ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಅಡಿಕೆ ಸಿಪ್ಪೆ: ಕಳೆಯಬೇಡಿ ‘ಕಳಿಸಿ’

ಅಡಿಕೆ ಸಿಪ್ಪೆಯಿಂದಲೂ ತಯಾರಿಸಬಹುದು ಸಾವಯವ ಗೊಬ್ಬರ
Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
ಅಕ್ಷರ ಗಾತ್ರ

ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕವು ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ಉತ್ಪಾದನೆಯಾಗುವ ಒಟ್ಟು ಅಡಿಕೆಯಲ್ಲಿ (14.5 ಲಕ್ಷ ಟನ್) ಶೇ 79ರಷ್ಟು ನಮ್ಮ ರಾಜ್ಯದ್ದೇ ಆಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಡಿಕೆಯು ಅಧಿಕ ಆರ್ಥಿಕ ಲಾಭ ತಂದುಕೊಡುವ ಬೆಳೆಯಾಗಿರುವುದರಿಂದ, ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವ ಪ್ರದೇಶಗಳಾದ ಮಲೆನಾಡು ಮತ್ತು ಕರಾವಳಿ ಭಾಗಗಳೊಂದಿಗೆ ಮಧ್ಯ ಹಾಗೂ ದಕ್ಷಿಣ ಕರ್ನಾಟಕ ಭಾಗದ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಹಾವೇರಿ ಜಿಲ್ಲೆಗಳಲ್ಲೂ ಅಡಿಕೆ ಬೆಳೆ ವ್ಯಾಪಕವಾಗಿದೆ.

ಅಡಿಕೆ ಕೊಯ್ದು ಸುಲಿದು ಹದ ಮಾಡುವ ಕಾರ್ಯ ಹೆಚ್ಚಿನ ಶ್ರಮ ಬೇಡುವುದರಿಂದ ಬಹುತೇಕ ಅಡಿಕೆ ಬೆಳೆಗಾರರು ತಮ್ಮ ಫಸಲನ್ನು ಸಂಸ್ಕರಿಸದೆ ಇಡೀ ಸಂಸ್ಕರಣಾ ಪ್ರಕ್ರಿಯೆಯನ್ನು ಗುತ್ತಿಗೆಗೆ ನೀಡುತ್ತಾರೆ. ಹೀಗೆ ಗುತ್ತಿಗೆ ತೆಗೆದುಕೊಳ್ಳುವ ಚೇಣಿದಾರರು ಅಡಿಕೆಯನ್ನು ಸುಲಿದು ಸಂಸ್ಕರಿಸಿ ಮಾರಾಟ ಮಾಡುತ್ತಾರೆ. ಅಡಿಕೆ ಸುಲಿಯುವ ಸಮಯದಲ್ಲಿ ದೊರೆಯುವ ಅಡಿಕೆ ಸಿಪ್ಪೆಯ
ತ್ಯಾಜ್ಯವನ್ನು ರಸ್ತೆಬದಿಯಲ್ಲಿ ಎಲ್ಲೆಂದರಲ್ಲಿ ಸುರಿದು ಬರುತ್ತಾರೆ. ಇದರಿಂದಾಗಿ ಕೆಲವು ರಸ್ತೆಗಳ ಇಕ್ಕೆಲಗಳಲ್ಲೂ ಅಡಿಕೆ ಸಿಪ್ಪೆಯ ರಾಶಿಯನ್ನು ನಾವು ಕಾಣಬಹುದು. ಹೀಗೆ ಅಡಿಕೆ ಸಿಪ್ಪೆಯನ್ನು ರಸ್ತೆಬದಿಯಲ್ಲಿ ಸುರಿಯುವುದು ಅಥವಾ ಸುಟ್ಟು ಹಾಕುವುದು ಒಂದು ಸಾಮಾನ್ಯ ಪ್ರಕ್ರಿಯೆ ಎನಿಸಿದರೂ ಇದರಿಂದಾಗುವ ಹಾನಿ ಅಪಾರ.

ಒಂದು ಎಕರೆ ಅಡಿಕೆ ತೋಟದಲ್ಲಿ ನಮಗೆ ಅಂದಾಜು 600-700 ಕೆ.ಜಿ. ಒಣ ಅಡಿಕೆ ಸಿಪ್ಪೆ ದೊರೆಯುತ್ತದೆ. ರಾಜ್ಯದಲ್ಲಿ ಸುಮಾರು 12.75 ಲಕ್ಷ ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಪ್ರತಿವರ್ಷ 8.9 ಲಕ್ಷ ಟನ್‍ನಷ್ಟು ಅಡಿಕೆ ಸಿಪ್ಪೆ ಉತ್ಪಾದನೆ ಆಗುತ್ತದೆ. ಇದರಲ್ಲಿ ಹೆಚ್ಚಿನ ಭಾಗ ಸಿಪ್ಪೆಯು ಯಾವ ಉಪಯೋಗಕ್ಕೂ ಬಾರದೆ ನಷ್ಟವಾಗುತ್ತದೆ.

ಅಡಿಕೆ ಸಿಪ್ಪೆಯು ಒಂದು ಸಾವಯವ ಪದಾರ್ಥವಾಗಿದ್ದು, ಅಡಿಕೆ ಬೆಳೆಗೆ ಬೇಕಾದ ಪೋಷಕಾಂಶಗಳ ಆಗರವಾಗಿದೆ. ಹೀಗಾಗಿ, ಅದನ್ನು ವ್ಯರ್ಥ ಮಾಡುವ ಬದಲಿಗೆ ಕಾಂಪೋಸ್ಟೀಕರಣಗೊಳಿಸಿ (ಗೊಬ್ಬರವಾಗಿ ಕಳಿಸುವಿಕೆ) ತೋಟದ ಮಣ್ಣಿಗೆ ಸೇರಿಸಿದ್ದೇ ಆದಲ್ಲಿ, ನೀರು ಹಾಗೂ ಪೋಷಕಾಂಶವನ್ನು ಹಿಡಿದಿಟ್ಟುಕೊಳ್ಳುವ ಮಣ್ಣಿನ ಶಕ್ತಿ ಸುಧಾರಣೆಗೊಳ್ಳುವುದರ ಜೊತೆಗೆ ಸೂಕ್ಷ್ಮಾಣುಜೀವಿಗಳ ಚಟುವಟಿಕೆಯೂ ಹೆಚ್ಚುತ್ತದೆ. ಇದರಿಂದ ಗಿಡಗಳಿಗೆ ಸುಲಭವಾಗಿ ಪೋಷಕಾಂಶಗಳು ದೊರೆಯುವಂತೆ ಆಗುತ್ತದೆ. ಇಷ್ಟೆಲ್ಲಾ ಉಪಯೋಗಗಳನ್ನು ಹೊಂದಿರುವ ಸಾವಯವ ಪದಾರ್ಥವಾದ ಅಡಿಕೆ ಸಿಪ್ಪೆಯನ್ನು ಸುಟ್ಟುಹಾಕಿದರೆ ಅಥವಾ ತೋಟದಿಂದ ಹೊರಕ್ಕೆ ಎಸೆದರೆ, ಪೋಷಕಾಂಶ ನಷ್ಟ ಆಗುವುದರ ಜೊತೆಗೆ ವಾತಾವರಣವೂ ಕಲುಷಿತಗೊಳ್ಳುತ್ತದೆ.

ಅಡಿಕೆ ಸಿಪ್ಪೆಯಿಂದ ಇಷ್ಟೊಂದು ಉಪಯೋಗಗಳು ಇದ್ದರೂ ಅದನ್ನು ಎಲ್ಲೆಂದರಲ್ಲಿ ಬಿಸಾಡುವುದಕ್ಕೆ ಕಾರಣಗಳು ಇಲ್ಲವೆಂದಿಲ್ಲ. ರೈತರು ಹೇಳುವ ಪ್ರಕಾರ, ಅಡಿಕೆ ಸಿಪ್ಪೆಯು ಹೆಚ್ಚು ನಾರಿನಿಂದ ಕೂಡಿದ್ದು ಕಳಿಯುವಿಕೆ ತುಂಬಾ ನಿಧಾನ, ಹಾಗೆಯೇ ಬಿಟ್ಟರೆ ಅದು ಕರಗಲು ಎರಡು ವರ್ಷ ಬೇಕಾಗುತ್ತದೆ. ಆದ್ದರಿಂದ ರೈತರು ಅದನ್ನು ಕಾಂಪೋಸ್ಟ್ ತೊಟ್ಟಿಗೆ ಹಾಕಲು ಹಿಂಜರಿಯುತ್ತಾರೆ. ಕೆಲವೊಮ್ಮೆ ಅಡಿಕೆ ಸಿಪ್ಪೆಯ ರಾಶಿಗೆ ಬೆಂಕಿಯನ್ನು ಹಾಕುತ್ತಾರೆ. ಅಡಿಕೆ ಸಿಪ್ಪೆಯಲ್ಲಿ ಯಥೇಚ್ಛವಾಗಿ ಲಿಗ್ನಿನ್, ಸೆಲ್ಯುಲೋಸ್, ಹೆಮಿ ಸೆಲ್ಯುಲೋಸ್ ಇರುವುದರಿಂದ ಕಳಿಯುವಿಕೆ ನಿಧಾನ. ವೈಜ್ಞಾನಿಕವಾಗಿ, ಒಂದು ವಸ್ತು ಬೇಗ ಕಳಿಯಬೇಕಾದರೆ, ಅದರಲ್ಲಿನ ಸಾರಜನಕ ಹಾಗೂ ಇಂಗಾಲದ ಅನುಪಾತ 1:30ರ ಆಸುಪಾಸಿನಲ್ಲಿ ಇರಬೇಕು. ಆದರೆ ಅಡಿಕೆ ಸಿಪ್ಪೆಯಲ್ಲಿ ಈ ಅನುಪಾತವು 1:80ರ ಆಸುಪಾಸಿನಲ್ಲಿದೆ. ಅಂದರೆ, ಇಂಗಾಲದ ಪ್ರಮಾಣವು ಸಾರಜನಜಕದ ಪ್ರಮಾಣಕ್ಕಿಂತ ಅಧಿಕವಾಗಿರುವುದರಿಂದ ಕಳಿಯುವಿಕೆ ನಿಧಾನ.

ಈ ರೀತಿ ಅಡಿಕೆ ಸಿಪ್ಪೆ ಕಳಿಸುವಿಕೆಯಲ್ಲಿರುವ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿರುವ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಬರೀ ಆರು ತಿಂಗಳಲ್ಲಿ ಅಡಿಕೆ ಸಿಪ್ಪೆಯನ್ನು ಗೊಬ್ಬರವಾಗಿ ಪರಿವರ್ತಿಸುವ ಪದ್ಧತಿಯನ್ನು ಅಬಿವೃದ್ಧಿಪಡಿಸಿದ್ದಾರೆ. ಈ ಪದ್ಧತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕಾದರೆ, ಪ್ರತಿ ಜಿಲ್ಲೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ. ಈ ರೀತಿ ವೈಜ್ಞಾನಿಕವಾಗಿ ತಯಾರಿಸಿದ ಅಡಿಕೆ ಸಿಪ್ಪೆಯ ಕಾಂಪೋಸ್ಟ್‌ನಲ್ಲಿ ಸಾರಜನಕ, ಪೊಟ್ಯಾಷ್, ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಅಂಶವು ಇನ್ನುಳಿದ ಕಾಂಪೋಸ್ಟ್‌ಗಳಿಗೆ ಹೋಲಿಸಿದರೆ ಅಧಿಕವಾಗಿರುವುದರಿಂದ, ಅಡಿಕೆ ಬೆಳೆಗೆ ಅಡಿಕೆ ಸಿಪ್ಪೆ ಕಾಂಪೋಸ್ಟ್‌ ಉತ್ತಮ ಸಾವಯವ ಗೊಬ್ಬರ ಆಗಬಲ್ಲದು.

ರೈತರು ಇತ್ತೀಚಿನ ದಿನಗಳಲ್ಲಿ ಪಶುಸಂಗೋಪನೆಯನ್ನು ಕಡೆಗಣಿಸಿದ್ದು, ಕೃಷಿಗೆ ಅಗತ್ಯವಾದ ಗುಣಮಟ್ಟದ ಸಾವಯವ ಗೊಬ್ಬರ ಸಿಗುವುದು ದುರ್ಲಭವಾಗುತ್ತಿದೆ. ಹೀಗಾಗಿ, ಇಂತಹ ಕೃಷಿ ತ್ಯಾಜ್ಯಗಳನ್ನು ಉಪಯುಕ್ತ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ. ಅಡಿಕೆ ಸಿಪ್ಪೆ ಮಾತ್ರವಲ್ಲ ಯಾವುದೇ ಬೆಳೆಯ ತ್ಯಾಜ್ಯವನ್ನು ವ್ಯರ್ಥ ಮಾಡದೆ, ತಮ್ಮ ಹೊಲದಲ್ಲಿಯೇ ಕಳಿಯುವಂತೆ ಮಾಡಿ ಹೊಲದ ಮಣ್ಣಿನಲ್ಲಿ ಬಹಳಷ್ಟು ಸಾವಯವ ವಸ್ತುಗಳು ಇರುವಂತೆ ನೋಡಿಕೊಂಡರೆ ಮಾತ್ರ ಮಣ್ಣಿನ ಆರೋಗ್ಯ ಸುಧಾರಿಸಿ ಕೃಷಿಯಲ್ಲಿ ಹೆಚ್ಚು ಸುಸ್ಥಿರತೆ ಸಾಧಿಸಲು ಸಾಧ್ಯ. ಹೀಗಾಗಿ, ರೈತರು ಅಡಿಕೆ ಸಿಪ್ಪೆ ಸೇರಿದಂತೆ ಯಾವುದೇ ಕೃಷಿ ತ್ಯಾಜ್ಯವನ್ನು ಸುಡದೆ, ವ್ಯರ್ಥ ಮಾಡದೆ ತಮ್ಮ ಹೊಲದ ಮಣ್ಣಿನ ಆರೋಗ್ಯ ವೃದ್ಧಿಸಲು ಬಳಸಬೇಕಾಗಿದೆ.

ಲೇಖಕ: ಕೃಷಿ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT