ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರವಕ್ಕೂ ಅಧಿಕೃತತೆಯೇ?

Last Updated 26 ನವೆಂಬರ್ 2018, 20:00 IST
ಅಕ್ಷರ ಗಾತ್ರ

ನಮ್ಮ ಸಮಾಜದಲ್ಲಿ ಒಂದು ಸಾರ್ವತ್ರಿಕ ತತ್ವಕ್ಕೆ (ಉದಾಹರಣೆಗೆ ಸಾವಿಗೆ) ಅದರದ್ದೇ ಆದ ಅಪವಾದ ಇರುತ್ತದೆ. ಆದರೆ ಅಪವಾದಗಳು ತಮ್ಮದೇ ಆದ ಪ್ರತ್ಯೇಕ ನಿಯಮಾವಳಿಯನ್ನು ರೂಪಿಸಿಕೊಳ್ಳಲು ಹೊರಟರೆ ಅದು ಅನರ್ಥಕಾರಿ.

ಇಂದು ರಾಜಕೀಯ ಪ್ರಭಾವವುಳ್ಳ ಮಠಾಧಿಪತಿ, ಸಾಹಿತಿ, ಕಲಾವಿದ, ಉದ್ಯಮಿ, ರಾಜಕಾರಣಿ ತೀರಿಕೊಂಡರೆ ಅವರನ್ನು ‘ಸಕಲ ಸರ್ಕಾರಿ ಗೌರವದೊಂದಿಗೆ’ ಬೀಳ್ಕೊಡುವ ಪರಿಪಾಟ ಪ್ರಾರಂಭವಾಗಿದೆ. ಇದು ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ, ಹಾಲಿ– ಮಾಜಿ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಗೆ ಮಾತ್ರ ಸಲ್ಲಬೇಕಾದ ಅಧಿಕೃತ ಶಿಷ್ಟಾಚಾರ. ಯಾವುದೇ ರಾಜಕೀಯ ಅಧಿಕಾರ ಹೊಂದಿರದಿದ್ದ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅನಿರೀಕ್ಷಿತವಾಗಿ ಹತ್ಯೆಯಾದಾಗ ಈ ಶಿಷ್ಟಾಚಾರಕ್ಕೆ ‘ಸರ್ಕಾರದ ವಿವೇಚನೆಯ ಮೇರೆಗೆ’ ಎಂಬ ಹೊಸದೊಂದು ನಿಬಂಧನೆ ಸೇರಿಸಲಾಯಿತು. ರಾಜಕೀಯೇತರ ವ್ಯಕ್ತಿಗಳ ಪೈಕಿ ಗಾಂಧಿಯ ನಂತರ ಅಂತ್ಯವಿಧಿಯ ಈ ಅಧಿಕೃತ ಗೌರವ ಸಂದದ್ದು 49 ವರ್ಷಗಳ ನಂತರ, ಮದರ್ ತೆರೇಸಾಗೆ (1997ರಲ್ಲಿ).

ಅಲ್ಲಿಂದಾಚೆಗೆ ನಾನಾ ರಾಜ್ಯ ಸರ್ಕಾರಗಳು ಈ ಶಿಷ್ಟಾಚಾರವನ್ನು ತನ್ನಿಚ್ಛೆಯಂತೆ ದುರ್ಬಳಕೆ ಮಾಡಿಕೊಂಡು ಬಂದಿವೆ. ಬಾಳಾ ಠಾಕ್ರೆ, ಶಶಿ ಕಪೂರ್, ಶ್ರೀದೇವಿ, ಅಜಿತ್ ವಾಡೇಕರ್ ಮುಂತಾದ ವಿಐಪಿಗಳಿಗೆ ಇದನ್ನು ನೀಡಲಾಯಿತು. ಕರ್ನಾಟಕದಲ್ಲೂ ಮೃತರಾದ ಹಲವು ಮಠಾಧಿಪತಿಗಳು, ಚಿತ್ರ ನಿರ್ಮಾಪಕರು ಮತ್ತು ಹಲವು ರಾಜಕೀಯೇತರ ವ್ಯಕ್ತಿಗಳು ಈ ಮರಣೋತ್ತರ ಗೌರವ ಪಡೆದಿರುವುದುಂಟು. ದೇಶಕ್ಕಾಗಿ ಬದುಕನ್ನು ಮುಡಿಪಿಟ್ಟ ಎ.ಪಿ.ಜೆ. ಅಬ್ದುಲ್ ಕಲಾಂ, ಹನುಮಂತ ಕೊಪ್ಪದ, ಸಂದೀಪ್ ಉನ್ನಿಕೃಷ್ಣನ್‍ರಂಥವರಿಗೆ ಸಲ್ಲಬೇಕಾದ ಗೌರವವನ್ನು ನಮ್ಮ ರಾಜಕಾರಣಿಗಳು ಹೀಗೆ ಮನಬಂದಂತೆ ನೀಡುತ್ತ ಹೋಗುವುದು ಉತ್ತಮ ಬೆಳವಣಿಗೆ ಎನಿಸುವುದಿಲ್ಲ. ‘ಸರ್ಕಾರಿ ಗೌರವ’ ಸಲ್ಲಿಸುವ ವಿಷಯದಲ್ಲಿ ಕಟ್ಟುನಿಟ್ಟಾದ ನಿಯಮಾವಳಿ ರೂಪಿಸಬೇಕಾಗಿದೆ.

