ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತಕೃಷಿ: ದಕ್ಕದೇ ಹೋದೀತು ಖುಷಿ

ಭತ್ತದ ಕೃಷಿಯಲ್ಲಿ ರೈತನಿಗೆ ಮೊದಲಿನ ಆಸಕ್ತಿ, ಆಕರ್ಷಣೆ ಉಳಿದಿಲ್ಲ
Last Updated 13 ಆಗಸ್ಟ್ 2021, 19:31 IST
ಅಕ್ಷರ ಗಾತ್ರ

ಇದು ನಾಟಿಯ ಸಮಯ. ಮಲೆನಾಡು- ಕರಾವಳಿ ಭಾಗದ ಗದ್ದೆಬಯಲುಗಳಿಗೆಲ್ಲ ಹಸಿರು ಹೊದೆಯುವ ತವಕ- ಪುಳಕ. ಹಳ್ಳಿಗಳನ್ನು ಹಬ್ಬದಂತಹ ಸಂಭ್ರಮ ದಲ್ಲಿ ಮೈಮರೆಸುತ್ತಿದ್ದ ಗದ್ದೆನಾಟಿ, ಕೊಯ್ಲುಗಳು ಇದೀಗ ವಿರಳ ದೃಶ್ಯಾವಳಿಗಳು. ಕೆಸರುಗದ್ದೆಯಲ್ಲಿ ಜೋಡೆತ್ತು- ಕೋಣಗಳ ಹಿಂದೆ ನೇಗಿಲೂರುವ ಕಂಬಳಿಕೊಪ್ಪೆಯ ಕೊರಳ ಸೈರನ್ನು, ದರಲೆಯ ಗೊರಬುಗಳಡಿ ಸಸಿ ಕೀಳುವ, ನಾಟಿ ಮಾಡುವ ಹೆಂಗಳೆಯರ ಹಾಡು, ಬಿಚ್ಚಿಕೊಳ್ಳುವ ಮನೆಮನೆ ಕಥೆ, ದುಡಿತದ ದಣಿವಳಿಸುವ ಕೀಟಲೆ-ಕಚಗುಳಿಗಳೆಲ್ಲಾ ಮನೋಭಿತ್ತಿಯಲ್ಲಿ ಮಸುಕಾಗಿ ಹಾದುಹೋಗುತ್ತವೆ.

ಭಾರತದಲ್ಲಿ ಕಾಲಾಂತರದಿಂದ ಭತ್ತದ ಕೃಷಿಯು ಎರಚು ಬಿತ್ತನೆ, ಕೂರಿಗೆ ಬಿತ್ತನೆ ಮತ್ತು ನಾಟಿ ಪದ್ಧತಿಗಳಲ್ಲಿ ಸಾಗಿ ಬಂದಿದ್ದು, ಸ್ವತಂತ್ರಪೂರ್ವದಲ್ಲಿ ದೇಶದಾದ್ಯಂತ ಸುಮಾರು 80,000 ದೇಸಿ ತಳಿಗಳಿದ್ದ ಮಾಹಿತಿಯಿದೆ. ಅರವತ್ತರ ದಶಕದಲ್ಲಿನ ಹಸಿರುಕ್ರಾಂತಿಯ ಆಧುನಿಕ ಕೃಷಿಪ್ರಯೋಗದಲ್ಲಿ ನಮ್ಮ ಹೊಲಗದ್ದೆಗಳಿಗೆ ಅಸಂಖ್ಯ ಅಪರಿಚಿತ ಹೈಬ್ರಿಡ್ ಮತ್ತು ವಿದೇಶಿ ತಳಿಗಳು ದಾಳಿಯಿಟ್ಟವು. ಬರುಬರುತ್ತಾ ಬೀಜ, ಗೊಬ್ಬರ ಮತ್ತು ಮಾರುಕಟ್ಟೆಯ ಸ್ವಾತಂತ್ರ್ಯವನ್ನು ಕಳಕೊಂಡ ರೈತ ಅತಂತ್ರನಾದ.

ರಾಜ್ಯದ ಹಲವು ಸಂಘಟನೆಗಳು ಸಮು ದಾಯದ ಸಹಕಾರದಿಂದ ಭತ್ತದ ನೂರಾರು ದೇಸಿ ತಳಿಗಳನ್ನು ಸಂರಕ್ಷಿಸುತ್ತಿವೆ. ಭತ್ತದ ಉತ್ಪಾದನೆಯಲ್ಲಿ ಜಾಗತಿಕವಾಗಿ ಅಗ್ರಸ್ಥಾನದಲ್ಲಿದ್ದ ಭಾರತವೀಗ ಚೀನಾ ನಂತರದ ಸ್ಥಾನಕ್ಕಿಳಿದಿದ್ದು ರಫ್ತಿನಲ್ಲೂ ನಾಲ್ಕನೇ ಸ್ಥಾನಕ್ಕೆ ಜಾರಿದೆ. ಆದರೆ ಏಕದಳ ಧಾನ್ಯಗಳಲ್ಲಿ ಮೊದಲ ಸ್ಥಾನ ಭಾರತದಲ್ಲಿ ಈಗಲೂ ಭತ್ತದ್ದೇ.

ಹಾಗಿದ್ದೂ ಭತ್ತದ ಕಣಜವಾಗಿದ್ದ ಪ್ರಮುಖ ರಾಜ್ಯಗಳಾದ ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಬಿಹಾರ, ಒಡಿಶಾ, ಅಸ್ಸಾಮಿನ ಜಲಾನಯನ ಪ್ರದೇಶಗಳಲ್ಲಿ ಭತ್ತಕೃಷಿ ಚಟುವಟಿಕೆಗಳು ಕ್ಷೀಣಿಸಿವೆ. ದಕ್ಷಿಣದ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕದಲ್ಲಿಯೂ ಭತ್ತದ ಭೂಮಿ ಶೀಘ್ರಗತಿಯಲ್ಲಿ ಅಡಿಕೆ ತೋಟವಾಗಿ ಬದಲಾಗುತ್ತಿದೆ. ಕೆಲವೆಡೆ ಪಾಳುಬಿದ್ದಿದೆ ಮತ್ತೆ ಕೆಲವೆಡೆ ಕೃಷಿಯೇತರ ಚಟುವಟಿಕೆಗೆ ಬಳಕೆಯಾಗುತ್ತಿದೆ.

ಹವಾಮಾನ ವೈಪರೀತ್ಯ, ಕೂಲಿಕಾರ್ಮಿಕರ ಅಭಾವ, ರಾಸಾಯನಿಕಗಳ ಅತಿಯಾದ ಬಳಕೆಯಿಂದ ನಿಸ್ಸಾರಗೊಂಡ ಭೂಮಿ, ಏರಿದ ರಸಗೊಬ್ಬರ–ಬೀಜಧಾರಣೆ, ಬೆಳೆಗೆ ದಕ್ಕದ ಯೋಗ್ಯ ಬೆಲೆ, ಸಿಗದ ಬೆಂಬಲಬೆಲೆಯಂತಹ ಸಂಕಷ್ಟಗಳ ಸರಮಾಲೆಯಲ್ಲಿ ಹೈರಾಣಾಗಿ ಲಕ್ಷಾಂತರ ಯುವಕರು ನಗರದೆಡೆಗೆ ವಲಸೆ ಹೊರಟಿದ್ದಾರೆ. ಇದರ ಪರಿಣಾಮವಾಗಿ ನೇಗಿಲು ನೊಗವೆಲ್ಲಾ ಅಟ್ಟ ಹತ್ತಿವೆ. ಹಾಗಾಗಿ ರೈತನಿಗೆ ಆರ್ಥಿಕವಾಗಿ ಲಾಭದಾಯಕವಲ್ಲದ ಮತ್ತು ಅಧಿಕ ಮಾನವಶ್ರಮವನ್ನು ಬೇಡುವ ಭತ್ತದ ಕೃಷಿಯಲ್ಲಿ ಮೊದಲಿನ ಆಸಕ್ತಿಯಾಗಲೀ ಆಕರ್ಷಣೆಯಾಗಲೀ ಉಳಿದಿಲ್ಲವೆಂಬುದು ವಾಸ್ತವ. ತೊಂಬತ್ತರ ದಶಕದಲ್ಲಿ ನಮ್ಮ ಜಿಡಿಪಿಯ ಶೇ 25ರಷ್ಟು ಪಾಲು ಪಡೆದಿದ್ದ ಕೃಷಿಕ್ಷೇತ್ರದ ಈಗಿನ ಪಾಲು ಕೇವಲ 14ರಷ್ಟು!

ಭತ್ತಕೃಷಿಯ ಪ್ರಮುಖ ನೆಲೆಯಾಗಿದ್ದ ಕರಾವಳಿ- ಮಲೆನಾಡಿನಲ್ಲಿ ದೊಡ್ಡದೊಡ್ಡ ಜಮೀನ್ದಾರರು ಕಾಡುಗುಡ್ಡಗಳಿಗೇ ಬೇಲಿ ಹಾಕಿ ತಮ್ಮ ಅಡಿಕೆ ತೋಟಗಳನ್ನು ವಿಸ್ತರಿಸಿಕೊಳ್ಳುತ್ತಿದ್ದರೆ, ಸಣ್ಣಪುಟ್ಟ ಸಾಗುವಳಿದಾರರಿಗೆ ಕಣ್ಣುಕಟ್ಟಿ ಬಿಟ್ಟಂತಹ ಪರಿಸ್ಥಿತಿ. ವರಾಹಿ-ಚಕ್ರಾ, ಶರಾವತಿ, ತುಂಗಾ ಮತ್ತು ಭದ್ರಾ ನದಿ ಯೋಜನೆಗಳಲ್ಲಿ ನಿರಾಶ್ರಿತರಾದವರು ಹೆಚ್ಚಾಗಿ ಅರಣ್ಯಪ್ರದೇಶ ಮತ್ತು ಪಶ್ಚಿಮಘಟ್ಟದ ತಪ್ಪಲಲ್ಲಿ ತುಂಡುಭೂಮಿಯಲ್ಲಿ ಭತ್ತದ ಸಾಗುವಳಿಯಲ್ಲಿ ತೊಡಗಿಸಿಕೊಂಡವರು. ಅವರದ್ದು ಕೃಷಿಯೊಟ್ಟಿಗೆ ಆತುಕೊಂಡ ಅನನ್ಯ ಅನುಬಂಧ.ಪೈರು-ಫಸಲನ್ನು ಕಾಡುಪ್ರಾಣಿಗಳ ಹಾವಳಿಯಿಂದ ಹರಸಾಹಸ ಮಾಡಿ ಕಾಪಾಡಿಕೊಳ್ಳುತ್ತಲೇ ಸುಗ್ಗಿಯ ಸಂಭ್ರಮದಲ್ಲಿ ದುಡಿತದ ದಣಿವು ಮರೆತವರು. ಬದಲಾದ ಕಾಲಘಟ್ಟದಲ್ಲಿ ಭತ್ತದ ಗದ್ದೆಯೊಂದಿಗೆ ಬೆಸೆದುಕೊಂಡ ಹಬ್ಬಾಚರಣೆಗಳೂ ಅವಸಾನದ ಹಾದಿ ಹಿಡಿದಿವೆ.

ಕೃಷಿಕೇಂದ್ರ ಮತ್ತು ಸಮುದಾಯದ ಜಂಟಿ ಅಧ್ಯಯನ ವರದಿಯೊಂದರ ಪ್ರಕಾರ, ಇಲ್ಲಿಯ ರೈತರಿಗೆ ಭತ್ತ ಬೆಳೆಯಲು ಎಕರೆಗೆ ತಗಲುವ ವಾರ್ಷಿಕ ವೆಚ್ಚಕ್ಕಿಂತಲೂ ಬೆಳೆಯ ಆದಾಯ ಕಡಿಮೆ! ಅಕೇಶಿಯ, ನೀಲಗಿರಿಯಂಥ ಏಕಜಾತಿಸಸ್ಯ ನೆಡುತೋಪುಗಳ ಹೆಚ್ಚಳದಲ್ಲಿ ಮಲೆನಾಡು ಈಗಾಗಲೇ ತನ್ನ ಜೀವವೈವಿಧ್ಯವನ್ನು ಕಳೆದುಕೊಂಡಿದೆ. ಶುಂಠಿಯಂತಹ ವಾಣಿಜ್ಯ ಬೆಳೆಯ ಹಾವಳಿಯು ಎಕರೆಗಟ್ಟಲೆ ಕಾಡನ್ನು ರಾತ್ರೋರಾತ್ರಿ ಕರಗಿಸಿ ನೆಲಕ್ಕೆ ವಿಷವಿಕ್ಕಿಯಾಗಿದೆ. ಕೊರೊನಾದಂತಹ ಅನಿಶ್ಚಿತ ಕಾಲದಲ್ಲಿಯೂ ಅಡಿಕೆಯ ಬೆಲೆ ಮುಕ್ಕಾಗಿಲ್ಲ. ಹಾಗಾಗಿಯೇ ಇಲ್ಲಿನ ಭೂಹೀನರು ಕೂಡ ಅಷ್ಟಿಷ್ಟು ಒತ್ತುವರಿ ಮಾಡಿ ಅಡಿಕೆ ಸಸಿಗಳನ್ನು ಊರಲೇಬೇಕಾದ ಅನಿವಾರ್ಯದಲ್ಲಿದ್ದಾರೆ. ಕೆರೆಕಟ್ಟೆ, ಗೋಮಾಳ, ಗದ್ದೆಬಯಲು, ಸಾಗುವಳಿ ಭೂಮಿಗಳು ಮಾಯವಾಗಿ, ಲೇಔಟ್‍ಗಳಾಗಿ ಬದಲಾಗುತ್ತಿರುವ ವಿರಾಟಸ್ವರೂಪವು ಹೆದ್ದಾರಿಯಂಚಿನ ಮತ್ತು ನಗರ ಪ್ರದೇಶದ ಸುತ್ತೆಲ್ಲಾ ಕಾಣಸಿಗುತ್ತದೆ. ಭತ್ತ ಕ್ರಮೇಣ ಮರೆಗೆ ಸರಿಯುತ್ತಿದೆ.

ಯುವಮನಸುಗಳು ಹಳ್ಳಿಗೆ ಹಿಂದಿರುಗದಿದ್ದರೆ, ಮಣ್ಣಿಗೆ ಮನಸೋತು ಸಹಜ ಕೃಷಿಯೆಡೆಗೆ ಹೊರಳದಿದ್ದರೆ, ಗಾಂಧೀ ಕನಸಿನ ಸಂಯಮ ಆರ್ಥಿಕತೆಯನ್ನು ನಂಬದೇ ಹೋದರೆ ಭತ್ತದ ಕೃಷಿಗೆ ಬಂದೊದಗಿದ ಆತಂಕ ನಿವಾರಣೆಯಾಗದು. ಕಣ್ಣು ಹಾಯಿಸಿದಷ್ಟೂ ಬಯಲ ಆಲಯವನ್ನು ಸಿಂಗರಿಸುವ ಪಚ್ಚೆಪೈರು, ಕಂಗೊಳಿಸುವ ಮಣಿಸರದಂತೆ ಬಾಗಿತೂಗುವ ಕದಿರು, ಮುತ್ತಿಕ್ಕಿ ನಲಿದಾಡುವ ಭೃಂಗ ಶೃಂಗಾರವೆಲ್ಲವೂ ಮುಂದಿನ ಪೀಳಿಗೆಗೆ ದಕ್ಕದೇ ಹೋದಾವು. ಅನ್ನಕ್ಕಾಗಿ ಅನ್ಯದೇಶಗಳತ್ತ ಕೈಚಾಚಬೇಕಾದ ಪರಿಸ್ಥಿತಿಯೂ ಬಂದೆರಗೀತು ಎಂಬುದು ಸದ್ಯದ ಆತಂಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT