ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಓಡುವ ಮಗುವ ತಡೆಯುವ ತವಕವೇಕೆ?

ಬೇಸಿಗೆ ಶಿಬಿರದ ನೆಪದಲ್ಲಿ ಮಕ್ಕಳನ್ನು ಕಟ್ಟಿಹಾಕುವುದು ಸರಿಯಲ್ಲ
Published 26 ಮಾರ್ಚ್ 2024, 21:52 IST
Last Updated 26 ಮಾರ್ಚ್ 2024, 21:52 IST
ಅಕ್ಷರ ಗಾತ್ರ

‘ಸೋಮವಾರದಿಂದ ಆರಂಭವಾಗುವ ವಾರದ ದಿನಗಳು ಮುಖ ಉಬ್ಬಿಸಿಕೊಂಡು, ಸಿಟ್ಟು ಸೆಡವಿನಿಂದ ಬೇಗ ಬಂದು ತಡಮಾಡಿ ನಿರ್ಗಮಿಸುತ್ತವೆ. ಭಾನುವಾರ ಮಾತ್ರ ಹಾಗಲ್ಲ, ಅದು ನಿಧಾನಕ್ಕೆ ನಗುತ್ತ, ನಲಿಯುತ್ತ, ಹಾಡುತ್ತಾ ಬಂದು ಬಹು ಬೇಗನೆ ಹೊರಟು ಹೋಗಿಬಿಡುತ್ತದೆ. ಎಲ್ಲ ದಿನಗಳೂ ಭಾನುವಾರ ಆದರೆ ಎಂಥ ಸೊಬಗು!’ ಇದು ಕವಿ ರವೀಂದ್ರನಾಥ ಟ್ಯಾಗೋರ್ ಅವರು ರಜೆಯ ದಿನಗಳಿಗಾಗಿ ಹಂಬಲಿಸುವ ಮಗುವಿನ ಮನೋಭಾವ ಕುರಿತು ಬರೆದ ‘ಸಂಡೇ’ ಇಂಗ್ಲಿಷ್ ಕವನದ ಭಾವಾನುವಾದ.

ಕೆಲವು ಖಾಸಗಿ ಶಾಲೆಗಳು ತಮ್ಮ ಶಾಲೆಗಳಲ್ಲಿ ಮಕ್ಕಳಿಗಾಗಿ ‘ಬೇಸಿಗೆ ಶಿಬಿರ’ ಹಮ್ಮಿಕೊಳ್ಳಲು ಭರದಿಂದ ಸಿದ್ಧತೆ ನಡೆಸಿರುವುದನ್ನು ನೋಡಿದಾಗ ಈ ಕವಿತೆ ನೆನಪಾಯಿತು. ಪಠ್ಯಪುಸ್ತಕಗಳಲ್ಲಿ ರವೀಂದ್ರರ ಈ ಕವನ ಇದ್ದರೂ ಶಿಕ್ಷಕರು ಬೇಸಿಗೆ ಶಿಬಿರದ ನೆಪದಲ್ಲಿ ಮಕ್ಕಳನ್ನು ಕಟ್ಟಿ ಹಾಕುತ್ತಿರುವುದನ್ನು ನೋಡಿದರೆ ನೋವಾಗುತ್ತದೆ.

ಮಕ್ಕಳಿಗೆ ಬೇಸಿಗೆಯಲ್ಲಿ ಬಿಡುವು ನೀಡುವುದು, ದಸರಾ ಹಬ್ಬದ ಸಂದರ್ಭದಲ್ಲಿ ಕೆಲವು ದಿನ ರಜೆ ಕೊಡುವುದರ ಹಿಂದೆ ಘನವಾದ ಉದ್ದೇಶ ಅಡಗಿದೆ. ಮಕ್ಕಳು ಕಲಿಕೆಯ ಒತ್ತಡದಿಂದ ಮುಕ್ತರಾಗಲಿ, ಸಾಮಾಜಿಕವಾಗಿ ಬೆರೆಯಲಿ, ಸಜ್ಜನ ನಡೆಯನ್ನು ಬೆಳೆಸಿಕೊಳ್ಳಲಿ, ಕುಟುಂಬದ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಲಿ, ಆಟ, ತಿರುಗಾಟದಿಂದ ಆರೋಗ್ಯ ವೃದ್ಧಿಸಿಕೊಳ್ಳಲಿ ಎಂಬುವು ದೀರ್ಘ ಅವಧಿಯ ರಜೆ ಕೊಡುವುದರ ಹಿಂದಿನ ಮಹತ್ವದ ಆಶಯಗಳಾಗಿವೆ. ಮಗು ಶಾಲೆಯ ಕೋಣೆಯಲ್ಲಿ ಬೆಳೆಯುವುದಕ್ಕಿಂತ ಶಾಲೆಯ ಹೊರಗೆ ಹೆಚ್ಚು ಸಶಕ್ತವಾಗಿ ಬೆಳೆಯುತ್ತದೆ ಎನ್ನುವ ಮಾತು ಇದಕ್ಕೆ ಬಹಳ ಪೂರಕವಾಗಿದೆ.

ಶಿಕ್ಷಕರು ಕೂಡ ಬಿಡುವಿನ ಅವಧಿಯಲ್ಲಿ ಹೆಚ್ಚಿನ ಓದು, ಹೊಸ ಆವಿಷ್ಕಾರ, ಹೊಸ ವಿಧಾನಗಳನ್ನು ಅರಿತುಕೊಂಡು ಮುಂದಿನ ವರ್ಷಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದು ಶಿಕ್ಷಣ ಇಲಾಖೆಯ ನೀತಿಯಾಗಿದೆ.

ಏಪ್ರಿಲ್, ಮೇ ತಿಂಗಳ ಬೇಸಿಗೆ ಬಿಡುವಿನಲ್ಲಿ ಬಹಳಷ್ಟು ಖಾಸಗಿ ಶಾಲೆಗಳು ಶಿಬಿರ ಹಮ್ಮಿಕೊಳ್ಳುತ್ತವೆ. ಆಕರ್ಷಕ ಕರಪತ್ರಗಳನ್ನು ಪ್ರಕಟಿಸಿ, ರಸ್ತೆಯ ಬದಿಗೆ ಬ್ಯಾನರ್‌ಗಳನ್ನು ಕಟ್ಟಿ ಪಾಲಕರ ಗಮನ ಸೆಳೆಯುವ ತಂತ್ರ ಜೋರಾಗಿ ನಡೆಯುತ್ತದೆ. ಶಿಬಿರದಲ್ಲಿ ಮಕ್ಕಳಿಗೆ ಮುಂದಿನ ವರ್ಗದ ಪಠ್ಯಪುಸ್ತಕದ ವಿಷಯಗಳನ್ನು ಕಲಿಸುತ್ತೇವೆ, ಮುಂದಿನ ಪರೀಕ್ಷೆಗಳಲ್ಲಿ ಶೇ 100 ಅಂಕ ಪಡೆಯುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಜ್ಜುಗೊಳಿಸುತ್ತೇವೆ. ಯೋಗ, ವ್ಯಾಯಾಮ ತರಬೇತಿ ನೀಡುತ್ತೇವೆ. ಪೌಷ್ಟಿಕ ಊಟ, ಉಪಾಹಾರದ ವ್ಯವಸ್ಥೆ ಇದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯು ಶಿಬಿರದ ಉದ್ದೇಶವಾಗಿದೆ ಎಂಬಂತಹ ವಿವರಗಳನ್ನು ಕರಪತ್ರಗಳಲ್ಲಿ ಪ್ರಕಟಿಸುತ್ತಾರೆ. ಆದರೆ ತಾವು ವಸೂಲು ಮಾಡುವ ಶುಲ್ಕದ ಬಗ್ಗೆ ಮಾಹಿತಿ ಇರುವುದಿಲ್ಲ. ಶಿಬಿರದ ಶುಲ್ಕ ಎಷ್ಟು ಎಂಬುದನ್ನು ಪಾಲಕರು ಮತ್ತು ಶಿಬಿರ ಸಂಘಟನೆಯ ಮುಖ್ಯಸ್ಥರು ಚರ್ಚಿಸಿ ನಿರ್ಧರಿಸುತ್ತಾರೆ.

ಶಿಬಿರ ನಡೆಸುವುದಕ್ಕೆ ಶಿಕ್ಷಣ ಇಲಾಖೆಯಿಂದ ಲಿಖಿತ ಒಪ್ಪಿಗೆ ಪಡೆಯಬೇಕಾಗುತ್ತದೆ. ನಗರ, ಪಟ್ಟಣಗಳ ಕೆಲವು ಸಂಸ್ಥೆಗಳು ಮಾತ್ರ ಒಪ್ಪಿಗೆ ಪಡೆಯುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಳ್ಳುವ ಬಹಳಷ್ಟು ಶಿಬಿರಗಳಿಗೆ ಸಂಬಂಧಿಸಿದ ಸಂಸ್ಥೆಗಳು ಒಪ್ಪಿಗೆ ಪಡೆದಿರುವುದಿಲ್ಲ.

ತಮ್ಮ ಮಕ್ಕಳು ಚೆನ್ನಾಗಿ ಓದಲಿ ಎಂಬುದು ಎಲ್ಲ ಪಾಲಕರ ಆಸೆಯಾಗಿರುತ್ತದೆ. ಪರೀಕ್ಷೆಯಲ್ಲಿ ಮಗು ಪಡೆಯುವ ಅಂಕಗಳೇ ನಿಜವಾದ ಮಾನದಂಡ ಎಂದು ಇವರು ಗಟ್ಟಿಯಾಗಿ ನಂಬುತ್ತಾರೆ.

ಮಕ್ಕಳು ಬಿಡುವಿನ ದಿನಗಳಲ್ಲಿ ಸುಮ್ಮನೆ ತಿರುಗಿ ಹಾಳಾಗುತ್ತಾರೆ, ಕಲಿತ ವಿಷಯ ಮರೆತುಬಿಡುತ್ತಾರೆ, ಮನೆಯಲ್ಲಿ ಹಟ, ಜಗಳ, ಕಿರಿಕಿರಿ ಮಾಡುತ್ತಾರೆ ಎನ್ನುವ ಭಾವನೆಯಿಂದಲೂ ಕೆಲವು ಪಾಲಕರು ಮಕ್ಕಳನ್ನು ಶಿಬಿರಕ್ಕೆ ಸೇರಿಸಿಬಿಡುತ್ತಾರೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ, ಖಾಸಗಿ ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಶಾಲೆಯ ಆಡಳಿತ ಮಂಡಳಿಯವರು ಬೇಸಿಗೆ ಬಿಡುವಿನ ಅವಧಿಯಲ್ಲಿ ಸಂಬಳ ಕೊಡುವುದಿಲ್ಲ. ಇಂಥ ಶಿಕ್ಷಕರು ಆರ್ಥಿಕ ಅನುಕೂಲಕ್ಕಾಗಿ ಅನಿವಾರ್ಯವಾಗಿ ಶಿಬಿರಗಳನ್ನು ಸಂಘಟಿಸುತ್ತಾರೆ.

ಸ್ಪೇನ್, ಇಟಲಿ, ರಷ್ಯಾದಂತಹ ಕೆಲವು ದೇಶಗಳು ಶೈಕ್ಷಣಿಕ ವರ್ಷದ ಪರೀಕ್ಷೆಗಳು ಮುಗಿದ ನಂತರ ಮೂರು ತಿಂಗಳ ದೀರ್ಘ ಬಿಡುವು ನೀಡುತ್ತವೆ. ಆಸ್ಟ್ರೇಲಿಯಾದಲ್ಲಿ 18 ವರ್ಷ ವಯಸ್ಸು ದಾಟಿದ ವಿದ್ಯಾರ್ಥಿಗಳು ದುಡಿದು ಸಂಪಾದಿಸಿದ ಹಣದಲ್ಲಿಯೇ ಓದು ಮುಂದುವರಿಸಬೇಕೆಂಬ ನಿಯಮ ಇದೆ. ಪಾಲಕರಿಂದ ಆರ್ಥಿಕ ನೆರವು ಪಡೆಯುವುದು ಅಪಮಾನ ಎಂದು ಭಾವಿಸುವುದು ಇಲ್ಲಿಯ ಅಪರೂಪದ ಆದರ್ಶವಾಗಿದೆ.

‘ಶಿಕ್ಷಣ ಯಾಂತ್ರಿಕವಾಗಬಾರದು. ಕಲಿಕೆಯಲ್ಲಿ ಮಧ್ಯಂತರ ಬಿಡುವು ಅವಶ್ಯ. ಮಕ್ಕಳಿಗೆ ಶಿಕ್ಷಣವೇ ಆಟವಾಗಬೇಕು. ಅದು ಶಿಕ್ಷೆಯಾದಾಗ ಅವರ ಮನಸ್ಸು ಅದನ್ನು ಗ್ರಹಿಸುವುದಿಲ್ಲ’ ಎಂಬುದು ಹಿರಿಯ ಶಿಕ್ಷಣ ತಜ್ಞ ವಿ.ಎಸ್.ಮಾಳಿ ಅವರ ಸ್ಪಷ್ಟ ಅಭಿಪ್ರಾಯವಾಗಿದೆ.

ಮಕ್ಕಳು ಬೇಸಿಗೆ ಬಿಡುವಿನಲ್ಲಿ ಸ್ವಚ್ಛಂದವಾಗಿ ಓಡಾಡಿ, ಬಿಸಿಲಿನಲ್ಲಿ ಬಳಲಿ, ಆಡಿ, ಹಾಡಿ, ಜಗಳವಾಡಿ, ಗುಡ್ಡ ಹತ್ತಿ ನಕ್ಕು, ಜಾರಿ ಬಿದ್ದು ದುಃಖಿಸಿ, ಸೋತು, ಗೆದ್ದು ಮುಂದಿನ ವಾಸ್ತವದ ಬದುಕು ಎದುರಿಸುವುದಕ್ಕೆ ಸಜ್ಜಾಗುತ್ತಾರೆ. ಆಡುವುದನ್ನು ನಿಲ್ಲಿಸಿ ಮಕ್ಕಳನ್ನು ಶಿಬಿರಕ್ಕೆ ಎಳೆದು ತರುವುದು ಹಿಂಸೆ ಅನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT