ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮೀಸಲಾತಿ ಮತ್ತು ಬಡತನ

ಪ್ರಬಲ ಜಾತಿಗಳ ಮುಖಂಡರು ನಿಜವಾಗಿ ಆಗ್ರಹಿಸಬೇಕಿರುವುದು ಮೀಸಲಾತಿಗಾಗಿ ಅಲ್ಲ, ಉದ್ಯೋಗಾವಕಾಶಗಳ ಸೃಷ್ಟಿಗಾಗಿ
Last Updated 16 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಪ್ರಬಲ ಜಾತಿಗಳ ಮುಖಂಡರು ನಿಜವಾಗಿ ಆಗ್ರಹಿಸಬೇಕಿರುವುದು ಮೀಸಲಾತಿಗಾಗಿ ಅಲ್ಲ, ಉದ್ಯೋಗಾವಕಾಶಗಳ ಸೃಷ್ಟಿಗಾಗಿ...

ಮೀಸಲಾತಿಗಾಗಿ ಆಗ್ರಹಿಸುವ ಓಟದಲ್ಲಿ ಹಿಂದೆ ಬೀಳಬಾರದೆಂಬ ನಿಲುವಿಗೆ, ಸಾಮಾಜಿಕವಾಗಿ ಮುಂದುವರಿದಿರುವ ಕೆಲವು ಸಮುದಾಯಗಳ ಮುಖಂಡರು ಜೋತುಬಿದ್ದಿದ್ದಾರೆ. ಈ ಮುಖಂಡರು, ಅವರ ಹಿಂಬಾಲಕರು ಹಾಗೂ ಸ್ವಾಮೀಜಿಗಳು, ‘ನಮ್ಮ ಜಾತಿಯಲ್ಲೂ ಬಡವರಿದ್ದಾರೆ, ಮೀಸಲಾತಿಯಿಂದ ಅವರಿಗೆ ಅನುಕೂಲವಾಗಲಿದೆ’ ಎಂಬ ವಾದವನ್ನು ತೇಲಿ ಬಿಡುತ್ತಿದ್ದಾರೆ.

ಮೀಸಲಾತಿಯ ಅಗತ್ಯವನ್ನು ಪ್ರಾತಿನಿಧ್ಯದ ತಕ್ಕಡಿ ಯಲ್ಲಿಟ್ಟು ತೂಗಬೇಕೆನ್ನುವ ಸಾಮಾನ್ಯ ಜ್ಞಾನವನ್ನು ಹಿನ್ನೆಲೆಗೆ ಸರಿಸಿ, ‘ನಮ್ಮಲ್ಲಿ ಬಡವರಿಲ್ಲವೇ’ ಎನ್ನುವ ಪ್ರಶ್ನೆ ಮುಂದಿಟ್ಟು, ಮೀಸಲಾತಿ ಪಡೆಯುವ ಓಟದ ಅಂಗಳಕ್ಕೆ ಇಳಿದಿರುವವರು ಅಸಲಿಗೆ ಆಗ್ರಹಿಸಬೇಕಿರುವುದು ಬಡತನ ನಿರ್ಮೂಲನಾ ಕಾರ್ಯಕ್ರಮಗಳ ಜಾರಿಗಲ್ಲವೇ? ‘ಮೀಸಲಾತಿಯು ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ. ಅದು ಪ್ರಾತಿನಿಧ್ಯ ವಂಚಿತ ಸಮುದಾಯಗಳಿಗೆ ಸಹಜವಾಗಿ ದಕ್ಕಬೇಕಿರುವ ಪ್ರಾತಿನಿಧ್ಯ ಲಭ್ಯವಾಗುವಂತೆ ನೋಡಿ ಕೊಳ್ಳುವ ವ್ಯವಸ್ಥೆ’ ಎಂಬ ವಾಸ್ತವದತ್ತ ದೃಷ್ಟಿ ಹಾಯಿಸಲು ಇವರೇಕೆ ಹಿಂಜರಿಯುತ್ತಿದ್ದಾರೆ?

ತಾವು ಪ್ರತಿನಿಧಿಸುವ ಜಾತಿಯ ಬಡವರ ಹಿತ ಕಾಯುವ ನಿಜವಾದ ಕಾಳಜಿಯು ಮೀಸಲಾತಿಗಾಗಿ ಆಗ್ರಹಿಸುತ್ತಿರುವ ಪ್ರಬಲ ಜಾತಿಗಳ ಮುಖಂಡರಿಗೆ ಇರುವುದೇ ಆದಲ್ಲಿ, ಅವರು ಆಗ್ರಹಿಸಬೇಕಿರುವುದು ಮೀಸಲಾತಿಗಾಗಿ ಅಲ್ಲ, ಬದಲಿಗೆ ಸಂಪತ್ತಿನ ಹಂಚಿಕೆಗಾಗಿ.

ಸರ್ಕಾರದ ನೀತಿಗಳಲ್ಲಿ ಬಡತನ ನಿರ್ಮೂಲನೆ ಮಾಡುವ ಬದಲಿಗೆ ಬಡವರನ್ನೇ ನಿರ್ಮೂಲನೆ ಮಾಡುವ ಧೋರಣೆ ಕಾಣುತ್ತಿರುವ ಹೊತ್ತಿನಲ್ಲಿ, ಈಗಾಗಲೇ ಚಾಲ್ತಿಯಲ್ಲಿರುವ ಬಡತನ ನಿರ್ಮೂಲನಾ ಕಾರ್ಯಕ್ರಮಗಳಿಗೆ ಸರ್ಕಾರ ಒದಗಿಸುತ್ತಿರುವ ಅನು ದಾನದಲ್ಲಿ ಪ್ರತಿವರ್ಷ ಹೆಚ್ಚಳವಾಗುತ್ತಿದೆಯೇ ಅಥವಾ ಕಡಿತವಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಕೆಲಸವನ್ನು ಇವರು ಮಾಡಬೇಕಲ್ಲವೇ? ಕಡಿತ ಮಾಡಿ ದ್ದರೆ ಅದರ ವಿರುದ್ಧ ಧ್ವನಿ ಎತ್ತಬೇಕಲ್ಲವೇ? ಅದರ ಸಾಧಕ–ಬಾಧಕಗಳನ್ನು ಜನರ ಮುಂದಿರಿಸುವ ಕೆಲಸ ಮಾಡಬೇಕಲ್ಲವೇ?

ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸುವ ಪಡಿತರದ ಪ್ರಮಾಣ ಹೆಚ್ಚಳಕ್ಕೆ ಮತ್ತು ಬೆಲೆ ಇಳಿಕೆಗೆ ಆಗ್ರಹಿಸುವುದು, ಉದ್ಯೋಗ ಖಾತರಿಗೆ ಹೆಚ್ಚು ಅನುದಾನ ಮೀಸಲಿರಿಸುವಂತೆ ಕೋರುವುದು, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆಯು ರಜಾ ದಿನಗಳಲ್ಲೂ ನಿಲ್ಲದಿರುವಂತೆ ನಿಗಾ ವಹಿಸುವುದು ಬಡವರ ಕುರಿತು ಕಾಳಜಿ ಹೊಂದಿರುವವರು ಮಾಡಬೇಕಿದ್ದ ಕೆಲಸಗಳಲ್ಲವೇ?

ಎಲ್ಲವೂ ಖಾಸಗಿ ವಲಯದ ತೆಕ್ಕೆಗೆ ಸರಿಯುತ್ತಿರುವ ಈ ಹೊತ್ತಿನಲ್ಲಿ, ಅಪ್ರಸ್ತುತವೇ ಆಗುತ್ತಿರುವ ಮೀಸಲಾತಿ ಪ್ರಮಾಣದ ಹೆಚ್ಚಳಕ್ಕೆ ಮುಗಿಬೀಳುವ ಬದಲಿಗೆ, ಖಾಸಗಿ ವಲಯಕ್ಕೂ ಮೀಸಲಾತಿ ವಿಸ್ತರಿಸುವ ಅಗತ್ಯವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಬಹುದಿತ್ತಲ್ಲವೇ? ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲೂ ಸರ್ಕಾರದ ಹೂಡಿಕೆ ಇಳಿಮುಖವಾಗುತ್ತಿದೆ. ಈ ಕುರಿತು ಅಧಿಕಾರಸ್ಥರ ಗಮನ ಸೆಳೆಯುವುದು ಅವರ ಆದ್ಯತೆ ಆಗಬೇಕಿತ್ತಲ್ಲವೇ?

ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೆ, ಅದರ ನೇರ ಪರಿಣಾಮ ಬೀರುವುದೂ ಬಡವರ ಮೇಲಲ್ಲವೇ? ಬೆಲೆ ಏರಿಕೆ ವಿರುದ್ಧ ಇದೇ ಮುಖಂಡರು, ಸ್ವಾಮೀಜಿಗಳು ಬೀದಿಗಿಳಿದರೆ, ಅದು ಬಡವರ ಪರವಾಗಿ ಅವರಿಗಿರುವ ಕಾಳಜಿಯನ್ನು ಬಿಂಬಿಸುವುದಲ್ಲವೇ? ಮೂರು ದಶಕಗಳಿಂದ ನಾವು ಅಪ್ಪಿಕೊಂಡಿರುವ ಮುಕ್ತ ಮಾರುಕಟ್ಟೆ ನೀತಿಯು ಸೃಷ್ಟಿಸಿರುವ ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕ ಮತ್ತಷ್ಟು ಆಳಕ್ಕೆ ಚಾಚಿಕೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಜಾರಿಯಾಗಬೇಕಿರುವುದು ಬಡವರಿಗೆ ಅಗತ್ಯವಿರುವ ಸರಕು ಮತ್ತು ಸೇವೆಗಳು ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುವ ಯೋಜನೆಗಳು.

ಇದರ ಬದಲಿಗೆ, ಮೀಸಲಾತಿಯಂತಹ ಸಾಮಾಜಿಕ ಹಿಂದುಳಿಯುವಿಕೆಯನ್ನು ಹೋಗಲಾಡಿಸಲು ರೂಪಿಸಿರುವ ಕಾರ್ಯಕ್ರಮದ ದಿಕ್ಕು ತಪ್ಪಿಸಿದರೆ, ಮೊದಲೇ ಅಂಚಿಗೆ ತಳ್ಳಲ್ಪಟ್ಟಿರುವ ಸಮುದಾಯಗಳನ್ನು ಪಾತಾಳಕ್ಕೆ ದೂಡಿದ ಕುಖ್ಯಾತಿಯನ್ನು ಇದೀಗ ಮೀಸಲಾತಿಗಾಗಿ ಆಗ್ರಹಿಸುತ್ತಿರುವ ಬಲಾಢ್ಯರೇ ಹೊತ್ತುಕೊಳ್ಳಬೇಕಾಗುತ್ತದೆ.

ಅಗತ್ಯಕ್ಕೆ ತಕ್ಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುವ ವ್ಯವಸ್ಥೆ ರೂಪಿಸಲು ಸೋಲುತ್ತಿರುವ, ಇರುವ ಉದ್ಯೋಗಗಳೂ ಸರ್ಕಾರದ ತಪ್ಪು ನೀತಿ ಗಳಿಂದಾಗಿ ಇನ್ನಿಲ್ಲವಾಗುತ್ತಿರುವ ಸಂದರ್ಭದಲ್ಲಿ, ಇವರು ಆಗ್ರಹಿಸಬೇಕಿರುವುದು ಉದ್ಯೋಗಾವಕಾಶಗಳ ಸೃಷ್ಟಿಗೆ ಹೊರತು ಮೀಸಲಾತಿಗಾಗಿ ಅಲ್ಲ. ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಸಹ ಆಳುವವರು ಹಿಂದೆ ಮುಂದೆ ನೋಡುತ್ತಿರುವ ಹೊತ್ತಿನಲ್ಲಿ ಜಾತಿ ಆಧಾರಿತ ಮೀಸಲಾತಿಯಿಂದ ಬಡತನ ನಿರ್ಮೂಲನೆ ಅಥವಾ ಬಡವರ ಏಳಿಗೆಯಾಗಲು ಹೇಗೆ ಸಾಧ್ಯ?

ಅನೇಕ ಕ್ಷೇತ್ರಗಳಲ್ಲಿ ತಮ್ಮ ಜನಸಂಖ್ಯೆಯ ಪ್ರಮಾಣ ಕ್ಕಿಂತಲೂ ಹೆಚ್ಚೇ ಪ್ರಾತಿನಿಧ್ಯ ಹೊಂದಿರುವ ಕೆಲವು ಸಮುದಾಯಗಳೇ ಮೀಸಲಾತಿಗಾಗಿ ಆಗ್ರಹಿಸುತ್ತಿ ರುವುದು, ಬಡವರ ಸದ್ಯದ ನಿಕೃಷ್ಟ ಪರಿಸ್ಥಿತಿಗೂ ಮೀಸಲಾತಿಗೂ ತಳಕು ಹಾಕಿ ಮೀಸಲಾತಿ ಕುರಿತು ಅಸಮಾಧಾನ ರೂಪುಗೊಳ್ಳುವಂತೆ ನೋಡಿಕೊಳ್ಳುವ ಕಾರ್ಯಸೂಚಿಯ ಮುಂದುವರಿದ ಭಾಗವಲ್ಲವೇ? ಸಂಪತ್ತಿನ ಹಂಚಿಕೆ, ಉದ್ಯೋಗಾವಕಾಶ ಸೃಷ್ಟಿ, ಶಿಕ್ಷಣ-ಆರೋಗ್ಯದಂತಹ ಮೂಲಭೂತ ಅಗತ್ಯಗಳನ್ನು ಜನರಿಗೆ ಒದಗಿಸುವ ಬದ್ಧತೆಯನ್ನು ಸರ್ಕಾರ ತೋರಲು ಆಗ್ರಹಿಸಬೇಕಿರುವುದು ವರ್ತಮಾನದ ಅಗತ್ಯವೇ ಹೊರತು, ಮೀಸಲಾತಿಯ ದಿಕ್ಕು ತಪ್ಪಿಸುವುದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT