ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ವಿವಾದ ಮೀರಿ ನಿಂತ ವ್ಯಕ್ತಿತ್ವ

ನಾನಾ ವಿವಾದಗಳ ನಡುವೆಯೂ ಮರಡೋನಾ ಜನಪ್ರಿಯತೆ ಕುಗ್ಗಲಿಲ್ಲವೇಕೆ?
Last Updated 20 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಇತ್ತೀಚೆಗೆ ಇಹಲೋಕದ ಪ್ರಯಾಣ ಮುಗಿಸಿದ ಫುಟ್‌ಬಾಲ್ ಮಾಂತ್ರಿಕ, ಅರ್ಜೆಂಟೀನಾದ ಡಿಯೆಗೊ ಮರಡೋನಾ ಬಿಟ್ಟುಹೋದ ಹಲವಾರು ಹೆಜ್ಜೆ ಗುರುತುಗಳಲ್ಲಿ ಜನರ ಸ್ಮೃತಿಪಟಲದಲ್ಲಿ ಅಚ್ಚಳಿಯದೇ ಉಳಿಯುವುದು ಅವರ ಫುಟ್‌ಬಾಲ್ ಪ್ರತಿಭೆಯೋ ಎಣೆಯಿಲ್ಲದ ವಿವಾದಗಳೋ ಅಥವಾ ಅವರೊಳಗಿದ್ದ ಕ್ರಾಂತಿಕಾರಿಯೋ? ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿ, ‘ಶತಮಾನದ ಗೋಲು’ ಎಂದು ಪರಿಗಣಿತವಾದ ಗೋಲು ಹೊಡೆದು ತಮ್ಮ ನಾಡಿಗೆ ವಿಶ್ವಕಪ್ ತಂದುಕೊಟ್ಟು, ನಂತರ ತಮ್ಮ ಜೀವಿತಾವಧಿಯನ್ನು ಬಹಳ ಅಪರೂಪದ ರೀತಿಯಲ್ಲಿ ಮತ್ತು ಅರ್ಥಪೂರ್ಣವಾಗಿ ಕಳೆದ ಮರಡೋನಾ ಎಂದಿಗೂ ಮರೆಯಲಾಗದ ಒಬ್ಬ ‘ಆಟಗಾರ’ನಷ್ಟೇ ಅಲ್ಲದೆ ಒಬ್ಬ ‘ವ್ಯಕ್ತಿ’ ಎಂದು ಹೇಳುವುದು ಸೂಕ್ತ.

ಮರಡೋನಾ ತೋರುತ್ತಿದ್ದ ಕೌಶಲಭರಿತ ಆಟ ಅವರನ್ನು ಫುಟ್‌ಬಾಲ್ ಪ್ರೇಮಿಗಳ ಆರಾಧ್ಯದೈವವನ್ನಾಗಿಸಿತ್ತು. ಗಿಡ್ಡನೆಯ ಆಕೃತಿಯ ಮರಡೋನಾ ಇಡೀ ವಿಶ್ವವೇ ಆರಾಧಿಸುವ ಬೃಹತ್‌ ವ್ಯಕ್ತಿಯಾಗಿ ಬೆಳೆದ ಬಗೆ ಮತ್ತು ಚೆಂಡಿನ ಗತಿಯ ಮೇಲೆ ಅಭೂತಪೂರ್ವ ಹಿಡಿತವಿದ್ದ ವ್ಯಕ್ತಿ ತಮ್ಮ ಖಾಸಗಿ ಜೀವನದ ಆಯ್ಕೆಗಳ ಮೇಲೆ ಹಿಡಿತ ತಪ್ಪಿದ್ದು ಜಗತ್ತನ್ನು ಚಕಿತಗೊಳಿಸಿತ್ತು.

ಫುಟ್‌ಬಾಲ್ ಆಟಗಾರನಾಗಿ ಮರಡೋನಾ ಸಾಧನೆಯನ್ನು ಅವರು ತೊಡುತ್ತಿದ್ದ ಜೆರ್ಸಿಯ ಮೇಲಿನ ಸಂಖ್ಯೆಯಾದ 10 ಬಿಂಬಿಸುತ್ತದೆ. ಈಗಿನ ಆಟಗಾರರು ತಮ್ಮ ಜೆರ್ಸಿಯ ಮೇಲೆ ಆ ಸಂಖ್ಯೆ ಸಿಗುವುದು ತಮಗೆ ಸಿಗುವ ಗೌರವ ಎಂದು ಭಾವಿಸುತ್ತಾರೆ. ಆಟಗಾರನಾಗಿದ್ದಾಗ ತಾಯ್ನಾಡಿನ ಅಸ್ಮಿತೆಗೆ ಹೊಸ ಆಯಾಮವನ್ನು ತಂದುಕೊಟ್ಟ ಕೀರ್ತಿ ಒಂದೆಡೆಯಾದರೆ, ಈ ಶತಮಾನದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದು ಮರಡೋನಾ ಅವರ ಮತ್ತೊಂದು ಸಾಧನೆ.

ವೈವಾಹಿಕ ಜೀವನದಲ್ಲಿ ಕೆಲ ಕಾಲ ನೆಮ್ಮದಿಯಿದ್ದರೂ ನಂತರ ವಿಚ್ಛೇದನ, ಕುಡಿತ, ಮಾದಕದ್ರವ್ಯದ ವ್ಯಸನ, ನಿಯಂತ್ರಣಕ್ಕೆ ಸಿಗದ ಬೊಜ್ಜು ಮುಂತಾದವುಗಳಿಂದ ಹಲವಾರು ವಿವಾದಗಳ ಮಧ್ಯೆ ಮುಳುಗಿದ್ದರು ಮರಡೋನಾ. ಆದರೂ ಹೆಚ್ಚು ಸುದ್ದಿ ಮಾಡಿದ್ದು ತಮ್ಮ ರಾಜಕೀಯ ಸಿದ್ಧಾಂತದ ಮೂಲಕ.

ಫುಟ್‌ಬಾಲ್ ಜನಪ್ರಿಯತೆ ಮತ್ತು ಹೇರಳವಾದ ಹಣ ಗಳಿಕೆಯಿಂದ ಮರಡೋನಾ ಸುಖದ ಸುಪ‍್ಪತ್ತಿಗೆಯಲ್ಲಿ ಮುಳುಗಲಿಲ್ಲ. ಅರ್ಜೆಂಟೀನಾದ ರಾಜಕೀಯ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಅರಿವಿದ್ದ ಅವರು ಎಡಪಂಥೀಯರಾಗಿ ಗುರುತಿಸಿಕೊಳ್ಳಲು ಅಂಜಲಿಲ್ಲ. ಕ್ಯೂಬಾದ ಮಹಾನಾಯಕ ಫಿಡೆಲ್ ಕ್ಯಾಸ್ಟ್ರೊ ಅವರ ಸ್ನೇಹ ಸಂಪಾದಿಸಿ, ತಮ್ಮ ಆತ್ಮಚರಿತ್ರೆಯನ್ನು ಅವರಿಗೆ ಸಮರ್ಪಿಸಿದ್ದು ಎಡಪಂಥೀಯ ರಾಜಕಾರಣದ ನೆಲೆಯಲ್ಲಿ ಅತ್ಯಂತ ಗಮನಾರ್ಹ ವಿಷಯ.

ಇಂದಿನ ಎಲ್ಲ ಜನಪ್ರಿಯ ಆಟಗಾರರು ಟ್ಯಾಟೂಗಳ ಮೂಲಕ ಪ್ರಚಲಿತದಲ್ಲಿರುವುದು ಸರ್ವೇಸಾಮಾನ್ಯ. ಮರಡೋನಾ ಕೂಡ ಟ್ಯಾಟೂ ಹಾಕಿಸಿಕೊಂಡಿದ್ದರೂ ಅವು ತಮ್ಮನ್ನು ಅತ್ಯಾಧುನಿಕ ಸಂಸ್ಕೃತಿಯ ವಕ್ತಾರನಂತೆ ಬಿಂಬಿಸಬೇಕೆಂಬ ಅಭಿಲಾಷೆ ಅವರಿಗಿರಲಿಲ್ಲ. ತಾವು ನಂಬಿದ್ದ ರಾಜಕೀಯ ಸಿದ್ಧಾಂತದ ಹರಿಕಾರರ ಭಾವಚಿತ್ರಗಳ ಟ್ಯಾಟೂಗಳನ್ನು ಅವರು ಹಾಕಿಸಿಕೊಂಡಿದ್ದರು. ಅವರೆಂದರೆ ಫಿಡೆಲ್ ಕ್ಯಾಸ್ಟ್ರೊ ಮತ್ತು ಅರ್ಜೆಂಟೀನಾದ ಅತ್ಯಂತ ಪ್ರಭಾವಿ ಕ್ರಾಂತಿಕಾರಿ ಅರ್ನೆಸ್ಟೊ ಚೆಗೆವಾರ.

ಮರಡೋನಾಗೆ ತಮ್ಮ ರಾಜಕೀಯ ಸಿದ್ಧಾಂತದ ನಿಲುವಿನಲ್ಲಿ ಎಷ್ಟು ಬದ್ಧತೆ ಇತ್ತು ಎಂದರೆ, ತಮ್ಮ ದೇಶದಲ್ಲಿ ತಾಂಡವವಾಡುತ್ತಿದ್ದ ಬಡತನದ ಕುರಿತು ಪೋಪ್ ಜೊತೆ ಕೂಡ ಜಗಳ ಮಾಡುವ ದಿಟ್ಟತನ ತೋರಿದ್ದರು. ಇಷ್ಟೆಲ್ಲಾ ಚಟುವಟಿಕೆಗಳಲ್ಲಿ ಮುಳುಗಿದ್ದ ಮರಡೋನಾ ಮಾಧ್ಯಮದವರಿಗೆ ಪ್ರತಿದಿನದ ಹಾಟ್ ಟಾಪಿಕ್ ಆಗಿದ್ದರು. ಕುಂಟುತ್ತಿದ್ದ ಆರೋಗ್ಯ ಮತ್ತು ಸಂಪೂರ್ಣವಾಗಿ ದಿವಾಳಿಯಾಗುವ ಎಲ್ಲ ಲಕ್ಷಣಗಳಿದ್ದ ಅವರ ಆರ್ಥಿಕ ಪರಿಸ್ಥಿತಿ ಅವರನ್ನು ಆಗಾಗ್ಗೆ ಆಸ್ಪತ್ರೆ ಮತ್ತು ಕೋರ್ಟ್‌ ಮೆಟ್ಟಿಲುಗಳನ್ನು ಹತ್ತುವಂತೆ ಮಾಡಿದ್ದವು.

ಒಬ್ಬ ಆಟಗಾರ ವ್ಯಸನಗಳಿಗೆ ಬಲಿಯಾಗಿ ತನ್ನ ಆರೋಗ್ಯ ಮತ್ತು ತಿಜೋರಿಯನ್ನು ಸಂಪೂರ್ಣವಾಗಿ ಕಳೆದುಕೊಂಡರೆ, ಕಡೆಯವರೆಗೂ ಜನಮನ್ನಣೆಯನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದ ಅಭಿಮಾನಿಗಳಿಗೆ ಬಹಳ ನಿರಾಸೆ ಮತ್ತು ನೋವುಂಟಾಗಬಹುದು. ನೈತಿಕ ನೆಲೆಯಲ್ಲಿ ನೋಡಿದರೆ ಇಂತಹ ಆಟಗಾರನನ್ನು ಆರಾಧಿಸುವುದು ಸರಿಯೇ ಎಂಬ ಪ್ರಶ್ನೆಯೂ ಕಾಡಬಹುದು.

1994ರ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯ ಸಮಯದಲ್ಲಿ ಡ್ರಗ್ಸ್‌ ಸೇವನೆಯಿಂದಾಗಿ 15 ತಿಂಗಳು ನಿಷೇಧದ ಶಿಕ್ಷೆಗೆ ಒಳಗಾದರೂ ಮರಡೋನಾ ಜನಪ್ರಿಯತೆ ಕುಗ್ಗಲಿಲ್ಲ. ಇದಕ್ಕೆ ಅವರ ಜನಪರ ಚಿಂತನೆ ಮತ್ತು ಚೆಗೆವಾರ ಅವರಂತಹ ಕ್ರಾಂತಿಕಾರಿಯ ಮಾದರಿಯನ್ನು ಅನುಸರಿಸಿದ ನಡೆಗಳು ಕಾರಣವಾಗಿದ್ದವು.

ಈ ವರ್ಷದ ನ. 25 ಫುಟ್‌ಬಾಲ್ ಪ್ರೇಮಿಗಳಿಗೆ ಕರಾಳ ದಿನವಾಗಿತ್ತು. ಇಡೀ ಜಗತ್ತಿಗೆ ತಮ್ಮ ಅದ್ಭುತ ಪ್ರತಿಭೆಯನ್ನು ಉಣಬಡಿಸಿದ್ದ ಮರಡೋನಾ ಇಹಲೋಕಕ್ಕೆ ವಿದಾಯ ಹೇಳಿದರು. ಜೀವಿತಾವಧಿಯಲ್ಲಿ ಹಲವಾರು ವಿವಾದಗಳಲ್ಲಿ ಮುಳುಗಿದ್ದ ಅವರ ಅಂತಿಮ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಜನ ನೆರೆದಿದ್ದರು. ಪ್ರತಿಭೆ, ಅಂತಸ್ತು, ಹಣವೆಲ್ಲ ಕ್ಷಣಿಕ. ಮನುಷ್ಯನೊಬ್ಬ ಆದರಣೀಯ ವ್ಯಕ್ತಿತ್ವವನ್ನುಹೊಂದಿದ್ದರೆ, ಜನರ ಕಣ್ಣಿಗೆ ಅವನ ವ್ಯಸನಗಳು ಕಾಣಿಸದೆ, ವ್ಯಕ್ತಿತ್ವ ಮಾತ್ರ ಕಂಗೊಳಿಸುತ್ತಿರುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT