ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರ ಪುನರ್ವಸತಿ ಕನಸೇ?

ಕೌಶಲ ತರಬೇತಿ ಮತ್ತು ಸ್ವಾವಲಂಬನೆಯ ಕಡೆಗಿನ ತುಡಿತ ಜಾಗೃತಗೊಳಿಸಬೇಕು
Last Updated 18 ಡಿಸೆಂಬರ್ 2019, 19:26 IST
ಅಕ್ಷರ ಗಾತ್ರ

ಮಲ ಹೊರುವ ಪೌರಕಾರ್ಮಿಕರ ಪುನರ್ವಸತಿಗೆ ಕೇಂದ್ರ ಸರ್ಕಾರವು ರೂಪಿಸಿರುವ ಸ್ವಉದ್ಯೋಗ ಯೋಜನೆ ಅಡಿ ದೇಶದಾದ್ಯಂತ ಕೌಶಲ ತರಬೇತಿ ಪಡೆದವರ ಪ್ರಮಾಣ ಶೇ 10ಕ್ಕಿಂತಲೂ ಕಡಿಮೆ ಇದೆ (ಪ್ರ.ವಾ., ಡಿ.16) ಎಂಬುದು ತೀವ್ರ ವಿಷಾದದ ಸಂಗತಿ.ಮಲ ಹೊರುವ ಪದ್ಧತಿಯನ್ನು ನಿಷೇಧಿಸಬೇಕು ಎಂದು ದೇಶದಲ್ಲಿ ಮೊದಲ ಬಾರಿಗೆ 1973ರಲ್ಲಿ ಆದೇಶ ಹೊರಡಿಸಿದ ಕರ್ನಾಟಕ ರಾಜ್ಯ ಸಾಧಿಸಿದ ಪ್ರಗತಿ ಕೂಡ ತೃಪ್ತಿಕರವಾಗಿಲ್ಲ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಂಸದೀಯ ಸ್ಥಾಯಿ ಸಮಿತಿಯು ಸಂಸತ್ತಿನಲ್ಲಿ ಮಂಡಿಸಿದ ವರದಿಯಲ್ಲಿನ ಈ ಅಂಕಿಅಂಶಗಳು ನಮ್ಮ ಪುನರ್ವಸತಿ ಯೋಜನೆಗಳ ನ್ಯೂನತೆಗಳನ್ನು ಎತ್ತಿ ತೋರಿಸಿವೆ. ಈ ಯೋಜನೆ ಅಡಿ ವೃತ್ತಿ ತರಬೇತಿ ಪಡೆದ
ವರಿಗಿಂತಲೂ ಹಣಕಾಸು ನೆರವು ಪಡೆದವರ ಸಂಖ್ಯೆ ಹೆಚ್ಚಿರುವುದು ಕುತೂಹಲಕಾರಿಯಾಗಿದೆ. ‘ಬದುಕು ಕಟ್ಟಿಕೊಡುವ’ ತರಬೇತಿಗಿಂತಲೂ ಪೌರಕಾರ್ಮಿಕರಿಗೆ ‘ಕರಗುವ ಹಣ’ವೇ ಮುಖ್ಯವಾಯಿತೇ? ಹಣಕಾಸು ನೆರವು ಪಡೆದವರು, ಕೌಶಲ ಹೆಚ್ಚಿಸಿಕೊಳ್ಳುವ ತರಬೇತಿ ಪಡೆಯಲು ಏಕೆ ಒಲವು ತೋರಿಸಲಿಲ್ಲ ಎಂಬುದು ಗಮನಿಸಬೇಕಾದ ಅಂಶ.

ಮಲ ಹೊರುವವರು ಮತ್ತು ಪೌರಕಾರ್ಮಿಕರ ವಿದ್ಯಾರ್ಹತೆಗೆ ತಕ್ಕ ಕೌಶಲ ತರಬೇತಿಯನ್ನು ನೀಡುವ ಮುಂಚೆ ಅವರೊಂದಿಗೆ ಆಪ್ತಸಮಾಲೋಚನೆ ನಡೆಸಬೇಕು ಎನ್ನುತ್ತದೆ 2013ರ ‘ಮಲಹೊರುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ’. ಆದರೆ, ಅದು ಜಾರಿಗೆ ಬಂದು ಆರು ವರ್ಷಗಳಾದರೂ ಈ ಕಾಯ್ದೆಯ ಬಗ್ಗೆಯೇ ಬಹಳಷ್ಟು ಅಧಿಕಾರಿಗಳಲ್ಲಿ ಅರಿವು ಇಲ್ಲ. ಇನ್ನು ಆಪ್ತಸಮಾಲೋಚನೆಗೆ ಎಲ್ಲಿದೆ ಜಾಗ?

ಇದಕ್ಕೊಂದು ತಾಜಾ ಉದಾಹರಣೆ ಎಂದರೆ, ಕಾರವಾರದಲ್ಲಿ ಸೆಪ್ಟೆಂಬರ್‌ನಲ್ಲಿ ಮ್ಯಾನ್‌ಹೋಲ್‌
ನಲ್ಲಿ ಬಿದ್ದು ಪೌರಕಾರ್ಮಿಕರೊಬ್ಬರು ಮೃತಪಟ್ಟಾಗ ಪೊಲೀಸರು ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು! ಅಲ್ಲಿ 2013ರ ಕಾಯ್ದೆಯ ಉಲ್ಲೇಖವೇ ಇರಲಿಲ್ಲ.

‘ಇಂಥ ಸೂಕ್ಷ್ಮ ಸಂಗತಿಯ ಅರಿವೇ ಇರದ ಸರ್ಕಾರಿ ಆಡಳಿತ ಯಂತ್ರಕ್ಕೆ ಪೌರಕಾರ್ಮಿಕ
ರೊಂದಿಗೆ ಆಪ್ತಸಮಾಲೋಚನೆ ಮಾಡಬೇಕೆಂಬುದು ಹೇಗೆ ಹೊಳೆಯುತ್ತದೆ’ ಎಂದುನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿಯ ಆರ್‌.ವಿ.ಚಂದ್ರಶೇಖರ್‌ ವಿಷಾದದಿಂದ ಹೇಳುತ್ತಾರೆ. ಶೋಷಿತರ ಪರವಾದ ಕಾಯ್ದೆಗಳ ಕುರಿತು, ಹೊಸದಾಗಿ ನೇಮಕಗೊಂಡ ಅಧಿಕಾರಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿಯೇ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಐದು ತಿಂಗಳ ಹಿಂದೆ ಸಾಮಾಜಿಕ ನ್ಯಾಯ ವಿಭಾಗ ಆರಂಭಗೊಂಡಿದ್ದು, ತರಬೇತಿಯೂ ನಡೆಯು
ತ್ತಿರುವುದು ರಾಜ್ಯದ ಮಟ್ಟಿಗೆ ಸಮಾಧಾನ ತರುವ ವಿಷಯ.

ಪೌರಕಾರ್ಮಿಕರ ವಿದ್ಯಾರ್ಹತೆಯನ್ನು ಕೇಳಿ ತಿಳಿದುಕೊಳ್ಳಬಹುದು. ಹೇಳದಿದ್ದರೆ ಕೊಂಚ ಅಂದಾಜು ಮಾಡಬಹುದು. ಆದರೆ ಅವರು ಬಯಸುವ ಅಥವಾ ಅವರಲ್ಲಿರಬಹುದಾದ ಇತರೆ ವೃತ್ತಿ ಕೌಶಲಗಳೇನು ಎಂಬುದನ್ನು ಪತ್ತೆಹಚ್ಚುವುದು ಕಷ್ಟ.
ತಲೆಮಾರುಗಳಿಂದ ಬೆಂಬಿಡದೆ ಮುಂದುವರಿಯುತ್ತಿರುವ ಪೌರಕಾರ್ಮಿಕ ವೃತ್ತಿಯ ಕಾರಣಕ್ಕೇ ಮಾನಸಿಕವಾಗಿ, ಸಾಮಾಜಿಕವಾಗಿ ಕುಗ್ಗಿಹೋಗಿರುವ ಅವರನ್ನು ಆ ನೆಲೆಯಿಂದ ಮೇಲಕ್ಕೆತ್ತುವ ಕೆಲಸ ಮೊದಲು ಆಗಬೇಕು. ಅವರು ತಮ್ಮ ಬಗ್ಗೆ ಯಾರಾದರೂ ಒಬ್ಬರ ಜೊತೆ ಮುಕ್ತವಾಗಿ ಮಾತನಾಡುವಂತಾಗಬೇಕು.