ಬೆಂಗಳೂರಿನಲ್ಲಿ ಯಾವುದೇ ವಿಐಪಿ ಸತ್ತಾಗ ನಡೆಸಲಾಗುವ ಅಂತಿಮ ಯಾತ್ರೆಯ ಮೆರವಣಿಗೆ, ಅಂತಿಮ ದರ್ಶನಗಳ ವ್ಯವಸ್ಥೆ ಮಾಡುವ ಬಗೆಗೂ ಸರ್ಕಾರಗಳು ಮರುಚಿಂತನೆ ನಡೆಸಬೇಕಾಗುತ್ತದೆ. ಮೆರವಣಿಗೆ ಸಂದರ್ಭದಲ್ಲಿ ಸಂಚಾರ ನಿರ್ಬಂಧದಿಂದಾಗಿ ಆಂಬುಲೆನ್ಸ್‌ಗಳು ವಾಹನ ದಟ್ಟಣೆಯ ಮಧ್ಯೆ ಗಂಟೆಗಟ್ಟಲೆ ನಿಂತುಬಿಡುವ ದೃಶ್ಯ ನಿಜಕ್ಕೂ ಕರುಣಾಜನಕವಾಗಿರುತ್ತದೆ. ಅಲ್ಲದೆ ವಿಐಪಿಗಳ ಭದ್ರತೆಗಾಗಿ ಪೊಲೀಸರು ಚಿತಾಗಾರವನ್ನು ಸುಪರ್ದಿಗೆ ತೆಗೆದುಕೊಳ್ಳುವುದರಿಂದ ಆ ದಿವಸ ತಮ್ಮ ಬಂಧುಗಳನ್ನು ಕಳೆದುಕೊಂಡ ಇತರ ಶ್ರೀಸಾಮಾನ್ಯರು ಚಿತಾಗಾರಕ್ಕಾಗಿ ಅಲೆದಾಡುವ ಪಡಿಪಾಟಲು ಅನುಭವಿಸುವವರಿಗಷ್ಟೇ ಗೊತ್ತು.

ಸಾವು ಬೇರೆ ಮತ್ತು ಅಂತ್ಯವಿಧಿ ಬೇರೆ. ಯಾವುದೇ ವ್ಯಕ್ತಿ ತೀರಿಕೊಂಡಾಗ ಆ ವ್ಯಕ್ತಿ ಉಂಟು ಮಾಡುವ ಖಾಲಿತನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಬದುಕಿನ ನಿರರ್ಥಕತೆಯನ್ನು, ಕ್ಷಣ ಭಂಗುರತೆಯನ್ನು ಧ್ಯಾನಿಸಲು ಆ ಖಾಲಿತನ ಬದುಕಿರುವವರಿಗೆ ಒಂದು ಅವಕಾಶ ನಿರ್ಮಿಸಿಕೊಡುತ್ತದೆ. ಅಂತ್ಯವಿಧಿಯನ್ನು ವೈಭವೀಕರಿಸುತ್ತ ಆ ಖಾಲಿತನವನ್ನು ಮರೆಮಾಚಲು, ವಿಸ್ಮೃತಿಗೆ ಸರಿಸಲು ಪ್ರಯತ್ನಿಸಿದರೆ ಅದು ಆತ್ಮವಂಚನೆಯಾಗುತ್ತದೆ. ಕ್ರಮೇಣ ಒಂದು ಮೌಢ್ಯವಾಗಿ ಪರಿಣಮಿಸುತ್ತದೆ.

ಇದು ಸಾಲದೆಂದು ವಿಐಪಿಗಳಿಗೆ ಸರ್ಕಾರಿ ಜಾಗಗಳಲ್ಲಿ ಸಮಾಧಿ ನಿರ್ಮಿಸುವ ಹೊಸ ಪದ್ಧತಿ ಬೇರೆ ಕರ್ನಾಟಕದಲ್ಲಿ ಪ್ರಾರಂಭವಾಗಿದೆ. ಕೆಲ ವರ್ಷಗಳ ಹಿಂದೆ ತೀರಿಕೊಂಡ ಕನ್ನಡದ ಕೆಲವು ಹಿರಿಯ ಸಾಹಿತಿಗಳಿಗೆ ಅವರ ಕರ್ಮಭೂಮಿಯಾದ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲೇ ಅಂತ್ಯವಿಧಿ ನೆರವೇರಿಸಲಾಯಿತು. ಪ್ರತಿಯೊಬ್ಬ ಕರ್ಮಯೋಗಿಗೂ ಹೀಗೆ ಅವನ ಕರ್ಮಭೂಮಿಯಲ್ಲೇ ಸಮಾಧಿ ನಿರ್ಮಿಸುತ್ತ ಹೋದರೆ ಕರ್ಮಭೂಮಿಗಳೆಲ್ಲ ರುದ್ರಭೂಮಿಗಳಾಗಿ ಬದಲಾಗುತ್ತವೆ. ಮುಂದೆ ಸಾಯಲಿರುವವರಿಗೂ ಹೀಗೆಯೇ ಅಂತಿಮ ಗೌರವ ಸಿಗಬೇಕೆಂದು ಅವರ ಬೆಂಬಲಿಗರು ಆಗ್ರಹಿಸಿದರೆ ಮತದಾರರ ಓಲೈಕೆಗಾಗಿ ಸರ್ಕಾರಗಳು ಅಂತಹ ಆಗ್ರಹಗಳಿಗೆ ಮಣಿಯಬಹುದು. ಆಗ ನಮ್ಮ ವಿಶ್ವವಿದ್ಯಾಲಯಗಳು, ಕಲಾಕ್ಷೇತ್ರಗಳು, ಸ್ಟುಡಿಯೊಗಳು, ಸ್ಟೇಡಿಯಂಗಳು, ನ್ಯಾಯಾಲಯದ ಆವರಣಗಳು, ವಿಧಾನಸೌಧ- ವಿಕಾಸಸೌಧಗಳು ಮೃತರ ಸ್ಮಾರಕಗಳಾಗಿ, ಪ್ರವಾಸಿಗರನ್ನು ಆಕರ್ಷಿಸುವ ತಾಣಗಳಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ. ಇವೆಲ್ಲ ಅಂತಹ ಸಂಸ್ಥೆಗಳ ಘನತೆಗೆ ಮತ್ತು ಆ ಸಂಸ್ಥೆಗಳಿಗೆ ಕೊಡುಗೆ ನೀಡಿದ ಹುತಾತ್ಮರುಗಳಿಗೆ ಅಪಚಾರವಾಗುವ ಕೆಲಸಗಳಾಗಿವೆ.

ಈ ಬೆಳವಣಿಗೆಗಳನ್ನು ಊಹಿಸಿಯೇ ಪೂರ್ಣಚಂದ್ರ ತೇಜಸ್ವಿ ತಮ್ಮ ತಂದೆ ಕುವೆಂಪು ಅವರ ಅಂತ್ಯವಿಧಿಗಳು ಅವರ ಹುಟ್ಟೂರಿನಲ್ಲೇ ಸರಳವಾಗಿ ಆಗಬೇಕೆಂದು ನಿರ್ಧರಿಸಿದ್ದು. ಅವರು ಬದುಕಿರುವಷ್ಟೂ ಕಾಲ ಕುಪ್ಪಳಿ ಒಂದು ಆಕರ್ಷಕ ಪ್ರವಾಸಿ ಕೇಂದ್ರವಾಗಿ ರೂಪುಗೊಳ್ಳಲು ಆಸ್ಪದ ನೀಡಲಿಲ್ಲ. ತೇಜಸ್ವಿ ತೀರಿಕೊಂಡ ಮೇಲೆ ಕುಪ್ಪಳಿಯೂ ನಿಧಾನವಾಗಿ ಪ್ರವಾಸಿಗರ ಆಕರ್ಷಕ ತಾಣಗಳಲ್ಲಿ ಒಂದಾಗಿ ಬೆಳೆಯುತ್ತಿದೆ ಎಂಬ ಮಾತು ಬೇರೆ.

ನಾಡಿಗಾಗಿ ತಮ್ಮ ಬದುಕನ್ನು ಮುಡಿಪಿರಿಸಿದ ಯಾವುದೇ ವ್ಯಕ್ತಿ ಸತ್ತರೆ ಇಡೀ ನಾಡೇ ಶೋಕಾಚರಣೆ ನಡೆಸುತ್ತದೆ, ಮೃತ ವ್ಯಕ್ತಿಯ ಕೊಡುಗೆಗಳನ್ನು ಸ್ಮರಿಸುತ್ತದೆ. ಈ ಸ್ಮರಣೆ, ಶೋಕಾಚರಣೆಗಳು ತುಂಬ ಖಾಸಗಿಯಾದವು. ಅದು ರಾಜಕಾರಣಿಗಳ ಪಾರುಪತ್ಯೆಯಲ್ಲಿ ಬಹಿರಂಗದ ಪ್ರದರ್ಶನವಾಗುವ ಬಡಿವಾರದ ಪ್ರವೃತ್ತಿಯಷ್ಟೇ ಆಕ್ಷೇಪಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT