿಮಾದಲ್ಲಿನ ಅವರ ಪಾತ್ರದ ರೂಹನ್ನು ಈ ಯಾವುದರ ಜೊತೆಗೂ ತುಲನೆ ಮಾಡಲು ಆಗದು.

ಶಾರುಕ್ ಆ ಸಿನಿಮಾದಲ್ಲಿ ತ್ರಿಪಾತ್ರಗಳಲ್ಲಿ ಅಭಿನಯಿಸಿದ್ದಾರೆ, ನಿಜ. ಅವುಗಳಲ್ಲಿ ಅಭಿನಯಾವಕಾಶಕ್ಕಿಂತ ಹೆಚ್ಚಾಗಿ ಕಾಸ್ಮೆಟಿಕ್ ಆದಂಥ ಬಿಂಬಗಳು ಹೆಚ್ಚಾಗಿವೆ. ಒಂದು ಮೂಲದ ಪ್ರಕಾರ, ಮಲಯಾಳದ ‘ಆಡು ಜೀವಿತಂ: ದಿ ಗೋಟ್ ಲೈಫ್’ ಸಿನಿಮಾ ಪಾತ್ರಕ್ಕಾಗಿ ಪೃಥ್ವಿರಾಜ್ ಸುಕುಮಾರನ್ ಅವರೂ ಶ್ರೇಷ್ಠ ನಟ ಸ್ಪರ್ಧೆಯಲ್ಲಿ ಇದ್ದರು. ಆದರೆ, ಆ ಸಿನಿಮಾ ಸಹಜವಾಗಿ ಇಲ್ಲ, ಅಭಿನಯವೂ ನೈಜತೆಯಿಂದ ಕೂಡಿಲ್ಲ ಎಂದು 71ನೇ ರಾಷ್ಟ್ರಪಶಸ್ತಿಯ ತೀರ್ಪುಗಾರರ ಸಮಿತಿಯ ಅಧ್ಯಕ್ಷ ಆಶುತೋಷ್ ಗೋವಾರಿಕರ್ ಅಭಿಪ್ರಾಯಪಟ್ಟರೆಂದು ಮಲಯಾಳ ನಿರ್ದೇಶಕ ಪ್ರದೀಪ್ ನಾಯರ್ ತಿಳಿಸಿದ್ದಾರೆ. ಪ್ರದೀಪ್ ಅವರೂ ತೀರ್ಪುಗಾರರ ಸಮಿತಿಯಲ್ಲಿ ಒಬ್ಬರಾಗಿದ್ದರು.

‘ಕೇರಳ ಸ್ಟೋರಿ’ ಸಿನಿಮಾ ನಿರ್ದೇಶನಕ್ಕೆ (ನಿರ್ದೇಶಕ: ಸುದೀಪ್ತೋ ಸೇನ್) ಶ್ರೇಷ್ಠ ಪ್ರಶಸ್ತಿ ಕೊಡುವುದು ಸರಿಯಲ್ಲ, ಅದು ಒಂದು ರಾಜ್ಯದ ವಿರುದ್ಧ ರಾಜಕೀಯ ಅಜೆಂಡಾ ಇಟ್ಟುಕೊಂಡಿರುವ ಸಿನಿಮಾ ಎಂದು ಕೂಡ ತಾವು ಪ್ರತಿಪಾದಿಸಿದ್ದಾಗಿ ಪ್ರದೀಪ್ ಹೇಳಿಕೊಂಡಿದ್ದಾರೆ. ಸಮಿತಿಯಲ್ಲಿ ತಮ್ಮನ್ನು ಹೊರತುಪಡಿಸಿ ಮಿಕ್ಕೆಲ್ಲರೂ ಆ ಚಿತ್ರದ ನಿರ್ದೇಶನಕ್ಕೆ ಪ್ರಶಸ್ತಿ ಕೊಡಲು ಒಪ್ಪಿಗೆ ಸೂಚಿಸಿದ್ದು, ತಾವು ಒಬ್ಬರೇ ಗುಂಪಿಗೆ ಸೇರದ ಪದದ ಹಾಗೆ ಹೊರಗೆ ಉಳಿದಂತೆ ಆಯಿತು ಎಂದೂ ಭಾವುಕರಾಗಿ ಅಳಲು ತೋಡಿಕೊಂಡಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೂ ಸೌಹಾರ್ದ ಕದಡುವ ಚಿತ್ರಕ್ಕೆ ಮನ್ನಣೆ ಕೊಟ್ಟಂತಾಗಿದೆ ಎಂದು ಟೀಕಿಸಿಯೂ ಆಗಿದೆ.

ಆಶುತೋಷ್ ಗೋವಾರಿಕರ್ ಅವರ ಸಹಜತೆಯ ಅಪೇಕ್ಷೆಯನ್ನೇ ಇಟ್ಟುಕೊಂಡು ಒರೆಗೆಹಚ್ಚಿದರೂ ಶಾರುಕ್ ಅಭಿನಯಕ್ಕೆ ‘ಜವಾನ್’ ಸಿನಿಮಾದಲ್ಲಿ ಹೆಚ್ಚು ಅಂಕ ಸಿಗಲಾರದು. 2023ರ ‘ಮಾಮಣ್ಣನ್’ ತಮಿಳು ಚಿತ್ರದಲ್ಲಿನ ವಡಿವೇಲು ಅವರ ಅಭಿನಯವನ್ನು ನೆನಪಿಸಿಕೊಳ್ಳೋಣ. ತೆಲುಗಿನ ‘ಹಾಯ್ ನಾನ್ನ’ ಚಿತ್ರದಲ್ಲಿ ಜನಪ್ರಿಯ ನಟ ನಾನಿ ಭಾವಾಭಿನಯದ ನಿಯಂತ್ರಿತ ವರಸೆಯನ್ನೂ ಮೆಲುಕುಹಾಕೋಣ. ಅದೇ ಭಾಷೆಯ, ಕನ್ನಡವನ್ನೂ ಹದವರಿತಂತೆ ಬೆರೆಸಿಕೊಂಡಿದ್ದ ‘ಬಳಗಂ’ ಸಿನಿಮಾದ ಪ್ರಿಯದರ್ಶಿ ಪುಲಿಕೊಂಡ ಅವರ ಪಾತ್ರ ತೀವ್ರತೆಯನ್ನು ಜ್ಞಾಪಿಸಿಕೊಳ್ಳೋಣ. ಅಷ್ಟೇ ಏಕೆ, ಕನ್ನಡದ್ದೇ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದಲ್ಲಿನ ರಕ್ಷಿತ್ ಶೆಟ್ಟಿ ಅವರ ಸಹಜಾಭಿನಯ ಮರೆಯಲಾದೀತೆ? ಇವೆಲ್ಲ ಚಿತ್ರಗಳು ವಸ್ತು, ಸಮಕಾಲೀನತೆ ಹಾಗೂ ಮಾನಸಿಕ ಸಂಕೀರ್ಣತೆಯ ದೃಷ್ಟಿಯಿಂದ ಮುಖ್ಯವಾದವು. ಈ ಯಾವುದೂ ಅಥವಾ ಇಂತಹ ಬೇರೆ ಭಾಷೆಯ ಸಿನಿಮಾಗಳು ಯಾಕೆ ರಾಷ್ಟ್ರಪ್ರಶಸ್ತಿ ತೀರ್ಪುಗಾರರ ಸಮಿತಿಗೆ ರುಚಿಸಲಿಲ್ಲ ಎನ್ನುವ ಪ್ರಶ್ನೆ ಮೂಡುತ್ತದೆ.

ಶಾರುಕ್ ಖಾನ್ ನಟರಾಗಿ ಚಿತ್ರರಂಗಕ್ಕೆ ಕೊಟ್ಟಿರುವ ಕೊಡುಗೆ ಮುಖ್ಯವಾದುದು, ನಿಜ. ಹಾಗೆಂದು ಅಭಿನಯ ಕೌಶಲ ಗಣನೆಗೆ ತೆಗೆದುಕೊಂಡೇ ಶ್ರೇಷ್ಠ ನಟ ಪ್ರಶಸ್ತಿಗೆ ಆಯ್ಕೆ ಮಾಡಬೇಕಾಗುತ್ತದೆ. ಈ ದೃಷ್ಟಿಯಲ್ಲಿ ಅವರ ಆಯ್ಕೆ ಸಮರ್ಥನೀಯ ಅಲ್ಲವೇ ಅಲ್ಲ.

ಕಳೆದ ವರ್ಷ ‘ಕಾಂತಾರ’ ಕನ್ನಡ ಸಿನಿಮಾ ನಟನೆಗೆ ರಿಷಭ್ ಶೆಟ್ಟಿ ಅವರಿಗೆ ಶ್ರೇಷ್ಠ ನಟ ರಾಷ್ಟ್ರಪ್ರಶಸ್ತಿ ಬಂದಿತ್ತು. ಅದಕ್ಕೂ ಮೊದಲು ‘ಪುಷ್ಪಾ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅಲ್ಲು ಅರ್ಜುನ್ ಅವರಿಗೆ ಪ್ರಶಸ್ತಿ ನೀಡಲಾಗಿತ್ತು. ಆ ಎರಡೂ ಆಯ್ಕೆಗಳು ಕೇವಲ ಜನಪ್ರಿಯ ಚಿತ್ರಗಳನ್ನೇ ಮುಖ್ಯ ಪ್ರಶಸ್ತಿಗೆ ಪರಿಗಣಿಸಲಾಗುತ್ತಿದೆ ಎಂಬ ಚರ್ಚೆಗೆ ಕಾರಣವಾಗಿದ್ದವು. ಈಗ ಆ ಚರ್ಚೆ ವಿಸ್ತೃತಗೊಳ್ಳುವ ರೀತಿಯಲ್ಲಿ ಪ್ರಶಸ್ತಿಗೆ ಆಯ್ಕೆಗಳನ್ನು ಮಾಡಲಾಗಿದೆ. ಹಿಂದೆ, ‘ಪಾ’ ಸಿನಿಮಾ ಅಭಿನಯಕ್ಕೆ ಅಮಿತಾಭ್ ಬಚ್ಚನ್ ಅವರಿಗೆ ಪ್ರಶಸ್ತಿ ನೀಡುವುದಕ್ಕಾಗಿ, ಕನ್ನಡದ ನಟ ಬಿರಾದಾರ್ ಅವರಿಗೆ ಪ್ರಶಸ್ತಿ ತಪ್ಪಿಸಿದ್ದನ್ನು ಮತ್ತೆ ನೆನಪಿಸಿಕೊಳ್ಳುತ್ತಲೇ ಈ ವಿದ್ಯಮಾನವನ್ನು ನಾವು ಗಮನಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.