ಅಸ್ಪೃಶ್ಯತೆಯಂಥ ಕರಾಳ ಆಚರಣೆಗಳ ನಡುವೆಯೂ ಕೌಶಲ ಮತ್ತು ಸ್ವಾವಲಂಬನೆಯ ಕಡೆಗಿನ ಅವರ ತುಡಿತ ಜಾಗೃತಗೊಳ್ಳಬೇಕಾದರೆ ಅಧಿಕಾರಿಗಳ ಮನಃಪರಿವರ್ತನೆ ಆಗುವುದು ಅತ್ಯವಶ್ಯ. ಅವರ ನಡೆ–ನುಡಿಗಳು ‘ಯೋಜನೆ ಅನುಷ್ಠಾನಾಧಿಕಾರಿ’ಗಳದ್ದಾಗಿರದೆ ‘ಪೌರಕಾರ್ಮಿಕಸ್ನೇಹಿ’ ಆಗಿರಬೇಕು. ಪ್ರಭು ಸಂಹಿತೆಯೊಳಗೆ ಮಿತ್ರ ಸಂಹಿತೆಯ ತತ್ವಗಳು ಅಡಕಗೊಳ್ಳಬೇಕು. ನಂತರ, ಬಹುಮುಖ್ಯವಾದದ್ದು, ಕೌಶಲ ಅಭಿವೃದ್ಧಿ ಮತ್ತು ಸ್ವಾವಲಂಬನೆ ಎಂಬುದು ತರಬೇತಿ ಕೊಡುವವರ ದೃಷ್ಟಿಕೋನದ್ದಾಗಿರಬಾರದು. ಪಡೆಯುವವರ ದೃಷ್ಟಿಕೋನದ್ದಾಗಿರಬೇಕು. ಅವರಿಗೆ ಯಾವುದರ ಕುರಿತು ತರಬೇತಿ ಬೇಕು ಎಂದು ಕೇಳಬೇಕು. ಸಾಧ್ಯವಾದ ಮಟ್ಟಿಗೆ ಅದನ್ನೇ ಕೊಡಲು ಪ್ರಯತ್ನಿಸಬೇಕು.

ಕೌಶಲ ತರಬೇತಿ ಎಂದರೆ ಏನು? ದೇಶದಲ್ಲಿ ಇಂತಹ ತರಬೇತಿಯು ಪಡೆಯಬೇಕಾದವರ ಆಯ್ಕೆಯಾಗಿ ಬರಲಿಲ್ಲ. ಕೊಡುವವರು, ಅದರಲ್ಲೂ ಉದ್ಯೋಗ ಕೊಡುವವರ ಆಯ್ಕೆಯಾಗಿದೆ. ಪಡೆಯುವವರ ಇಚ್ಛೆಗೆ, ಅಗತ್ಯಕ್ಕೆ ಇಲ್ಲಿ ಹೆಚ್ಚಿನ ಕಿಮ್ಮತ್ತು ಇಲ್ಲ.ಅವರಿಗೆ ಸ್ವಂತ ಆಲೋಚನೆಯೇ ಇರಬಾರದು ಎಂಬಂತೆ ನಡೆದುಕೊಳ್ಳುತ್ತದೆ ವ್ಯವಸ್ಥೆ. ಇಂತಹ ವ್ಯವಸ್ಥೆಯೊಳಗೆ, 2013ರ ‘ಮಲ ಹೊರುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ’ಯೂ ಕ್ರಾಂತಿಕಾರಿ ಬದಲಾವಣೆಯ ಕನಸನ್ನು ಹೊತ್ತು ತೆವಳುತ್ತಿದೆ. ಕಾಯ್ದೆಯ ಪ್ರಕಾರ, ಮಲ ಹೊರುವವರು ಮತ್ತು ಪೌರಕಾರ್ಮಿಕರ ಪುನರ್ವಸತಿ ಪ್ರಕ್ರಿಯೆ ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕು.ಕಾಯ್ದೆಯನ್ನು ಅನುಷ್ಠಾನ ಮಾಡುವ ಹೊಣೆ ಸಮಾಜ ಕಲ್ಯಾಣ ಇಲಾಖೆ ಮೇಲಿದೆ. ಪೌರಕಾರ್ಮಿಕರ ಪುನರ್ವಸತಿ ಹೊಣೆಯು ಆಯಾ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳದ್ದು. ಆದರೆ, ಆಶಯ ಮಾತ್ರ ಇಲ್ಲಿಯವರೆಗೂ ಈಡೇರಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT