ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಫ್‌: ಹಣಕಾಸು ಸಚಿವಾಲಯ ವಿರೋಧಿಸಿಲ್ಲ

Last Updated 15 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ (ಇಪಿಎಫ್‌ಒ) ಚಂದಾದಾರರಿಗೆ 2017–18ನೆ ಹಣಕಾಸು ವರ್ಷಕ್ಕೆ ಶೇ 8.55ರಷ್ಟು ಬಡ್ಡಿ ನೀಡುವುದಕ್ಕೆ ಹಣಕಾಸು ಸಚಿವಾಲಯ ವಿರೋಧ ವ್ಯಕ್ತಪಡಿಸಿಲ್ಲ’ ಎಂದು ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ಹೇಳಿದ್ದಾರೆ.

‘ಮೇ ಅಥವಾ ಜೂನ್‌ ತಿಂಗಳಲ್ಲಿ ಈ ಪ್ರಸ್ತಾವಕ್ಕೆ ಒಪ್ಪಿಗೆ ಸಿಗಬಹುದು. ಒಂದು ವೇಳೆ ಈ ನಿರ್ಧಾರಕ್ಕೆ ಹಣಕಾಸು ಸಚಿವಾಲಯದ ಒಪ್ಪಿಗೆ ಇರದಿದ್ದರೆ ಈಗಾಗಲೇ ಅದನ್ನು ನಮ್ಮ ಗಮನಕ್ಕೆ ತರಬೇಕಾಗಿತ್ತು’ ಎಂದರು. ಹಣಕಾಸು ಸಚಿವಾಲಯವು ಈ ಬಡ್ಡಿ ದರ ಅನುಮೋದಿಸಲು ಒಲವು ಹೊಂದಿಲ್ಲ ಎಂದು ಕೇಳಿ ಬರುತ್ತಿರುವುದಕ್ಕೆ ಗಂಗ್ವಾರ್‌ ಈ ವಿವರಣೆ ನೀಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಶೇ 8.55ರಷ್ಟು ಬಡ್ಡಿ ದರವು ಕಡಿಮೆ ಮಟ್ಟದ್ದಾಗಿದೆ. ಈ ಬಡ್ಡಿ ದರ ನೀಡಿದರೂ, ‘ಇಪಿಎಫ್‌ಒ’ ಬಳಿ ₹ 586 ಕೋಟಿ ಹೆಚ್ಚುವರಿಯಾಗಿ ಉಳಿಯಲಿದೆ.

‘ಇಪಿಎಫ್‌ಒ’ದ ಟ್ರಸ್ಟಿಗಳ ಕೇಂದ್ರೀಯ ಮಂಡಳಿಯು ಫೆಬ್ರುವರಿ 21ರಂದು ಈ ಬಡ್ಡಿ ದರ ನಿಗದಿಪಡಿಸಿತ್ತು. ಈ ಪ್ರಸ್ತಾವಕ್ಕೆ ಒಪ್ಪಿಗೆ ಪಡೆಯಲು ಹಣಕಾಸು ಸಚಿವಾಲಯಕ್ಕೆ ಕಳಿಸಲಾಗಿದೆ.

ಕನಿಷ್ಠ ಪಿಂಚಣಿ ಹೆಚ್ಚಳ ಇಲ್ಲ: ಉದ್ಯೋಗಿಗಳ ಪಿಂಚಣಿ ಯೋಜನೆ 1995ರ ಅನ್ವಯ (ಇಪಿಎಸ್‌) ತಿಂಗಳ ಕನಿಷ್ಠ ಪಿಂಚಣಿ ಹೆಚ್ಚಿಸುವ ಪ್ರಸ್ತಾವ ಕಾರ್ಮಿಕ ಸಚಿವಾಲಯದ ಮುಂದೆ ಇಲ್ಲ. ಪ್ರತಿ ತಿಂಗಳೂ ಕನಿಷ್ಠ ₹ 1,000 ಪಿಂಚಣಿ ನೀಡಲು ಕೇಂದ್ರ ಸರ್ಕಾರವು 2014–15ರಲ್ಲಿ ಭವಿಷ್ಯ ನಿಧಿಗೆ ₹ 800 ಕೋಟಿಗಳನ್ನು ನೀಡಿದೆ.

ಕನಿಷ್ಠ ಪಿಂಚಣಿ ಮೊತ್ತವನ್ನು ₹ 3,000ಕ್ಕೆ ಹೆಚ್ಚಿಸಲು ಮತ್ತು ಹಣದುಬ್ಬರ ಆಧರಿಸಿ ಪಿಂಚಣಿ ನೀಡಲು ಕಾರ್ಮಿಕ ಸಂಘಟನೆಗಳು ಒತ್ತಾಯಿಸುತ್ತಿವೆ.

ಇಟಿಎಫ್‌ ಹೂಡಿಕೆ: ‘ಷೇರುಪೇಟೆಯ ಹೂಡಿಕೆ ನಿಧಿಗಳಲ್ಲಿನ (ಇಟಿಎಫ್‌) ಹೂಡಿಕೆ ಮೊತ್ತವನ್ನು ಶೇ 15 ರಿಂದ ಶೇ 25ಕ್ಕೆ ಹೆಚ್ಚಿಸುವ ಪ್ರಸ್ತಾವ ಸದ್ಯಕ್ಕೆ ಸಚಿವಾಲಯದ ಪರಿಶೀಲನೆಯಲ್ಲಿ ಇಲ್ಲ. ಶೇ 15ರವರೆಗೆ ಮಾತ್ರ ಹೂಡಿಕೆಗೆ ಹಣಕಾಸು ಸಚಿವಾಲಯ ಅನುಮತಿ ನೀಡಿದೆ’ ಎಂದರು.

ಭವಿಷ್ಯ ನಿಧಿಯಲ್ಲಿನ ಹೂಡಿಕೆ ಮಾಡಬಹುದಾದ ಠೇವಣಿ ಮೊತ್ತದ ಶೇ 5ರಷ್ಟನ್ನು ಇಟಿಎಫ್‌ಗಳಲ್ಲಿ ತೊಡಗಿಸಲು 2015ರಲ್ಲಿ ಚಾಲನೆ ನೀಡಲಾಗಿತ್ತು. ಇದನ್ನು 2016–17ರಲ್ಲಿ ಶೇ 10ಕ್ಕೆ ಮತ್ತು 2017–18ರಲ್ಲಿ ಶೇ 15ಕ್ಕೆ ಹೆಚ್ಚಿಸಲಾಗಿತ್ತು. ‘ಇ‍ಪಿಎಫ್‌ಒ’ ಇದುವರೆಗೆ ಇಟಿಎಫ್‌ಗಳಲ್ಲಿ ₹ 41,967 ಕೋಟಿ ತೊಡಗಿಸಿದೆ. ಈ ಹೂಡಿಕೆಗೆ ಶೇ 17.23ರಷ್ಟು ಲಾಭ ಮರಳಿದೆ. ಈ ವರ್ಷದ ಮಾರ್ಚ್‌ನಲ್ಲಿ ₹ 2,500 ಕೋಟಿ ಮೊತ್ತದ ಇಟಿಎಫ್‌ಗಳನ್ನು ಮಾರಾಟ ಮಾಡಲಾಗಿದೆ.

*
ನಮ್ಮ ಪ್ರಸ್ತಾವ ತಿರಸ್ಕೃತಗೊಂಡಿದೆ ಎಂದು ಹೇಳುವುದು ಸರಿಯಲ್ಲ. ಹಣಕಾಸು ಸಚಿವಾಲಯ ಈ ಬಗ್ಗೆ ಸಲಹೆ ನೀಡಬಹುದಾಗಿದೆ.
–ಸಂತೋಷ್‌ ಗಂಗ್ವಾರ್‌, ಕಾರ್ಮಿಕ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT