ಮಂಗಳವಾರ, ಜೂನ್ 2, 2020
27 °C
ಪ್ರಕೃತಿಯನ್ನು ಅತ್ಯಂತ ಬದ್ಧತೆಯಿಂದ ಆರಾಧಿಸಿದ ವರ್ಡ್ಸ್‌ವರ್ತ್‌ನ ಕಾವ್ಯಶಕ್ತಿಯ ಹಿರಿಮೆಯನ್ನು ನಾವು ಈಗಲಾದರೂ ಅರಿಯಬೇಕಾಗಿದೆ

ಸಂಗತ | ನೆನಪಾಗುತ್ತಿದ್ದಾನೆ ಪ್ರಕೃತಿ ಆರಾಧಕ ಕವಿ ವಿಲಿಯಂ ವರ್ಡ್ಸ್‌ವರ್ತ್

ಶಿವಲಿಂಗಸ್ವಾಮಿ ಎಚ್.ಕೆ. Updated:

ಅಕ್ಷರ ಗಾತ್ರ : | |

Prajavani

ಮನುಷ್ಯನ ಭೌತಿಕ ಜೀವನದ ಅರಸುವಿಕೆಯ ಭರಾಟೆಯಲ್ಲಿ ಪ್ರಕೃತಿಗೆ ಬೀಳುತ್ತಿದ್ದ ಪೆಟ್ಟುಗಳು ನಮ್ಮ ಕಲ್ಪನೆಗೆ ನಿಲುಕಲೇ ಇಲ್ಲ. ಕಣ್ಣಿಗೆ ಕಾಣದ ವೈರಾಣುವೊಂದು ಇಂದು ಜಗತ್ತಿನಾದ್ಯಂತ ಸಾವಿನ ಅಲೆಯೆಬ್ಬಿಸಿರುವುದನ್ನು ನಾವು, ಪ್ರಕೃತಿ ತನ್ನ ಮೇಲಾಗಿರುವ ಅನಿಯಮಿತ ಶೋಷಣೆಗೆ ತೋರುತ್ತಿರುವ ಪ್ರತಿಕ್ರಿಯೆ ಎಂದು ಅರ್ಥೈಸಬಹುದು. ಪ್ರಕೃತಿ ಆರಾಧಕ ಮತ್ತು ನಿಸರ್ಗದ ಕವಿ ವಿಲಿಯಂ ವರ್ಡ್ಸ್‌ವರ್ತ್ ಹುಟ್ಟಿ (ಏ. 7, 1770) ಈಗ 250 ವರ್ಷಗಳು ಸಂದಿದ್ದು, ಆತನ ಕಾವ್ಯ ಇಂದಿಗೂ ಪ್ರಸ್ತುತವಾಗಿರುವುದು, ತಲ್ಲಣದ ಈ ಸಂದರ್ಭದಲ್ಲಿ ನಮ್ಮ ಅರಿವಿಗೆ ಬರುತ್ತದೆ.

ಮಾನವ ಇತಿಹಾಸದಲ್ಲಿ ಭೌತಿಕ ಜೀವನದ ಮೊದಲ ಹಂತದ ರುಚಿ ದೊರೆತದ್ದು ಯುರೋಪಿನಲ್ಲಾದ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ. ಕೈಗಾರಿಕಾ ಕ್ರಾಂತಿಯು ಆರ್ಥಿಕ ಪ್ರಗತಿಗೆ ಕಾರಣವಾಯಿತಾದರೂ ಅದರ ಕರಾಳ ಛಾಯೆಯು ಪ್ರಕೃತಿಯ ಮೇಲೆ ಬೀಳುತ್ತಿತ್ತು. ಗ್ರಾಮೀಣ ಜೀವನವನ್ನು ತೊರೆದ ಜನ, ಬೃಹತ್ ಮಟ್ಟದಲ್ಲಿ ವಲಸೆ ಬಂದು ಕೈಗಾರಿಕಾ ನಗರಗಳನ್ನು ಸೇರುವ ಪ್ರಕ್ರಿಯೆ ಪ್ರಾರಂಭವಾದೊಡನೆ, ಜನರನ್ನು ಎಚ್ಚರಿಸುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ ಮೊದಲಿಗರಲ್ಲಿ ವರ್ಡ್ಸ್‌ವರ್ತ್ ಒಬ್ಬ. ಆತ ಕೈಗಾರಿಕೀಕರಣವನ್ನು ಅತ್ಯಂತ ಮಾರಕವಾದ ಬೆಳವಣಿಗೆ ಎಂದೇ ಭಾವಿಸಿದ್ದ. ತನ್ನ ಕಾವ್ಯದ ಮೂಲಕ ಜನರನ್ನು ಗ್ರಾಮೀಣ ಜೀವನದ ಸೊಬಗಿನೆಡೆಗೆ ಸೆಳೆಯುವ ಸರ್ವಪ್ರಯತ್ನವನ್ನೂ ಮಾಡಿದ. ಗ್ರಾಮೀಣ ಬದುಕು ಮತ್ತು ಪ್ರಕೃತಿಯೆಡೆಗೆ ನಿರ್ಲಕ್ಷ್ಯ ತೋರುತ್ತಿದ್ದ ಜನರಿಗೆ, ತಾವು ವಿನಾಶದ ಅಂಚಿಗೆ ಹೋಗುತ್ತಿದ್ದೇವೆ ಎಂಬ ಅರಿವನ್ನು ಮೂಡಿಸುವ ಕವಿತೆಗಳನ್ನು ಬರೆದ.

ವರ್ಡ್ಸ್‌ವರ್ತ್‌ ‘ಇಂಟಿಮೇಶನ್ ಓಡ್’ ಕವಿತೆಯಲ್ಲಿ ತನ್ನ ಬಾಲ್ಯವನ್ನು ಸ್ಮರಿಸುತ್ತ, ಭೂಮಿಯ ಅಂದವನ್ನು ವರ್ಣಿಸುತ್ತಾನೆ: ಆ ಒಂದು ಕಾಲವಿತ್ತು. ಹಸಿರು ಹಾಸಿನಿಂದಿಡಿದು ನೀರಿನ ಝರಿ, ನದಿಯಾದಿಯಾಗಿ ಪ್ರಕೃತಿಯ ಪ್ರತಿಯೊಂದು ಅಂಶವೂ ಆಕಾಶದೊದಿಕೆ ತೊಟ್ಟಂತೆ ಭಾಸವಾಗುತ್ತಿತ್ತು ಎನ್ನುತ್ತಾನೆ. ಆದರೆ ಈ ಸೊಬಗನ್ನು ತಾನು ಪ್ರೌಢಾವಸ್ಥೆಯನ್ನು ತಲುಪಿದಾಗ ಕಾಣಲಾಗಲಿಲ್ಲ ಎಂದು ಹೇಳುವುದನ್ನು ಪದ್ಯದ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳುತ್ತೇವೆ. ಜೊತೆಗೆ ಇವೇ ಸಾಲುಗಳನ್ನು ನಮ್ಮ ಇಂದಿನ ಪರಿಸ್ಥಿತಿಗೆ ತಾಳೆ ಹಾಕಿ ನೋಡಿದರೆ, ನಾವು ನಮ್ಮ ಭೌತಿಕ ಸುಖದ ಭ್ರಮೆಯಲ್ಲಿ ಕಳೆದುಕೊಂಡಿರುವ ಪ್ರಕೃತಿಯ ಸೊಬಗು ಮತ್ತು ಪ್ರಕೃತಿ ಸಂಪತ್ತಿನ ಬೆಲೆ ಅರಿವಿಗೆ ಬರುತ್ತದೆ.

ಪ್ರಕೃತಿಯನ್ನು ವರ್ಡ್ಸ್‌ವರ್ತ್‌ನಂತೆಯೇ ಆರಾಧಿಸಿದ ಕುವೆಂಪು ತಮ್ಮ ಕಥಾ ಸಂಕಲನ ‘ಮಲೆನಾಡಿನ ಚಿತ್ರಗಳು’ ಮುನ್ನುಡಿಯಲ್ಲಿ ಹೀಗೆನ್ನುತ್ತಾರೆ: ‘ನನ್ನ ಜೀವನವೆಲ್ಲ ಕಲ್ಪನೆ ಸ್ಮೃತಿಗಳ ಕೃಪೆಯಿಂದ ಸುಖಶಾಂತಿ ಪೂರ್ಣವಾಗಿದೆ. ನಾನು ಮನುಷ್ಯ ನಿರ್ಮಿತ ದೇವಾಲಯಗಳಿಗೆ ಹೋಗಬೇಕಾಗಿಲ್ಲ. ಪ್ರಕೃತಿ ಅಲ್ಲಲ್ಲಿ ಆಗಾಗ ದಾನ ಮಾಡಿರುವ ಭವ್ಯ ಸುಂದರ ದೃಶ್ಯಗಳು ನನ್ನ ಕಲ್ಪನೆಯಲ್ಲಿ ಸೆರೆಯಾಗಿರುವುದರಿಂದ ನಾನು ಬಯಸಿದಾಗ ಅವುಗಳ ದರ್ಶನವಾಗುತ್ತದೆ’. ಇದಕ್ಕೆ ಉತ್ತರವೆಂಬಂತೆ ಪೂರ್ಣಚಂದ್ರ ತೇಜಸ್ವಿ ತಮ್ಮ ‘ಜುಗಾರಿ ಕ್ರಾಸ್’ ಕಾದಂಬರಿಯ ಮುನ್ನುಡಿಯಲ್ಲಿ ‘ಕುವೆಂಪುರವರ ‘ಕಾನೂರು ಹೆಗ್ಗಡಿತಿ’, ಕಾರಂತರ ‘ಮರಳಿ ಮಣ್ಣಿಗೆ’ ಕಾಲದ ಸಹ್ಯಾದ್ರಿಯ ಕಾಡುಗಳಿಗೂ ಇವತ್ತಿನ ಪರಿಸ್ಥಿತಿಗೂ ಇರುವ ಅಜಗಜಾಂತರಕ್ಕೆ ಈ ಕಾದಂಬರಿಯೇ ಉದಾಹರಣೆ’ ಎನ್ನುತ್ತಾರೆ.

ವರ್ಡ್ಸ್‌ವರ್ತ್‌ನ ಕವಿತೆಗಳನ್ನು ರೊಮ್ಯಾಂಟಿಕ್ ನೆಲೆಯಲ್ಲಷ್ಟೇ ಆಸ್ವಾದಿಸಿದ ನಾವು, ಅವನ ಕಾವ್ಯದಲ್ಲಿ ಅಡಗಿರುವ ನೀತಿಬೋಧಕತ್ವದ ಅಂಶವನ್ನು ಮರೆಯುತ್ತೇವೆ. ವರ್ಡ್ಸ್‌ವರ್ತ್‌ನ ಪ್ರಕೃತಿ ಆರಾಧನೆಯ ತೀವ್ರತೆಯನ್ನು ಗಮನಿಸಿದ ಮ್ಯಾಥ್ಯೂ ಆರ್ನಾಲ್ಡ್ ‘ಹೈ ಪ್ರೀಸ್ಟ್ ಆಫ್ ನೇಚರ್’ ಎಂದು ಆತನನ್ನು ಕರೆದ. ಪ್ರಕೃತಿಯ ಸೊಬಗನ್ನು ಸವಿಯುವ ರಸಿಕತೆಯನ್ನು ಬೆಳೆಸಿಕೊಳ್ಳದ ಆಧುನಿಕ ಮಾನವರು, ಕೊಳ್ಳೆ ಹೊಡೆಯುವ ಮೂಲಕ ಅದರ ಪಾವಿತ್ರ್ಯವನ್ನು ಹಾಳುಗೆಡವುತ್ತಿದ್ದಾರೆ ಎಂದು ತನ್ನ ಕಾವ್ಯದ ಮೂಲಕ ಕೂಗಿ ಹೇಳಿದ ವರ್ಡ್ಸ್‌ವರ್ತ್‌, ‘ದಿ ಪ್ರಿಲ್ಯೂಡ್’ ಕಾವ್ಯದಲ್ಲಿ ಪ್ರಕೃತಿ ಆರಾಧನೆಯ ಉತ್ಕಟತೆಯನ್ನು ತಲುಪುತ್ತಾನೆ. ಪ್ರಕೃತಿಯ ಮಡಿಲಿನಲ್ಲಿ ತನಗೆ ಆಧ್ಯಾತ್ಮಿಕತೆಯ ಅನುಭವ ಆಗುತ್ತದೆ ಮತ್ತು ತನ್ನ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎನ್ನುತ್ತಾನೆ.

ವರ್ಡ್ಸ್‌ವರ್ತ್‌ನ ಕಾವ್ಯ ಜಗತ್ತಿನಾದ್ಯಂತ ಖ್ಯಾತಿ ಪಡೆದಿದ್ದರೂ ಅವನ ‘ಫಿಲಾಸಫಿ ಆಫ್ ನೇಚರ್’ ನಮ್ಮ ಮೈಗೂಡಲಿಲ್ಲ. ಅವನ ಕಾವ್ಯಶಕ್ತಿಯ ಹಿರಿಮೆಯನ್ನು ಪಾಠಕ್ಕಷ್ಟೇ ಸೀಮಿತಗೊಳಿಸದೆ, ನಮ್ಮ ಸಮಕಾಲೀನ ಸಮಾಜದಲ್ಲಿ ‘ಗೋ ಗ್ರೀನ್’, ‘ಅಪ್ಪಿಕೋ’ ಇತ್ಯಾದಿ ಚಳವಳಿಗಳ ಸಂದೇಶವನ್ನು ಅರಿತು ಪಾಲಿಸುವ ಸಮಯ ಬಂದಿದೆ. ಪ್ರಕೃತಿ ತನ್ನ ಸಂದೇಶವನ್ನು ಮತ್ತಷ್ಟು ಕೋಪದಿಂದ ಹೇಳುವ ಮುಂಚೆ ವರ್ಡ್ಸ್‌ವರ್ತ್‌, ಕುವೆಂಪು, ಶಿವರಾಮ ಕಾರಂತ ಮುಂತಾದವರು ತಮ್ಮ ಬರಹಗಳಲ್ಲಿ ಕಟ್ಟಿಕೊಟ್ಟ ಪ್ರಾಕೃತಿಕ ಪ್ರಪಂಚವನ್ನು ಉಳಿಸಿ, ಬೆಳೆಸಿ ಮುಂದಿನ ಜನಾಂಗಕ್ಕೆ ತಲುಪಿಸಬೇಕಿದೆ. ಇಲ್ಲದೇ ಹೋದಲ್ಲಿ ಸಿಲ್ವಿಯಾ ಬ್ರೌನ್ ಅವರ ‘ಎಂಡ್ ಆಫ್ ಡೇಸ್’ ಪುಸ್ತಕ ಪ್ರತಿಪಾದಿಸುವಂತೆ, ನಮ್ಮ ಪ್ರಪಂಚವು ಆತಂಕದ ಯುಗವನ್ನು ಸೃಷ್ಟಿಸಿಕೊಂಡು ತನ್ನ ಅಂತ್ಯವನ್ನು ಬಹಳ ಬೇಗ ಕಾಣಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.