ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ರಾಜಕೀಯವಲ್ಲದ ‘ರಾಜಕೀಯ’ ಹಬ್ಬ

ಪಂಚಾಯಿತಿ ಚುನಾವಣೆಯಲ್ಲಿ ಲೋಪಗಳ ವಿಮರ್ಶೆ ನಡೆಯುವುದಿಲ್ಲವೇಕೆ?
Last Updated 15 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಚುನಾವಣೆ ಎಂಬ ಹಬ್ಬ ಗ್ರಾಮ ಪಂಚಾಯಿತಿಗಳ ಮನೆಬಾಗಿಲಿಗೆ ಬಂದು ನಿಂತಿದೆ. ಎಲ್ಲ ರಾಜಕೀಯ ಪಕ್ಷಗಳೂ ‘ಈ ಸಲ ಕಪ್ ನಮ್ದೇ’ ಎಂದು ಹೇಳಿಕೊಳ್ಳುತ್ತಿವೆ. ವಾಸ್ತವವಾಗಿ ಪಕ್ಷಗಳಿಗೆ ಚುನಾವಣೆಯ ಬಗ್ಗೆ ಇರುವ ಆತುರ, ಕಾತರ ಮತದಾರ ಪ್ರಭುವಿಗೆ ಖಂಡಿತ ಇಲ್ಲ.

ವೇತನ–ಭತ್ಯೆಗಳ ಗೊಡವೆ ಇಲ್ಲದೆ ನಿಸ್ಪೃಹವಾಗಿ ಗ್ರಾಮ ಪಂಚಾಯಿತಿ ಸದಸ್ಯರು ಪಂಚಾಯಿತಿಯ ಆರ್ಥಿಕ ಇತಿಮಿತಿಗೆ ಅನುಗುಣವಾಗಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುತ್ತಿದ್ದ ದಶಕಗಳ ಹಿಂದಿನ ಪಂಚಾಯಿತಿಯ ಕಲ್ಪನೆಯನ್ನು ಬುಡಮೇಲು ಮಾಡಲಾಗಿದೆ. ‘ಎಲ್ಲರ ಕೈಗೂ ಅಧಿಕಾರ’ದ ಆಕಾಂಕ್ಷೆಯಿಂದ ಅನುಷ್ಠಾನಗೊಂಡ ಹೊಸ ಆಡಳಿತ ಪದ್ಧತಿಯ ಬಗೆಗೆ ದೊಡ್ಡ ಗೋಪುರ ಕಟ್ಟಿಕೊಂಡವರಿಗೆಲ್ಲ, ಇರುಳು ಕಂಡ ಬಾವಿಗೆ ಹಗಲು ಧುಮುಕಿದ ಹತಾಶೆ ಮೂಡುವಂತಾಗಿದೆ.

ನಜೀರ್ ಸಾಬ್ ಕಾಲದಲ್ಲಿ ಸೃಷ್ಟಿಯಾದ ಪಂಚಾಯತ್ ಆಡಳಿತ ಕಲ್ಪನೆಯ ಅಸ್ಥಿಪಂಜರ ಕೂಡ ಈಗ ಇರಲಿಕ್ಕಿಲ್ಲ. ಅಷ್ಟೊಂದು ತಿದ್ದುಪಡಿಗಳು ಪ್ರತಿಯೊಂದು ಸರ್ಕಾರದ ಕಾಲದಲ್ಲಿಯೂ ಆಗುತ್ತಾ ಬಂದಿವೆ. ಆದರೆ ಇಂತಹ ಆಡಳಿತದಿಂದ ಮೂಲಭೂತ ಬದಲಾವಣೆಗಳು ಆಗಿವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ. ‘ನಮ್ಮ ಸಾಧನೆಗಳನ್ನು ಜನರಿಗೆ ಹೇಳಿ’ ಎಂದು ಕಾರ್ಯಕರ್ತರಿಗೆ ಗಾಳಿ ತುಂಬುವ ಪಕ್ಷಗಳ ನಾಯಕರು, ‘ನಿಮ್ಮ ಸಾಧನೆಗಳನ್ನು ಹೇಳಿಕೊಳ್ಳಿ’ ಎಂದು ಹಾಲಿ ಮತ್ತು ಮಾಜಿ ಸದಸ್ಯರಿಗೆ ಯಾಕೆ ಹೇಳುವುದಿಲ್ಲ?

ಏನು ಸಾಧನೆ ಆಗಿದೆ? ತಾಲ್ಲೂಕು ಪಂಚಾಯಿತಿಗಳು ಒಂದೊಂದು ಗ್ರಾಮ ಪಂಚಾಯಿತಿಗೂ ಬಡವರ ವಸತಿ ನಿರ್ಮಾಣಕ್ಕೆ ಲೆಕ್ಕಾಚಾರದಲ್ಲಿ ಹಣ ಕಳುಹಿಸುತ್ತವೆ. ಅದು ಅರ್ಜಿದಾರನ ಅರ್ಹತೆ ನೋಡಿ ಸ್ವಯಂ ಚಾಲಿತವಾಗಿ ಲಭ್ಯವಾಗುತ್ತದೆ. ತಲಾಟಿ ಯಥಾಪ್ರಕಾರ ಕುಡಿಯುವ ನೀರು ಹರಿಸುತ್ತಾನೆ, ಬಿಲ್ ಮಾಡುತ್ತಾನೆ. ಐದು ವರ್ಷಕ್ಕೊಮ್ಮೆ ಮನೆಗಳ ತೆರಿಗೆ ಹತ್ತು ಪ್ರತಿಶತ ಹೆಚ್ಚಿಸಲು ಸರ್ವಾನುಮತದ ನಿರ್ಣಯವಾಗುತ್ತದೆ. ಇಷ್ಟನ್ನು ಬಿಟ್ಟರೆ, ರಾಜಕೀಯ ಪಕ್ಷಗಳ ಪ್ರತಿಬಿಂಬಗಳಂತಿರುವ ಸದಸ್ಯರು ಬೇರೆ ಏನು ಮಾಡಿದರು ಎಂದು ಕೇಳಿಕೊಳ್ಳುವ ಪ್ರಯತ್ನವಾದರೂ ನಡೆಯುತ್ತದೆಯೇ?

ವೈಯಕ್ತಿಕ ದ್ವೇಷ ಸಾಧನೆಗಾಗಿ ಕೆಲವೆಡೆ ಪಂಚಾಯಿತಿ ಸದಸ್ಯತ್ವ ಅಸ್ತ್ರವಾಗಿ ಸಿಕ್ಕಿದ್ದುಂಟು. ಕೆಟ್ಟು ಕೆರ ಹಿಡಿದ ರಸ್ತೆಯೊಂದರ ದುರಸ್ತಿಗೆ ಎರಡು ಸಾವಿರ ರೂಪಾಯಿಗಿಂತ ಹೆಚ್ಚು ಮೊತ್ತವನ್ನು ಮಂಜೂರು ಮಾಡಲು ಆಡಳಿತ ಮಂಡಳಿಗೆ ಅಧಿಕಾರವಿಲ್ಲ. ಇದು ‘ಮೇಲಿನಿಂದ’ ಮಂಜೂರಾಗಬೇಕು. ಗ್ರಾಮ ಪಂಚಾಯಿತಿ ಕಾಮಗಾರಿಗೆ ಬಂದ ಹಣ ಕೂಡ ಶೇಕಡಾವಾರು ವಿಂಗಡಣೆ ಹೊಂದಿ, ಉದ್ಧರಣೆಯಲ್ಲಿ ಮಾತ್ರ ಸದ್ಬಳಕೆಯಾಗುತ್ತದೆಂಬ ಸತ್ಯ ಯಾರಿಗೂ ತಿಳಿಯದ್ದೇನಲ್ಲ. ಈಗಲೂ ಮಳೆಗಾಲದಲ್ಲಿ ಶಾಲಾ ಮಕ್ಕಳು ನದಿ ದಾಟಲು ಒಂದು ಸೇತುವೆಗಾಗಿ ಅರ್ಜಿ ಹಿಡಿದು ಗ್ರಾಮಸ್ಥರು ಪರದಾಡಬೇಕು ವಿನಾ ಪಂಚಾಯಿತಿ ಸದಸ್ಯರು ಮುತುವರ್ಜಿ ವಹಿಸಿ ಮಾಡಿಸಿದ ಕಾಮಗಾರಿಗಳು ಎಲ್ಲೋ ಬೆರಳೆಣಿಕೆಯಷ್ಟಿರಬಹುದು.

ಅಭ್ಯರ್ಥಿಯಿಂದ ಪಕ್ಷನಿಷ್ಠೆ ನಿರೀಕ್ಷಿಸಲಾಗುತ್ತದೆ ವಿನಾ ಅವನಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಅರಿತು ಅದನ್ನು ನಿವಾರಿಸುವ ನಾಯಕತ್ವವನ್ನು, ಆಡಳಿತ ಮುತ್ಸದ್ದಿತನವನ್ನು ಗುರುತಿಸುವ, ಪ್ರೇರೇಪಿಸುವ ಕೆಲಸವನ್ನು ತಳಮಟ್ಟದಲ್ಲಿ ಯಾವ ಪಕ್ಷ ಮಾಡುತ್ತದೆ?

ಹೊಸ ಮತದಾರರ ಮೂಲಕವೇ ಗ್ರಾಮಾಡಳಿತದ ಮೂಲ ಕಲ್ಪನೆಗೆ ಹೊಸ ಭಾಷ್ಯದ ಉಲ್ಲೇಖ ನಡೆಯಬೇಕಾಗಿದೆ. ಬುದ್ಧಿವಂತ, ವಿದ್ಯಾವಂತ ಸದಸ್ಯರು ಪದಗ್ರಹಣ ಮಾಡುವ ಮೂಲಕ, ಕನಿಷ್ಠ ಅಲ್ಲಿಗೆ ಬರುವ ಆದೇಶಗಳನ್ನು ಸ್ವತಃ ಓದಿ ಅದರಲ್ಲಿ ಫಲಾನುಭವಿಗಳಿಗೆ ಇರುವ ಸವಲತ್ತುಗಳನ್ನು ವಿವರಿಸುವಷ್ಟಾದರೂ ಪರಿಣತರಾಗಿದ್ದರೆ ಉತ್ತಮ. ಇಲ್ಲವಾದರೆ, ಬಂದಿರುವ ಸವಲತ್ತುಗಳನ್ನು ಒಬ್ಬ ಸಾಮಾನ್ಯ ವರ್ಗದ ಬುದ್ಧಿವಂತ ಸದಸ್ಯ ಗೆಬರಿಕೊಂಡು ಹೋಗಿ ಇತರ ಸದಸ್ಯರ ವಾರ್ಡುಗಳಿಗೆ ಚಿಪ್ಪು ಮಾತ್ರ ಸಿಕ್ಕುವುದುಂಟು.

ಚುನಾವಣೆ ಸಮೀಪಿಸಿದಾಗ ಶಾಸಕರು ಬರುತ್ತಾರೆ. ನನೆಗುದಿಗೆ ಬಿದ್ದಿದ್ದ ಕಾಮಗಾರಿಗಳೆಲ್ಲ ಏಕಕಾಲದಲ್ಲಿ ಆಗುತ್ತವೆ ಎಂದು, ಕೋಟಿ ಕೋಟಿ ಅನುದಾನ ಮಂಜೂರು ಆಗಿರುವ ಬಗೆಗೆ ಕಟೌಟ್ ಹಾಕಿಸಿ ಪೋಸು ಕೊಡುತ್ತಾರೆ. ಕೊರೊನಾ ಹಾವಳಿಯ ಸಮಯದಲ್ಲಿ ಖಜಾನೆಯನ್ನು ಖಾಲಿ ಮಾಡಿಕೊಂಡಿರುವ ಸರ್ಕಾರ ಇಷ್ಟು ಕೋಟಿಗಳನ್ನು ಖಂಡಿತ ಕೊಡುತ್ತದೆಯೇ ಎಂದು ಯಾರೂ ವಿಮರ್ಶಿಸದೆ, ಹಿಗ್ಗಿ ಹೀರೇಕಾಯಿಯಾಗುತ್ತಾರೆ. ಮುಂಗೈಗೆ ಹಚ್ಚಿರುವ ಬೆಲ್ಲವನ್ನು ನೆಕ್ಕಿಕೊಂಡು ಕುಳಿತುಕೊಳ್ಳುತ್ತಾರೆ. ಇನ್ನು ಈ ಯೋಜನೆಗಳಿಗೆ ಚಾಲನೆ ಸಿಗಲು ಮತ್ತೆ ಶಾಸನಸಭೆಯ ಚುನಾವಣೆ ಹತ್ತಿರವಾಗಬೇಕು.

ಲಾಕ್‍ಡೌನ್ ಸಂದರ್ಭದಲ್ಲಿ ಹಲವರು ಹೊತ್ತಿನ ತುತ್ತಿಗಾಗಿ ಪರದಾಡಿದ್ದರು. ಬಹುತೇಕರಿಗೆ ಯಾವ ಸಹಾಯಧನವೂ ಸಿಗಲಿಲ್ಲ. ಉತ್ತರ ಕರ್ನಾಟಕದ ನೆರೆಯ ಹಾವಳಿಯಿಂದ ಸಕಲವನ್ನೂ ಕಳೆದುಕೊಂಡವರಿಗೆ ಹಿಂದಿನ ವರ್ಷದ ಹಾನಿಯ ಪರಿಹಾರವೇ ಬಂದಿಲ್ಲ. ಹನಿ ನೀರಾವರಿಗೆ ಶೇ 90ರ ಸಹಾಯಧನ ಇದೆಯೆಂದು ನಂಬಿ ಅದಕ್ಕೆ ಹಣ ವ್ಯಯಿಸಿ ಮೂರು ವರ್ಷಗಳಿಂದ ಕಾದು ಕುಳಿತ ರೈತರಿಗೆ ಏನೂ ಸಿಕ್ಕಿಲ್ಲ. ಸಾಧನೆಯ ಸಮಾವೇಶಗಳಲ್ಲಿ ಇಂತಹ ಲೋಪ ಮತ್ತು ನ್ಯೂನತೆಗಳ ವಿಮರ್ಶೆ ನಡೆದು ಅದನ್ನು ಸರಿಪಡಿಸಿಕೊಳ್ಳುವ ಮಾರ್ಗ ಹುಡುಕಿದರೆ, ಗ್ರಾಮ ಆಡಳಿತದಲ್ಲಿ ತಮ್ಮ ಅಭ್ಯರ್ಥಿಯನ್ನು ಸಮರ್ಥಿಸಿಕೊಳ್ಳಲು ಯಾವುದೇ ಪಕ್ಷದವರಿಗೂ ಅದೇ ಅಸ್ತ್ರವಾಗಬಹುದು. ಇಲ್ಲವಾದರೆ ಚುನಾವಣೆಗೆ ತೆರಿಗೆಯ ಹಣ ಸೂರೆಯಾಗುವುದರ ಹೊರತು ಅನ್ಯ ಪುರುಷಾರ್ಥವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT