ಗುರುವಾರ , ಡಿಸೆಂಬರ್ 5, 2019
21 °C
ಇಂತಹ ಸಂಸ್ಥೆಗಳನ್ನು ರಾಜಕೀಯ ಗಂಜಿ ಕೇಂದ್ರ ಅಥವಾ ಪುನರ್ವಸತಿ ಕೇಂದ್ರಗಳನ್ನಾಗಿಸದೆ, ಅವುಗಳ ಸಾರಥ್ಯವನ್ನು ದಕ್ಷ ಅಧಿಕಾರಿಗಳಿಗೆ ವಹಿಸಬೇಕು

ಬಿಎಸ್‌ಎನ್‌ಎಲ್‌: ಕಾಯಕಲ್ಪ ಮತ್ತು ಬದ್ಧತೆ

Published:
Updated:
Prajavani

ಶಾಶ್ವತವಾಗಿ ತೆರೆಯಮರೆಗೆ ಸರಿಯುವ ಭೀತಿಯಲ್ಲಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ (ಭಾರತೀಯ ಸಂಚಾರ ನಿಗಮ ನಿಯಮಿತ), ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಇನ್ನೂ ಉಸಿರಾಡುವ ಹಂತದಲ್ಲಿದೆ. ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್‍ ಸಂಸ್ಥೆಗಳನ್ನು ವಿಲೀನಗೊಳಿಸುವ ಪ್ರಮುಖ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ತೆಗೆದುಕೊಂಡಿದೆ. ಇದಕ್ಕಾಗಿ ₹ 69 ಸಾವಿರ ಕೋಟಿಯ ಪ್ಯಾಕೇಜನ್ನು ಘೋಷಿಸಿದೆ.

ಮಾಧ್ಯಮ ವರದಿಗಳ ಪ್ರಕಾರ, 2018-19ನೇ ಆರ್ಥಿಕ ವರ್ಷದಲ್ಲಿ ಬಿಎಸ್ಎನ್ಎಲ್ ₹ 14 ಸಾವಿರ ಕೋಟಿ ಹಾಗೂ ಎಂಟಿಎನ್ಎಲ್ ₹ 10 ಸಾವಿರ ಕೋಟಿಯಷ್ಟು ನಷ್ಟ ಅನುಭವಿಸಿವೆ. ಎರಡೂ ಸಂಸ್ಥೆಗಳು ಕ್ರಮವಾಗಿ 1.67 ಲಕ್ಷ ಹಾಗೂ 22 ಸಾವಿರ ಸಿಬ್ಬಂದಿಯನ್ನು ಹೊಂದಿವೆ. ಮಾರುಕಟ್ಟೆ ಹಾಗೂ ಬ್ಯಾಂಕುಗಳಲ್ಲಿ ಅವು ಹೊಂದಿರುವ ಒಟ್ಟು ಸಾಲದ ಮೊತ್ತ ₹ 40 ಸಾವಿರ ಕೋಟಿ. ಸರ್ಕಾರವು ಘೋಷಿಸಿದ ಪರಿಹಾರ ಕ್ರಮದ ಭಾಗವಾಗಿ, ಈ ತಿಂಗಳ ಎರಡನೇ ವಾರದ ಅಂತ್ಯದಲ್ಲಿ ಸ್ವಯಂ ನಿವೃತ್ತಿ ಯೋಜನೆಗೆ ಅರ್ಜಿ ಸಲ್ಲಿಸಿದ ಬಿಎಸ್‌ಎನ್‌ಎಲ್‌ ಸಿಬ್ಬಂದಿಯ ಸಂಖ್ಯೆ 70,000.

ಸಂವಿಧಾನದ ಪ್ರಸ್ತಾವನೆಯಲ್ಲಿ ಘೋಷಿಸಿಕೊಂಡಿರುವಂತೆ, ಭಾರತವು ಒಂದು ಸಮಾಜವಾದಿ ರಾಷ್ಟ್ರ. ಆದರೆ ಸಮಾಜವಾದಿ ಧೋರಣೆ ಜೊತೆಗೆ ಕಡಿಮೆ ಪ್ರಮಾಣದ ಬಂಡವಾಳಶಾಹಿ ವ್ಯವಸ್ಥೆಗೂ ದೇಶ ಮಣೆ ಹಾಕಿತು. ತತ್ಪರಿಣಾಮವಾಗಿ, ಮಿಶ್ರ ಆರ್ಥಿಕ ವ್ಯವಸ್ಥೆ ಪ್ರವರ್ಧಮಾನಕ್ಕೆ ಬಂದಿತು. ದಿನಗಳೆದಂತೆ, ಬಂಡವಾಳಶಾಹಿ ಪ್ರಬಲವಾಗುವ ಅಪಾಯ ಆಗ ಕಂಡಿರಲಿಲ್ಲ. ಆದರೂ ಎಚ್ಎಂಟಿ, ಬಿಇಎಲ್, ಎಚ್ಎಎಲ್, ಬಿಇಎಂಎಲ್‌ ಜೊತೆಗೆ ಬಿಎಸ್ಎನ್ಎಲ್, ಸಮಾಜವಾದಿ ವ್ಯವಸ್ಥೆಯಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯಿತು.

ಒಂದು ಕಾಲದಲ್ಲಿ ಬಿಎಸ್ಎನ್ಎಲ್ ಸ್ಥಿರ ದೂರವಾಣಿ ಸಂಪರ್ಕವನ್ನು ಗ್ರಾಮೀಣ ಭಾಗದಲ್ಲಿ ಹೊಂದಿದ್ದವರು ಪ್ರತಿಷ್ಠಿತ ವರ್ಗವಾಗಿ ಗುರುತಿಸಿಕೊಂಡರು. ನಂತರದಲ್ಲಿ ಆದ ಒಎಫ್‌ಸಿ ಕ್ರಾಂತಿಯಿಂದ ಮನೆ ಮನೆಗೂ ಸ್ಥಿರ ದೂರವಾಣಿ ಸಂಪರ್ಕ ಸಿಗಲಾರಂಭಿಸಿತು. ಆದರೆ, ಕಳೆದ ಶತಮಾನದ ಅಂತ್ಯದಲ್ಲಿ ಸೆಲ್ಯುಲರ್ ಅಥವಾ ಮೊಬೈಲ್‌ ಸೇವೆ ಆರಂಭಗೊಂಡರೂ, ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ ಈ ಸೇವೆಯನ್ನು ಆರಂಭಿಸಿದ್ದು 2001ರ ನಂತರದಲ್ಲಿ. ಆದರೆ ಅಷ್ಟು ಹೊತ್ತಿಗೆ ಸೆಲ್ಯುಲರ್ ಟೆಲಿಕಾಂ ಕ್ಷೇತ್ರದಲ್ಲಿ ಖಾಸಗಿಯವರ ಹಿಡಿತ ಬಿಗಿಯಾಗಿತ್ತು. ಅಷ್ಟಾದರೂ ಗ್ರಾಮೀಣ ಪ್ರದೇಶದಲ್ಲಿ ದೂರವಾಣಿ ವಿನಿಮಯ ಕೇಂದ್ರಗಳನ್ನು ಬಿಎಸ್ಎನ್ಎಲ್ ಹೊಂದಿದ್ದರಿಂದ ಹಾಗೂ ಮೊಬೈಲ್ಟವರ್‌ಗಳ ಸ್ಥಾಪನೆಗೆ ಅನುಕೂಲ ಇದ್ದುದರಿಂದ, ನೆಟ್‌ವರ್ಕ್‌ ಲಭ್ಯತೆ ಉತ್ತಮವಾಗಿ ಇದ್ದುದರಿಂದ ಅದು ಬಹುಬೇಗ ಜನಪ್ರಿಯತೆ ಗಳಿಸಿ ಬೇಡಿಕೆ ಕುದುರಿಸಿಕೊಂಡಿತು. ಯಾರದೋ ಪ್ರಭಾವ ಬಳಸಿಯೋ ಅಥವಾ ಕಾಳಸಂತೆಯಲ್ಲೋ ಸಿಮ್‍ಗಳನ್ನು ಖರೀದಿಸಬೇಕಾದ, ಭಾರಿ ಬೇಡಿಕೆಯುಳ್ಳ ಕಾಲವನ್ನು ನಾವು ಗಮನಿಸಿದ್ದೇವೆ. ಸಿಮ್ ಕಾರ್ಡ್ ಪಡೆಯಲು ನಸುಕಿನಲ್ಲೇ ಸರದಿ ಸಾಲಿನಲ್ಲಿ ನಿಂತವರನ್ನೂ ನೋಡಿದ್ದೇವೆ.

ಆದರೆ, ಈ ಬೇಡಿಕೆಯನ್ನು ಬಹುದಿನಗಳವರೆಗೆ ಕಾಯ್ದುಕೊಳ್ಳುವಲ್ಲಿ ಸಂಸ್ಥೆ ವಿಫಲವಾಯಿತು. ಖಾಸಗಿ ಸಂಸ್ಥೆಗಳು ಗ್ರಾಹಕರಿಗೆ ನೀಡಿದ ಗುಣಮಟ್ಟದ ಸೇವೆ, ಬಗೆಬಗೆಯ ಯೋಜನೆಗಳು, ‘4ಜಿ’ಯಂತಹ ಸೇವೆಗಳ ಮುಂದೆ ಇದು ಪೇಲವವಾಯಿತು. ಜಿಡ್ಡುಗಟ್ಟಿದ ಅಧಿಕಾರಶಾಹಿ ವ್ಯವಸ್ಥೆ, ಗ್ರಾಹಕರಿಗೆ ಸಿಗದ ಸೂಕ್ತ ಸ್ಪಂದನೆ, ದುರ್ಬಲ ತರಂಗಾಂತರಗಳ ಸೇವೆಯೂ ಈ ಸಂಸ್ಥೆ ಅವಸಾನದ ಅಂಚಿಗೆ ಬರಲು ಕೊಡುಗೆ ನೀಡಿದವು.

ಈಗ, ಹಣಕಾಸು ನೆರವೊಂದೇ ಸಂಸ್ಥೆಯ ಪುನಶ್ಚೇತನಕ್ಕೆ ಮಾನದಂಡ ಆಗಬಾರದು. ಪ್ರತಿಷ್ಠಿತ ಸಂಸ್ಥೆಗಳಾದ ಐಐಟಿ ಹಾಗೂ ಐಐಎಂ ಪದವೀಧರರನ್ನು ಇದರ ಪುನಶ್ಚೇತನ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಖಾಸಗಿ ಕಂಪನಿಗಳಲ್ಲಿ ನೆಲೆ ಕಂಡುಕೊಳ್ಳುವ ಹಪಹಪಿ ಉಳ್ಳವರ ನಡುವೆ, ದೇಶದ ಒಳಿತಿಗಾಗಿ ಸ್ಪಂದಿಸುವ ಮನೋಭಾವದ ಪ್ರತಿಭಾವಂತ ಪದವೀಧರರೂ ಇರುತ್ತಾರೆ. ಅಂತಹವರ ಸೇವೆಯನ್ನು ಪಡೆಯಲು ಅವಕಾಶ ಮಾಡಿಕೊಡಬೇಕು. ಖಾಸಗಿ ಕಂಪನಿಗಳ ಲಾಬಿಯಿಂದ ಅವರಿಗೆ ರಕ್ಷಣೆ ನೀಡಬೇಕು. ದೇಶದ ತರುಣ ಪೀಳಿಗೆಯನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಯೋಜನೆಗಳು ಜಾರಿಯಾಗಲಿ.

‘4ಜಿ’ ತಂತ್ರಜ್ಞಾನ ಸಂಪರ್ಕವನ್ನು ಕೇಂದ್ರ ಸರ್ಕಾರ ತನ್ನ ಖರ್ಚಿನಲ್ಲೇ ಒದಗಿಸುವುದಾಗಿ ತಿಳಿಸಿದೆ. ಅದು ತುರ್ತಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಈಗಾಗಲೇ ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರದಿಂದ ಬಿಎಸ್ಎನ್ಎಲ್ ಮೊಬೈಲ್ ಸಿಮ್‍ ಕಾರ್ಡಿನ ಸಂಪರ್ಕ ನೀಡಲಾಗಿದ್ದು, ಅದರ ವ್ಯಾಪ್ತಿಯನ್ನು ವಿಸ್ತರಿಸಬೇಕು. ಜೊತೆಗೆ, ಗ್ರಾಹಕರಿಂದ ಸಕಾಲದಲ್ಲಿ ಬಿಲ್ ಪಾವತಿಯಾಗುವಂತೆ ನೋಡಿಕೊಳ್ಳಬೇಕು. ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ಘೋಷಿಸಿ ಕೈ ತೊಳೆದುಕೊಂಡರೆ ಸಾಲದು. ಇಂದಿನ ಯುವ
ಜನಾಂಗಕ್ಕೆ ಉದ್ಯೋಗ ಸೃಷ್ಟಿಯ ಬದಲು ಉದ್ಯೋಗ ನಷ್ಟವಾಗುತ್ತಿರುವ ಕುರಿತು ಚಿಂತಿಸಬೇಕು. ಇಂತಹ ಸಂಸ್ಥೆಗಳನ್ನು ರಾಜಕೀಯ ಗಂಜಿ ಕೇಂದ್ರ ಅಥವಾ ಪುನರ್ವಸತಿ ಕೇಂದ್ರಗಳನ್ನಾಗಿಸದೆ, ಅವುಗಳ ಸಾರಥ್ಯವನ್ನು ಅರ್ಹ ಹಾಗೂ ದಕ್ಷ ಅಧಿಕಾರಿಗಳ ಕೈಗೆ ನೀಡಬೇಕು.

ಸರ್ಕಾರಿ ಕಂಪನಿ, ನಿಗಮಗಳು ನಷ್ಟದ ಸುಳಿಗೆ ಸಿಲುಕಿದಾಗ ಖಾಸಗೀಕರಣ, ಬಂಡವಾಳ ಹಿಂತೆಗೆತ ಅಥವಾ ಮುಚ್ಚುವಿಕೆ ಎನ್ನುವ ಮಂತ್ರವನ್ನು ಪಠಿಸುವುದಾದರೆ, ಸಮಾಜವಾದಿ ಸೋಗಿನ ಪ್ರಭುತ್ವ ಯಾಕಿರಬೇಕು ಎನ್ನುವ ಭಾವನೆ ಜನರಲ್ಲಿ ಸುಳಿಯಬಹುದು. ಆಗ, ಅದಕ್ಕೆ ಉತ್ತರ ಕೊಡುವವರಾರು?

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು