ಸೋಮವಾರ, ಜೂನ್ 27, 2022
21 °C
ಶೈಕ್ಷಣಿಕ ವ್ಯವಸ್ಥೆ ಹಾಗೂ ಮೌಲ್ಯಮಾಪನದ ವಿಧಾನವನ್ನು ಬದಲಾಯಿಸುವ ಬಗ್ಗೆ ಗಂಭೀರವಾದ ಚಿಂತನೆಗಳು ನಡೆಯಬೇಕಿದೆ

ಸಂಗತ: ಆಗಲಿ ಶಿಕ್ಷಣದ ಪುನರ್‌ವ್ಯಾಖ್ಯಾನ

ಡಾ. ಅರ್ಚನಾ ಆರ್. Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಸ್ಸಿನ ಕಾರಣದಿಂದ ಜಗತ್ತು ಹಿಂದೆಂದೂ ಕಂಡು ಕೇಳರಿಯದಂತೆ ಬದಲಾಗಿದೆ. ಇಂತಹ ಬಿಕ್ಕಟ್ಟಿನ ಈ ಸಮಯವು ಶೈಕ್ಷಣಿಕವಾಗಿಯೂ ಹೊಸ ಹೊಸ ದೃಷ್ಟಿಕೋನಗಳ ಅಳವಡಿಕೆಗೆ, ಅರ್ಥಪೂರ್ಣ ಮತ್ತು ಮೌಲ್ಯಾಧಾರಿತ ಶಿಕ್ಷಣದ ಪುನರ್‌ವ್ಯಾಖ್ಯಾನಕ್ಕೆ ನಮಗೆ ದೊರೆತ ಸದವಕಾಶವಾಗಿದೆ.

ಪುಸ್ತಕದ ಪರಿಧಿಗಷ್ಟೇ ಸೀಮಿತವಾಗಿ ಕಲಿಯು ವುದು, ಕಲಿಸುವುದು, ಕಂಠಪಾಠ ಮಾಡುವುದಷ್ಟೇ ಶಿಕ್ಷಣವಾಗಿದೆ. ಹೀಗೆ ಉರು ಹೊಡೆದದ್ದನ್ನು ಕೇವಲ ಮೂರು ಗಂಟೆ ನೆನಪಿಸಿಕೊಂಡು ಪರೀಕ್ಷೆ ಬರೆಯುವ ಮತ್ತು ಒತ್ತಡದ ಕಲಿಕಾ ವ್ಯವಸ್ಥೆಯಲ್ಲಿ ಸಿಲುಕಿಕೊಂಡು ನರಳುತ್ತಿರುವ ಸದ್ಯದ ವ್ಯವಸ್ಥೆಯಿಂದ ವಿದ್ಯಾರ್ಥಿಗಳನ್ನು ಪಾರು ಮಾಡಲು ಬದಲಾವಣೆಯೊಂದನ್ನು ತುರ್ತಾಗಿ ತರಬಾರದೇಕೆ? ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಈ ಹಿಂದೆಯೇ ಹೊಸ ಹೊಸ ಪರೀಕ್ಷಾ ನೀತಿ ಗಳು, ಮೌಲ್ಯಮಾಪನ ವಿಧಾನಗಳನ್ನು ಜಾರಿಗೆ ತರಲಾಗಿದೆ. ಅಂತೆಯೇ ಈಗಿನ ಸಂದಿಗ್ಧ ಸ್ಥಿತಿಯಲ್ಲಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಅಥವಾ ಮುಂದೂಡುವ ಕುರಿತು ಕೇವಲ ಚರ್ಚೆಗಳು ನಡೆಯು ತ್ತಿವೆಯೇ ಹೊರತು, ಅದಕ್ಕೆ ಬದಲಿ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಗಂಭೀರವಾದ ಚಿಂತನೆಗಳು ನಡೆದೇ ಇಲ್ಲ.

ಶೈಕ್ಷಣಿಕ ಕ್ಷೇತ್ರದ ಅನೇಕ ಸಮಸ್ಯೆಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಲು ಇದು ಸಕಾಲ. ಶೈಕ್ಷಣಿಕ ವ್ಯವಸ್ಥೆ ಹಾಗೂ ಮೌಲ್ಯಮಾಪನದ ವಿಧಾನವನ್ನು ಬದಲಾಯಿಸುವ ಬಗ್ಗೆ ಗಂಭೀರವಾದ ಚಿಂತನೆಗಳು ನಡೆಯಬೇಕಿದೆ. ಇದಕ್ಕೆ ಬದಲಾಗಿ ಸರ್ಕಾರಗಳು ಇನ್ನೂ ಹಳೆಯ ಮಾದರಿಯ ಪರೀಕ್ಷಾ ಪದ್ಧತಿಗೇ ಅಂಟಿಕೊಂಡು ಆಲೋಚಿಸುತ್ತಿರುವುದು ದುರದೃಷ್ಟಕರ. ಇಂತಹ ಪದ್ಧತಿಯಿಂದ ಮಕ್ಕಳು ಮತ್ತು ಪೋಷಕರಲ್ಲಿ ಇಂದು ಒತ್ತಡ ಇನ್ನಷ್ಟು ಹೆಚ್ಚಾಗಿದೆ.

ಹೀಗಿರುವಾಗ, ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು, ಶೈಕ್ಷಣಿಕ ಸಮಿತಿಗಳು ವಿದ್ಯಾರ್ಥಿಗಳ ಕಲಿಕೆಯ ದಿಸೆ ಯಲ್ಲಿ ಹೊಸ ದೃಷ್ಟಿಕೋನವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿಲ್ಲವೇಕೆ? ಆನ್‌ಲೈನ್ ಪರೀಕ್ಷೆಗಳನ್ನು ನಡೆಸಲು ನಮ್ಮಲ್ಲಿ ಹಲವಾರು ಸಮಸ್ಯೆಗಳಿವೆ ಎಂಬುದನ್ನು ದೊಡ್ಡದು ಮಾಡಲಾಗಿದೆ. ನೆಟ್‌ವರ್ಕ್ ಸಮಸ್ಯೆ ಇರುವುದು ನಿಜ. ಅಂತೆಯೇ ತಾಂತ್ರಿಕ ವಲಯದಲ್ಲಿ ಭಾರತವು ಇತರ ದೇಶಗಳಂತೆಯೇ ಹಲವಾರು ಪ್ರಯೋಗಗಳನ್ನು ನಡೆಸಿ ಮುನ್ನುಗ್ಗುತ್ತಿರುವಾಗ, ಶಿಕ್ಷಣ ವಲಯದಲ್ಲಿ ದೊಡ್ಡ ದೊಡ್ಡ ತಾಂತ್ರಿಕ ಕಂಪನಿಗಳೊಡನೆ ಕೈಜೋಡಿಸಬಾರದೇಕೆ?

ಹಾಗೆಯೇ ಇನ್ನೊಂದು ಬಹುಮುಖ್ಯ ಆತಂಕ ವೆಂದರೆ, ಆನ್‌ಲೈನ್‌ ಪರೀಕ್ಷೆಗಳನ್ನು ನಡೆಸಿದರೆ ನಕಲು ಮಾಡಲು ಅವಕಾಶವಾಗುತ್ತದೆ ಎಂಬುದು. ಇದು ಮೌಲ್ಯಮಾಪನಕ್ಕೆ ಎದುರಾಗಿರುವ ದೊಡ್ಡ ಸವಾಲೇ ಆಗಿದೆ. ಆದರೆ ವಿದ್ಯಾರ್ಥಿಗಳು ಸೃಜನಾತ್ಮಕವಾಗಿ, ವಿಮರ್ಶಾತ್ಮಕವಾಗಿ ಯೋಚಿಸಿಯೇ ಉತ್ತರಿಸಬೇಕಾದ ರೀತಿಯಲ್ಲಿ ಪ್ರಶ್ನೆಪತ್ರಿಕೆಗಳನ್ನು ವಿನ್ಯಾಸಗೊಳಿಸಿದಾಗ, ನಕಲು ಮಾಡುವುದು ಅಸಾಧ್ಯವಾಗುತ್ತದೆ.

ಹಾಗೆಯೇ ವಿದ್ಯಾರ್ಥಿಗಳ ಕಲಿಕಾ ಜ್ಞಾನದ ಮಟ್ಟದ ಮೌಲ್ಯಮಾಪನವನ್ನು ಶೈಕ್ಷಣಿಕ ವರ್ಷದ ಉದ್ದಕ್ಕೂ ಮಾಡುವಂತೆ ಶಿಕ್ಷಕರಿಗೆ ಸೂಚಿಸಬಹುದು. ಕೇವಲ ಲಿಖಿತ ಪರೀಕ್ಷೆಯಲ್ಲದೆ ವಿವಿಧ ಕೌಶಲಗಳನ್ನು ರೂಢಿಸುವ ಉತ್ತಮ ಹೋಮ್‌ವರ್ಕ್, ಅಸೆಸ್‌ಮೆಂಟ್‌ಗಳನ್ನು ನೀಡುತ್ತಾ ಆಂತರಿಕ ಮೌಲ್ಯಮಾಪನದ ಅಂಕ ನೀಡುವ ಪದ್ಧತಿ ಈಗಾಗಲೇ ಹಲವು ಶೈಕ್ಷಣಿಕ ಹಂತಗಳಲ್ಲಿದೆ. ಅದನ್ನು ಇನ್ನಷ್ಟು ನಿಷ್ಪಕ್ಷಪಾತವಾಗಿ ಮಾಡುವಂತೆ ಶಿಕ್ಷಕರಿಗೆ ಸೂಚಿಸಬಹುದು.

ಶಾಲೆಗಳು ತಮ್ಮ ವಿದ್ಯಾರ್ಥಿಗಳ ಸಾಧನೆಯನ್ನು ಉತ್ಪ್ರೇಕ್ಷಿಸಿ ಫಲಿತಾಂಶ ನೀಡುತ್ತವೆ ಎಂದಾದಲ್ಲಿ, ಶಾಲೆಗಳ ಒಂದು ಗುಂಪನ್ನು ರಚಿಸಿ ಮೌಲ್ಯಮಾಪನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದು. ಅಲ್ಲದೆ ವಿದ್ಯಾರ್ಥಿಗಳ ಕಾಲೇಜು ಪ್ರವೇಶಾವಕಾಶಕ್ಕೆ ಸಿದ್ಧ ಮಾದರಿಯ ಆನ್‌ಲೈನ್ ಪರೀಕ್ಷೆಗಳನ್ನು ನಡೆಸಲು ಉನ್ನತ ಶಿಕ್ಷಣ ಸಂಸ್ಥೆಗಳ ನೆರವು ಪಡೆಯಬಹುದು. ವಿದ್ಯಾರ್ಥಿಗಳನ್ನು ಸ್ವಯಂ ಮೌಲ್ಯಮಾಪನ ಮತ್ತು ತನ್ನ ಸಹಪಾಠಿಯ ಮೌಲ್ಯಮಾಪನದಲ್ಲಿ ತೊಡಗಿಸುವುದು, ಅಂತಿಮವಾಗಿ ಅವರಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುವುದು ಶಿಕ್ಷಣದ ಗುರಿಯಾಗಬೇಕು.

ಶೈಕ್ಷಣಿಕವಾದ ಸಾಧನೆ ಮಾತ್ರವೇ ವಿದ್ಯಾರ್ಥಿಯ ಬೆಳವಣಿಗೆಯ ಮಾನದಂಡವಾಗಬೇಕೆ ಅಥವಾ ಸಾಮಾಜಿಕ, ಭಾವನಾತ್ಮಕ ಹಾಗೂ ನೈತಿಕ ನೆಲೆಯಲ್ಲಿಯೂ ಯಶಸ್ಸನ್ನು ಹೊಂದುವಂತೆ ಪ್ರೇರೇಪಿಸಲು ಸಾಧ್ಯವಿಲ್ಲವೇ ಎಂಬುದು ನಾವು ಪರಿಗಣಿಸಬೇಕಾದ ಪ್ರಶ್ನೆಯಾಗಿದೆ. ಶಿಕ್ಷಣ ಮತ್ತು ಮೌಲ್ಯಮಾಪನದಲ್ಲಿ ಬದಲಾವಣೆಗಳನ್ನು ಪ್ರೋತ್ಸಾಹಿಸುವ, ಸಂಘಟಿಸುವ, ಅಲ್ಲದೆ ಅವುಗಳನ್ನು ಕಾರ್ಯರೂಪಕ್ಕೆ ತರಲು ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ತಜ್ಞರು, ತಾಂತ್ರಿಕ ವರ್ಗದವರು ಹಾಗೂ ಸಂಶೋಧಕರನ್ನು ಒಳಗೊಂಡ ಶೈಕ್ಷಣಿಕ ಸಮಿತಿಗಳಿಗೆ ಸಂಪೂರ್ಣ ಸ್ವಾಯತ್ತತೆಯನ್ನು ನೀಡುವ ಕಾರ್ಯ ಆಗಬೇಕು.

ಉನ್ನತ ಶಿಕ್ಷಣ ಸಂಸ್ಥೆಗಳು ನಡೆಸುವ ಮೌಲ್ಯಮಾಪನಗಳ ಮೂಲಕ ಮೌಲ್ಯಮಾಪನದ ಗುಣಮಟ್ಟವನ್ನು ಹೆಚ್ಚಿಸಿದಾಗ, ನಮ್ಮ ಯುವಜನ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಿಗೆ ವಲಸೆ ಹೋಗುವುದನ್ನು ತಡೆಯಲು ಸಾಧ್ಯ. ಬಿಕ್ಕಟ್ಟಿನ ಈ ಸಂದರ್ಭವನ್ನು ನಿಜಕ್ಕೂ ಒಂದು ಹೊಸ ಅವಕಾಶ ವೆಂದೇ ಪರಿಗಣಿಸಿದಲ್ಲಿ, ದೇಶದ ಸವಾಲುಗಳನ್ನು ಎದುರಿಸಲು ಸಾಧ್ಯವಾಗುವಂತೆ ಯುವಜನರನ್ನು ಸಿದ್ಧಗೊಳಿಸಿ, ಸದೃಢ ಭಾರತ ನಿರ್ಮಾಣದ ಕನಸನ್ನು ಸಾಕಾರಗೊಳಿಸಬಹುದು.

ಲೇಖಕಿ: ಸಹಾಯಕ ಪ್ರಾಧ್ಯಾಪಕಿ, ವಿಜಯ ಕಾಲೇಜು, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು