ಮಂಗಳವಾರ, ಜೂನ್ 28, 2022
20 °C
ಜಗತ್ತಿನ ಎಲ್ಲಾ ಪರಿಣತರು ಸತತವಾದ, ವಿದ್ಯಾರ್ಥಿಸ್ನೇಹಿ ಮೌಲ್ಯಮಾಪನವಿರಬೇಕು, ಅಂತಿಮ ಪರೀಕ್ಷೆಗಳಲ್ಲ ಎಂದಿದ್ದರೂ ಯಾಕೆ ಈ ದಿಸೆಯಲ್ಲಿ ಪ್ರಯತ್ನ ನಡೆಯಲಿಲ್ಲ?

ಸಂಗತ: ಪರೀಕ್ಷೆಗೆ ಈಗ ‘ಪರೀಕ್ಷಾ’ ಕಾಲ

ರಾಜೇಂದ್ರ ಚೆನ್ನಿ Updated:

ಅಕ್ಷರ ಗಾತ್ರ : | |

Prajavani

ನಮ್ಮ ಪರೀಕ್ಷಾ ಪದ್ಧತಿಗಳ ವಿರೋಧಾಭಾಸವೆಂದರೆ, ಅವು ವಿದ್ಯಾರ್ಥಿಗಳ ಬುದ್ಧಿಮತ್ತೆ, ಸಾಮರ್ಥ್ಯ ಅಥವಾ ಕೌಶಲಗಳನ್ನು ಅಳೆಯುವುದರಲ್ಲಿ ಅಸಮರ್ಪಕವೆಂದೇ ಎಲ್ಲಾ ಪರಿಣತರು ಒಪ್ಪುತ್ತಾರೆ. ಆದರೆ ಇಡೀ ಶಿಕ್ಷಣ ವ್ಯವಸ್ಥೆಯೇ ಪರೀಕ್ಷೆಗಳನ್ನು ಆಧರಿಸಿದೆ.

ಎಷ್ಟರಮಟ್ಟಿಗೆ ಅಂದರೆ, ದ್ವಿತೀಯ ಪಿ.ಯು. ಮತ್ತು ಸಿ.ಇ.ಟಿ. ಪರೀಕ್ಷೆಗಳಿಗಾಗಿ ಕೋಚಿಂಗ್ ಕೊಡುವ ಕರ್ನಾಟಕದ ಕೆಲವು ಸಂಸ್ಥೆಗಳು ಕೋವಿಡ್ ಕಾಲದಲ್ಲಿಯೂ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿಕೊಡುವುದಿಲ್ಲವೆಂದು ಹಟ ಮಾಡಿದ್ದರಿಂದ ಅವರ ಪಾಲಕರು ಜಗಳ, ಹರತಾಳ ಮಾಡಿ ಮಕ್ಕಳನ್ನು ವಾಪಸ್‌ ಪಡೆಯಬೇಕಾಯಿತು.

ಜೆಇಇ, ಐಐಟಿ, ನೀಟ್ ಪರೀಕ್ಷೆಗಳಿಗೆ ಕೋಚಿಂಗ್ ಮಾಡುವ ‘ಕೋಟಾ’ ಎನ್ನುವ ನಗರವೇ ರಾಜಸ್ಥಾನದಲ್ಲಿದೆ. ವರ್ಷಕ್ಕೆ 1.50 ಲಕ್ಷ ವಿದ್ಯಾರ್ಥಿಗಳು ಈ ಕೋಚಿಂಗ್ ಪಡೆಯುತ್ತಿದ್ದು, ಒಟ್ಟು ವ್ಯವಹಾರವು ವಾರ್ಷಿಕ ₹3,600 ಕೋಟಿಯದು. ಇಂಥ ಉದಾಹರಣೆಗಳನ್ನು ಬಿಟ್ಟರೂ ಪರೀಕ್ಷೆಗಳೇ ಶಿಕ್ಷಣ ಪದ್ಧತಿಯ ಬುನಾದಿ ಎಂದು ನಾವೆಲ್ಲ ಮಾನಸಿಕವಾಗಿ ಒಪ್ಪಿಕೊಂಡಿದ್ದೇವೆ. ಪಿ.ಯು. ಪರೀಕ್ಷೆಗಳು ಪವಿತ್ರ ಮತ್ತು ಅವುಗಳನ್ನು ನಡೆಸಿಯೇ ತೀರುತ್ತೇವೆ ಎಂದು ಸಚಿವರು ಮತ್ತು ಪಿ.ಯು. ಮಂಡಳಿ ವೀರೋಚಿತವಾಗಿ ಹೋರಾಟ ಮಾಡಿ, ಕೊನೆಗೆ ಪರೀಕ್ಷೆಗಳನ್ನು ರದ್ದು ಮಾಡುವ ನಿರ್ಧಾರವನ್ನು ಪ್ರಧಾನಿ ಪ್ರಕಟಿಸಿದ ಮೇಲೆ ಅವರು ತಮ್ಮ ನೀತಿಯನ್ನು ಬದಲಾಯಿಸಬೇಕಾಗಿ ಬಂತು. ಆದರೂ ಎಸ್ಎಸ್ಎಲ್‌ಸಿ ಪರೀಕ್ಷೆಗಳನ್ನು ವಿಭಿನ್ನ ರೀತಿಯಲ್ಲಾದರೂ ನಡೆಸಲೇಬೇಕು ಎಂದು ಈಗಲೂ ಹೇಳಲಾಗುತ್ತಿದೆ.

ಪರೀಕ್ಷೆಗಳ ನಿರ್ವಹಣೆಯಲ್ಲಿ ಅಸಮರ್ಪಕತೆ, ಪ್ರಶ್ನೆಪತ್ರಿಕೆಗಳ ಸೋರಿಕೆ, ನಕಲು ಮಾಡುವ ಸುದೀರ್ಘ ಪರಂಪರೆಯೇ ಇದೆ. ಜಗತ್ತಿನ ಇತಿಹಾಸದಲ್ಲಿಯೇ ಅತಿ ಭೀಕರವಾದ ಪಿಡುಗಿನ ಕಾಲದಲ್ಲಿ ಪರೀಕ್ಷೆಗಳು ಇಷ್ಟು ಅನಿವಾರ್ಯ ಹಾಗೂ ಪವಿತ್ರವಾಗಿಬಿಟ್ಟವು ಎನ್ನುವುದು ಆಶ್ಚರ್ಯದ ವಿಷಯ. ಕರ್ನಾಟಕವು ಸಿ.ಇ.ಟಿ. ಮೂಲಕ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸುಗಳಿಗೆ ಪ್ರವೇಶಾತಿಯನ್ನು ಶುರು ಮಾಡಿದ ಮೇಲೆ ನಮ್ಮ ಮಧ್ಯಮವರ್ಗದ ಸ್ಥಿತಿಗಳು ಆಮೂಲಾಗ್ರವಾಗಿ ಬದಲಾದವು. ಇಂದು ಕಾಣುವ ನಗರೀಕರಣ, ಮಾಹಿತಿ ತಂತ್ರಜ್ಞಾನದ ಆಧಾರದ ಮೇಲೆ ನಿಂತಿರುವ ಜಾಗತೀಕರಣ, ಶಿಕ್ಷಿತ ಮಧ್ಯಮ ವರ್ಗದ ವಲಸೆ, ಶ್ರೀಮಂತಿಕೆ ಇವೆಲ್ಲವೂ ಈ ವಿದ್ಯಮಾನಕ್ಕೆ ಸಂಬಂಧಪಟ್ಟವು. ಆದರೆ ಸಿ.ಇ.ಟಿ. ಪ್ರಾಮುಖ್ಯತೆಯಿಂದಾಗಿ ಆರಂಭವಾದ ಖಾಸಗಿ ಕೋಚಿಂಗ್ ಸಂಸ್ಥೆಗಳು ತಮ್ಮದೇ ಪರ್ಯಾಯವಾದ ಅರ್ಥವ್ಯವಸ್ಥೆಯನ್ನೇ ನಿರ್ಮಿಸಿಕೊಳ್ಳುವಷ್ಟು ಪ್ರಬಲವಾದವು. ಇಂಗ್ಲಿಷ್ ಕಾದಂಬರಿಕಾರ ಡಿಕನ್ಸ್, ಶಾಲೆಗಳಿಗೆ ‘Finish em’ (‘ಅವರನ್ನು/ ಮಕ್ಕಳನ್ನು ಮುಗಿಸಿ’) ಎನ್ನುವ ಹೆಸರು ಕೊಡುತ್ತಾನೆ. ಅದು ಈ ಕೋಚಿಂಗ್ ಸೆಂಟರ್‌ಗಳಿಗೆ ಅನ್ವಯವಾಗುತ್ತದೆ. ಆದರೆ ಇದರಿಂದಾಗಿ ನಮ್ಮ ಉದಾರವಾದಿ ಮಾನವಿಕ ಶಿಕ್ಷಣವೇ ಮೂಲೆಗುಂಪಾಗಿ, ಪರೀಕ್ಷಾ ಕೇಂದ್ರಿತವಾದ ವ್ಯಾಪಾರಿ ಶಿಕ್ಷಣವು ಮುನ್ನೆಲೆಗೆ ಬಂದಿತು.

ಇದರ ಇತರ ಸಾಮಾಜಿಕ ಪರಿಣಾಮಗಳನ್ನು ಗಮನಿಸಿ. ಪರೀಕ್ಷೆಯಲ್ಲಿ ಅಂಕ ಗಳಿಸಿದವರೇ ‘ಮೆರಿಟ್’ ವಿದ್ಯಾರ್ಥಿಗಳೆಂದಾಗಿ, ಒಂದು ಮೆರಿಟೋಕ್ರಸಿಯೇ ಅಸ್ತಿತ್ವಕ್ಕೆ ಬಂದಿತು. ಸಾಮಾಜಿಕ ನ್ಯಾಯ, ಮೀಸಲಾತಿ ವಿರುದ್ಧ ದ್ವೇಷದ ಭಾವನೆ ಉಂಟಾಯಿತು. ಲೋಹಿಯಾ ಹೇಳಿದಂತೆ, ಇಂಗ್ಲಿಷ್, ಜಾತಿ ಮತ್ತು ಮೆರಿಟ್‍ಗಳು ಮೂಲತಃ ಸಂವಿಧಾನ ವಿರೋಧಿ ನಿಲುವುಗಳನ್ನು ಬೆಳೆಸಿದವು. ಇದರ ಹಿಂದೆ ಪರೀಕ್ಷಾ ಪದ್ಧತಿಯ ಪ್ರಾಬಲ್ಯವಿದೆ.

ಎಸ್ಎಸ್ಎಲ್‌ಸಿ ಮತ್ತು ಪಿ.ಯು. ಪರೀಕ್ಷೆ ಪಾಸು ಮಾಡಿದರೆ ಉದ್ಯೋಗಗಳು ಸಿಕ್ಕುತ್ತವೆ ಮತ್ತು ಮುಂದಿನ ಶಿಕ್ಷಣಕ್ಕೆ ಪ್ರವೇಶ ಸಿಕ್ಕುತ್ತದೆ ಎನ್ನುವ ಸುಳ್ಳು ವಾದಗಳನ್ನು ಮುಂದಿಡಲಾಗುತ್ತದೆ. ಕರ್ನಾಟಕದಲ್ಲಿ ಎಲ್ಲಾ ಪ್ರತಿಷ್ಠಿತ ಖಾಸಗಿ ಪಿ.ಯು. ಕಾಲೇಜುಗಳಲ್ಲಿ ಈಗಾಗಲೇ ಪ್ರವೇಶಗಳು ಮುಗಿದಿರುವುದು ಸರ್ಕಾರಕ್ಕೆ ಮಾತ್ರ ಗೊತ್ತಿಲ್ಲದ ಸಾರ್ವಜನಿಕ ವಾಸ್ತವವಾಗಿದೆ!

ದ್ವಿತೀಯ ಪಿ.ಯು. ಪರೀಕ್ಷೆಯ ಬಗ್ಗೆ ಮಹಾನ್ ಧೀಮಂತ ಚರ್ಚೆಗಳು ನಡೆಯುತ್ತಿರುವಾಗ ಎಲ್ಲಾ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಪದವಿ ತರಗತಿಗಳ ಪ್ರವೇಶವು ಅಲ್ಲಿಯ ಪ್ರವೇಶ ಪರೀಕ್ಷೆಗಳ ಮೂಲಕ ನಡೆದು ಎರಡು ತಿಂಗಳಾಗಿದೆ. ಹೀಗಾಗಿ ಯಾವ ವಿಭಿನ್ನ ಶೈಲಿಯ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಸಿದರೂ ದಲಿತ, ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜುಗಳೇ ಗತಿ. ಅಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲೇಬೇಕಲ್ಲ, ಅದು ಸಂವಿಧಾನದ ಆಶಯವೂ ಹೌದಲ್ಲವೆ? ಹಾಗಿದ್ದರೆ ಎಂಸಿಕ್ಯುಗಳೇ (ಬಹು ಆಯ್ಕೆ ಪರೀಕ್ಷೆ) ಇರುವ ಎಸ್ಎಸ್ಎಲ್‌ಸಿ ಪರೀಕ್ಷೆಯ ಸರ್ಕಸ್ ಏಕೆ ಬೇಕು?

ಜಗತ್ತಿನ ಎಲ್ಲಾ ಪರಿಣತರು ಸತತವಾದ, ವಿದ್ಯಾರ್ಥಿಸ್ನೇಹಿ ಮೌಲ್ಯಮಾಪನವಿರಬೇಕು, ಅಂತಿಮ ಪರೀಕ್ಷೆಗಳಲ್ಲ ಎಂದು ಹೇಳಿದ್ದರೂ ಯಾಕೆ ಈ ದಿಸೆಯಲ್ಲಿ ಪ್ರಯತ್ನಗಳೇ ನಡೆಯಲಿಲ್ಲ? ಖಾಸಗಿ ಶಾಲೆಗಳಲ್ಲಿ ಮಾತ್ರ ಇದು ಹೇಗೆ ಸಾಧ್ಯವಾಗುತ್ತದೆ?

ಶಾಲೆಗಳಿಗೆ ನೀರು, ಶೌಚಾಲಯ, ಶಿಕ್ಷಕರು, ಆರೋಗ್ಯ ವ್ಯವಸ್ಥೆಯನ್ನು ನಿರ್ಲಕ್ಷ್ಯ ಮಾಡಿ, ಈಗ ಪರೀಕ್ಷೆಗಳೇ ಪವಿತ್ರವೆನ್ನುವ ಚಿಂತನೆ ಅಮಾನವೀಯವಲ್ಲವೇ? ಈಗಲೂ ಎಲ್ಲಾ ವಯಸ್ಕ ವಿದ್ಯಾರ್ಥಿಗಳಿಗೆ ತಕ್ಷಣ ಲಸಿಕೆ ನೀಡಬೇಕು ಎಂದು ಶಿಕ್ಷಣ ಇಲಾಖೆ ಯಾಕೆ ಹೇಳುವುದಿಲ್ಲ? ಆದರೆ ಈಗಾಗಲೇ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಕ್ಯಾಲೆಂಡರ್, ಪರೀಕ್ಷಾ ದಿನಾಂಕಗಳು ನಿಗದಿಯಾಗುತ್ತಿವೆ. ಇವುಗಳ ಬಗ್ಗೆ ಕೊರೊನಾ ಕಾಲದಲ್ಲಿಯೂ ಚಿಂತಿಸದೆ ಪರೀಕ್ಷೆಗಳನ್ನು ಹೇರುವ ಅಮಾನವೀಯತೆಗೆ ಕೊನೆಯೇ ಇಲ್ಲವೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು