ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಜಾಗತಿಕ ಹಸಿವು ಸೂಚ್ಯಂಕ– ಕನಸಿನ ಅಪಹರಣಕಾರ ಬಡತನ

ಬದುಕಿನ ಸಿರಿತನದ ಹಣರಹಿತ ಮಗ್ಗುಲು ನಮಗೆ ಕಾಣಬೇಕು
Published 19 ಅಕ್ಟೋಬರ್ 2023, 20:38 IST
Last Updated 19 ಅಕ್ಟೋಬರ್ 2023, 20:38 IST
ಅಕ್ಷರ ಗಾತ್ರ

ಬಡತನವೆಂದರೆ ವ್ಯಕ್ತಿಯು ದುಡಿಮೆಯಿಂದ ತನ್ನ ಮೂಲ ಅಗತ್ಯಗಳನ್ನು ಭರಿಸುವಷ್ಟು ಹಣ ಗಳಿಸಲು ಆಗದೇ ಇರುವುದು. ವಾಸಿಸಲು ತಕ್ಕ ಮನೆ, ಶುದ್ಧ ನೀರು ಮತ್ತು ಆರೋಗ್ಯಯುತ ಆಹಾರ, ಶಿಕ್ಷಣ ಸೌಲಭ್ಯ, ವೈದ್ಯಕೀಯ ಸೌಕರ್ಯ ಇವುಗಳಿಗೆ ಸಂಬಂಧಿಸಿದಂತೆ ಇರುವ ಕೊರತೆಗಳು ಬಡತನದ ಮುಖ್ಯ ಮಜಲುಗಳು. ಶಕ್ತಿಹೀನತೆ ಮತ್ತು ಧ್ವನಿಹೀನತೆಯು ಗರೀಬರನ್ನು ಕಾಡುವ ಗಂಭೀರ ನ್ಯೂನತೆಗಳು. ಶಪಿಸಬೇಕಾದದ್ದು ಬಡತನವನ್ನಲ್ಲ, ಕೊರತೆಯನ್ನು.

ಬಡತನ ಸ್ವಾಭಾವಿಕವಲ್ಲ, ಮನುಷ್ಯಕೃತ ಎಂದರು ನೆಲ್ಸನ್ ಮಂಡೇಲಾ. ಜನಸಂಖ್ಯೆಯ ಏರಿಕೆಯು ದೇಶದ ಸಂಪನ್ಮೂಲಗಳು ಮತ್ತು ಆಯವ್ಯಯದ ಮೇಲೆ ಒತ್ತಡ ಹೇರುತ್ತದೆ. ಬಡತನವನ್ನು ಕ್ರಾಂತಿ ಮತ್ತು ಅಪರಾಧದ ಜನಕ ಎಂದು ಅರಿಸ್ಟಾಟಲ್ ವಿಶ್ಲೇಷಿಸಿದರು. ಹವಾಮಾನ ಬದಲಾವಣೆಯಿಂದ ಮುಂದಿನ ದಶಕದಲ್ಲಿ 10 ಕೋಟಿಗೂ ಅಧಿಕ ಜನ ಕಡುಬಡತನಕ್ಕೆ ಗುರಿಯಾಗುವ ಆತಂಕವಿದೆ. ಏತನ್ಮಧ್ಯೆ, ಶೇಕಡ ಶೂನ್ಯದಷ್ಟು ಬಡತನದ ದೇಶ ಐಸ್‍ಲ್ಯಾಂಡ್ ಎಂದು ವಿಶ್ವಬ್ಯಾಂಕ್ ಸಾರಿದೆ!

ಬಡತನಕ್ಕೆ ಒಂದು ನಿರ್ದಿಷ್ಟ ವ್ಯಾಖ್ಯಾನವಿಲ್ಲ. ಒಬ್ಬ ವ್ಯಕ್ತಿ ತನ್ನ ಅಪೇಕ್ಷೆಯಂತೆ ಏನನ್ನೂ ಮಾಡಲಾಗದ ಸ್ಥಿತಿಯೇ ಬಡತನ ಎನ್ನಬಹುದು. ಬಡತನವು ವ್ಯಕ್ತಿಗತ ಸಾಮಾಜಿಕ ಜೀವನವನ್ನೇ ಕಸಿಯುವಷ್ಟು ಘೋರ. 1992ರಲ್ಲಿ ವಿಶ್ವಸಂಸ್ಥೆಯು ಅಕ್ಟೋಬರ್ 17ನೇ ತೇದಿಯನ್ನು ‘ಅಂತರರಾಷ್ಟ್ರೀಯ ಬಡತನ ನಿರ್ಮೂಲನ ದಿನ’ ಎಂದು ಘೋಷಿಸಿದ್ದು ಬಹು ಮಹತ್ವದ್ದಾಗಿದೆ. ವರಮಾನ ಹಾಗೂ ಉತ್ಪಾದಕ ಸಂಪನ್ಮೂಲಗಳಿಗೂ ಹೆಚ್ಚಾಗಿ ಸುಸ್ಥಿರ ಜೀವನೋ ಪಾಯವನ್ನು ಪರಿಗಣಿಸಬೇಕಿದೆ. ಎಲ್ಲರ ಕಿಸೆ ತುಂಬಿಸುವುದರಿಂದ ಬಡತನ ನಿವಾರಣೆಯಾಗದು. ಅನ್ಯೋನ್ಯ ಸಂಬಂಧ, ಕುಟುಂಬ, ಗೆಳೆತನ, ಪರಸ್ಪರ ಪ್ರೀತಿ, ವಿಶ್ವಾಸವು ಐಹಿಕ ಸವಲತ್ತುಗಳಿಗಿಂತಲೂ ನಮ್ಮನ್ನು ಶ್ರೀಮಂತರನ್ನಾಗಿಸುತ್ತವೆ. ದುಡ್ಡು ತೆತ್ತು ಖರೀದಿಸಿಯೇ ಉಳ್ಳವರಾಗಬೇಕಿಲ್ಲ. ಬದುಕಿನ ಸಿರಿತನದ ಹಣರಹಿತ ಮಗ್ಗುಲು ನಮಗೆ ಕಾಣಬೇಕು.

ನಿರ್ಗತಿ ಒಂದು ಮನಃಸ್ಥಿತಿ. ಕನ್ನಡದ ರತ್ನ ಜಿ.ಪಿ.ರಾಜರತ್ನಂ ಅವರ ‘ರತ್ನನ ಪದಗಳು’ ಕೃತಿಯಲ್ಲಿ ಬರುವ ‘ಇಳ್ಕೊಳ್ಳೋಕೊಂದೂರು ತಲೆಮ್ಯಾಗೆ ಒಂದ್‌ ಸೂರು...’ ಸರಳತೆಯಲ್ಲಿ ಹುದುಗಿರುವ ಸಮೃದ್ಧಿಯನ್ನು ಪ್ರಚುರಪಡಿಸುತ್ತದೆ. ಬಡತನದಿಂದ ಹೊರಬರಲು ಶಿಕ್ಷಣವೇ ಬ್ರಹ್ಮಾಸ್ತ್ರ. ಬಡತನವೆಂದರೆ ಹಣದ ಅಭಾವವಲ್ಲ, ಜ್ಞಾನ, ಕೌಶಲದ ಅಭಾವ.

ದೊಡ್ಡ ನೌಕರಿ, ಅಂತಸ್ತು, ಅಧಿಕಾರವೇ ಸಿರಿವಂತರನ್ನಾಗಿಸುವ ಸಂಗತಿಗಳಾಗಬೇಕಿಲ್ಲ. ಸಂಕಲ್ಪಿಸಿದರೆ ವಿದ್ಯುತ್ ಪರಿಕರ ದುರಸ್ತಿಯವ, ಬಡಗಿ, ಪ್ಲಂಬರ್, ವಾಹನ ಮೆಕ್ಯಾನಿಕ್, ಪೇಂಟರ್, ಕಟ್ಟಡ ಕಾರ್ಮಿಕ
ರಂತಹವರಿಂದ ಕಲಿತು ಉಳ್ಳವರಾಗುವ ಅವಕಾಶಗಳು ಇಲ್ಲವೇ? ಅಂದಹಾಗೆ ಶಿಕ್ಷಣವು ಕೈತುಂಬ ಸಂಬಳದ ಉದ್ಯೋಗಕ್ಕಲ್ಲ, ಉತ್ತಮ ಬದುಕಿಗೆ. ಬ್ರಿಟನ್ನಿನ
ಪ್ರಧಾನಿಯಾಗಿದ್ದ ಮಾರ್ಗರೆಟ್ ಥ್ಯಾಚರ್ ‘ಬಡತನ ಎನ್ನುವುದೇ ಹುಸಿ. ಅದು ವ್ಯಕ್ತಿತ್ವದ ಲೋಪ’
ಎನ್ನುತ್ತಿದ್ದರು.

ಬಡತನ ಇಲ್ಲದಿರುವುದು ಸವಲತ್ತಲ್ಲ, ಅದೊಂದು ಹಕ್ಕು. ಅಪೌಷ್ಟಿಕತೆ, ಅನಾರೋಗ್ಯ, ನೈಸರ್ಗಿಕ ಪ್ರಕೋಪ, ಲಿಂಗತ್ವ ಭೇದ, ನಿರಕ್ಷರತೆ, ಅಂಗವೈಕಲ್ಯ... ಇವು ಬಡತನವನ್ನು ಪೋಷಿಸುವ ನ್ಯೂನತೆಗಳು. 2012ರಲ್ಲಿ ‘ಟೆಕ್ನೊಸರ್ವ್’ ಇತರೆ ಮೊಬೈಲ್ ಸೇವಾ ಸಂಸ್ಥೆಗಳೊಂದಿಗೆ ಜೊತೆಯಾಗಿ ಜಾಗತಿಕವಾಗಿ ‘ಕನೆಕ್ಟೆಡ್ ಫಾರ್ಮರ್‌ ಅಲಯನ್ಸ್’ (ಸಿಎಫ್‌ಸಿ) ಅಂತರ ರಾಷ್ಟ್ರೀಯ ಜಾಲ ಪ್ರಾರಂಭಿಸಿತು. ಲಕ್ಷಾಂತರ ಸಣ್ಣ ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ತಂತ್ರಜ್ಞಾನವು ಬಡತನ ನಿವಾರಣೆಗೆ ನೀಡಿರುವ ಕೊಡುಗೆ ದೊಡ್ಡದು. ಕೃಷಿ ಮಾರ್ಗದರ್ಶನ, ಬೆಳೆ ಇಳುವರಿಯ ಗುಣಮಟ್ಟ, ಬೆಲೆ, ಮಾರುಕಟ್ಟೆ ಕುರಿತ ಮಾಹಿತಿ ವಿನಿಮಯವು ಮಿಂಚಿನ ವೇಗದಲ್ಲಿ ಸಾಧ್ಯವಾಗಿದೆ. ದೂರದ ಊರಿನಲ್ಲಿದ್ದರೂ ಮೊಬೈಲ್ ಒತ್ತಿ ತಮ್ಮ ಹೊಲಕ್ಕೆ ನೀರು ಹಾಯಿಸಬಹುದು. ರೈತರಿಗೆ ನಗದುರಹಿತ ವಹಿವಾಟಂತೂ ವರಸದೃಶವಾಗಿದೆ. ರೈತರು ತಮ್ಮ ಜಾನುವಾರುಗಳ ಆರೋಗ್ಯಕ್ಕೆ ಕುಳಿತಲ್ಲೇ ಅಗತ್ಯ ಸಲಹೆ ಪಡೆಯಬಲ್ಲರು. ಆಫ್ರಿಕಾದ ದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಸೊಮಾಲಿಯಾದಲ್ಲಿ ನಾಗರಿಕ ಯುದ್ಧವೇ ನಿರ್ಗತಿಕತನಕ್ಕೆ ಕಾರಣವಾಯಿತು.

ಆಯವ್ಯಯದ ಪಟ್ಟಿಯಲ್ಲಿ ಜನಕಲ್ಯಾಣ ಇರಬೇಕೇ ವಿನಾ ಸಮರವಲ್ಲ! ಮಹಾತ್ಮ ಗಾಂಧಿ ‘ಬಡತನವು ಹಿಂಸೆಯ ಅತ್ಯುಗ್ರ ರೂಪ’ ಎಂದರು. ಬಡತನಜನ್ಯ ನಿತ್ರಾಣವು ಕಸುಬನ್ನೂ ಮಾಡಗೊಡದು. ವಿಶ್ವಸಂಸ್ಥೆಗೆ 2030ರ ವೇಳೆಗೆ ಜಗತ್ತಿನ ಸರ್ವರನ್ನೂ ಬಡತನದ ಎಲ್ಲ ರೂಪಗಳಿಂದಲೂ ಮುಕ್ತಗೊಳಿಸುವ ಪ್ರಮುಖ ಗುರಿಯಿದೆ. ಹಾಗೆಯೇ ಜಗತ್ತಿನ ಎಲ್ಲ ಪ್ರಜೆಗಳಿಗೂ ಬಡತನ ನಿರ್ಮೂಲನದ ಬಗ್ಗೆ ಬದ್ಧತೆ ಇರಬೇಕು. ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣಕ್ಕೆ ಒತ್ತು, ಬಾಲ್ಯ ವಿವಾಹಕ್ಕೆ ತಡೆ, ಸಂಪನ್ಮೂಲಗಳ ಹಿತಮಿತ ಬಳಕೆ ಜೊತೆಗೆ ಇವೆಲ್ಲಕ್ಕಿಂತಲೂ ಮುಖ್ಯವಾಗಿ ಸರಳ ಜೀವನವು ಬಡತನವನ್ನು ಸಂಹರಿಸುವ ದಿವ್ಯಾಸ್ತ್ರ.

ಭಾರತದಲ್ಲಿ ಕನಿಷ್ಠ 10 ಕೋಟಿ ಮಂದಿ ಪ್ರತಿದಿನ ಉಪವಾಸ ಮಲಗುತ್ತಾರೆ. ಹಾಗಾಗಿ, ಶ್ರಮವಹಿಸಿ ಬೆಳೆದ ಆಹಾರಪದಾರ್ಥ ಯಾವುದೇ ಕಾರಣಕ್ಕೆ ಪೋಲಾಗದಂತೆ ನಿಗಾ ವಹಿಸಬೇಕು. ಮಾನವನ ಇತಿಹಾಸದಲ್ಲೇ ಸಮರಗಳಿಂದ ಗೆದ್ದು ಸುಖ, ಶಾಂತಿ ಗಿಟ್ಟಿಸಿಕೊಂಡ ನಿದರ್ಶನವಿಲ್ಲ. ಭಾಗಿಯಾದ ದೇಶಗಳಿಗೆಲ್ಲ ಸಂಕಷ್ಟಗಳೇ. ಹಾಗಾಗಿ, ಆಗಬೇಕಾದ ಸಮರವು ಮನುಷ್ಯ ಮನುಷ್ಯರ ನಡುವೆಯಲ್ಲ, ಮನುಷ್ಯ ಮತ್ತು ಬಡತನದ ನಡುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT