ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸ್ವಾಯತ್ತೆ ಮರೆತ ವಿಶ್ವವಿದ್ಯಾಲಯ

ಹೆಚ್ಚಿನ ವಿಶ್ವವಿದ್ಯಾಲಯಗಳು ಸರ್ಕಾರದ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುವುದಷ್ಟೇ ತಮ್ಮ ಕೆಲಸ ಎಂದುಕೊಂಡಿವೆ
Published 27 ಡಿಸೆಂಬರ್ 2023, 23:42 IST
Last Updated 27 ಡಿಸೆಂಬರ್ 2023, 23:42 IST
ಅಕ್ಷರ ಗಾತ್ರ

ಸರ್ಕಾರಿ ವಿಶ್ವವಿದ್ಯಾಲಯಗಳು ಅನುದಾನದ ಕೊರತೆಯಿಂದ ಪ್ರಪಾತಕ್ಕೆ ಜಾರುತ್ತಿರುವುದರ ಕುರಿತ ವಿಶೇಷ ವರದಿ (ಪ್ರ.ವಾ., ಡಿ. 10) ಹಲವು ಸಂಗತಿಗಳ ಮೇಲೆ ಬೆಳಕು ಚೆಲ್ಲಿದೆ. ವಿಶ್ವವಿದ್ಯಾಲಯ ಗಳು ಹೊಸ ಸಂಶೋಧನೆ ಹಾಗೂ ಆಲೋಚನೆಗಳನ್ನು ಉತ್ತೇಜಿಸುವ ಜ್ಞಾನ ತಾಣಗಳು. ಆದರೆ ಅವು ಇತ್ತೀಚೆಗೆ ಅಧ್ಯಾಪಕರು ಹಾಗೂ ಆರ್ಥಿಕ ಸಂಪನ್ಮೂಲಗಳ ತೀವ್ರ ಕೊರತೆ, ಭ್ರಷ್ಟಾಚಾರ, ಅಕ್ರಮ ನೇಮಕಾತಿಯಂತಹ ಸಲ್ಲದ ವಿಷಯಗಳಿಗಾಗಿ ಸುದ್ದಿ ಆಗುತ್ತಿವೆ. ಇದಕ್ಕೆ ಮೂಲ ಕಾರಣ, ವಿಶ್ವವಿದ್ಯಾ
ಲಯಗಳ ಸ್ವಯಂಕೃತ ತಪ್ಪುಗಳೆನ್ನದೇ ವಿಧಿ ಇಲ್ಲ.

ವಿಶ್ವವಿದ್ಯಾಲಯಗಳ ಹಿತಾಸಕ್ತಿ ರಕ್ಷಿಸುವ ವಿಷಯದಲ್ಲಿ ಸರ್ಕಾರ ವ್ಯತ್ತಿರಿಕ್ತವಾಗಿ ನಡೆದುಕೊಂಡಾಗ ಕುಲಪತಿಗಳು ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸುವುದು ಸಾಮಾನ್ಯವಾಗಿದೆ. ವಿಶ್ವವಿದ್ಯಾಲಯ ಗಳು ಸ್ವಾಯತ್ತ ಸಂಸ್ಥೆಗಳಾಗಿದ್ದರೂ ಸರ್ಕಾರದ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುವುದಷ್ಟೇ ತಮ್ಮ ಕೆಲಸ ಎಂದು ತಿಳಿದುಕೊಂಡಿವೆ. ಉದಾಹರಣೆಗೆ, ಮೈಸೂರು ವಿಶ್ವವಿದ್ಯಾಲಯದ ವಿಶೇಷ ಹಣಕಾಸು ಸಭೆಯಲ್ಲಿ, ವಿಶ್ವವಿದ್ಯಾಲಯವನ್ನು ವಿಭಜಿಸಿದರೆ ಎದುರಾಗಬಹುದಾದ ಆರ್ಥಿಕ ಸಂಪನ್ಮೂಲದ ತೀವ್ರ ಕೊರತೆಯನ್ನು ಹೇಗೆ ಎದುರಿಸುವಿರಿ ಎಂಬ, ಆರ್ಥಿಕ ಇಲಾಖೆಯ ಅಧಿಕಾರಿಗಳ ಪ್ರಶ್ನೆಗೆ ಸಂಬಂಧಪಟ್ಟ
ವರಿಂದ ಯಾವುದೇ ಉತ್ತರ ಬರಲಿಲ್ಲ.

ಮೈಸೂರು, ಕರ್ನಾಟಕ, ಮಂಗಳೂರು ವಿಶ್ವವಿದ್ಯಾ ಲಯಗಳಲ್ಲಿ ಶೇ 60ಕ್ಕಿಂತಲೂ ಹೆಚ್ಚು ಹುದ್ದೆಗಳು ಅನೇಕ ವರ್ಷಗಳಿಂದ ಖಾಲಿ ಉಳಿದಿವೆ. ವರ್ಷಂಪ್ರತಿ ನಿವೃತ್ತರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ 2007ರಲ್ಲಿ ನಡೆದ ಅಧ್ಯಾಪಕರ ನೇಮಕಾತಿಯಲ್ಲಿ ಕೇಳಿಬಂದ ಅಕ್ರಮದ ಆರೋಪ ಇನ್ನೂ ಬಗೆಹರಿದಿಲ್ಲ. ಮೀಸಲಾತಿ ನೀತಿ ಅನುಸರಿಸದಿರುವುದು, ಯುಜಿಸಿ ನಿಯಮಗಳನ್ನು ಗಾಳಿಗೆ ತೂರುವುದು, ಸ್ವಜನಪಕ್ಷಪಾತ, ಭ್ರಷ್ಟಾಚಾರದ ಕಾರಣಕ್ಕೆ ಮುನ್ನೆಲೆಗೆ ಬರುವ ವಿಶ್ವವಿದ್ಯಾಲಯಗಳು, ಇತ್ತೀಚೆಗೆ ಗೊಂದಲರಹಿತ ನೇಮಕಾತಿ ಮಾಡಿರುವ ಪ್ರಕರಣಗಳು ತೀರಾ ವಿರಳ.

2016ರಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ಸರ್ಕಾರವು ಅಧ್ಯಾಪಕರ ನೇಮಕಾತಿಗೆ ಅನುಮತಿ ನೀಡಿತ್ತಾದರೂ ಸೂಕ್ತ ರೋಸ್ಟರ್ ಪದ್ಧತಿ ಪಾಲನೆಯಾಗಿಲ್ಲ ಎನ್ನುವ ಕಾರಣಕ್ಕೆ ನೇಮಕಾತಿಯನ್ನು ತಡೆಹಿಡಿಯಲಾಯಿತು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಮತ್ತು ಜಾನಪದ ವಿಶ್ವವಿದ್ಯಾಲಯದ ಕತೆಯೂ ಇದೇ ಆಗಿದೆ. ಇದಕ್ಕೆ ವಿಶ್ವವಿದ್ಯಾಲಯಗಳಲ್ಲದೇ ಯಾರು ಹೊಣೆ?

ಬೋಧಕೇತರ ವರ್ಗದ ತಾತ್ಕಾಲಿಕ ನೇಮಕಾತಿ ಗಳದ್ದು ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ. ಕುಲಪತಿಗಳು ಬದಲಾದಂತೆ, ಈ ನೇಮಕಾತಿ ಮನಬಂದ ರೀತಿಯಲ್ಲಿ ನಡೆಯುತ್ತದೆ. ತನ್ನ ಅನುಮತಿ ಇಲ್ಲದೆ ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳುವಂತಿಲ್ಲ ಎಂದು ಸರ್ಕಾರ ಹೇಳಿದೆಯಾದರೂ ಸ್ವಾಯತ್ತತೆಯನ್ನು ಮುನ್ನೆಲೆಗೆ ತಂದು, ಅಗತ್ಯಕ್ಕಿಂತ ಹೆಚ್ಚು ನೇಮಕಾತಿಗಳನ್ನು ವಿಶ್ವವಿದ್ಯಾಲಯಗಳು ಮಾಡಿಕೊಳ್ಳುತ್ತಿವೆ. ಕುಲಪತಿಗಳು ಬದಲಾದಂತೆ ವಿಶ್ವವಿದ್ಯಾಲಯಗಳ ಕಟ್ಟಡಗಳು ಕೂಡ ಹೊಸ ಬಣ್ಣಗಳಿಂದ ಕಂಗೊಳಿಸುತ್ತವೆ. ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ ಆಗುತ್ತಿದ್ದರೂ ವಿಶ್ವವಿದ್ಯಾಲಯಗಳಲ್ಲಿ ಅನಗತ್ಯವಾದ ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ಮಾತ್ರ ಧಕ್ಕೆಯಾಗಿಲ್ಲ.

ಉನ್ನತ ಶಿಕ್ಷಣ ಇಂದು ಅಧಿಕಾರಿಗಳ ನಿಯಂತ್ರಣಕ್ಕೆ ಸಿಲುಕಿ ನಲುಗುತ್ತಿದೆ. ಕೋವಿಡ್‌ನಿಂದ ಚೇತರಿಸಿ
ಕೊಳ್ಳುತ್ತಿದ್ದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ, ‘ದೇಶದಲ್ಲೇ ಮೊದಲು’ ಎನ್ನುವ ಖ್ಯಾತಿ ಪಡೆಯುಲು, ಸೂಕ್ತ ತಯಾರಿಯಿಲ್ಲದೇ ರಾಜ್ಯದಲ್ಲಿ ಈ ಹಿಂದಿನ ಸರ್ಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ಇಪಿ) ತರಾತುರಿಯಲ್ಲಿ ಜಾರಿಗೊಳಿಸಿತು. ವಿಶ್ವವಿದ್ಯಾಲಯಗಳನ್ನು ಹೊರಗಿಟ್ಟು, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಮೂಲಕ ಪಠ್ಯಕ್ರಮವನ್ನು ರೂಪಿಸಲಾಯಿತು. ಪ್ರವೇಶಾತಿ, ಫಲಿತಾಂಶ ಪ್ರಕಟಣೆಯಂತಹ ಕಾರ್ಯಗಳಿಗೆ ಏಕೀಕೃತ ಆನ್‌ಲೈನ್‌ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು. ಇದರಿಂದ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಬಹಳಷ್ಟು ಸಮಸ್ಯೆ ಆಯಿತಾದರೂ ವಿಶ್ವವಿದ್ಯಾಲಯಗಳಿಂದ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ.

ರಾಜ್ಯ ಶಿಕ್ಷಣ ನೀತಿ ರೂಪಿಸುವ ಸಂಬಂಧ ರಾಜ್ಯ ಸರ್ಕಾರ ಮೈಸೂರಿನಲ್ಲಿ ಇತ್ತೀಚೆಗೆ ಕರೆದಿದ್ದ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಮಂಗಳೂರು ವಲಯದ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಕಾಲೇಜು ಪ್ರಾಂಶುಪಾಲರ ಸಭೆಯಲ್ಲಿ ಮಾತನಾಡಿದ ಕುಲಪತಿಗಳು, ವಿಶ್ವವಿದ್ಯಾಲಯಗಳಿಗೆ ಈಗ ಶೈಕ್ಷಣಿಕ ಸ್ವಾಯತ್ತತೆ ಇಲ್ಲವಾಗಿದೆ ಎನ್ನುವುದನ್ನು ಒತ್ತಿ ಹೇಳಿದರು. ಆದರೆ ಅಧಿಕಾರಿಶಾಹಿ ವ್ಯವಸ್ಥೆ ತಮ್ಮ ಮೇಲೆ ಸವಾರಿ ಮಾಡುವಾಗ ಅನೇಕರು ಮೌನ ವಹಿಸಿದ್ದರು. ವಿಶ್ವವಿದ್ಯಾಲಯಗಳಿಗೆ ಕೊಡುವ ಅನುದಾನವನ್ನು ಸರ್ಕಾರ ಮತ್ತು ಯುಜಿಸಿ ಇತ್ತೀಚೆಗೆ ಬಹಳಷ್ಟು ಕಡಿಮೆ ಮಾಡಿವೆ. ಸಂಶೋಧನೆಗಾಗಿ ದೇಶದ ವಿಶ್ವವಿದ್ಯಾ
ಲಯಗಳಿಗೆ ಕೇಂದ್ರ ಸರ್ಕಾರ ನೀಡುವ ಅನುದಾನದ ಪ್ರಮಾಣವೂ ಬಹಳಷ್ಟು ಕಡಿಮೆಯಾಗಿದೆ.

ಕೇಂದ್ರವು ಖಾಸಗಿ ಮತ್ತು ವಿದೇಶಿ ವಿಶ್ವವಿದ್ಯಾಲಯಗಳಿಗೆ ಮಣೆ ಹಾಕುತ್ತಿರುವ ಈ ಸಂದರ್ಭದಲ್ಲಿ, ರಾಜ್ಯ ಸರ್ಕಾರಗಳು ತಮ್ಮ ವಿಶ್ವವಿದ್ಯಾಲಯಗಳಿಗೆ ಭ್ರಷ್ಟಾಚಾರರಹಿತ ಅನುಭವಿಗಳು, ಸಂಶೋಧನೆ ಮತ್ತು ಆಧುನಿಕ ಕಲಿಕಾ ಕ್ರಮಗಳ ಬಗ್ಗೆ ಆಳವಾದ ಜ್ಞಾನ ಇರುವಂತಹವರನ್ನು ಕುಲಪತಿಗಳನ್ನಾಗಿ ಮತ್ತು ಅಧ್ಯಾಪಕರನ್ನಾಗಿ ನೇಮಿಸಬೇಕಾಗಿದೆ. ಈ ಮೂಲಕ, ಯುಜಿಸಿ ನಿಯಮದಡಿ ಶೈಕ್ಷಣಿಕ ಸ್ವಾಯತ್ತೆಯೊಂದಿಗೆ ಅವುಗಳಿಗೆ ಹೊಸ ಸ್ವರೂಪ ನೀಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT