ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಭಾಷೆ ಅಲ್ಲ, ಅಧಿಕೃತ ಭಾಷೆ

Last Updated 15 ಫೆಬ್ರುವರಿ 2023, 19:08 IST
ಅಕ್ಷರ ಗಾತ್ರ

ಅಧಿವಕ್ತಾ ಪರಿಷತ್ ಕರ್ನಾಟಕ (ಉತ್ತರ) ಇತ್ತೀಚೆಗೆ ಆಯೋಜಿಸಿದ್ದ ಪ್ರಥಮ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಕಲಬುರಗಿ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್‍ಕುಮಾರ್‌ ಅವರು, ಹೈಕೋರ್ಟಿನಲ್ಲಿ ‘ಮಾತೃಭಾಷೆ’ ಬಳಕೆ ಎನ್ನುವ ಬದಲು ‘ರಾಜ್ಯಭಾಷೆ’ ಎಂದಾಗಬೇಕು ಎಂದು ಹೇಳಿದ್ದಾರೆ. ನಿಜ, 2011ರ ಜನಗಣತಿಯ ಪ್ರಕಾರ, ಕರ್ನಾಟಕದಲ್ಲಿ ಉರ್ದು, ತೆಲುಗು, ತಮಿಳು, ಮರಾಠಿ, ತುಳು, ಬ್ಯಾರಿ, ಕೊಡವ ಸೇರಿದಂತೆ ಸುಮಾರು 56 ಮಾತೃಭಾಷೆಗಳು ಜೀವಂತವಾಗಿವೆ. ಆದರೂ ಭಾಷೆ ಕುರಿತ ಗಂಭೀರವಾದ ಚರ್ಚೆಗಳಲ್ಲಿ ‘ಮಾತೃಭಾಷೆ’ ಎನ್ನುವ ಪದವನ್ನು ‘ಕನ್ನಡ’ ಎನ್ನುವುದಕ್ಕೆ ಮಾತ್ರ ಸಂವಾದಿಯಾಗಿ ಬಳಸುವ ಪರಿಪಾಟ ಸಾಮಾನ್ಯವಾಗಿದೆ. ಇದು ಸರಿಯಲ್ಲ. ಇದನ್ನೇ ನ್ಯಾಯಮೂರ್ತಿಯವರು ಹೇಳಿದ್ದು.

ಇನ್ನು ನ್ಯಾಯಾಲಯಗಳಲ್ಲಿ ಮಾತೃಭಾಷೆಯ ಬದಲು ‘ರಾಜ್ಯಭಾಷೆ’ ಎಂದಾಗಬೇಕು ಎಂದಿದ್ದಾರಲ್ಲ, ರಾಜ್ಯಭಾಷೆ ಎಂದರೆ ಯಾವುದು? ನಿಜವೆಂದರೆ ‘ರಾಜ್ಯಭಾಷೆ’ ಎನ್ನುವ ಒಂದು ಭಾಷೆ ಇಲ್ಲ. ಅವರ ಇಂಗಿತ ‘ಕನ್ನಡ’ ಎಂದಿದ್ದರೆ, ಅದು ರಾಜ್ಯದ ಆಡಳಿತ ಭಾಷೆಯೇ ವಿನಾ ‘ರಾಜ್ಯಭಾಷೆ’ ಅಲ್ಲ.

ಸಂವಿಧಾನದ ಪ್ರಕಾರ, ಭಾರತ ಒಕ್ಕೂಟಕ್ಕೆ ರಾಷ್ಟ್ರ ಲಾಂಛನ, ಧ್ವಜ, ಗೀತೆ, ಪ್ರಾಣಿ, ಪಕ್ಷಿ ಇವೆ. ಆದರೆ ‘ರಾಷ್ಟ್ರಭಾಷೆ’ ಎಂಬುದು ಇಲ್ಲ. ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ. ವಿಧಿ 343(1)ರ ಪ್ರಕಾರ, ‘ದೇವನಾಗರಿ ಲಿಪಿಯಲ್ಲಿ ಬರೆದ ಹಿಂದಿಯು ಒಕ್ಕೂಟದ ಅಧಿಕೃತ ಭಾಷೆ (ಅಫಿಷಿಯಲ್‌ ಲ್ಯಾಂಗ್ವೇಜ್‌)’, ಎಂದರೆ, ಆಡಳಿತ, ನ್ಯಾಯಾಂಗ ವ್ಯವಹಾರದಲ್ಲಿ ಬಳಸಬೇಕಾದ ಭಾಷೆ. ಹಾಗೆಯೇ ‘ರಾಜ್ಯಭಾಷೆ’ ಎಂಬ ಪರಿಕಲ್ಪನೆಯೂ ಸಂವಿಧಾನದಲ್ಲಿ ಇಲ್ಲ. ಆದಾಗ್ಯೂ, ವಿಧಿ 345, ‘ರಾಜ್ಯದಲ್ಲಿ ಬಳಕೆಯಲ್ಲಿರುವ ಒಂದು ಅಥವಾ ಹೆಚ್ಚು ಭಾಷೆಗಳನ್ನು ಆಡಳಿತದ ಭಾಷೆಯನ್ನಾಗಿ ಅಂಗೀಕರಿಸಬಹುದು’ ಎನ್ನುತ್ತದೆ. ಆ ಪ್ರಕಾರ, ಕರ್ನಾಟಕ ರಾಜಭಾಷಾ ಅಧಿನಿಯಮ 1963ರ ಅಡಿಯಲ್ಲಿ, ಕನ್ನಡ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಘೋಷಿಸಲಾಗಿದೆ, ‘ರಾಜ್ಯಭಾಷೆ’ಯಾಗಿ ಅಲ್ಲ.

ಸರ್ಕಾರದ ಕಾನೂನು ಪದಕೋಶದಲ್ಲಿ ‘ಅಫಿಷಿಯಲ್‌’ ಎಂದು ಬರುವ ಕಡೆಯೆಲ್ಲಾ ‘ಅಧಿಕೃತ’ ಎಂಬ ಪದವನ್ನು ಬಳಸಲಾಗಿದೆ. ಆದರೆ, ಅದ್ಯಾಕೋ ಭಾಷೆಯ ಸಂದರ್ಭದಲ್ಲಿ ಮಾತ್ರ, ರಾಜಭಾಷೆ, ರಾಜಭಾಷಾ ಅಧಿನಿಯಮ, ರಾಜಭಾಷಾ ಆಯೋಗ, ರಾಜಭಾಷಾ ವಿಭಾಗ ಎಂದೆಲ್ಲಾ ‘ರಾಜ’ ಎಂಬ ಪದವನ್ನು ಬಳಸಿದ್ದಾರೆ. ಸಂವಿಧಾನ ಜಾರಿಗೆ ಬಂದ ನಂತರ ನಮ್ಮಲ್ಲಿ ರಾಜರು, ಪ್ರಭುಗಳು ಇಲ್ಲ. ಆದರೆ, ಅವರು ನಮ್ಮ ಮೇಲೆ ಇನ್ನೂ ರಾಜರನ್ನು ಹೇರುತ್ತಿದ್ದಾರೆ.

ಭಾರತ ಸಂವಿಧಾನವು ಆರಂಭವಾಗುವುದೇ ‘ವಿ ದ ಪೀಪಲ್‌ ಆಫ್‌ ಇಂಡಿಯಾ...’ ಎಂದು. ಸಂವಿಧಾನದ ಅಧಿಕೃತ ಹಿಂದಿ ಅನುವಾದದಲ್ಲಿ ‘ಹಂ ಭಾರತ್ ಕೆ ಲೋಗ್...’ ಎಂದಿದೆ. ಅದೇ ರೀತಿಯಲ್ಲಿ, ಕೊಂಕಣಿ- ಆಮಿ, ಭಾರತಾಚೆ ಲೋಕ್, ಮರಾಠಿ- ಅಹ್ಹೀ, ಭಾರತಾಚೆ ಲೋಕ್, ಉರ್ದು-ಹಮ್, ಭಾರತ್ ಕೆ ಅವಾಮ್, ತಮಿಳು- ಇಂಡಿಯಾ ಮಕ್ಕಳಾಕಿಯಾ ನಾಮ್- ಎಂದೆಲ್ಲಾ ಪೀಪಲ್‌ ಎನ್ನುವುದನ್ನು ‘ಜನ’ ಎನ್ನುವ ರೀತಿಯಲ್ಲಿ ಅನುವಾದ ಮಾಡಿಕೊಂಡರೆ, ನಮ್ಮ ಕನ್ನಡದ ಅಧಿಕೃತ ಅನುವಾದದಲ್ಲಿ ಇದನ್ನು ‘ಭಾರತದ ಪ್ರಜೆಗಳಾದ ನಾವು’ ಎಂದಿದೆ. ಇವರು ನಮ್ಮನ್ನು ಪ್ರಜೆಗಳನ್ನಾಗಿ ಮಾಡಿದ್ದಾರೆ. ನಮ್ಮಲ್ಲಿ ಈಗ ಪ್ರಭುಗಳಿಲ್ಲವಾದ್ದರಿಂದ ನಾವು ಪ್ರಜೆಗಳಲ್ಲ, ನಾವು ಸಬ್ಜೆಕ್ಟ್ಸ್‌ ಅಲ್ಲ, ನಾವು ಸಿಟಿಜನ್ಸ್‌– ನಾಗರಿಕರು, ಜನ ಎಂಬುದು ಇವರಿಗೆ ಇನ್ನೂ ಅರಿವಾದ ಹಾಗೆ ಕಾಣುತ್ತಿಲ್ಲ.

ಇದೇ ಪ್ರವೃತ್ತಿಯನ್ನು ‘ಡೆಮಾಕ್ರಟಿಕ್‌’ ಎಂಬ ಪದದ ಅನುವಾದದಲ್ಲಿಯೂ ಕಾಣುತ್ತೇವೆ. ನಿಜವೆಂದರೆ ‘ಡೆಮಾಕ್ರಟಿಕ್‌’ ಎಂಬುದಕ್ಕೆ ಸಂವಿಧಾನದ ಅಧಿಕೃತ ಹಿಂದಿ ಅನುವಾದದಲ್ಲಿ ‘ಲೋಕತಂತ್ರಾತ್ಮಕ್’ ಎನ್ನುವ ಪದ ಬಳಸಲಾಗಿದೆ. ಅದೇ ರೀತಿಯಲ್ಲಿ, ತಮಿಳು- ಜನನಾಯಕ, ಬಂಗಾಲಿ-ಜನತಾಂತ್ರಿಕ್, ಮಾರಾಠಿ- ಲೋಕಶಾಹಿ, ಉರ್ದು- ಅವಾಮೀ ಎಂಬ ಪದಗಳಿವೆ. ಆದರೆ ಕನ್ನಡದಲ್ಲಿ ಮಾತ್ರ, ‘ಪ್ರಜಾಸತ್ತಾತ್ಮಕ’ ಎಂಬ ಪದವನ್ನು ಬಳಸಲಾಗಿದೆ. ಇಲ್ಲಿಯೂ ನಮ್ಮನ್ನು ಪ್ರಜೆಗಳನ್ನಾಗಿಸಿದ್ದಾರೆ. ನಿಜವೆಂದರೆ, ನಮ್ಮದು ಪ್ರಜಾಪ್ರಭುತ್ವವಲ್ಲ, ಜನತಂತ್ರ ಅಥವಾ ಜನಸತ್ತೆ. ಆದ್ದರಿಂದ ನಮ್ಮದು ಜನಸತ್ತಾತ್ಮಕ ಗಣರಾಜ್ಯ.

ಇದನ್ನು ಏಕೆ ಇಷ್ಟು ಗಂಭೀರವಾಗಿ ಪರಿಗಣಿಸಬೇಕೆಂದರೆ, ನಮಗೆಲ್ಲಾ ಗೊತ್ತಿರುವ ಹಾಗೆ, ನಮ್ಮ ಮನೋಭಾವವು ನಾವು ಬಳಸುವ ಭಾಷೆಯಲ್ಲಿ ವ್ಯಕ್ತವಾಗುತ್ತದೆ. ಹಾಗೆಯೇ ನಾವು ಬಳಸುವ ಭಾಷೆಯೂ ನಮ್ಮ ಮನೋಭಾವವನ್ನು ಪ್ರಭಾವಿಸುತ್ತದೆ. ನಮ್ಮನ್ನು ನಾವು ಪ್ರಜೆಗಳು ಎಂದು ನಂಬಿಕೊಂಡಷ್ಟೂ, ನಮ್ಮ ಮತಗಳಿಂದ ಅಧಿಕಾರವನ್ನು ಪಡೆದುಕೊಳ್ಳುವ ನಮ್ಮ ಶಾಸಕರು, ಸಂಸದರು ನಮ್ಮ ಪ್ರತಿನಿಧಿಗಳು ಎಂಬುದನ್ನು ಮರೆತು ದೊರೆಗಳ ರೀತಿಯಲ್ಲಿ ದರ್ಪವನ್ನು ಮೆರೆಯುತ್ತಾರೆ. ಪಂಚಾಯಿತಿ ಸದಸ್ಯನ ಎದುರೂ ನಾವು ಕೈಕಟ್ಟಿ ನಿಲ್ಲುತ್ತೇವೆ. ಇದು ಹಳೆಯ ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಯಲ್ಲದೆ ಇನ್ನೇನು?!

‘ಭಾರತೀಯ ಜನತೆಯಾದ ನಾವು’ ಸ್ವತಂತ್ರ ಜನಸತ್ತಾತ್ಮಕವಾದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅದಕ್ಕೆ ತಕ್ಕ ಜನಸತ್ತಾತ್ಮಕ ಅಂತಃಸತ್ವದಿಂದ ಕೂಡಿದ ಭಾಷೆಯನ್ನು ಮಾತಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT