ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಕೃಷಿ ಕ್ಷೇತ್ರದ ನಿರ್ಲಕ್ಷ್ಯ: ನಿತ್ಯ-ನಿರಂತರ

ರಾಜ್ಯದಲ್ಲಿ ಬರ ಆವರಿಸಿದೆ; ಪರಿಹಾರ ಮಾತ್ರ ಮರೀಚಿಕೆಯಾಗಿದೆ
ಸತ್ಯನಾರಾಯಣ ಬಿ.ಆರ್.‌
Published 27 ನವೆಂಬರ್ 2023, 19:30 IST
Last Updated 27 ನವೆಂಬರ್ 2023, 19:30 IST
ಅಕ್ಷರ ಗಾತ್ರ

ರಾಜ್ಯ ಮತ್ತು ದೇಶದಲ್ಲಿರುವ ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿರುವ ‘ರೈತರ ಆದಾಯ ದ್ವಿಗುಣ’ ಎಂಬ ಮಾತನ್ನು ಮೊದಲು ಕೇಳಿದಾಗ ರೈತ ಸಮುದಾಯ ರೋಮಾಂಚನಗೊಂಡಿದ್ದು ಸುಳ್ಳಲ್ಲ. ಆದರೆ ಈಗ ಅದೇ ಮಾತು ರೈತರಿಗೆ ಕಿರಿಕಿರಿಯನ್ನು ಉಂಟುಮಾಡುತ್ತಿರುವುದೂ ಸುಳ್ಳಲ್ಲ! ದ್ವಿಗುಣವಿರಲಿ, ಬರುತ್ತಿದ್ದ ವಾರ್ಷಿಕ ಆದಾಯದಲ್ಲಿ ಸರಾಸರಿ ಶೇಕಡ 50ರಿಂದ 60ರಷ್ಟನ್ನು ಕಳೆದುಕೊಳ್ಳುತ್ತಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಸರ್ಕಾರಗಳ ಕಣ್ಣಿಗೆ ಅದು ಕಾಣುತ್ತಲೇ ಇಲ್ಲ.

ರಾಜ್ಯದ ಬಹುತೇಕ ಎಲ್ಲ ತಾಲ್ಲೂಕುಗಳು ಬರಪೀಡಿತವಾಗಿವೆ. ಬರಪೀಡಿತ ತಾಲ್ಲೂಕುಗಳನ್ನು ಘೋಷಿಸುವುದೇ ಒಂದು ಮಹಾಸಾಧನೆ ಎಂಬಂತೆ ಘೋಷಿಸಿ ರಾಜ್ಯ ಸರ್ಕಾರ ಕೈತೊಳೆದುಕೊಂಡಿದೆ. ಕೇಂದ್ರದಿಂದ ಬರ ಸಮೀಕ್ಷೆ ನಡೆದು ತಿಂಗಳುಗಳೇ ಕಳೆದರೂ ಪರಿಹಾರ ಮಾತ್ರ ಬಂದಿಲ್ಲ. ರಾಜ್ಯ ಸರ್ಕಾರವು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಅಷ್ಟು ಕೋಟಿಯಿದೆ, ಇಷ್ಟು ಕೋಟಿಯಿದೆ ಎಂದು ಹೇಳುತ್ತಾ ರೈತರ ಮೂಗಿಗೆ ತುಪ್ಪ ಸವರುವ ಕೆಲಸದಲ್ಲಿ ನಿರತವಾಗಿದೆ. ಬೆಳೆವಿಮೆ ಸಮರ್ಪಕ ಜಾರಿಯಂತೂ ಈ ಶತಮಾನದಲ್ಲಾದರೂ ಸಾಧ್ಯವಾದೀತೆ? ಗೊತ್ತಿಲ್ಲ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ಘೋಷಿಸುವ ಮಾತಂತೂ ದೂರವೇ ಉಳಿದಿದೆ. ದೇಶದಲ್ಲಿ ಇಂದು ಅತ್ಯಂತ ನಿರ್ಲಕ್ಷಿತ ಕ್ಷೇತ್ರ ಯಾವುದಾದರೂ ಇದ್ದರೆ ಅದು, ಕೃಷಿ ವಲಯ ಎಂದು ಖಚಿತವಾಗಿ ಹೇಳಬಹುದು. ಆದರೆ ಪ್ರಶ್ನಿಸಿದರೆ, ಪ್ರಶ್ನಿಸಿದವರನ್ನೇ ಅಪರಾಧಿ ಎನ್ನುವ ಕಾಲ ನಿರ್ಮಾಣವಾಗಿರುವುದು ಮಾತ್ರ ಸತ್ಯ.

ಆದಾಯ ಕುಸಿತಕ್ಕೆ ಒಂದು ನಿರ್ದಿಷ್ಟ ಉದಾಹರಣೆ ಯೆಂದರೆ ಪಾತಾಳಕ್ಕಿಳಿದಿರುವ ಕೊಬ್ಬರಿ ಬೆಲೆ. 15 ತಿಂಗಳ ಹಿಂದೆ ಕ್ವಿಂಟಲ್‌ಗೆ ₹18 ಸಾವಿರದ ಆಸುಪಾಸಿನಲ್ಲಿದ್ದ ಕೊಬ್ಬರಿ ಬೆಲೆ, ಸುಮಾರು 10 ವರ್ಷಗಳ ಕನಿಷ್ಠಕ್ಕೆ ಕುಸಿದಿದೆ. ದರ ಈಗ ₹ 7,500ರ ಆಸುಪಾಸಿನಲ್ಲಿ ತೊನೆದಾಡುತ್ತಿದೆ. ₹ 18 ಸಾವಿರವಿದ್ದಾಗ ಏರಿಕೆಯಾಗಿದ್ದ ಉತ್ಪಾದನೆ, ಸಾಗಾಟ ಮತ್ತು ಮಾರಾಟ ವೆಚ್ಚಗಳಲ್ಲಿ ಮಾತ್ರ ಒಂದು ಪೈಸೆಯೂ ಕಡಿಮೆಯಾಗಿಲ್ಲ. ಕ್ವಿಂಟಲ್‌ಗೆ ₹ 11,750 ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸುತ್ತಿದ್ದ ನಬಾರ್ಡ್‌ ಕೇಂದ್ರಗಳು ಬಾಗಿಲು ತೆರೆದಷ್ಟೇ ವೇಗದಲ್ಲಿ ಮುಚ್ಚಿ ತಿಂಗಳುಗಳೇ ಕಳೆದಿವೆ. 12-15 ತಿಂಗಳಾಗಿದ್ದರೂ ಕೊಬ್ಬರಿ ಇಟ್ಟುಕೊಂಡು ಕಾಯುವ ಪರಿಸ್ಥಿತಿ ರೈತರದ್ದಾಗಿದೆ. ಇದು ಕೇವಲ ತೆಂಗು ಬೆಳೆಗಾರರ ಸಮಸ್ಯೆ ಮಾತ್ರ ಅಲ್ಲ ಎಂಬುದು ಕೃಷಿಯ ಬಗ್ಗೆ ಪ್ರಾಥಮಿಕ ಅರಿವಿರುವ ಯಾರಿಗಾದರೂ ಅರ್ಥವಾಗುತ್ತದೆ. ಕೆ.ಜಿಗೆ 200ರ ಗಡಿ ದಾಟಿದ್ದ ಟೊಮೆಟೊ ಬೆಲೆ ತಿಂಗಳೊಪ್ಪತ್ತಿನಲ್ಲಿ ₹5ಕ್ಕೆ ಇಳಿದದ್ದು ನಮ್ಮ ಕಣ್ಣಮುಂದಿದೆ.

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಬಾಧಿತವಾಗಿರುವುದರಿಂದ ಕೃಷಿ-ಕೂಲಿ ಕಾರ್ಮಿಕರು ಕೂಲಿಗಾಗಿ ಪಟ್ಟಣಗಳಿಗೆ ವಲಸೆ ಹೋಗುತ್ತಿರುವುದು ನಿತ್ಯವೂ ಹೆಚ್ಚುತ್ತಿದೆ. ಬೆಂಗಳೂರಿನ ಹಲವಾರು ಬಡಾವಣೆಗಳಲ್ಲಿ ನಿತ್ಯ ಬೆಳಿಗ್ಗೆ, ‘ಕೂಲಿಗಳ ಸಂತೆ’ ನಡೆಯುತ್ತಿದೆ. ‘ಯಾರಾದರೂ ಕೆಲಸಕ್ಕೆ ಕರೆಯುತ್ತಾರಾ’ ಎಂದು, ಒಂದು ಕೈಯಲ್ಲಿ ಮಕ್ಕಳನ್ನು ಹಿಡಿದು, ಇನ್ನೊಂದು ಕೈಯಲ್ಲಿ ಊಟದ ಬ್ಯಾಗ್‌ ಹಿಡಿದು ಮಹಿಳೆಯರು, ವಯಸ್ಕರು, ವೃದ್ಧರು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ನೋವಿನ ಸಂಗತಿ. ದಶಕಗಳ ಹಿಂದೆ ಬೇರೆ ರಾಜ್ಯಗಳ ಜನರೇ ಹೆಚ್ಚು ಇರುತ್ತಿದ್ದ ಜಾಗದಲ್ಲಿ ಇಂದು ಕರ್ನಾಟಕದ ಗ್ರಾಮೀಣ ಜನರೇ ತುಂಬಿಹೋಗಿದ್ದಾರೆ. ಆದರೂ ನೀತಿನಿರೂಪಣೆ ಮಾಡಬೇಕಾದ ಸರ್ಕಾರಗಳು ಏನೂ ಮಾಡುತ್ತಿಲ್ಲ.

ಸರ್ಕಾರಗಳನ್ನು ಎಚ್ಚರಿಸಬೇಕಿದ್ದ ರೈತ ಸಂಘಟನೆಗಳು, ಕರ್ನಾಟಕದ ಮಟ್ಟಿಗಂತೂ ಸ್ವಹಿತಾಸಕ್ತಿ ಗುಂಪುಗಳಾಗಿ ಚದುರಿಹೋಗಿವೆ. ಒಂದೊಂದು ಗುಂಪೂ ತನ್ನ ಅನುಕೂಲಕ್ಕೆ ತಕ್ಕಂತೆ ಆಳುವ ವರ್ಗದ ಕೃಪಾಕಟಾಕ್ಷಕ್ಕೆ ಒಳಗಾಗುವುದ ರಿಂದ ಪ್ರಬಲವಾದ ಪ್ರತಿರೋಧದ ‘ಏಕಧ್ವನಿ’ ಹೊಮ್ಮುತ್ತಲೇ ಇಲ್ಲ. ಕೇಂದ್ರ ಸರ್ಕಾರ ರೂಪಿಸಿದ್ದ ಮೂರು ಕಾನೂನುಗಳನ್ನು ವಿರೋಧಿಸಿ ಸಂಘಟಿತ ವಾಗಿದ್ದ ಹಾಗೂ ಒಂದು ವರ್ಷಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿ ಯಶಸ್ವಿಯಾದ ಮಹಾರೈತ ಹೋರಾಟದ ಮಾದರಿಯಲ್ಲಿ ಸಂಘಟಿತ ಹೋರಾಟ ರೂಪುಗೊಳ್ಳದೇ ಇದ್ದರೆ, ರೈತ ಸಮುದಾಯಕ್ಕೆ ನ್ಯಾಯ ಸಿಗುವ ಸಂಭವವಿಲ್ಲ. ಆದರೆ, ಅಂತಹ ಮಹಾನ್‌ ಹೋರಾಟವನ್ನು, ಅದರ ಯಶಸ್ಸನ್ನು ಕೃಷಿ ಕ್ಷೇತ್ರದ ಬೆಲೆ ಕುಸಿತದ ಬಿಕ್ಕಟ್ಟಿಗೆ ಕಾರಣವನ್ನಾಗಿಸುವ ದುಷ್ಟ ಪ್ರಯತ್ನವೂ ಸರ್ಕಾರದ ಸಮರ್ಥಕರಿಂದ ನಡೆಯುತ್ತಿದೆ. ‘ಕೇಂದ್ರ ಸರ್ಕಾರ ರೂಪಿಸಿದ್ದ ಮೂರು ಕೃಷಿ ಕಾನೂನುಗಳನ್ನು ಒಪ್ಪಿಕೊಂಡಿದ್ದರೆ ಇಷ್ಟೊತ್ತಿಗೆ ರೈತರ ಆದಾಯ ದ್ವಿಗುಣವಾಗಿ ಹೋಗುತ್ತಿತ್ತು’ ಎಂಬ ಕುಹುಕದ ನುಡಿಗಳು ಕೇಳಿ ಬರುತ್ತಿರುವುದೇ ಆಳುವವರ ವೈಫಲ್ಯವನ್ನು ಹೇಳುತ್ತಿದೆ ಎನ್ನಬಹುದು.

ಮಾಧ್ಯಮಗಳಲ್ಲಿ ರೈತರ ಆದಾಯ ದ್ವಿಗುಣ ಮಾಡಿದ್ದೇವೆ, ಮಾಡುತ್ತೇವೆ, ಆಗಿಲ್ಲ, ಆಗಿದೆ ಎಂಬ ರಾಜಕೀಯ ಪುಡಿನಾಯಕರ ನಿತ್ಯಕಲರವ ರೈತರ ಕಿರಿಕಿರಿಗೆ ಕಾರಣವಾಗುತ್ತಿದೆ. ಎಂಥ ಬರಗಾಲ ಬಂದರೂ ರಾಜಕಾರಣಿಗಳ ಆದಾಯ ಮಾತ್ರ ದ್ವಿಗುಣ-ತ್ರಿಗುಣ-ಬಹುಗುಣವಾಗುತ್ತಲೇ ಹೋಗುತ್ತಿರುವುದು ಸೋಜಿಗದ ವಿಷಯ! ಇಂತಹ ದುರಿತಕಾಲದಲ್ಲಿ, ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರೆ ದೇಶದ್ರೋಹಿಯಾಗುವ, ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರೆ ಕೋಮುವಾದಿಯಾಗುವ ಅಪಾಯದಲ್ಲಿ ರೈತರು ಬದುಕಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT