ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Teachers Day: ಸಂಗತ- ಜೀವನಪಾಠ ಕಲಿಸುವ ವಿಶ್ವಗುರು

ಡಾ. ಜ್ಯೋತಿ ಲೇಖನ
Published 4 ಸೆಪ್ಟೆಂಬರ್ 2023, 18:59 IST
Last Updated 4 ಸೆಪ್ಟೆಂಬರ್ 2023, 18:59 IST
ಅಕ್ಷರ ಗಾತ್ರ

ಗೌತಮ ಬುದ್ಧ ಹಲವಾರು ವಿಷಯಗಳಲ್ಲಿ ನಮಗೆ ಸೂಕ್ತ ಮಾರ್ಗದರ್ಶಕನಾಗಿ ಪ್ರಸ್ತುತವೆನಿಸುತ್ತಾನೆ. ಬದುಕಿನ ವಿವಿಧ ಹಂತಗಳಲ್ಲಿ ನಮಗೆ ಎದುರಾಗುವ ಪ್ರಶ್ನೆಗಳಿಗೆ ಸಮಾಧಾನಕರ, ಸರಳ ಮತ್ತು ಎಲ್ಲರೂ ಅನುಸರಿಸಬಹುದಾದ ಉತ್ತರ ನೀಡುವ ಜಗತ್ತಿನ ದಾರ್ಶನಿಕರಲ್ಲಿ ಮುಂಚೂಣಿಯ ಹೆಸರು ಬುದ್ಧನದ್ದು. ಅವನ ಅರ್ಥಗರ್ಭಿತ ಅಸಂಖ್ಯಾತ ಹೇಳಿಕೆಗಳಲ್ಲಿ ಬಹಳ ಮಹತ್ವದ್ದೆಂದರೆ, ‘ನಿನಗೆ ನೀನೇ ದಾರಿದೀಪ’. ಇದು ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ, ವರ್ತಮಾನದ ಶಿಕ್ಷಣ ವ್ಯವಸ್ಥೆಯಲ್ಲಿ ಬಹಳ ಪ್ರಸ್ತುತವಾದ ಹೇಳಿಕೆ ಎನ್ನಬಹುದು.

ಇಂದಿನ ವಾಸ್ತವವೆಂದರೆ, ಗುರು–ಶಿಷ್ಯರ ಮೈತ್ರಿ ಹಿಂದಿನಂತಿಲ್ಲ. ಹಿಂದೆ, ಪ್ರತಿಯೊಬ್ಬ ಸಾಧಕ ಮೊದಲು ಜ್ಞಾಪಿಸಿಕೊಳ್ಳುತ್ತಿದ್ದುದು ತನ್ನ ನೆಚ್ಚಿನ ಗುರುವನ್ನು. ಶಿಕ್ಷಣ ಒಂದು ವ್ಯಾಪಾರವಾಗಿ ಬದಲಾದ ಕಾಲದಲ್ಲಿ, ಗುರು–ಶಿಷ್ಯರ ನಡುವೆ ಸ್ವಾಭಾವಿಕವಾಗಿ ಇರಬೇಕಾದ ಆಪ್ತ ಸಂಬಂಧ, ಪರಸ್ಪರ ಕಾಳಜಿ, ಬೆಂಬಲ, ನಿಸ್ವಾರ್ಥ ಸೇವೆ ಕಡಿಮೆಯಾಗುತ್ತಿರುವುದನ್ನು ನಾವು ಗಮನಿಸಬಹುದು. ಇಂದಿನ ಡಿಜಿಟಲ್ ಯುಗದಲ್ಲಿ, ಮನುಷ್ಯರ ನಡುವೆ ಆಪ್ತವಾಗಿ ಇರಬೇಕಾದ ಎಲ್ಲಾ ಸಂಬಂಧಗಳು ಯಾಂತ್ರಿಕವಾಗಿವೆ. ಸಾಮಾಜಿಕ ಜಾಲತಾಣಗಳು ಮತ್ತು ಇನ್ನಿತರ ಮನರಂಜನಾ ಕ್ಷೇತ್ರಗಳ ಅತಿಯಾದ ಸೆಳೆತ ಹಾಗೂ ವ್ಯಾವಹಾರಿಕತೆಯಲ್ಲಿ ಬತ್ತಿಹೋಗಿರುವ ರಕ್ತಸಂಬಂಧಗಳು ವಿದ್ಯಾರ್ಥಿಗಳನ್ನು ಗೊಂದಲದಲ್ಲಿಟ್ಟು, ಅವರು ಆಯ್ಕೆ ಮಾಡಬಹುದಾದ ಆಸಕ್ತಿಯ ದಾರಿಗಳನ್ನು ಸಂಪೂರ್ಣವಾಗಿ ಮುಚ್ಚಿಸಿವೆ. ಇಂತಹ ಸಂದರ್ಭದಲ್ಲಿ ಅವರಿಗೆ ಮಾರ್ಗದರ್ಶನ ನೀಡುವ ಬೆಳಕೆಂದರೆ ಬುದ್ಧ. ಅವನ ಜೀವನತತ್ವಗಳನ್ನು ಪ್ರಾಥಮಿಕ ಹಂತದಲ್ಲಿಯೇ ಪಠ್ಯಕ್ರಮದಲ್ಲಿ ಅಳವಡಿಸಬೇಕಾದ ಅಗತ್ಯವಿದೆ. ಹಾಗಿದ್ದರೆ, ಶಿಕ್ಷಕನ ಸ್ಥಾನದಲ್ಲಿ ಬುದ್ಧನನ್ನು ಇರಿಸಿ, ವಿದ್ಯಾರ್ಥಿಗಳು ಏಕಲವ್ಯನಂತೆ ಕಲಿಯಬಹುದಾದ ಜೀವನಪಾಠಗಳೇನು?

ವಿಶೇಷವಾಗಿ ನಮ್ಮ ಕಾಲದ ವಿದ್ಯಾರ್ಥಿಗಳಿಗೆ ಬುದ್ಧ ಕೊಡುವ ಶಿಕ್ಷಣವೆಂದರೆ ವ್ಯಕ್ತಿ ಸ್ವಾತಂತ್ರ್ಯ, ಸಮಾಜಮುಖಿಯಾಗಿ ಬದುಕುವ ಪ್ರಾಮುಖ್ಯ, ಪರಿಸರ ಪ್ರಜ್ಞೆ, ಅನ್ಯಜೀವಿಗಳ ಕುರಿತು ಕಾಳಜಿ, ವರ್ತಮಾನದಲ್ಲಿ ಬದುಕುವ ಕಲೆ, ಸಂವಹನದಲ್ಲಿ ವಿಶ್ವಾಸ, ಹರಿಯುವ ನದಿಯಂತೆ ಮುಂದೆ ಸಾಗುವ ಸ್ಥಿರಚಿತ್ತ, ಸರಳತೆಯ ಮಹತ್ವ, ಮನುಷ್ಯತ್ವದಂತಹ ಅಂಶಗಳನ್ನು ಒಳಗೊಂಡ ಜೀವನ ತತ್ವ.

ನಮ್ಮ ಜೀವನವನ್ನು ನಾವೇ ರೂಪಿಸಬಹುದೆಂಬ ಸರಳ ಸಂದೇಶ ನೀಡಿದ ಬುದ್ಧ. ಅದು, ಬದುಕಿನ ದಾರಿಯನ್ನು ನಾವೇ ಕಂಡುಕೊಳ್ಳುವ, ನುಡಿಗೂ ಮತ್ತು ನಡೆಗೂ ವ್ಯತ್ಯಾಸವಿರದ ಪಾರದರ್ಶಕ ಮಾರ್ಗವಾಗಿತ್ತು. ಬುದ್ಧನ ಶಿಕ್ಷಣಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿತ್ತು. ಇಂದಿನ ವರ್ಗಭೇದ ಶಿಕ್ಷಣ ಸಂಸ್ಥೆಗಳೆದುರು, ಬುದ್ಧನ ಶಿಷ್ಯರಲ್ಲಿ ಎಲ್ಲ ವರ್ಗದವರಿದ್ದುದು ವಿಶೇಷವಾಗಿತ್ತು. ಪ್ರಾಪಂಚಿಕ ಆಡಂಬರಗಳ ಹಂಗು ತೊರೆದು ಅಲ್ಲಿ ಸೇರಿದ ಮೇಲೆ, ತಮ್ಮ ಹಿನ್ನೆಲೆಗಳನ್ನು ಮರೆತು, ಸಹಜವಾಗಿ ಎಲ್ಲರಲ್ಲೂ ಸಮಾನತೆಯ ಭಾವ ಮೂಡುತ್ತಿದ್ದುದು ವಿಶೇಷವಾಗಿತ್ತು.

ಬುದ್ಧ ಉದಾತ್ತವಾದ ಪರಿಸರ ಪ್ರಜ್ಞೆಯನ್ನು ದೈನಂದಿನ ಜೀವನದ ಭಾಗವಾಗಿಸಿಕೊಂಡಿದ್ದ. ಹಿಂಬಾಲಕರಿಗೆ ಅವನ ಉಪದೇಶವೇನೆಂದರೆ- ಮನುಷ್ಯ, ತನ್ನ ಮೂಲಭೂತ ಅಗತ್ಯಗಳ ಪೂರೈಕೆಗಷ್ಟೇ ಪ್ರಕೃತಿಯನ್ನು ಬಳಸಿಕೊಳ್ಳಬೇಕು, ಅನ್ಯಜೀವಿಗಳಿಗೆ ವೃಥಾ ಹಾನಿ ಮಾಡದೇ ಸಹಬಾಳ್ವೆ ನಡೆಸಬೇಕು. ಹೀಗೆ, ಜಗತ್ತಿನ ಎಲ್ಲ ಜೀವಿಗಳಿಗೂ ತನ್ನ ಕಾರುಣ್ಯವನ್ನು ಪಸರಿಸಿದ್ದ. ಕಾಣದ ನರಕ, ಸ್ವರ್ಗ, ಪುನರ್ಜನ್ಮ, ಪಾಪ, ಪುಣ್ಯಗಳ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳದ ಬುದ್ಧ, ವರ್ತಮಾನದ ವಾಸ್ತವ ಪ್ರಪಂಚದಲ್ಲಿ, ನಾವು ದಿನನಿತ್ಯ ಎದುರಿಸುವ ಎಲ್ಲಾ ಅಡೆತಡೆಗಳನ್ನು ಸಹಜವಾಗಿ ಸ್ವೀಕರಿಸಿ, ಸಮಾಜಮುಖಿಯಾಗಿ ಬದುಕುವುದರಲ್ಲಿ ಹೆಚ್ಚು ನಂಬಿಕೆ ಇಟ್ಟಿದ್ದ.

ಕಲಿಕೆಯ ಆಧಾರಸ್ತಂಭ ಪ್ರಶ್ನಿಸುವುದು ಎಂಬಂತೆ, ಬುದ್ಧನ ಅನ್ವೇಷಣೆಯ ಮೂಲವು ನಿರಂತರವಾಗಿ ಪ್ರಶ್ನಿಸುವುದಾಗಿತ್ತು. ಪ್ರಶ್ನಿಸದೆ ಯಾವುದನ್ನೂ ಯಾರ ಮಾತನ್ನೂ ಒಪ್ಪಿಕೊಳ್ಳಬೇಡಿ ಎಂದು ಕರೆ ನೀಡಿದ. ಬುದ್ಧ ನಂಬಿದ್ದು ನಿರಂತರ ಚಲನೆಯಲ್ಲಿ. ಎಲ್ಲಿಯೂ ನಿಲ್ಲದೆ, ಮನೆಯನೆಂದೂ ಕಟ್ಟದೆ, ಕೊನೆಯನೆಂದೂ ಮುಟ್ಟದೆ ನಡೆಯುತ್ತಲೇ ಹೋದ. ನದಿಯೊಂದು ತಾನು ಸಾಗುವ ದಾರಿಯಲ್ಲಿ ಎದುರಾಗುವ ಎಲ್ಲಾ ಅಡೆತಡೆಗಳನ್ನು ದಾಟಿ, ಗುನುಗುತ್ತಾ ಸಾಗರವ ಸೇರುವಂತೆ ಬುದ್ಧ ನಡೆದ. ಇದು ಇಂದಿನ ವಿದ್ಯಾರ್ಥಿಗಳಿಗೆ ಬಹಳ ಅಗತ್ಯವಾದ ಬೋಧನೆ. ಅತಿಯಾದ ನಿರೀಕ್ಷೆ ಮತ್ತು ಆಸೆಗಳ ಸಮುದ್ರದಲ್ಲಿ ಮುಳುಗೇಳುವ ನಮಗೆ, ಬುದ್ಧ ಆಸರೆಯ ಹುಲ್ಲುಕಡ್ಡಿಯಂತೆ ಗೋಚರಿಸುತ್ತಾನೆ.

ಸರಳ ಜೀವನಕ್ರಮದಲ್ಲಿ ನಂಬಿಕೆಯಿಟ್ಟಿದ್ದ ಬುದ್ಧ, ತಾನು ಬದುಕುಳಿಯಲು ಬೇಕಾದ ಮೂಲಭೂತ ಅಗತ್ಯಗಳ ಪೂರೈಕೆಯ ನಂತರ, ತನ್ನ ಉನ್ನತ ಚಿಂತನೆಗಳಲ್ಲಿ ಉಳಿದ ಸಮಯ ಕಳೆಯುತ್ತಿದ್ದ. ಹೀಗೆ, ತಾನು ಜಗತ್ತಿನಲ್ಲಿ ಕಾಣಬಯಸುವ ಬದಲಾವಣೆಗಳನ್ನು ತನ್ನ ಹುಡುಕಾಟ, ಸ್ವಅಧ್ಯಯನದ ಮೂಲಕ ಅಳವಡಿಸಿಕೊಂಡು, ಬದುಕಿನ ನೋವು ನಲಿವುಗಳ ನಡುವೆ ಮಾನಸಿಕ ಸ್ಥಿಮಿತ ಸಾಧಿಸುವ ಕೌಶಲವನ್ನು ಕಂಡುಕೊಂಡು ಜವಾಬ್ದಾರಿಯುತ ನಾಗರಿಕನಾಗಿ ಬದುಕಿ ವಿಶ್ವಕ್ಕೆ ಮಾದರಿಯಾದ.

ಜಾತಿ, ವರ್ಗ ಮತ್ತು ಧರ್ಮ ಮೀರಿದ ವಿಶ್ವಗುರು ಬುದ್ಧನನ್ನು ಶಿಕ್ಷಕನನ್ನಾಗಿ ಒಪ್ಪಿಕೊಳ್ಳಬೇಕಾದ, ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯ ಇಂದಿನ ಶಿಕ್ಷಣ ವ್ಯವಸ್ಥೆಗಿದೆ.

ಲೇಖಕಿ: ಸಹಾಯಕ ಪ್ರಾಧ್ಯಾಪಕಿ, ತುಮಕೂರು ವಿಶ್ವವಿದ್ಯಾಲಯ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT