ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸನ್ಯಾಸತ್ವಕ್ಕೆ ಹೊಸ ಭಾಷ್ಯ

ಧೀರವಾಣಿಯಿಂದ ಜಗತ್ತನ್ನು ಜಾಗೃತಗೊಳಿಸಿದ ಪ್ರಕಾಂಡ ಪಂಡಿತ ಸ್ವಾಮಿ ವಿವೇಕಾನಂದರ ನಿಲುವು ಸರ್ವಕಾಲಕ್ಕೂ ಪ್ರಸ್ತುತ
Last Updated 11 ಜನವರಿ 2022, 19:30 IST
ಅಕ್ಷರ ಗಾತ್ರ

ಸಾಧು, ಸನ್ಯಾಸಿಗಳೆಂದರೆ ಸಮಾಜ, ಜನರಿಂದ ದೂರವುಳಿದು ವೈರಾಗ್ಯ ಭಾವದಿಂದ ಕಾಡು, ಗುಹೆಗಳಲ್ಲಿ ಏಕಾಂತ ವಾಸ ಮಾಡುತ್ತಾ ಧ್ಯಾನ, ಜಪ, ತಪಗಳಲ್ಲಿ ಮುಳುಗಿ ಆತ್ಮಸಾಕ್ಷಾತ್ಕಾರದೆಡೆಗೆ ಸಾಗುವವರೆಂಬ ಕಲ್ಪನೆಯನ್ನು ತೊಡೆದುಹಾಕಿದವರು ಸ್ವಾಮಿ ವಿವೇಕಾನಂದರು. ಆತ್ಮೋದ್ಧಾರಕ್ಕಿಂತ ಹೆಚ್ಚಾಗಿ ದೀನ ದುರ್ಬಲರ ಸೇವೆ ಮಾಡುತ್ತಾ ಸರ್ವರ ಆತ್ಮೋದ್ಧಾರಕ್ಕೆ ಶ್ರಮಿಸುವವನೇ ನಿಜವಾದ ಸನ್ಯಾಸಿ ಎಂದು ಸನ್ಯಾಸತ್ವಕ್ಕೆ ಹೊಸ ಭಾಷ್ಯ ಬರೆದವರು ಅವರು.

ಜನರ ನಡುವೆಯೇ ಇದ್ದು ತ್ಯಾಗ, ವೈರಾಗ್ಯ ಭಾವಗಳಿಂದ ಆಧ್ಯಾತ್ಮಿಕ ಸಾಧನೆ ಮಾಡುತ್ತಾ, ಜನರಲ್ಲಿ ಮನೆಮಾಡಿದ್ದ ಜಡತ್ವ ತೊಡೆದುಹಾಕಿ ತಮ್ಮ ಧೀರವಾಣಿಯಿಂದ ವಿಶ್ವದ ಜನರನ್ನು ಜಾಗೃತಗೊಳಿಸಿದವರು. ‘ವ್ಯಕ್ತಿಯ ಮೋಕ್ಷ ನಿಜವಾದ ಪರಿಪೂರ್ಣವಾದ ಮೋಕ್ಷವಲ್ಲ. ಮೋಕ್ಷದಲ್ಲಿ ಸಾರ್ವತ್ರಿಕ ಮೋಕ್ಷವೇ ನಿಜವಾದ ಮುಕ್ತಿ’ ಎನ್ನುತ್ತಾ ಸರ್ವರನ್ನೂ ಮುಕ್ತಿ ಮಾರ್ಗದೆಡೆಗೆ ಕೊಂಡೊಯ್ಯುವುದರ ಪ್ರಾಮುಖ್ಯತೆಯನ್ನು ತಿಳಿಸಿದವರು.

ಅಮೆರಿಕದ ಷಿಕಾಗೊದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಅವರನ್ನು ಪ್ರಥಮ ಬಾರಿ ನೋಡಿದ ಆ್ಯನಿಬೆಸೆಂಟರು ಅವರ ನಿಲುವು, ಭಾವ ಭಂಗಿಗಳನ್ನು ವರ್ಣಿಸುತ್ತಾ, ‘ಅವರನ್ನು ಸನ್ಯಾಸಿ ಎನ್ನುವುದಕ್ಕಿಂತ ಯೋಧ ಎನ್ನುವುದು ಯೋಗ್ಯ ಎಂದುಕೊಂಡೆ. ಅಂತೂ ಕಡೆಗೆ ಯೋಧಸನ್ಯಾಸಿಯಾದರು’ ಎನ್ನುತ್ತಾರೆ.

ಧ್ಯಾನ, ಆಧ್ಯಾತ್ಮಿಕ ಸಾಧನೆಗಳ ಜೊತೆ ಜೊತೆಗೆ ಕಾಯಕನಿಷ್ಠೆ, ಜನರ ಸೇವೆ ಮಾಡುತ್ತಾ ದೇಶ, ವಿಶ್ವದ ಜನರನ್ನು ಉದ್ಧರಿಸಲು ಸನ್ಯಾಸಿ, ಗೃಹಸ್ಥರೆಲ್ಲರೂ ಶ್ರಮಿಸಬೇಕೆಂದು ಕರೆ ನೀಡುತ್ತಾರೆ. ಅವರು ‘ತಪಸ್ಸಿನ ಫಲದಿಂದ ಶಕ್ತಿ ಬರುತ್ತದೆ. ಅದರಂತೆ ಸೇವಾಭಾವದಿಂದ ಕರ್ಮ ಮಾಡಿದರೂ ಅದು ತಪಸ್ಸಾಗುತ್ತದೆ. ಪರಾರ್ಥವಾಗಿ ಕರ್ಮ ಮಾಡುತ್ತಿದ್ದರೆ ಚಿತ್ತಶುದ್ಧಿಯೂ ಪರಮಾತ್ಮನ ದರ್ಶನವೂ ಲಭಿಸುತ್ತದೆ’ ಎಂದು ಪ್ರತಿಪಾದಿಸುತ್ತಾರೆ.

ಸ್ವಾಮಿ ವಿವೇಕಾನಂದರು ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ಅವರೊಬ್ಬ ಅದ್ಭುತವಾದ ಗಾಯಕರಾಗಿದ್ದರು ಸಹ. ಗಾಯನದ ಜೊತೆಗೆ ಮೃದಂಗ, ತಂಬೂರಿಗಳನ್ನೂ ನುಡಿಸಬಲ್ಲವರಾಗಿದ್ದರು. ಕೆಲ ವೊಮ್ಮೆ ಉತ್ತಮವಾಗಿ ಅಡುಗೆ ಮಾಡಿ ಭಕ್ತರಿಗೆ, ದೀನ ದುರ್ಬಲರಿಗೆ ಉಣಬಡಿಸುತ್ತಿದ್ದರು. ‘ಯಾರು ಚೆನ್ನಾಗಿ ಅಡುಗೆ ಮಾಡಲಾರರೋ ಅವರು ಉತ್ತಮ ಸಾಧುವಾಗಲಾರರು. ಮನಸ್ಸು ಶುದ್ಧವಾಗಿಲ್ಲದೇ ಇದ್ದರೆ ರುಚಿಕರ ಅಡುಗೆ ಮಾಡಲು ಸಾಧ್ಯವಿಲ್ಲ’ ಎನ್ನುತ್ತಾರೆ.

ತಮ್ಮ ಆಳವಾದ ಅಧ್ಯಯನದ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಪ್ರಕಾಂಡ ಪಾಂಡಿತ್ಯವನ್ನು ಸಂಪಾದಿಸಿದ್ದರು. ಅವರು ಪ್ರಖರ ಅಧ್ಯಾತ್ಮ, ಪ್ರಚಂಡ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವಗಳ ಹದವಾದ ಸಮ್ಮಿಳನದಂತಿದ್ದರು. ಮನಸ್ಸಿನ ಏಕಾಗ್ರತೆಯ ಮೂಲಕ ಬೃಹತ್ ಗ್ರಂಥಗಳನ್ನು ಕೆಲವೇ ಗಂಟೆಗಳೊಳಗೆ ಓದಿ, ಅವುಗಳಲ್ಲಿರುವ ವಿಷಯಗಳನ್ನು ನೆನಪಿನಲ್ಲಿ ಇರಿಸಿಕೊಳ್ಳುವ ಅಗಾಧ ಮಾನಸಿಕ ಸಾಮರ್ಥ್ಯ ಅವರಲ್ಲಿತ್ತು. ವೇದ, ಉಪನಿಷತ್‍ಗಳ ಸಾರಗಳ ಜೊತೆ ಜಗತ್ತಿನ ಎಲ್ಲ ಧರ್ಮಗಳನ್ನೂ ಆಳವಾಗಿ ಅಧ್ಯಯನ ಮಾಡಿದ್ದರು.

ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದಲ್ಲಿದ್ದ ಜಾತೀಯತೆ, ಮಡಿ, ಮೈಲಿಗೆಗಳ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಹಿಂದೂ ಧರ್ಮದ ಸುಧಾರಣೆಗೆ ಜಾಗೃತಿ ಮೂಡಿಸುವ ಕೆಲಸ ಮಾಡುವುದರ ಜೊತೆಗೆ ಧರ್ಮದಲ್ಲಿನ ಹಿರಿಮೆಯನ್ನು ಜಗತ್ತಿಗೆ ಸಾರಿದರು. ಜಗತ್ತಿನ ಎಲ್ಲಾ ಧರ್ಮಗಳ ಸಾರವು ಮಾನವಕುಲದ ಸೇವೆ, ಸಹಾಯ, ಉದ್ಧಾರಕ್ಕೆ ಇರಬೇಕು ಎಂಬ ಅಂಶವನ್ನು ಅವರು ಬಲವಾಗಿ ಪ್ರತಿಪಾದಿಸುತ್ತಾರೆ.

ತಮ್ಮ ಅದ್ಭುತವಾದ ಮಾತುಗಳ ಮೂಲಕ ವಿಶ್ವದ ಕೋಟ್ಯಂತರ ಜನರನ್ನು ಅಧ್ಯಾತ್ಮ ಹಾಗೂ ಜನಸೇವೆಗೆ ಪ್ರೇರೇಪಿಸಿದ ಧೀಮಂತರಾಗಿದ್ದರು. ಅವರ ಪ್ರವಚನಗಳು ಜನರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಿದ್ದವು. ಷಿಕಾಗೊದಲ್ಲಿ ಅವರು ಮಾಡಿದ ಐತಿಹಾಸಿಕ ಭಾಷಣದ ನಂತರ ಎರಡು ವರ್ಷಗಳಿಗೂ ಅಧಿಕ ಕಾಲ ಅಮೆರಿಕ, ಇಂಗ್ಲೆಂಡ್ ದೇಶಗಳಲ್ಲಿ ಉಳಿದು ನೂರಾರು ಉಪನ್ಯಾಸಗಳ ಮೂಲಕ ದೇಶ, ವಿದೇಶಗಳಲ್ಲಿ ಮನೆಮಾತಾದರು.

ಅವರನ್ನು ಅನೇಕರು ‘ವಿದ್ಯುತ್ ವಾಗ್ಮಿ’ ಎಂದು ಕರೆದರು. ಅವರು ಮಾತನಾಡುತ್ತಿದ್ದ ಸಭೆಯಲ್ಲಿ ವಿದ್ಯುತ್ ಸಂಚಾರವಾಗುತ್ತಿತ್ತು. ತಮ್ಮ ಅಮೋಘ ಮಾತುಗಳಿಂದ ಜನರನ್ನು ಜಾಗೃತಗೊಳಿಸುವ ಕಾರ್ಯವನ್ನು ವಿವೇಕಾನಂದರು ಮಾಡಿದರು. ಅವರ ನಡೆ, ನುಡಿಗಳಿಂದ ಪ್ರೇರಿತರಾದ ಸಾವಿರಾರು ವಿದೇಶಿಯರೂ ಇವರ ಅನುಯಾಯಿಗಳಾದರು. ಅದರಲ್ಲೂ ಇಂಗ್ಲೆಂಡ್ ದೇಶದ, ಮಕ್ಕಳಿಲ್ಲದ ಸೇವಿಯರ್ಸ್ ದಂಪತಿ ತಮ್ಮ ಸರ್ವಸ್ವವನ್ನೂ ಸ್ವಾಮಿಗೆ ಅರ್ಪಿಸಿ, ಅವರ ಜೊತೆ ಭಾರತಕ್ಕೆ ಬಂದು ಭಾರತದಲ್ಲಿಯೇ ಕಾಲವಾಗುತ್ತಾರೆ.

ಜನವರಿ 12, ಸ್ವಾಮಿ ವಿವೇಕಾನಂದರ ಜನ್ಮದಿನ. ಈ ದಿನದಂದು ಅವರು ಲಾಹೋರಿನ ಕಾಲೇಜೊಂದರಲ್ಲಿ ಮಾಡಿದ ಭಾಷಣದ ವಿಶ್ವವಿಖ್ಯಾತ ಸಾಲುಗಳು, ‘ಎದ್ದೇಳಿ! ಎಚ್ಚರಗೊಳ್ಳಿ! ಗುರಿ ಮುಟ್ಟುವವರೆಗೆ ಮುನ್ನುಗ್ಗಿ. ನಿಲ್ಲದಿರಿ! ಸಮಯ ಕಳೆಯುತ್ತಿದೆ. ನಮ್ಮ ಶಕ್ತಿಯೆಲ್ಲಾ ಬರೀ ಕಾಡುಹರಟೆಯಲ್ಲಿ ವ್ಯಕ್ತವಾಗುತ್ತಿದೆ. ಸಣ್ಣಪುಟ್ಟ ಜಗಳಗಳೂ ವಾದಗಳೂ ಕೊನೆಗಾಣಲಿ. ಏಕೆಂದರೆ ನಮ್ಮ ಮುಂದೆ ಒಂದು ಮಹಾಕಾರ್ಯ ನಿಂತಿದೆ. ಲಕ್ಷೋಪಲಕ್ಷ ಜನರನ್ನು ಮೇಲೆತ್ತಿ ಉದ್ಧಾರ ಮಾಡುವ ಮಹಾಸೇವಾ ಕಾರ್ಯ ನಮ್ಮ ಮುಂದಿದೆ’.

ಈ ಮಾತುಗಳು ನಮ್ಮನ್ನು ನಿರಂತರ ಜಾಗೃತಿಯಲ್ಲಿಟ್ಟು ದೇಶ ಮುನ್ನಡೆಯಲು ಪ್ರೇರೇಪಣೆ ನೀಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT